Advertisement

ರೋಚಕ ಹೋರಾಟ: ಲಕ್ನೋಗೆ ಜಯ; ಹೋಲ್ಡರ್‌ ಬೌಲಿಂಗ್‌ಗೆ ಸನ್‌ ಶರಣು

11:26 PM Apr 04, 2022 | Team Udayavani |

ಮುಂಬೈ: ಸೋಮವಾರ ನಡೆದ ರೋಚಕ ಐಪಿಎಲ್‌ ಪಂದ್ಯದಲ್ಲಿ ಕೆ.ಎಲ್‌.ರಾಹುಲ್‌ ನಾಯಕತ್ವದ ಲಕ್ನೋ ಸೂಪರ್‌ ಜೈಂಟ್ಸ್‌ ತಂಡ ಸನ್‌ರೈಸರ್ಸ್‌ ಹೈದರಾಬಾದನ್ನು 12 ರನ್‌ಗಳ ಅಂತರದಲ್ಲಿ ಸೋಲಿಸಿದೆ. ಮೊದಲು ಬ್ಯಾಟಿಂಗ್‌ ಮಾಡಿದ ಲಕ್ನೋ ಸೂಪರ್‌ ಜೈಂಟ್ಸ್‌ 20 ಓವರ್‌ಗಳಲ್ಲಿ 7 ವಿಕೆಟಿಗೆ 169 ರನ್‌ ಗಳಿಸಿತು. ಇದನ್ನು ಬೆನ್ನತ್ತಿದ ಹೈದರಾಬಾದ್‌ 20 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 157 ರನ್‌ ಗಳಿಸಿತು.

Advertisement

ಹೈದರಾಬಾದ್‌ ಪರ ರಾಹುಲ್‌ ತ್ರಿಪಾಠಿ (30 ಎಸೆತ, 44 ರನ್‌), ನಿಕೋಲಸ್‌ ಪೂರನ್‌ (24 ಎಸೆತ, 34 ರನ್‌) ತಂಡವನ್ನು ಗೆಲ್ಲಿಸಲು ಹೋರಾಟ ನಡೆಸಿದರು. ಆದರೆ ಲಕ್ನೋ ಪರ ಅದ್ಭುತ ಬೌಲಿಂಗ್‌ ನಡೆಸಿದ ಆವೇಶ್‌ ಖಾನ್‌ (4 ವಿಕೆಟ್‌), ಜೇಸನ್‌ ಹೋಲ್ಡರ್‌ (3 ವಿಕೆಟ್‌) ಈ ಆಸೆಯನ್ನು ನುಚ್ಚುನೂರು ಮಾಡಿದರು.

ಲಕ್ನೋ ಉತ್ತಮ ಮೊತ್ತ: ಮೊದಲು ಬ್ಯಾಟಿಂಗ್‌ ಮಾಡಿದ ಲಕ್ನೋವನ್ನು ಆರಂಭಿಕ ಕುಸಿತದಿಂದ ಕೆ.ಎಲ್‌.ರಾಹುಲ್‌-ದೀಪಕ್‌ ಹೂಡಾ ಪಾರು ಮಾಡಿದರು. ಇಬ್ಬರೂ 87 ರನ್‌ ಜತೆಯಾಟದ ಮೂಲಕ ತಡೆದು ನಿಂತರು. ರಾಹುಲ್‌ ಸರ್ವಾಧಿಕ 68 ರನ್‌ ಹೊಡೆದರೆ, ಹೂಡಾ 51 ರನ್‌ ಮಾಡಿದರು. ಇದು ರಾಹುಲ್‌ ಅವರ 50ನೇ ಟಿ20 ಅರ್ಧಶತಕವಾಗಿದೆ.

