ಮಂಗಳೂರು: ತುಳುನಾಡಿನ ಪುಣ್ಯದ ಮಣ್ಣಿನ ಜನರು ಹಿಂದೂ ಸಂಸ್ಕೃತಿ, ಪರಂಪರೆ ಉಳಿಸುವ ಆಶಯದಿಂದಾಗಿ ಜಾತಿಯನ್ನು ನೋಡದೆ ದೇಶದ ಹಿತವನ್ನೇ ಬಯಸಿದ ಕಾರಣ ದಿಂದ ಬಿಜೆಪಿ ಸಶಕ್ತವಾಗಿ ಕರಾವಳಿಯಲ್ಲಿ ನಿಂತಿದೆ. ಈ ಬಾರಿಯ ಲೋಕಸಭಾ ಚುನಾವಣೆಯ ವೇಳೆಯಲ್ಲೂ ಜಾತಿಗಿಂತ ದೇಶದ ಹಿತವೇ ಮುಖ್ಯ ಎಂಬುವುದನ್ನು ಕ್ಯಾ| ಬ್ರಿಜೇಶ್ ಚೌಟ ಗೆಲುವಿನ ಮೂಲಕ ಮತದಾರರು ಸ್ಪಷ್ಟಪಡಿಸಲಿದ್ದಾರೆ ಎಂದು ಬಿಜೆಪಿ ವಕ್ತಾರ ಹರಿಕೃಷ್ಣ ಬಂಟ್ವಾಳ ಹೇಳಿದರು.
ಕ್ಯಾ| ಬ್ರಿಜೇಶ್ ಚೌಟ ಅವರ ಪರ ಮೂಲ್ಕಿಯಲ್ಲಿ ಬುಧವಾರ ನಡೆದ ಬಿಜೆಪಿ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ತುಳುನಾಡಿನ ಮಣ್ಣು ಅತ್ಯಂತ ಪವಿತ್ರವಾದ ಮಣ್ಣು. ಕಳೆದ 33 ವರ್ಷಗಳಿಂದ ಇಲ್ಲಿನ ಮತದಾರರು ಜಾತಿ, ಮತ, ಪಂಥ, ಭಾಷೆ ನೋಡದೆ ಮತದಾನ ಮಾಡಿದ್ದಾರೆ. ಧನಂಜಯ ಕುಮಾರ್, ಸದಾನಂದ ಗೌಡ, ನಳಿನ್ ಕುಮಾರ್ ಕಟೀಲು ಅವರ ಜತೆಗೆ ನಮ್ಮ ಬಿಲ್ಲವರು, ಬಂಟರು, ಕುಲಾಲರು, ಬ್ರಾಹ್ಮಣರ ಸಹಿತ ಎಲ್ಲ ತುಳುನಾಡಿನ ಮಣ್ಣಿನ ಮಕ್ಕಳು ಜಾತಿ ನೋಡದೆ ಮತ ನೋಡದೆ ಭಾರತದ ಹಿಂದೂ ಸಂಸ್ಕೃತಿ, ಪರಂಪರೆ ಉಳಿಸುವಂತಹ ಪಕ್ಷವಾದ ಬಿಜೆಪಿ ಪರವಾಗಿಯೇ ನಿಂತಿದ್ದಾರೆ. ಇದೇ ರೀತಿ ಈ ಬಾರಿಯೂ ಕ್ಯಾ| ಬ್ರಿಜೇಶ್ ಚೌಟ ಅವರ ಬಿಜೆಪಿ ಪರವಾಗಿಯೇ ಜನರು ನಿಲ್ಲಲಿದ್ದಾರೆ. ಇದರಲ್ಲಿ ಜಾತಿ ನೋಡುವುದಿಲ್ಲ. ಮತ-ಭಾಷೆಯನ್ನೂ ಜನರು ನೋಡುವುದಿಲ್ಲ. ದೇಶದ ಹಿತವನ್ನೇ ಜನರು ಬಯಸಿದ್ದಾರೆ ಎಂದರು.
ಕಾಂಗ್ರೆಸ್‌ನ ಕೈ ಚಿಹ್ನೆಯಲ್ಲಿ 5 ಬೆರಳುಗಳಿವೆ. ಅದರಲ್ಲಿ 1 ಬೆರಳು ಮಾತ್ರ ಕಾಂಗ್ರೆಸ್. ಉಳಿದ ಒಂದೊಂದು ಬೆರಳುಗಳು ಭಾರತ ವಿರೋಧಿ ನಿಲುವು ಹೊಂದಿದ ಪಕ್ಷಗಳ ಸಖ್ಯವನ್ನು ಹೊಂದಿದೆ. ಹೀಗಾಗಿ ಭಾರತ ವಿರೋಧಿ ಪಕ್ಷವನ್ನು ಮೆಟ್ಟಿನಿಲ್ಲಬೇಕಿದೆ ಎಂದರು.
ದ.ಕ. ಹಾಗೂ ಉಡುಪಿ ಜಿಲ್ಲೆಯಲ್ಲಿ ಈ ಬಾರಿಯೂ ಬಿಜೆಪಿ ಗೆಲ್ಲುವುದಕ್ಕೆ ಹಾಗೂ ಪ್ರಧಾನಿಯಾಗಿ ನರೇಂದ್ರ ಮೋದಿ ಅಧಿಕಾರ ಸ್ವೀಕರಿಸುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದವರು ಹೇಳಿದರು.
ಶಾಸಕ ಉಮಾನಾಥ ಕೋಟ್ಯಾನ್, ಬಿಜೆಪಿ ಮುಖಂಡರಾದ ಈಶ್ವರ ಕಟೀಲು, ಅನಿಲ್ ಕುಮಾರ್, ದಿನೇಶ್ ಮುಂತಾದವರು ಉಪಸ್ಥಿತರಿದ್ದರು.
“ಪ್ರಧಾನಿ ಮೋದಿ ಭಾರತ ಮಾತೆಯ ಪೂಜಾರಿ‘
ಭಾರತ ಮಾತೆಯನ್ನು ಪೂಜೆ ಮಾಡಿ, ದೇಶದ ಸರ್ವ ಜನರ ಹಾರೈಕೆಯನ್ನೇ ತನ್ನ ಕಾಯಕವಾಗಿ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರೇ ಈ ದೇಶದ ಮಹಾ ಪೂಜಾರಿ. ಅವರು ಭಾರತದ ಪೂಜಾರಿಯೂ ಹೌದು. ಹಿಂದುತ್ವದ ಪೂಜಾರಿಯೂ ಹೌದು. ದೇಶದ ಸಂಸ್ಕೃತಿ, ಪರಂಪರೆಯನ್ನು ಉಳಿಸುವ ಪೂಜಾರಿ ಅವರು. ದೇಶ ರಕ್ಷಣೆಯ ಮಹಾ ಸಂಕಲ್ಪದ ಕನಸುಗಾರ ಅವರು ಎಂದು ಹರಿಕೃಷ್ಣ ಬಂಟ್ವಾಳ ಹೇಳಿದರು.