ಉಡುಪಿ: ಜನಪ್ರತಿನಿಧಿಗಳಿಗೆ ಮತ ನೀಡುವಾಗ ಅವರು ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಮತ ಕೊಡಿ. ಕಳೆದ ನಾಲ್ಕು ದಶಕಗಳಿಂದ ಕರಾವಳಿಯ ಅಭಿವೃದ್ಧಿಗಾಗಿ ನನ್ನ ಕಾರ್ಯವ್ಯಾಪ್ತಿಯಲ್ಲಿ, ಕಾನೂನಿನ ಚೌಕಟ್ಟಿನಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಿರುವೆ. ಈಗ ಮತ್ತೊಮ್ಮೆ ನಿಮ್ಮಲ್ಲಿ ಮತ ಯಾಚಿಸುತ್ತಿರುವೆ. ಅಭಿವೃದ್ಧಿಗೆ ಬೆಂಬಲ ನೀಡುತ್ತೀರೆಂಬ ನಂಬಿಕೆ ನನಗಿದೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ. ಜಯಪ್ರಕಾಶ್ ಹೆಗ್ಡೆ ಅವರು ಹೇಳಿದರು.
ಉಡುಪಿಯ ಪ್ರಜ್ಞಾವಂತ ಮತದಾರರು ಈ ಬಾರಿ ಬದಲಾವಣೆ ಬಯಸಿದ್ದಾರೆಂಬುದು ಸ್ಪಷ್ಟವಾಗಿದೆ. ಕ್ಷೇತ್ರದ ಅಭಿವೃದ್ಧಿಗೆ ಕರ್ತವ್ಯ ನಿಭಾಯಿಸಲು ಮತ್ತೊಮ್ಮೆ ಅವಕಾಶ ನೀಡಿ ಎಂದು ನಿಮ್ಮಲ್ಲಿ ಮತ್ತೊಮ್ಮೆ ವಿನಂತಿಸಿಕೊಳ್ಳುತ್ತಿರುವೆ ಎಂದರು.
ಉಡುಪಿಯ ವಿವಿಧ ಕಡೆಗಳಲ್ಲಿ ಮತಯಾಚನೆ ಮಾಡಿದ ಅವರು, ಅಭಿವೃದ್ಧಿ ಕೆಲಸಗಳನ್ನು ಮಾಡುವುದು ಜನಪ್ರತಿನಿಧಿಯ ಕರ್ತವ್ಯ. ಕ್ಷೇತ್ರದಲ್ಲಿ ಕೆಲಸಗಳನ್ನು ಮಾಡದಿದ್ದಾಗ ಪ್ರಶ್ನಿಸುವ ಹಕ್ಕು ಮತದಾರರಿಗಿರುತ್ತದೆ. ಸಮರ್ಥರಾದವರನ್ನು ಆಯ್ಕೆ ಮಾಡುವುದರಿಂದ ಕ್ಷೇತ್ರ ಅಭಿವೃದ್ಧಿ ಸಾಧ್ಯ. ಚುನಾವಣೆಯಲ್ಲಿ ಗೆದ್ದು ಮತ್ತೆ ಆ ಕ್ಷೇತ್ರಕ್ಕೆ ಕಾಲಿಡದಿದ್ದರೆ ಜನರು ನಂಬಿಕೆಯನ್ನು ಕಳೆದುಕೊಳ್ಳುತ್ತಾರೆ. ಹೇಳಿಕೊಳ್ಳಲು ಅಭಿವೃದ್ಧಿಯ ಕೆಲಸಗಳು ಇಲ್ಲದಿದ್ದಾಗ ಬೇರೆಯವರ ಹೆಸರಿನಲ್ಲಿ ಮತ ಕೇಳಬೇಕಾದ ಅನಿವಾರ್ಯತೆ ಉಂಟಾಗುತ್ತದೆ ಎಂದು ಹೇಳಿದರು.
ಕಾಂಗ್ರೆಸ್ ಸರಕಾರ ನೀಡಿರುವ ಐದು ಗ್ಯಾರೆಂಟಿ ಯೋಜನೆಗಳ ಬಗ್ಗೆ ಕ್ಷೇತ್ರದ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಜನಸಾಮಾನ್ಯರ ಬದುಕಿಗೆ ಸ್ಪಂದಿಸುವುದು ಮತ್ತು ಸಾಮಾಜಿಕ ಮತ್ತು ಆರ್ಥಿಕ ನ್ಯಾಯ ಒದಗಿದುವುದು ಕಾಂಗ್ರೆಸ್‌ನ ಗುರಿ ಎಂದರು.
ಕಾಂಗ್ರೆಸ್‌ನ ಮುಂದಾಳು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಪ್ರಸಾದ್ ಕಾಂಚನ್ ಮಾತನಾಡಿ, ಜಯಪ್ರಕಾಶ್ ಹೆಗ್ಡೆ ಅವರಂಥ ಅಭ್ಯರ್ಥಿಯನ್ನು ಆಯ್ಕೆ ಮಾಡುವುದು ನಮ್ಮೆಲ್ಲರ ಕರ್ತವ್ಯ. ಅವರನ್ನು ಕ್ಷೇತ್ರದ ಜನ ಗೆಲ್ಲಿಸಿ ಕೇಂದ್ರದಿಂದ ಮತ್ತಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿಸಲು ಅವಕಾಶ ನೀಡಬೇಕಾಗಿದೆ ಎಂದು ಹೇಳಿದರು.
ಮುಂದುವರೆದು ಮಾತನಾಡಿ, ಹೆಗ್ಡೆ ಅವರು ಒಬ್ಬ ನಿಷ್ಠಾವಂತ ರಾಜಕಾರಣಿ. ಸೋಲು-ಗೆಲುವನ್ನು ಲೆಕ್ಕಿಸದೆ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದವರು. ಈ ಕಾರಣಕ್ಕಾಗಿ ಚಿಕ್ಕಮಗಳೂರು ಮತ್ತು ಉಡುಪಿ ಕ್ಷೇತ್ರದ ಜನ ಅವರ ಮೇಲೆ ಅಪಾರ ಭರವಸೆ ಇಟ್ಟಿದ್ದಾರೆ. ಮತದಾನ ಮಾಡುವಾಗ ಹೆಗ್ಡೆ ಅವರ ಅಭಿವೃದ್ಧಿ ಕಾರ್ಯಗಳನ್ನು ನೆನಪಿಸಿಕೊಳ್ಳಬೇಕಾದ ಅಗತ್ಯವಿದೆ. ಕರಾವಳಿಯ ಮೀನುಗಾರರ ಬದುಕಿಗೆ ಸದಾ ಸ್ಪಂದಿಸುವ ಹೆಗ್ಡೆ ನಮ್ಮ ಆಯ್ಕೆಯಾಗಬೇಕಾದ ಅನಿವಾರ್ಯತೆ ಇದೆ ಎಂದರು.
ಉಡುಪಿ ನಗರ ಸಭೆ ಸದಸ್ಯ ಹಾಗೂ ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಸೇರಿದಂತೆ ಪಕ್ಷದ ಇತರ ಗಣ್ಯರು ಈ ಸಂದರ್ಭದಲ್ಲಿ ಹಾಜರಿದ್ದರು.