ಬೆಂಗಳೂರು: ಕೊನೆಗೂ ಉತ್ತರ ಕನ್ನಡ ಜಿಲ್ಲೆ ಬಿಜೆಪಿ ಅಭ್ಯರ್ಥಿ ಪರ ಕೆಲಸ ಮಾಡಲಾರೆ ಎಂಬ ಪರೋಕ್ಷ ಸಂದೇಶವನ್ನು ಸಂಸದ ಅನಂತಕುಮಾರ್ ಹೆಗಡೆ ರವಾನಿಸಿದ್ದು, ಪಕ್ಷದ ರಾಜ್ಯ ಕಚೇರಿಯಲ್ಲಿ ನಡೆದ ಜಿಲ್ಲಾ ಕೋರ್ ಕಮಿಟಿ ಸಭೆಗೆ ಅನಂತಕುಮಾರ್ ಹೆಗಡೆ ಹಾಗೂ ಮಾಜಿ ಸಚಿವ, ಶಾಸಕ ಶಿವರಾಮ್ ಹೆಬ್ಟಾರ್ ಗೈರಾಗಿದ್ದಾರೆ. ಬೆಂಗಳೂರಿನಲ್ಲಿ ಇದ್ದರೂ ಜಿಲ್ಲೆಯ ಈ ಇಬ್ಬರೂ ಪ್ರಮುಖ ನಾಯಕರು ಸಭೆಗೆ ಗೈರಾಗಿರುವುದು ಬಿಜೆಪಿ ನಾಯಕರಲ್ಲಿ ಆತಂಕ ಮೂಡಿಸಿದ್ದು, ಅನಂತ ನಡೆಗೆ ಪ್ರತಿತಂತ್ರ ಹೆಣೆಯುವುದು ಸವಾಲಾಗಿ ಪರಿಣಮಿಸಿದೆ.
ಸಮಸ್ಯೆ ಹಾಗೂ ಭಿನ್ನಮತ ಇರುವ ಜಿಲ್ಲೆಗಳಲ್ಲಿ ಸಮನ್ವಯ ತರುವುದಕ್ಕಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ರಾಜ್ಯ ಸಂಘಟನ ಕಾರ್ಯದರ್ಶಿ ಜಿ.ವಿ.ರಾಜೇಶ್, ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ, ಜಿಲ್ಲಾ ಚುನಾವಣ ಪ್ರಭಾರಿ ಹರತಾಳ ಹಾಲಪ್ಪ ಸಹಿತ 30ಕ್ಕೂ ಹೆಚ್ಚು ಮುಖಂಡರು ಕೋರ್ ಕಮಿಟಿ ಸಭೆಯಲ್ಲಿ ಭಾಗವಹಿಸಿದರು.
ಈ ಚುನಾವಣೆ ಬಗ್ಗೆ ಒಂದೆಡೆ ಅನಂತಕುಮಾರ್ ಹೆಗಡೆ ದಿವ್ಯ ನಿರ್ಲಕ್ಷ್ಯ ತೋರುತ್ತಿರುವುದರ ಮಧ್ಯೆ ಯಲ್ಲಾಪುರ-ಮುಂಡಗೋಡ ಹಾಗೂ ಬನವಾಸಿ ಭಾಗದಲ್ಲಿ ಶಾಸಕ ಶಿವರಾಮ್ ಹೆಬ್ಟಾರ್ ಕೂಡ ತಟಸ್ಥರಾಗಿದ್ದಾರೆ. ಪಕ್ಷದ ಜಿಲ್ಲಾ ಜಾಹೀರಾತಿನಿಂದ ಅವರ ಭಾವಚಿತ್ರ ತೆಗೆದಿರುವುದು ಬೆಂಬಲಿಗರ ಆಕ್ಷೇಪಕ್ಕೆ ಕಾರಣವಾಗಿದ್ದು, ಈ ತಿಂಗಳ 15ರ ಒಳಗಾಗಿ ಹೆಬ್ಟಾರ್ ಬಣದ 30 ಪಂಚಾಯತ್ ಸದಸ್ಯರು, 2 ಪುರಸಭೆ ಸದಸ್ಯರು ಕಾಂಗ್ರೆಸ್ ಸೇರ್ಪಡೆಯಾಗುವ ಸಾಧ್ಯತೆ ಇದೆ. ಇದರ ಜತೆಗೆ ಮುಂಡಗೋಡ, ಬನವಾಸಿ ಹಾಗೂ ಯಲ್ಲಾಪುರ ಭಾಗದ ಪ್ರಭಾವಿ ಮುಖಂಡರಿಗೆ ಕಾಂಗ್ರೆಸ್ ಗಾಳ ಹಾಕಿರುವುದು ಬಿಜೆಪಿಯಲ್ಲಿ ಆತಂಕ ಮೂಡಿಸಿದೆ.
ಜತೆಗೆ ನಾಮಧಾರಿ ಸಮುದಾಯವನ್ನು ಒಳಗೊಂಡಂತೆ ಹಿಂದುಳಿದ ವರ್ಗದ ಮುಖಂಡರು ಕಾಗೇರಿಯವರ ಬಗ್ಗೆ ಪೂರ್ಣ ಪ್ರಮಾಣದಲ್ಲಿ ಒಲವು ವ್ಯಕ್ತಪಡಿಸುತ್ತಿಲ್ಲ ಎನ್ನಲಾಗಿದೆ. ಘಟ್ಟದ ಕೆಳಗಿನ ತಾಲೂಕುಗಳಲ್ಲಿ ಅನಂತಕುಮಾರ್ ಹೆಗಡೆಯವರಿಗೆ ಟಿಕೆಟ್ ತಪ್ಪಿಸಿರುವ ಸಿಟ್ಟು ಇನ್ನೂ ಆರಿಲ್ಲ ಎಂಬ ಮಾಹಿತಿ ರಾಜ್ಯ ಘಟಕಕ್ಕೆ ಲಭಿಸಿದ್ದು ಹಿಂದುತ್ವದ ಭದ್ರಕೋಟೆಯಲ್ಲಿ ಒಂದಾಗಿರುವ ಉತ್ತರಕನ್ನಡ ಕ್ಷೇತ್ರ ಕೈ ತಪ್ಪಿ ಹೋಗದಂತೆ ತಡೆಯುವುದು ಸವಾಲಾಗಿ ಪರಿಣಮಿಸಿದೆ.