ಪಣಜಿ: ಪ್ರಸಕ್ತ ಲೋಕಸಭೆ ಚುನಾವಣೆಗೆ ಗೋವಾದಿಂದ ಕಾಂಗ್ರೆಸ್ ಪಕ್ಷವು ಅಭ್ಯರ್ಥಿಗಳನ್ನು ಘೋಷಿಸಿದ್ದು, ಉತ್ತರ ಗೋವಾದಿಂದ ರಾಮಾಕಾಂತ್ ಖಲಪ್ ಮತ್ತು ದಕ್ಷಿಣ ಗೋವಾದಿಂದ ವಿರಿಯೆಟೊ ಫೆನಾರ್ಂಡಿಸ್ ಅವರಿಗೆ ಕಾಂಗ್ರೆಸ್ ಟಿಕೇಟ್ ನೀಡಿದೆ. ಶನಿವಾರ ಬೆಳಗ್ಗೆ ಗೋವಾದ ಎರಡು ಸ್ಥಾನಗಳು ಸೇರಿದಂತೆ ಇತರ ರಾಜ್ಯಗಳು ಸೇರಿ ಒಟ್ಟು ಆರು ಸ್ಥಾನಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಘೋಷಿಸಿದೆ.
ಅಭ್ಯರ್ಥಿಗಳನ್ನು ನಿರ್ಧರಿಸಲು ಶುಕ್ರವಾರ ದೆಹಲಿಯಲ್ಲಿ ಕಾಂಗ್ರೆಸ್ ನಾಯಕರ ಮಹತ್ವದ ಸಭೆ ನಡೆಯಿತು. ಇದರಲ್ಲಿ ಗೋವಾದ ಪ್ರಮುಖ ನಾಯಕರು ಹಾಗೂ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಉಪಸ್ಥಿತರಿದ್ದರು.
ಶುಕ್ರವಾರ ತಡರಾತ್ರಿ ಅಭ್ಯರ್ಥಿಗಳ ಘೋಷಣೆಯಾಗುವ ನಿರೀಕ್ಷೆ ಇತ್ತು. ಆದರೆ ಅಂತಿಮವಾಗಿ ಶನಿವಾರ ಬೆಳಗ್ಗೆ ಗೋವಾ ರಾಜ್ಯದ ಎರಡೂ ಸ್ಥಾನಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಘೋಷಿಸಿದ್ದು, ಉತ್ತರದಲ್ಲಿ ಖಲಪ್ ಮತ್ತು ದಕ್ಷಿಣದಲ್ಲಿ ವಿರಿಯೆಟೊ ಫೆನಾರ್ಂಡಿಸ್ ಅವರಿಗೆ ಅವಕಾಶ ನೀಡಲಾಗಿದೆ.
ಹಾಲಿ ಸಂಸದ ಫ್ರಾನ್ಸಿಸ್ ಸರ್ದಿನ್ ಅವರಿಗೆ ಲಭಿಸದ ಟಿಕೇಟ್…!
ದಕ್ಷಿಣ ಗೋವಾದಲ್ಲಿ ಕಾಂಗ್ರೆಸ್‍ನ ಹಾಲಿ ಸಂಸದ ಫ್ರಾನ್ಸಿಸ್ ಸರ್ದಿನ್‍ಗೆ ಮತ್ತೊಂದು ಅವಕಾಶ ಸಿಗಬಹುದು ಎಂದು ನಿರೀಕ್ಷಿಸಲಾಗಿದ್ದರೂ, ಈ ಬಾರಿ ಅವರ ಅಡ್ರೆಸ್ ಕಟ್ ಆದಂತಿದೆ. ಬದಲಿಗೆ ಕ್ಯಾಥೋಲಿಕ್ ನಾಯಕ ವಿರಿಯೆಟೊ ಫೆನಾರ್ಂಡಿಸ್ ಅವರಿಗೆ ಕಾಂಗ್ರೇಸ್ ಟಿಕೇಟ್ ನೀಡಿದೆ.
ರಾಜ್ಯದಲ್ಲಿ ಲೋಕಸಭಾ ಚುನಾವಣೆ ಸ್ಪರ್ಧೆಯ ಚಿತ್ರಣ ಸ್ಪಷ್ಠ…
ಗೋವಾ ರಾಜ್ಯದಲ್ಲಿ ಲೋಕಸಭೆ ಚುನಾವಣೆಯ ಸ್ಪರ್ಧೆಯ ಚಿತ್ರಣ ಸ್ಪಷ್ಟವಾಗಿದೆ. ಉತ್ತರದಲ್ಲಿ ಶ್ರೀಪಾದ್ ನಾಯಕ್ (ಬಿಜೆಪಿ) ವಿರುದ್ಧ ರಮಾಕಾಂತ್ ಖಲಾಪ್ (ಕಾಂಗ್ರೆಸ್) ಮತ್ತು ಮನೋಜ್ ಪರಬ್ (ಆರ್ಜಿ) ಮತ್ತು ದಕ್ಷಿಣದಲ್ಲಿ ಪಲ್ಲವಿ ಧೆಂಪೆ (ಬಿಜೆಪಿ) ವಿರುದ್ಧ ವಿರಿಯೆಟೊ ಫೆನಾರ್ಂಡಿಸ್ (ಕಾಂಗ್ರೆಸ್) ) ಮತ್ತು ರಾಬರ್ಟ್ ಪೆರೆರಾ (ಆರ್ಜಿ) ಇದು ಪ್ರಮುಖ ಪಕ್ಷಗಳ ಅಭ್ಯರ್ಥಿಗಳ ಸ್ಫರ್ಧೆಯ ಚಿತ್ರಣವಾಗಿದೆ.