Advertisement
ಹೀಗೊಂದು ಮೌಲ್ಯಮಾಪನ!ಗ್ರಾಹಕರು ಪ್ರತೀ ಎಲ್‌ಪಿಜಿ ಸಿಲಿಂಡರ್‌ಗೆ 1,000 ರೂ. ವರೆಗೆ ಪಾವತಿಸಲು ಸಿದ್ಧರಿದ್ದಾರೆ ಎಂಬುದು ಸರಕಾರ ಕೆಲವು ತಿಂಗಳುಗಳ ಹಿಂದೆಯಷ್ಟೇ ನಡೆಸಿರುವ ಆಂತರಿಕ ಮೌಲ್ಯಮಾಪನದ ವೇಳೆ ತಿಳಿದುಬಂದಿದೆ. ಇದೇ ಕಾರಣದಿಂದಾಗಿ ತನ್ನ ಮೇಲೆ ಬೀಳುತ್ತಿರುವ ಆರ್ಥಿಕ ಹೊರೆಯನ್ನು ಇನ್ನಷ್ಟು ಕಡಿಮೆ ಮಾಡಲು ಸರಕಾರ ಎಲ್‌ಪಿಜಿ ಮೇಲಿನ ಸಬ್ಸಿಡಿಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವ ಲೆಕ್ಕಾಚಾರದಲ್ಲಿದೆ. ಆದರೆ ಸರಕಾರದ ಆಂತರಿಕ ಮೌಲ್ಯಮಾಪನದ ಮಾನದಂಡ ಮತ್ತು ಅದರ ವರದಿಯ ಕುರಿತಂತೆಯೇ ಇದೀಗ ಜನಸಾಮಾನ್ಯರಲ್ಲಿ ಅನುಮಾನಗಳು ಮೂಡಿವೆ. ಜನರು ಇನ್ನೂ ಕೊರೊನಾ ಹೊಡೆತದಿಂದ ಚೇತರಿಸಿಕೊಳ್ಳಲು ಪ್ರಯಾಸ ಪಡುತ್ತಿರುವಾಗ ಮತ್ತು ಕಳೆದೆರಡು ವರ್ಷಗಳಿಂದ ಆದಾಯ ತೀವ್ರ ಕುಸಿದಿರುವಾಗ ಯಾವ ಆಧಾರದಲ್ಲಿ ಈ ಮೌಲ್ಯಮಾಪನ ನಡೆಸಲಾಗಿದೆ ಎಂಬುದು ಜನಸಾಮಾನ್ಯರನ್ನು ಕಾಡುತ್ತಿರುವ ಪ್ರಶ್ನೆ. ಅಷ್ಟು ಮಾತ್ರವಲ್ಲದೆ ತೈಲ ಬೆಲೆಗಳೂ ಒಂದೇ ಸಮನೆ ಏರುಗತಿಯಲ್ಲಿ ಸಾಗಿದ್ದು ಪೆಟ್ರೋಲ್, ಡೀಸೆಲ್‌ಗಳೆರಡೂ ಶತಕದ ಗಡಿ ದಾಟಿ ಮುನ್ನಡೆಯುತ್ತಿವೆ. ಇದರಿಂದಾಗಿ ಎಲ್ಲ ಅಗತ್ಯ ವಸ್ತುಗಳ ಧಾರಣೆಯೂ ಹೆಚ್ಚಾಗಿದ್ದು ಜನಸಾಮಾನ್ಯರು ದೈನಂದಿನ ಜೀವನ ನಡೆಸುವುದೇ ಕಷ್ಟಸಾಧ್ಯವಾಗಿದೆ. ಈ ಹಿನ್ನೆಲೆಯಲ್ಲಿ ಸಿಲಿಂಡರ್‌ಗೆ ಕನಿಷ್ಠ 50 ರೂ. ಹೆಚ್ಚಳಕ್ಕೆ ಒಪ್ಪಿಗೆ ಸೂಚಿಸುವ ಸಾಧ್ಯತೆ ಇದೆ. ಒಂದು ವೇಳೆ ಸರಕಾರ ಮತ್ತೆ ಎಲ್‌ಪಿಜಿ ಬೆಲೆ ಹೆಚ್ಚಳಕ್ಕೆ ಹಸುರು ನಿಶಾನೆ ತೋರಿದ್ದೇ ಆದಲ್ಲಿ ಜನಸಾಮಾನ್ಯರ ಬದುಕು ಇನ್ನಷ್ಟು ದುಸ್ತರವಾಗಲಿದೆ.
