ಪಿಲಿಭಿತ್: ಟಿಕೆಟ್ ಕೈತಪ್ಪಬಹುದು ಎಂಬ ಊಹಾಪೋಹಗಳ ನಡುವೆ ಸಂಸದ ವರುಣ್ ಗಾಂಧಿ ಅವರು ಪಿಲಿಭಿತ್ ಕ್ಷೇತ್ರದಿಂದ ಮತ್ತೆ ಬಿಜೆಪಿ ಅಭ್ಯರ್ಥಿಯಾಗಲಿದ್ದಾರೆ ಎಂದು ಅವರ ಆಪ್ತ ಸಹಾಯಕ ಬುಧವಾರ ಹೇಳಿದ್ದಾರೆ.
ಈ ಹಿಂದೆ ಹಲವು ಸಂದರ್ಭಗಳಲ್ಲಿ ನರೇಂದ್ರ ಮೋದಿ ಸರಕಾರವನ್ನು ಟೀಕಿಸಿದ್ದ ವರುಣ್ ಗಾಂಧಿ ಅವರು ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ನಾಲ್ಕು ಸೆಟ್‌ಗಳ ನಾಮಪತ್ರಗಳನ್ನು ಬುಧವಾರ ಖರೀದಿಸಿದ್ದಾರೆ.
ಸಂಸದ ವರುಣ್ ಗಾಂಧಿ ಅವರ ಆಪ್ತ ಸಹಾಯಕ ಎಂ.ಆರ್. ಮಲಿಕ್ ಗಾಂಧಿಯವರ ನಿರ್ದೇಶನದ ಮೇರೆಗೆ ಹಿಂದಿ ಮತ್ತು ಇಂಗ್ಲಿಷ್‌ನ ನಾಲ್ಕು ಸೆಟ್ ನಾಮನಿರ್ದೇಶನ ಪತ್ರಗಳನ್ನು ಖರೀದಿಸಿದ್ದಾರೆ
ಪಕ್ಷ ಬದಲಾಯಿಸಬಹುದು ಎಂಬ ಊಹಾಪೋಹಗಳಿಗೆ ವಿರಾಮ ಹಾಕಿದ ಮಲಿಕ್ ” ವರುಣ್ ಗಾಂಧಿ ಉತ್ತರ ಪ್ರದೇಶದ ಪಿಲಿಭಿತ್ ಬಿಜೆಪಿ ಅಭ್ಯರ್ಥಿಯಾಗಲಿದ್ದಾರೆ” ಎಂದರು. ಪಿಲಿಭಿತ್ ಕ್ಷೇತ್ರವನ್ನು ವರುಣ್ ಗಾಂಧಿಯವರ ತಾಯಿ ಮೇನಕಾ ಗಾಂಧಿ ಮತ್ತು ವರುಣ್ ಎರಡು ದಶಕಗಳಿಂದ ಪ್ರತಿನಿಧಿಸುತ್ತಿದ್ದಾರೆ.
ವರುಣ್ ಕಳೆದ ಕೆಲವು ವರ್ಷಗಳಿಂದ ತಮ್ಮದೇ ಪಕ್ಷದ ಸರಕಾರದ ನೀತಿಗಳ ಮೇಲೆ ವಾಗ್ದಾಳಿ ನಡೆಸುತ್ತಿದ್ದರು. ಇತ್ತೀಚೆಗೆ ಅವರು ಬಿಜೆಪಿ ನಾಯಕರೊಂದಿಗೆ ವೇದಿಕೆ ಹಂಚಿಕೊಂಡಿದ್ದರು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿದ್ದರು. ವಿಶೇಷವೆಂದರೆ ಪಿಲಿಭಿತ್ ಕ್ಷೇತ್ರದಿಂದ ಬಿಜೆಪಿ ಇನ್ನೂ ತನ್ನ ಅಭ್ಯರ್ಥಿಯನ್ನು ಘೋಷಿಸಿಲ್ಲ. ಈ ಕ್ಷೇತ್ರಕ್ಕೆ ಏಪ್ರಿಲ್ 19 ರಂದು ಮತದಾನ ನಡೆಯಲಿದೆ.