ಉತ್ತರ ಪ್ರದೇಶ ರಾಜಧಾನಿ ಲಕ್ನೋ ಹೆಸರು ಬದಲಾಗುತ್ತಾ? ಈ ಕುರಿತಂತೆ ಸ್ವಯಂ ಅಲ್ಲಿನ ಸಿಎಂ ಯೋಗಿ ಆದಿತ್ಯನಾಥ್ ಅವರೇ ಸುಳಿವು ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ “ಲಕ್ಷ್ಮಣ ದೇವನ ಪವಿತ್ರ ನಗರ’ಕ್ಕೆ ಸ್ವಾಗತ ಎಂದು ಟ್ವೀಟಿಸಿದ್ದಾರೆ. ಹೀಗಾಗಿ ಈ ನಗರಕ್ಕೆ ಲಕ್ಷ್ಮಣಪುರಿ ಎಂಬ ಹೆಸರಿಡಬಹುದು ಎಂಬ ಊಹೆಗಳು ಎದ್ದಿವೆ.
ಯಾಕೆ ಲಕ್ಷ್ಮಣನ ಹೆಸರು?
ಲಕ್ನೋ ನಗರಕ್ಕೆ ಮೂಲತಃ ಶೇಷಾವತಾರ ಲಕ್ಷ್ಮಣನ ಹೆಸರಿನಿಂದಾಗಿ ಬಂದಿದೆ ಎಂಬ ನಂಬಿಕೆಗಳಿವೆ. ಬಿಜೆಪಿ ನಾಯಕ ಲಾಲ್‌ಜೀ ಟಂಡನ್ ಅವರು ಒಂದು ಪುಸ್ತಕ ಬರೆದಿದ್ದು, ಲಕ್ನೋ ನಗರಕ್ಕೂ ಲಕ್ಷ್ಮಣನಿಗೂ ಸಂಪರ್ಕ ಗಳಿವೆ ಎಂದು ಉಲ್ಲೇಖೀಸಿದ್ದಾರೆ. ಕಾಲಾನು ಕ್ರಮದಲ್ಲಿ ಲಕ್ಷ್ಮಾವತಿ, ಲಕ್ಷ್ಮಣಪುರ್, ಲಕ್ಷ್ಮಣಾವತಿಯಿಂದ ಲಕ್ನೋ ಎಂಬ ಹೆಸರು ಬಂದಿದೆ.
ಲಕ್ಷ್ಮಣನ ಪ್ರತಿಮೆ?
ಲಕ್ನೋ ಮಹಾನಗರ ಪಾಲಿಕೆ ಈಗಾಗಲೇ ಲಕ್ಷ್ಮಣನ ಪ್ರತಿಮೆ ನಿರ್ಮಾಣಕ್ಕಾಗಿ ಚರ್ಚೆ ನಡೆಸಿದೆ. ಹನುಮಾನ್ ಸೇತು ಮಂದಿರದ ಬಳಿಯಲ್ಲಿರುವ ಝುಲೇಲಾಲ್ ವಾಟಿಕಾದಲ್ಲಿ ಒಂದು 151 ಅಡಿ ಎತ್ತರದ ಪ್ರತಿಮೆ ನಿರ್ಮಾಣ ಮಾಡಲು ನಿರ್ಧಾರ ಮಾಡಲಾಗಿದೆ. ಮೇ 12ರಂದೇ ಈ ಬಗ್ಗೆ ಲಕ್ನೋ ಮಹಾನಗರ ಪಾಲಿಕೆ ಘೋಷಣೆ ಮಾಡಿದೆ. ಜತೆಗೆ ಗೋಹಾಲಂಕನ್ ಹಳ್ಳಿಯ ಜಾಂಕಿಪುರಂನಲ್ಲಿ ಲಕ್ಷ್ಮಣನ ದೇವಸ್ಥಾನ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ.
ಏನಿರಬೇಕು ಹೆಸರು?
2018ರಲ್ಲಿ ಬಿಜೆಪಿ ನಾಯಕ ಕಲ್‌ರಾಜ್ ಮಿಶ್ರಾ ಅವರು, ಲಕ್ನೋಗೆ ಲಕ್ಷ್ಮಣಪುರಿ ಎಂಬ ಹೆಸರು ಇಡಬೇಕು ಎಂದು ಪ್ರಸ್ತಾವಿಸಿದ್ದರು. ಹಾಗಾಗಿಯೇ ಈಗ ಆದಿತ್ಯನಾಥ್ ಅವರು ಲಕ್ಷ್ಮಣಪುರಿ ಎಂಬ ಹೆಸರು ಪ್ರಸ್ತಾವಿಸಿದ್ದಾರೆ.