ಲಕ್ನೋ: ಇಲ್ಲಿ ಶನಿವಾರ ನಡೆದ ಆತಿಥೇಯ ಲಕ್ನೋ ಸೂಪರ್ ಜೈಂಟ್ಸ್ ಎದುರಿನ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ 7 ವಿಕೆಟ್ ಗಳ ಜಯ ಸಾಧಿಸಿದೆ.
ರಾಜಸ್ಥಾನ್ ರಾಯಲ್ಸ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ನಾಯಕ ಕೆ.ಎಲ್. ರಾಹುಲ್ ಮತ್ತು ದೀಪಕ್ ಹೂಡಾ ಅವರ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಲಕ್ನೋ 5 ವಿಕೆಟಿಗೆ 196 ರನ್ ಗಳಿಸಿತು.
ಗುರಿ ಬೆನ್ನಟ್ಟಿದ ರಾಜಸ್ಥಾನ್ ನಾಯಕ ಸಂಜು ಸ್ಯಾಮ್ಸನ್ ಅವರು ಔಟಾಗದೆ 33 ಎಸೆತಗಳಲ್ಲಿ ಗಳಿಸಿದ 71 ರನ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. 7ಬೌಂಡರಿ ಮತ್ತು 4 ಸಿಕ್ಸರ್ ಸಿಡಿಸಿದರು. ಯಶಸ್ವಿ ಜೈಸ್ವಾಲ್ 24, ಜೋಸ್ ಬಟ್ಲರ್ 34, ರಿಯಾನ್ ಪರಾಗ್ 14 ರನ್ ಗಳಿಸಿ ಔಟಾದರು. ಧ್ರುವ್ ಜುರೆಲ್ ಔಟಾಗದೆ 52 ರನ್ ಗಳಿಸಿ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿತು. 19 ಓವರ್ ಗಳಲ್ಲೇ ಸುಲಭದಲ್ಲಿ 3 ವಿಕೆಟ್ ನಷ್ಟಕ್ಕೆ 199 ರನ್ ಗಳಿಸಿತು.
ಇದು ರಾಜಸ್ಥಾನ್ ಆಡಿದ 9ನೇ ಪಂದ್ಯದಲ್ಲಿ 8 ನೇ ಗೆಲುವಾಗಿದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನಿಯಾಗಿದೆ. ಲಕ್ನೋ ಆಡಿದ 9ನೇ ಪಂದ್ಯದಲ್ಲಿ 4 ನೇ ಸೋಲು ಅನುಭವಿಸಿತು.
ಕ್ವಿಂಟನ್ ಡಿ ಕಾಕ್ (8) ಮತ್ತು ಕಳೆದ ಪಂದ್ಯದ ಶತಕವೀರ ಮಾರ್ಕಸ್ ಸ್ಟೋಯಿನಿಸ್ (0) 11 ರನ್ ಆಗುವಷ್ಟರಲ್ಲಿ ಪೆವಿಲಿಯನ್ ಸೇರಿಕೊಂಡಾಗ ಲಕ್ನೋ ಆಘಾತಕ್ಕೊಳಗಾಯಿತು. ಆದರೆ ಯಾರಾದರಿಬ್ಬರೂ ನಿಂತು ಆಡುವ ಪರಿಪಾಠವನ್ನು ಇಲ್ಲಿಯೂ ಮುಂದುವರಿಸುವಲ್ಲಿ ಯಶಸ್ವಿಯಾಯಿತು. 3ನೇ ವಿಕೆಟಿಗೆ ಜತೆಗೂಡಿದ ರಾಹುಲ್-ಹೂಡಾ 115 ರನ್ ಪೇರಿಸಿ ತಂಡವನ್ನು ಹೋರಾಟಕ್ಕೆ ಅಣಿಗೊಳಿಸಿದರು.
18ನೇ ಓವರ್ ತನಕ ರಾಜಸ್ಥಾನ್ ದಾಳಿಯನ್ನು ತಡೆದು ನಿಂತ ರಾಹುಲ್ 48 ಎಸೆತಗಳಿಂದ 76 ರನ್ ಬಾರಿಸಿದರು. ಅವರ ನಾಯಕನ ಆಟದಲ್ಲಿ 8 ಬೌಂಡರಿ ಹಾಗೂ 2 ಸಿಕ್ಸರ್ ಸೇರಿತ್ತು. ಹೂಡಾ 31 ಎಸೆತ ಎದುರಿಸಿ ಭರ್ತಿ 50 ರನ್ ಹೊಡೆದರು (7 ಬೌಂಡರಿ).