ನವದೆಹಲಿ: ವಾಣಿಜ್ಯ ಬಳಕೆಯ 19 ಕೆಜಿ ಎಲ್ ಪಿಜಿ ಸಿಲಿಂಡರ್ ಬೆಲೆಯನ್ನು 69.50 ರೂಪಾಯಿ ಇಳಿಕೆ ಮಾಡಲಾಗಿದೆ ಎಂದು ತೈಲ ಮಾರುಕಟ್ಟೆ ಕಂಪನಿಗಳು ಶನಿವಾರ (ಜೂನ್ 01) ತಿಳಿಸಿದ್ದು, ಹೊಸ ದರ ಇಂದಿನಿಂದಲೇ ಅನ್ವಯವಾಗಲಿದೆ ಎಂದು ಹೇಳಿದೆ.
ಇದನ್ನೂ ಓದಿ:Kerala: ಅಘೋರಿಗಳಿಂದ ಶತ್ರು ಭೈರವಿ ಯಾಗ…ಡಿಕೆಶಿ ಆರೋಪಕ್ಕೆ ಕೇರಳ ಸರ್ಕಾರ ಹೇಳಿದ್ದೇನು?
ವಾಣಿಜ್ಯ ಬಳಕೆಯ ಎಲ್ ಪಿಜಿ ಸಿಲಿಂಡರ್ ಬೆಲೆ ಇಳಿಕೆಯಾಗಿದ್ದರೂ ಕೂಡಾ ಅಡುಗೆ ಅನಿಲದ ಎಲ್ ಪಿಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಎಂದು ಕಂಪನಿ ತಿಳಿಸಿದೆ.
ವಾಣಿಜ್ಯ ಬಳಕೆಯ ಎಲ್ ಪಿಜಿ ಸಿಲಿಂಡರ್ ಬೆಲೆಯನ್ನು ಇಳಿಕೆ ಮಾಡಬೇಕೆಂಬ ನಿರ್ಧಾರ ತೆಗೆದುಕೊಂಡ ನಂತರ ರಾಷ್ಟ್ರರಾಜಧಾನಿ ದೆಹಲಿಯಲ್ಲಿ 19ಕೆಜಿ ವಾಣಿಜ್ಯ ಎಲ್ ಪಿಜಿ ಸಿಲಿಂಡರ್ ಬೆಲೆ 1,676 ರೂಪಾಯಿಗೆ ಇಳಿಕೆಯಾಗಿದೆ ಎಂದು ಎಎನ್ ಐ ವರದಿ ಮಾಡಿದೆ.
ಈ ವರ್ಷದಲ್ಲಿ ಮೂರನೇ ಬಾರಿಗೆ ಎಲ್ ಪಿಜಿ ದರ ಕಡಿತ ಮಾಡಲಾಗಿದೆ. ಈ ಮೊದಲು ಮೇ 1ರಂದು ವಾಣಿಜ್ಯ ಬಳಕೆಯ ಎಲ್ ಪಿಜಿ ಸಿಲಿಂಡರ್ ಬೆಲೆಯಲ್ಲಿ 19 ರೂಪಾಯಿ ಕಡಿತ ಮಾಡಲಾಗಿತ್ತು.
ಅದೇ ರೀತಿ ಏಪ್ರಿಲ್ ತಿಂಗಳಿನಲ್ಲಿ 19 ಕೆಜಿ ವಾಣಿಜ್ಯ ಬಳಕೆಯ ಎಲ್ ಪಿಜಿ ಸಿಲಿಂಡರ್ ಬೆಲೆಯಲ್ಲಿ 30.50 ರೂಪಾಯಿ ಇಳಿಕೆ ಮಾಡಲಾಗಿತ್ತು. ಇದೀಗ ಜೂನ್ 1ರಂದು 60.50 ರೂಪಾಯಿ ಕಡಿತ ಮಾಡಲಾಗಿದೆ ಎಂದು ವರದಿ ವಿವರಿಸಿದೆ.
ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಬಳಕೆ ಎಲ್ ಪಿಜಿ ಸಿಲಿಂಡರ್ ಬೆಲೆ 1676 ರೂಪಾಯಿ, ಕೋಲ್ಕತಾದಲ್ಲಿ 1,787 ರೂಪಾಯಿ, ಮುಂಬೈನಲ್ಲಿ 1629 ರೂಪಾಯಿ ಹಾಗೂ ಚೆನ್ನೈನಲ್ಲಿ 1,841 ರೂಪಾಯಿಗೆ ಇಳಿಕೆಯಾಗಿದೆ.