ಬೆಂಗಳೂರು: ಶ್ರೀಲಂಕಾ ಪ್ರಜೆಗಳನ್ನು ಅಕ್ರಮವಾಗಿ ತಮಿಳುನಾಡಿನ ಮೂಲಕ ರಾಜ್ಯಕ್ಕೆ ಕರೆಸಿಕೊಂಡಿದ್ದ ಎಲ್‌ಟಿಟಿಇಯ ಶಂಕಿತ ಉಗ್ರನನ್ನು ಎನ್‌ಐಎ ಅಧಿಕಾರಿಗಳು ಬಂಧಿಸಿದ್ದಾರೆ.
ಬಂಧಿತನನ್ನು ಮೊಹಮ್ಮದ್ ಇಮ್ರಾನ್ ಖಾನ್ ಅಲಿಯಾಸ್ ಹಾಜ ನಜಾರ್ಬಿಡೇನ್ (39) ಎಂದು ಗುರುತಿಸಲಾಗಿದೆ.
ತಮಿಳುನಾಡಿನ ಥೇಣಿ ಜಿಲ್ಲೆಯಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ. ಬಂಧಿತ ವ್ಯಕ್ತಿ ಶ್ರೀಲಂಕಾ ಪ್ರಜೆಯಾಗಿದ್ದಾನೆ ಮತ್ತು ಎಲ್‌ಟಿಟಿಐ ಸಕ್ರಿಯ ಸದಸ್ಯನಾಗಿದ್ದಾನೆ. 2021ರ ಜೂ. 6ರಲ್ಲಿ ದ್ವೀಪ ರಾಷ್ಟ್ರದ 38 ಮಂದಿ ಪ್ರಜೆಗಳನ್ನು ಹಡಗಿನ ಮೂಲಕ ತಮಿಳುನಾಡಿಗೆ, ಅಲ್ಲಿಂದ ಬೆಂಗಳೂರು ಮಾರ್ಗವಾಗಿ ಮಂಗಳೂರಿನ ವಿವಿಧೆಡೆ ಕಳುಹಿಸಿದ್ದ.
8-10 ವರ್ಷಗಳ ಹಿಂದೆಯೇ ತಮಿಳುನಾಡಿಗೆ ಬಂದು, ಇಲ್ಲಿಯೇ ವಾಸವಾಗಿದ್ದಾನೆ. ಅಲ್ಲದೆ, ಇಲ್ಲಿನ ಆಧಾರ್ ಕಾರ್ಡ್, ಚುನಾವಣ ಗುರುತಿನ ಚೀಟಿ ಕೂಡ ಮಾಡಿಸಿಕೊಂಡಿದ್ದ. ಇದರೊಂದಿಗೆ ಶ್ರೀಲಂಕಾದ ಎಲ್‌ಟಿಟಿಇ ಸಂಘಟನೆ ಸದಸ್ಯರ ಜತೆ ನಿರಂತರ ಸಂಪರ್ಕ ಹೊಂದಿದ್ದ. ಅವರ ಸೂಚನೆ ಮೇರೆಗೆ ದಕ್ಷಿಣ ಭಾರತದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಎಂದು ಗೊತ್ತಾಗಿದೆ.