ವಾಷಿಂಗ್ಟನ್‌ ಆಕ್ರಮಣ: ಭುವನೇಶ್ವರ್‌ ಕುಮಾರ್‌ ಅವರೊಂದಿಗೆ ಆಫ್ಸ್ಪಿನ್ನರ್‌ ವಾಷಿಂಗ್ಟನ್‌ ಸುಂದರ್‌ ಅವರನ್ನು ಆರಂಭದಲ್ಲೇ ಬೌಲಿಂಗ್‌ ದಾಳಿಗೆ ಇಳಿಸಿದ ನಿರ್ಧಾರ ಭರ್ಜರಿ ಯಶಸ್ಸು ಕಂಡಿತು. ತಮ್ಮ 4ನೇ ಎಸೆತದಲ್ಲೇ ಅಪಾಯಕಾರಿ ಕ್ವಿಂಟನ್‌ ಡಿ ಕಾಕ್‌ ಅವರ ವಿಕೆಟ್‌ ಉಡಾಯಿಸಿದರು. ಮುಂದಿನ ಓವರ್‌ನ ಮೊದಲ ಎಸೆತದಲ್ಲೇ ಮತ್ತೋರ್ವ ಬಿಗ್‌ ಹಿಟ್ಟರ್‌ ಎವಿನ್‌ ಲೆವಿಸ್‌ ಅವರನ್ನು ಲೆಗ್‌ ಬಿಫೋರ್‌ ಬಲೆಗೆ ಬೀಳಿಸಿದರು. 16 ರನ್‌ ಆಗುವಷ್ಟರಲ್ಲಿ ಲಕ್ನೋದ 2 ವಿಕೆಟ್‌ ಉದುರಿ ಹೋಯಿತು.

ಹೈದರಾಬಾದ್‌ಗೆ 3ನೇ ಯಶಸ್ಸು ಮನೀಷ್‌ ಪಾಂಡೆ ರೂಪದಲ್ಲಿ ಲಭಿಸಿತು. ಹಿಂದಿನ ಪಂದ್ಯಗಳಲ್ಲಿ ವೈಫ‌ಲ್ಯ ಅನುಭವಿಸಿದ್ದ ಮನೀಷ್‌ ಪಾಂಡೆ ಇಲ್ಲಿ ಬೌಂಡರಿ, ಸಿಕ್ಸರ್‌ ಸಿಡಿಸಿ ಮುನ್ನುಗ್ಗುವ ಸೂಚನೆ ನೀಡಿದರು. ಆದರೆ ಶೆಫ‌ರ್ಡ್‌ ಇದಕ್ಕೆ ಅಡ್ಡಗಾಲಿಕ್ಕಿದರು. ಪಾಂಡೆ ಆಟ 11 ರನ್ನಿಗೆ ಮುಗಿಯಿತು. 5 ಓವರ್‌ ಆಗುವಷ್ಟರಲ್ಲಿ 27 ರನ್ನಿಗೆ 3 ವಿಕೆಟ್‌ ಉರುಳಿತು. ಪವರ್‌ ಪ್ಲೇಯಲ್ಲಿ ಲಕ್ನೋ ಕೇವಲ 32 ರನ್‌ ಮಾಡಿತ್ತು.

Advertisement

 ರಾಹುಲ್‌-ಹೂಡಾ ಆಸರೆ: 4ನೇ ವಿಕೆಟಿಗೆ ಜತೆಗೂಡಿದ ನಾಯಕ ಕೆ.ಎಲ್‌.ರಾಹುಲ್‌ ಮತ್ತು ದೀಪಕ್‌ ಹೂಡಾ ತಂಡದ ಕುಸಿತಕ್ಕೆ ದೊಡ್ಡ ತಡೆಯಾಗಿ ನಿಂತರು. ಹೈದರಾಬಾದ್‌ ಬೌಲಿಂಗ್‌ ಆಕ್ರಮಣವನ್ನು ಯಶಸ್ವಿಯಾಗಿ ನಿಭಾಯಿಸಿ ರನ್‌ ಪೇರಿಸುತ್ತ ಹೋದರು. ಬೌಂಡರಿ, ಸಿಕ್ಸರ್‌ ಹರಿದುಬರತೊಡಗಿತು. ಈ ನಡುವೆ ಶರವೇಗದ ಎಸೆತಗಾರ ಉಮ್ರಾನ್‌ ಮಲಿಕ್‌ ಮೊದಲ ಓವರ್‌ನಲ್ಲಿ ಇವರಿಬ್ಬರಿಗೂ ಅಗ್ನಿಪರೀಕ್ಷೆಯೊಡ್ಡಿದರು. ಆದರೆ ಇವರ ದ್ವಿತೀಯ ಓವರ್‌ನಲ್ಲಿ 20 ರನ್‌ ಸೋರಿಹೋಯಿತು. 10 ಓವರ್‌ ಅಂತ್ಯಕ್ಕೆ ಸ್ಕೋರ್‌ 68ಕ್ಕೆ ಏರಿತು.

