Advertisement

ಮಂಗಳೂರು ವಿಮಾನ ದುರಂತ@10: ಬದುಕುಳಿದ ಎಂಟು ಮಹಾ ಅದೃಷ್ಟಶಾಲಿಗಳು

08:59 AM May 22, 2020 | mahesh |

ಮಂಗಳೂರು ವಿಮಾನ ನಿಲ್ದಾಣದಲ್ಲಿ 158 ಮಂದಿಯನ್ನು ಬಲಿತೆಗೆದುಕೊಂಡ ಭೀಕರ ವಿಮಾನ ದುರಂತದಲ್ಲಿ ಪವಾಡಸದೃಶವಾಗಿ ಬದುಕುಳಿದ ಎಂಟು ಮಂದಿಗೆ ಮರುಜನ್ಮ ಪಡೆದ ಅನುಭವ. ಕುಟುಂಬಿಕರ, ಸಂಬಂಧಿಕರ ಕಣ್ಣುಗಳಲ್ಲಿ ಆನಂದಬಾಷ್ಪ. ತಣ್ಣೀರುಬಾವಿಯ ಪ್ರದೀಪ್‌ (28), ಹಂಪನಕಟ್ಟೆಯ ಮಹಮ್ಮದ್‌ ಉಸ್ಮಾನ್‌ (49), ವಾಮಂಜೂರಿನ ಜ್ಯೂಯಲ್‌ ಡಿ’ಸೋಜ (24), ಕೇರಳ ಕಣ್ಣೂರು ಕಂಬಿಲ್‌ ನ ಮಾಹಿನ್‌ ಕುಟ್ಟಿ (49), ಕಾಸರಗೋಡು ಉದುಮ ನಿವಾಸಿ ಕೃಷ್ಣನ್‌ (37), ಉಳ್ಳಾಲದ ಉಮ್ಮರ್‌ ಫಾರೂಕ್‌ (26) ಪುತ್ತೂರು ಸಾಮೆತ್ತಡ್ಕದ ಅಬ್ದುಲ್ಲಾ (37) ಮಂಗಳೂರು ಕೆಎಂಸಿ ವಿದ್ಯಾರ್ಥಿನಿ, ಬಾಂಗ್ಲಾದ ಸಬ್ರಿನಾ
(23) ಪವಾಡಸದೃಶವಾಗಿ ಬದುಕುಳಿದ ಅದೃಷ್ಟವಂತರು. ಇವರಲ್ಲಿ ಸಬ್ರಿನಾ ಅವರು ಮಾತ್ರ ಗಂಭೀರವಾಗಿ ಗಾಯಗೊಂಡಿದ್ದು ಪ್ರಾಣಾಪಾಯದಿಂದ ಪಾರಾಗಿದ್ದರು. ಸಬ್ರಿನಾ ಹಾಗೂ ಉಮ್ಮರ್‌ ಫಾರೂಕ್‌ ಎ.ಜೆ. ಆಸ್ಪತ್ರೆಯಲ್ಲಿ, ಜ್ಯೂಯಲ್‌ ಕೆಎಂಸಿ ಆಸ್ಪತ್ರೆಯಲ್ಲಿ, ಪ್ರದೀಪ್‌, ಮಾಹಿನ್‌ ಕುಟ್ಟಿ, ಕೃಷ್ಣನ್‌ ಅವರು ಎಸ್‌ಸಿಎಸ್‌ ಆಸ್ಪತ್ರೆಯಲ್ಲಿ, ಮಹಮ್ಮದ್‌ ಉಸ್ಮಾನ್‌ ಅವರು ಯುನಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಅಬ್ದುಲ್ಲಾ ನಗರದ ದೇರಳಕಟ್ಟೆ ಕ್ಷೇಮಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದರು.

