ಪಣಜಿ: ಲೋಕಸಭೆ ಚುನಾವಣೆ ಹಿನ್ನಲೆ ಗೋವಾ ರಾಜ್ಯಾದ್ಯಂತ ಅಧಿಕ ಕಟ್ಟೆಚ್ಚರ ವಹಿಸಲಾಗಿದ್ದು, ಎಲ್ಲೆಡೆ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಲೋಕಸಭೆ ಚುನಾವಣೆ ವೇಳೆ ಅವ್ಯವಹಾರ ಹಾಗೂ ಇತರ ಅಕ್ರಮ ಚಟುವಟಿಕೆಗಳನ್ನು ತಡೆಯಲು ಚುನಾವಣಾ ಆಯೋಗ ಕಟ್ಟುನಿಟ್ಟಿನ ನಿರ್ಬಂಧಗಳನ್ನು ವಿಧಿಸಿದ್ದು, ಭದ್ರತಾ ವ್ಯವಸ್ಥೆಗೆ ಕಟ್ಟೆಚ್ಚರ ವಹಿಸುವಂತೆ ಸೂಚಿಸಿದೆ.
ಪೊಲೀಸ್ ಮತ್ತು ಇತರ ಭದ್ರತಾ ಪಡೆಗಳೊಂದಿಗೆ ಸರ್ಕಾರಿ ಇಲಾಖೆಗಳ ನೌಕರರನ್ನು ವಿಶೇಷವಾಗಿ ನೇಮಿಸಲಾಗಿದೆ. ಗೋವಾದ ಬಿಚೋಲಿ ನಗರದ ಛತ್ರಪತಿ ಶಿವಾಜಿ ಮಹಾರಾಜ ವೃತ್ತದ ಬಳಿ ತಾತ್ಕಾಲಿಕ ತಪಾಸಣಾ ಕೇಂದ್ರ ಸ್ಥಾಪಿಸಲಾಗಿದ್ದು, ಈ ಸ್ಥಳದಲ್ಲೂ ಹಗಲು-ರಾತ್ರಿ ವಾಹನ ತಪಾಸಣೆ ನಡೆಸಲಾಗುತ್ತಿದೆ.
ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳನ್ನು ಸಂಪರ್ಕಿಸುವ ದೋಡಾಮಾರ್ಗ್‍ನ ಗಡಿಯಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಪೊಲೀಸ್, ಅಬಕಾರಿ ಮತ್ತು ಸಂಚಾರ ಇಲಾಖೆ ಚೆಕ್ ಪೋಸ್ಟ್‌ಗಳು ದೊಡಾಮಾರ್ಗ್‍ನಲ್ಲಿವೆ. ಅಲ್ಲದೆ, ಮಾರಾಟ ತೆರಿಗೆ ಖಾತೆ ಹಾಗೂ ಕೃಷಿ ಇಲಾಖೆಯ ತಾತ್ಕಾಲಿಕ ಕಚೇರಿಗಳನ್ನು ತೆರೆಯಲಾಗಿದ್ದು, ಆಯಾ ಇಲಾಖೆಗಳ ಸಿಬ್ಬಂದಿ ತಪಾಸಣಾ ಕಾರ್ಯದಲ್ಲಿ ನಿರತರಾಗಿದ್ದಾರೆ.
ಚುನಾವಣಾ ಆಯೋಗದಿಂದ ನೇಮಕಗೊಂಡ ಅಧಿಕಾರಿಗಳು ಭದ್ರತಾ ವ್ಯವಸ್ಥೆಗಳ ಮೇಲೆ ನಿಗಾ ಇರಿಸಿದ್ದಾರೆ. ಈ ಅಧಿಕಾರಿಗಳು ಕಾಲಕಾಲಕ್ಕೆ ಭದ್ರತಾ ವ್ಯವಸ್ಥೆಗಳನ್ನು ಪರಿಶೀಲಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಭದ್ರತಾ ವ್ಯವಸ್ಥೆ ಮತ್ತಷ್ಟು ಕ್ರಿಯಾಶೀಲವಾಗುವ ಸೂಚನೆಗಳಿವೆ.
ದೊಡಾಮಾರ್ಗ್‍ನಲ್ಲಿ ಭದ್ರತಾ ವ್ಯವಸ್ಥೆಯಿಂದ ಹಗಲು ರಾತ್ರಿ ವಾಹನಗಳನ್ನು ತಪಾಸಣೆ ಮಾಡಲಾಗುತ್ತಿದೆ. ಗೋವಾದಿಂದ ಮಹಾರಾಷ್ಟ್ರಕ್ಕೆ ಹೋಗುವ ಮತ್ತು ಮಹಾರಾಷ್ಟ್ರದಿಂದ ಗೋವಾಕ್ಕೆ ಬರುವ ವಾಹನಗಳನ್ನು ಪೊಲೀಸರು ಮತ್ತು ಇತರ ಭದ್ರತಾ ಏಜೆನ್ಸಿಗಳು ಕೂಲಂಕುಷವಾಗಿ ಪರಿಶೀಲಿಸುತ್ತಿದ್ದಾರೆ. ವಾಹನಗಳಲ್ಲಿ ಮದ್ಯ ಅಥವಾ ಇತರೆ ಅನುಮಾನಾಸ್ಪದ ವಸ್ತುಗಳು ಇಲ್ಲ ಎಂಬುದನ್ನು ಖಚಿತಪಡಿಸಿಕೊಂಡ ನಂತರವೇ ವಾಹನಗಳನ್ನು ಬಿಡಲಾಗುತ್ತಿದೆ.