Advertisement

ರೋಚಕ ಜಯ ಸಾಧಿಸಿದ ಲಕ್ನೋ ಜೈಂಟ್ಸ್‌ ಪ್ಲೇಆಫ್ ಗೆ ಖಚಿತ

11:41 PM May 18, 2022 | Team Udayavani |

ನವೀ ಮುಂಬೈ: ಕೆ.ಎಲ್‌.ರಾಹುಲ್‌ ನಾಯಕತ್ವದ ಲಕ್ನೋ ಸೂಪರ್‌ ಜೈಂಟ್ಸ್‌ ತಂಡ ಬುಧವಾರ ಕೋಲ್ಕತ ನೈಟ್‌ರೈಡರ್ಸ್‌ ಎದುರು ರೋಚಕ ಜಯ ಸಾಧಿಸಿದೆ.

Advertisement

ಅಲ್ಲಿಗೆ ಅದರ ಪ್ಲೇಆಫ್ ಪ್ರವೇಶ ಅಧಿಕೃತಗೊಂಡಿದೆ. ಸೋತಿರುವ ಕೋಲ್ಕತ ತಂಡ ಹೊರಬಿದ್ದಿದೆ. ಬಾಕಿಯುಳಿದಿರುವ ಎರಡು ಸ್ಥಾನಗಳಲ್ಲಿ ಒಂದು ರಾಜಸ್ಥಾನಕ್ಕೆ ಖಚಿತವಾಗಿದೆ. ಇನ್ನೊಂದು ಸ್ಥಾನಕ್ಕಾಗಿ ಬೆಂಗಳೂರು, ಡೆಲ್ಲಿ, ಹೈದರಾಬಾದ್‌ ನಡುವೆ ಪೈಪೋಟಿಯಿದೆ.

ಬುಧವಾರ ಮೊದಲು ಬ್ಯಾಟಿಂಗ್‌ ಮಾಡಿದ ಲಕ್ನೋ ಒಂದೂ ವಿಕೆಟ್‌ ಕಳೆದುಕೊಳ್ಳದೇ 20 ಓವರ್‌ಗಳಲ್ಲಿ 210 ರನ್‌ ಪೇರಿಸಿತು. ಇದನ್ನು ಬೆನ್ನತ್ತಿದ ಕೋಲ್ಕತ 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 208 ರನ್‌ ಗಳಿಸಿತು. ಇಡೀ ಪಂದ್ಯ ಅತ್ಯಂತ ರೋಚಕವಾಗಿ ನಡೆಯಿತು. ಕಡೆಯ ಓವರ್‌ನ ಕಡೆಯ ಎಸೆತದವರೆಗೂ ಕೋಲ್ಕತ ಗೆಲುವು ಸಾಧಿಸಲು ಪೂರ್ಣ ಅವಕಾಶಗಳಿತ್ತು. ಆದರೆ ಕಡೆಯೆರಡು ಎಸೆತಗಳಲ್ಲಿ ಮಾರ್ಕಸ್‌ ಸ್ಟಾಯಿನಿಸ್‌ ಎರಡು ವಿಕೆಟ್‌ ಕಿತ್ತು ಪರಿಸ್ಥಿತಿಯನ್ನು ಬದಲಿಸಿದರು.

ಕೋಲ್ಕತ ಪರ ರಿಂಕು ಸಿಂಗ್‌ (40 ರನ್‌, 15 ಎಸೆತ), ಸುನೀಲ್‌ ನಾರಾಯಣ್‌ (21 ರನ್‌, 7 ಎಸೆತ) ಕೊನೆಯಲ್ಲಿ ಅದ್ಭುತ ಬ್ಯಾಟಿಂಗ್‌ ಮೂಲಕ ಲಕ್ನೋಗೆ ನಡುಕ ಹುಟ್ಟಿಸಿದ್ದರು. ಇನ್ನು ನಿತೀಶ್‌ ರಾಣಾ (42), ಶ್ರೇಯಸ್‌ ಐಯ್ಯರ್‌ (50) ಕೂಡ ಉತ್ತಮವಾಗಿ ಬ್ಯಾಟ್‌ ಬೀಸಿದ್ದರು. ಲಕ್ನೋ ಪರ ಮೋಹ್ಸಿನ್‌ ಖಾನ್‌, ಮಾರ್ಕಸ್‌ ಸ್ಟಾಯಿನಿಸ್‌ ತಲಾ 3 ವಿಕೆಟ್‌ ಕಿತ್ತು ಮಿಂಚಿದರು.