Advertisement

ಬೆಂಕಿ, ಹೊಗೆ, ಇಬ್ಭಾಗ: ಜ್ಯೂಯಲ್‌ ಡಿ’ಸೋಜ
ದುಬಾೖಯಲ್ಲಿ ರಾತ್ರಿ 1.20ಕ್ಕೆ (ಅಲ್ಲಿನ ಸಮಯ) ವಿಮಾನ ಹೊರಟಿತು. ಮಂಗಳೂರಿಗೆ ಬಂದಾಗ ಮುಂಜಾನೆ ಬೆಳಗ್ಗೆ 6.15ರ ವೇಳೆ. ವಿಮಾನ ಇಳಿದು ರನ್‌
ವೇಯಲ್ಲಿ ಚಲಿಸಿದಾಗ ಒಮ್ಮೆಲೇ ಭಾರಿ ವೇಗದ ಅನುಭವ. ಅನಂತರ ಗುಂಡಿಗೆ ಬಿದ್ದಂತೆ ಆಯಿತು. ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಿತು. ಮೇಲ್ಭಾಗದಲ್ಲಿ ಒಂದು ಸೈಡ್‌ ಒಡೆದುಹೋಯಿತು. ಈ ರಭಸದಲ್ಲಿ ತನ್ನ ಸೀಟು ಬೆಲ್ಟ್ ಒಡೆದುಹೋಯಿತು. ಸೀಟಿನ ಮೇಲೇರಿ ಒಡೆದುಹೋದ ಭಾಗದಿಂದ ಕೆಳಕ್ಕೆ ಹಾರಿದೆ” ಎಂದು ವಿವರಿಸಿದ್ದರು ಬದುಕುಳಿದಿರುವ ವಾಮಂಜೂರಿನ ನಿವಾಸಿ ಜ್ಯೂಯಲ್‌ ಡಿ’ಸೋಜ. ಐಟಿಐ ಶಿಕ್ಷಣ ಪಡೆದಿರುವ ಜ್ಯೂಯಲ್‌ ಅವರು ಉದ್ಯೋಗ ನಿಮಿತ್ತ ಸಂದರ್ಶನ ವೀಸಾದಲ್ಲಿ ನಾಲ್ಕು ತಿಂಗಳ ಹಿಂದೆ ದುಬಾೖಗೆ ತೆರಳಿದ್ದು, ಶನಿವಾರ ಮಂಗಳೂರಿಗೆ ಮರಳುತ್ತಿದ್ದರು. ಜ್ಯೂಯಲ್‌ ಅವರ ಕಾಲಿಗೆ ಸ್ವಲ್ಪ ತಾಗಿದ್ದು, ಅಲ್ಲಿಂದ ಅವರು ಮರಳಿ ಇಮಿಗ್ರೇಶನ್‌ ಕಚೇರಿಗೆ ಬಂದು ಸೀಲ್‌ ಹಾಕಿಸಿ ಬಳಿಕ ಕೆಎಂಸಿ ಆಸ್ಪತ್ರೆಗೆ ಬಂದು ದಾಖಲಾಗಿದ್ದರು.

ವೈಬ್ರೇಷನ್‌ ಅನುಭವ: ಪ್ರದೀಪ್‌ ತಣ್ಣೀರುಬಾವಿಯ ದಿ| ಗಂಗಾಧರ  ಕೋಟ್ಯಾನ್‌ ಅವರ ಪುತ್ರ ಪ್ರದೀಪ್‌ ಅವರು ದುಬಾೖಯಲ್ಲಿ ಎಸಿ ಟೆಕ್ನೀಶಿಯನ್‌. ಎರಡು
ವರ್ಷಗಳ ಹಿಂದೆ ದುಬಾೖಗೆ ತೆರಳಿದ್ದರು. ಮೇ 27ರಂದು ಅಣ್ಣ ಚಂದ್ರಕಾಂತನ ಮದುವೆಗೆ 15 ದಿನಗಳ ತುರ್ತು ರಜೆ ಪಡೆದು ಮಂಗಳೂರಿಗೆ ಬರಲು ವಿಮಾನವೇರಿದ್ದರು. ಅವರನ್ನು ಮಾತನಾಡಿಸಿದಾಗ “ರಾತ್ರಿ ದುಬಾೖಯಲ್ಲಿ 1.20ಕ್ಕೆ (ಅಲ್ಲಿನ ಸಮಯ) ವಿಮಾನವೇರಿದ್ದೆ. ವಿಮಾನದ ಬಲಬದಿಯಲ್ಲಿ ಕುಳಿತಿದ್ದೆ.
ಇಲ್ಲಿ ಬೆಳಗ್ಗೆ ಸುಮಾರು 6.15ರ ವೇಳೆ ಇರಬಹುದು. ವಿಮಾನ ಇಳಿದು ರನ್‌ವೇ ತಲುಪಿದಾಗ ವೈಬ್ರೇಷನ್‌ ಆರಂಭವಾಯಿತು. ಅನಂತರ ಯಾವುದಕ್ಕೊ ಢಿಕ್ಕಿ ಹೊಡೆದ ಹಾಗಾಯಿತು. ವಿಮಾನದ ಮೇಲ್ಭಾಗ ಇಬ್ಭಾಗವಾಯಿತು. ಅದೇ ಸಂದರ್ಭದಲ್ಲಿ ಸೀಟ್‌ಬೆಲ್ಟ್ ತುಂಡಾಯಿತು. ಸೀಟಿನ ಮೇಲೆ ಹತ್ತಿ ಅಲ್ಲಿಂದ ಕೆಳಗೆ ನೆಲಕ್ಕೆ ಹಾರಿದೆ’ ಅಲ್ಲಿಂದ ನಡೆದುಕೊಂಡು ಬರುತ್ತಿದ್ದಾಗ ಊರಿನವರು ನನ್ನನ್ನು ಆಸ್ಪತ್ರೆಗೆ ಸಾಗಿಸಿದರು. ಘಟನೆ ನಡೆದ ಬಳಿಕ ಕೆಲವೇ ನಿಮಿಷಗಳಲ್ಲಿ
ವಿಮಾನ ಸ್ಫೋಟಗೊಂಡಿತು” ಎಂದು ಪ್ರದೀಪ್‌ ವಿವರಿಸುತ್ತಾರೆ. ತಂದೆ ಗಂಗಾಧರ ಕೋಟ್ಯಾನ್‌ ಅವರು ತುಂಬಾ ಒಳ್ಳೆಯ ವ್ಯಕ್ತಿಯಾಗಿದ್ದರು. ಅವರು ಮಾಡಿದ ಪುಣ್ಯ ನನ್ನನ್ನು ಇಂದು ಜೀವಂತವಾಗಿ ಉಳಿಸಿದೆ ಎಂದು ತಿಳಿಸಿದ್ದರು.