ಮುಂದಿನ 5 ಓವರ್‌ಗಳನ್ನು ರಾಹುಲ್‌-ಹೂಡಾ ಯಶಸ್ವಿಯಾಗಿ ನಿಭಾಯಿಸಿದರು. ಇಬ್ಬರಿಂದಲೂ ಅರ್ಧಶತಕ ದಾಖಲಾಯಿತು. ಆಗ ಶೆಫ‌ರ್ಡ್‌ ಈ ಜೋಡಿಯನ್ನು ಬೇರ್ಪಡಿಸಲು ಯಶಸ್ವಿಯಾದರು. 33 ಎಸೆತಗಳಿಂದ 51 ರನ್‌ ಮಾಡಿದ ಹೂಡಾ ಔಟಾದರು. ಸಿಡಿಸಿದ್ದು 3 ಸಿಕ್ಸರ್‌, 3 ಬೌಂಡರಿ.

ಮೊತ್ತ 144ಕ್ಕೆ ತಲುಪಿದಾಗ ಟಿ.ನಟರಾಜನ್‌ ದೊಡ್ಡ ಬೇಟೆಯಾಡಿದರು. ರಾಹುಲ್‌ ಎಲ್‌ಬಿಡಬ್ಲೂé ಆಗಿ ನಿರ್ಗಮಿಸಿದರು. ಭರ್ತಿ 50 ಎಸೆತ ನಿಭಾಯಿಸಿದ ಕಪ್ತಾನನ ಆಟದಲ್ಲಿ 6 ಫೋರ್‌ ಹಾಗೂ 1 ಸಿಕ್ಸರ್‌ ಸೇರಿತ್ತು. ಬಳಿಕ ಕೃಣಾಲ್‌ ಪಾಂಡ್ಯ ಅವರಿಗೂ ನಟರಾಜನ್‌ ಪೆವಿಲಿಯನ್‌ ಹಾದಿ ತೋರಿಸಿದರು. ಆಯುಷ್‌ ಬದೋನಿ 19 ರನ್‌ (12 ಎಸೆತ, 3 ಬೌಂಡರಿ) ಮಾಡಿ ಅಂತಿಮ ಎಸೆತದಲ್ಲಿ ರನೌಟಾದರು.

ಜೇಸನ್‌ ಹೋಲ್ಡರ್‌ ಆಗಮನ: ಲಕ್ನೋ ತಂಡದ ಕೆರಿಬಿಯನ್‌ ಆಲ್‌ರೌಂಡರ್‌ ಈ ಪಂದ್ಯದ ಮೂಲಕ 2022ನೇ ಐಪಿಎಲ್‌ ಅಖಾಡಕ್ಕೆ ಇಳಿದರು. ಇವರಿಗಾಗಿ ದುಷ್ಮಂತ ಚಮೀರ ಸ್ಥಾನ ಕಳೆದುಕೊಂಡರು. ಹೋಲ್ಡರ್‌ ಕೆಲವು ಋತುಗಳಿಂದ ಹೈದರಾಬಾದ್‌ ಪರ ಆಡುತ್ತಿದ್ದರು. ಹೈದರಾಬಾದ್‌ ತಂಡದ ಆಡುವ ಬಳಗದಲ್ಲಿ ಯಾವುದೇ ಬದಲಾವಣೆ ಕಂಡುಬರಲಿಲ್ಲ.

ಸಂಕ್ಷಿಪ್ತ ಸ್ಕೋರ್‌: ಲಕ್ನೋ 20 ಓವರ್‌, 169/7 (ರಾಹುಲ್‌ 68, ದೀಪಕ್‌ ಹೂಡಾ 51, ವಾಷಿಂಗ್ಟನ್‌ ಸುಂದರ್‌ 28ಕ್ಕೆ 2, ಟಿ.ನಟರಾಜನ್‌ 26ಕ್ಕೆ 2). ಹೈದರಾಬಾದ್‌ 20 ಓವರ್‌, 157/9 (ರಾಹುಲ್‌ ತ್ರಿಪಾಠಿ 44, ಆವೇಶ್‌ ಖಾನ್‌ 24ಕ್ಕೆ 4, ಜೇಸನ್‌ ಹೋಲ್ಡರ್‌ 34ಕ್ಕೆ 3).

Advertisement

Udayavani is now on Telegram. Click here to join our channel and stay updated with the latest news.

Next