ಡಿ ಕಾಕ್‌, ರಾಹುಲ್‌ ಸ್ಫೋಟ: ಮೊದಲು ಬ್ಯಾಟ್‌ ಮಾಡಿದ ಲಕ್ನೋ ಪರ ಕೆ.ಎಲ್‌.ರಾಹುಲ್‌, ಕ್ವಿಂಟನ್‌ ಡಿ ಕಾಕ್‌ ಸ್ಫೋಟಿಸಿದರು. ಇದು ಐಪಿಎಲ್‌ ಇತಿಹಾಸದಲ್ಲಿ ಹಲವು ದಾಖಲೆಗಳ ನಿರ್ಮಾಣಕ್ಕೆ ಕಾರಣವಾಯಿತು. ಕೋಲ್ಕತದ ಯಾವ ಬೌಲರ್‌ಗಳಿಗೂ ಬಗ್ಗದ ಡಿ ಕಾಕ್‌-ರಾಹುಲ್‌ ಭರ್ಜರಿ ಬ್ಯಾಟಿಂಗ್‌ ಮೂಲಕ ಐಪಿಎಲ್‌ನ ಸ್ಮರಣೀಯ ಇನಿಂಗ್ಸ್‌ ಒಂದನ್ನು ಕಟ್ಟಿದರು.

Advertisement

12 ರನ್‌ ಮಾಡಿದ್ದಾಗ ಉಮೇಶ್‌ ಯಾದವ್‌ ಬೌಲಿಂಗ್‌ನಲ್ಲಿ ಅಭಿಜಿತ್‌ ತೋಮರ್‌ ಬಿಟ್ಟ ಕ್ಯಾಚ್‌ನ ಭರಪೂರ ಲಾಭವೆತ್ತಿದ ಡಿ ಕಾಕ್‌, ಐಪಿಎಲ್‌ನಲ್ಲಿ ತಮ್ಮ ದ್ವಿತೀಯ ಶತಕ ಸಂಭ್ರಮವನ್ನಾಚರಿಸಿದರು. ಅವರ 140 ರನ್‌ ಕೇವಲ 70 ಎಸೆತಗಳಿಂದ ದಾಖಲಾಯಿಸಿತು. ಸಿಡಿಸಿದ್ದು 10 ಸಿಕ್ಸರ್‌, 10 ಬೌಂಡರಿ. ಈ ಹೊಡೆತಗಳ ಮೂಲಕವೇ ಡಿ ಕಾಕ್‌ ಭರ್ತಿ 100 ರನ್‌ ರಾಶಿ ಹಾಕಿದರು. ಇದು ಡಿ ಕಾಕ್‌ ಅವರ ಸರ್ವಶ್ರೇಷ್ಠ ಬ್ಯಾಟಿಂಗ್‌ ಆಗಿದೆ.

ರಾಹುಲ್‌ 500 ರನ್‌: ಕೆ.ಎಲ್‌.ರಾಹುಲ್‌ 51 ಎಸೆತ ಎದುರಿಸಿ 68 ರನ್‌ ಹೊಡೆದರು. ಇದು 3 ಫೋರ್‌, 4 ಸಿಕ್ಸರ್‌ಗಳನ್ನು ಒಳಗೊಂಡಿತ್ತು. ಈ ಕಪ್ತಾನನ ಆಟದ ವೇಳೆ ರಾಹುಲ್‌ ಪ್ರಸಕ್ತ ಋತುವಿನಲ್ಲಿ 500 ರನ್‌ ಪೂರ್ತಿಗೊಳಿಸಿದರು. ಇದರೊಂದಿಗೆ ಅವರು ಐಪಿಎಲ್‌ ಸೀಸನ್‌ ಒಂದರಲ್ಲಿ 5ನೇ ಸಲ 500 ರನ್‌ ಪೇರಿಸಿದಂತಾಯಿತು. ಈ ಸಾಧನೆಯಲ್ಲಿ ಅವರಿಗೆ ವಿರಾಟ್‌ ಕೊಹ್ಲಿ, ಶಿಖರ್‌ ಧವನ್‌ ಅವರೊಂದಿಗೆ ಜಂಟಿ ದ್ವಿತೀಯ ಸ್ಥಾನ. ಡೇವಿಡ್‌ ವಾರ್ನರ್‌ 6 ಋತುಗಳಲ್ಲಿ 500 ರನ್‌ ಪೇರಿಸಿರುವುದು ದಾಖಲೆ.

ಸಂಕ್ಷಿಪ್ತ ಸ್ಕೋರ್‌: ಲಕ್ನೋ 20 ಓವರ್‌, 210 (ಡಿ ಕಾಕ್‌ 140, ರಾಹುಲ್‌ 68). ಕೋಲ್ಕತ 20 ಓವರ್‌, 208/8 (ಶ್ರೇಯಸ್‌ 50, ರಿಂಕು ಸಿಂಗ್‌ 40, ಮೊಹ್ಸಿನ್‌ ಖಾನ್‌ 20ಕ್ಕೆ 3, ಸ್ಟಾಯಿನಿಸ್‌ 23ಕ್ಕೆ 3).

Advertisement

Udayavani is now on Telegram. Click here to join our channel and stay updated with the latest news.

Next