ಬ್ಲಾಸ್ಟ್‌ ಆದಂತಾಯಿತು: ಉಸ್ಮಾನ್‌ ನಗರದ ಹಂಪನಕಟ್ಟೆಯ ನಿವಾಸಿ ಮಹಮ್ಮದ್‌ ಉಸ್ಮಾನ್‌ ಕಳೆದ 29 ವರ್ಷಗಳಿಂದ ದುಬಾೖಯಲ್ಲಿದ್ದಾರೆ. ಪ್ರಸ್ತುತ ಅವರು ಅಲ್ಲಿ ಶಿಪ್ಪಿಂಗ್‌ ಕಂಪೆನಿಯೊಂದರಲ್ಲಿ ಟ್ರಾನ್ಸ್‌ಪೊರ್ಟ್‌ ಮೆನೇಜರ್‌ ಆಗಿದ್ದು ಮಕ್ಕಳೊಂದಿಗೆ ರಜೆ ಕಳೆಯಲು ಆಗಮಿಸಿದ್ದರು. ಅವರು ಕೂಡಾ ವಿಮಾನದ ಮೇಲ್ಭಾಗದ ಮೂಲಕ ಹೊರಗೆ ಹಾರಿ ಬದುಕಿದ್ದಾರೆ. ಕೈ, ತಲೆ ಹಾಗೂ ಕಾಲಿಗೆ ಗಾಯಗಳಾಗಿವೆ. ದುರಂತ ಸಂಭವಿಸುವ ಮೊದಲು ಟಯರ್‌ ಬ್ಲಾಸ್ಟ್‌ ಆದಂತೆ ಶಬ್ದ ಕೇಳಿಸಿದೆ ಎನ್ನುತ್ತಾರೆ ಅವರು. ಕಳೆದ ಡಿಸೆಂಬರ್‌ನಲ್ಲಿ ಬಂದು ಜನವರಿಯಲ್ಲಿ ಹಿಂದಿರುಗಿದ್ದರು. ಅವರು ಮೇಯಲ್ಲಿ ಸ್ವಲ್ಪದಿನ ಇದ್ದು ದುಬಾೖಗೆ ಮರಳಿ
ಮತ್ತೆ ಆಗಸ್ಟ್‌ನಲ್ಲಿ ಬರಲು ಟಿಕೇಟು ಬುಕ್‌ ಮಾಡಿದ್ದರು.

ಕಾಸರಗೋಡಿನ ಉದುಮ ಮಾಂಗಾಡ್‌ ನಿವಾಸಿ ಕೃಷ್ಣನ್‌ ಎರಡೂವರೆ ವರ್ಷಗಳ ಬಳಿಕ ಊರಿಗೆ ಬರುತ್ತಿದ್ದಾರೆ. ದುಬಾೖಯ ಕಂಪೆನಿಯೊಂದರಲ್ಲಿ ಹೆಲ್ಪರ್‌
ಉದ್ಯೋಗದಲ್ಲಿದ್ದರು. ದುರಂತ ಸಂಭವಿಸಿದಾಗ ಇತರರಂತೆ ಅವರೂ ಮೇಲ್ಭಾಗದಿಂದ ಹೊರಗೆ ಹಾರಿದ್ದಾರೆ. ಕೃಷ್ಣನ್‌ಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಕೃಷ್ಣನ್‌ ಅವರ ಕೈಗೆ ಹಾಗೂ ತಲೆಗೆ ಗಾಯವಾಗಿತ್ತು.

Advertisement

(ಹತ್ತು ವರ್ಷದ ಹಿಂದೆ ಉದಯವಾಣಿ ದೈನಿಕದಲ್ಲಿ ಪ್ರಕಟವಾದ ವರದಿ)

Advertisement

Udayavani is now on Telegram. Click here to join our channel and stay updated with the latest news.

Next