ಹೊಸದಿಲ್ಲಿಯಲ್ಲಿ ಜನವರಿ 1ರಂದು ಎಲ್‌ಪಿಜಿ ಸಿಲಿಂಡರ್ ಬೆಲೆ 694 ರೂ. ಇದ್ದರೆ ಪ್ರಸ್ತುತ 899.50 ರೂ. ಆಗಿದೆ. ಅಂದರೆ ಜನವರಿಯಿಂದ ಗ್ಯಾಸ್ ಸಿಲಿಂಡರ್ ಬೆಲೆ 205.50 ರೂ. ಏರಿಕೆಯಾಗಿದೆ. ಕಳೆದ ಏಳು ವರ್ಷಗಳಲ್ಲಿ ಸಿಲಿಂಡರ್ ಬೆಲೆ ದ್ವಿಗುಣಗೊಂಡಿದೆ. 14.2 ಕೆ.ಜಿ. ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆ 2014ರ ಮಾ. 1ರಂದು 410.5 ರೂ. ಆಗಿತ್ತು. ಈಗ ಅದು 899.50 ರೂ. ಆಗಿದೆ. ಪ್ರಸಕ್ತ ವರ್ಷ ಜುಲೈಯಿಂದೀಚೆಗೆ ಎಲ್‌ಪಿಜಿ ಸಿಲಿಂಡರ್ ಬೆಲೆ 90 ರೂ. ಏರಿಕೆಯಾಗಿದೆ. ಇದನ್ನೂ ಓದಿ:ಚೀನಾ ಸೈನಿಕರ ಪತ್ತೆಗಾಗಿ ಹೊಸ ತಂತ್ರಜ್ಞಾನ : ಗಡಿ ಉಲ್ಲಂಘನೆ ತಪ್ಪಿಸಲು ಈ ಪ್ರಯತ್ನ
Related Articles
ಎಲ್‌ಪಿಜಿ ಮೇಲಿನ ಸಬ್ಸಿಡಿಯನ್ನು ಸಂಪೂರ್ಣವಾಗಿ ರದ್ದುಗೊಳಿಸುವ ವಿಚಾರವಾಗಿ ಕೇಂದ್ರ ಸರಕಾರ ಗಂಭೀರ ಚಿಂತನೆ ನಡೆಸಿದೆ. ಒಂದು ವೇಳೆ ಇಂಥ ಕಠಿನ ನಿರ್ಧಾರ ಕೈಗೊಂಡಲ್ಲಿ ಸರಕಾರ ಜನಸಾಮಾನ್ಯರ ತೀವ್ರ ಆಕ್ರೋಶಕ್ಕೆ ಗುರಿಯಾಗುವ ಸಾಧ್ಯತೆ ಇದೆ. ಅಷ್ಟೇ ಅಲ್ಲದೆ ಮುಂದಿನ ವರ್ಷ ಉತ್ತರ ಪ್ರದೇಶ ಸಹಿತ ಐದು ರಾಜ್ಯಗಳ ವಿಧಾನಸಭೆಗಳಿಗೆ ಚುನಾವಣೆ ನಡೆಯಲಿರುವುದರಿಂದ ಈ ವಿಚಾರವಾಗಿ ಅಂತಿಮ ತೀರ್ಮಾನಕ್ಕೆ ಬರಲು ಕೇಂದ್ರ ಸರಕಾರ ಕಾದು ನೋಡುವ ತಂತ್ರಕ್ಕೆ ಶರಣಾಗಿದೆ. ಆದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಎಲ್‌ಪಿಜಿ ಬೆಲೆ ಏರಿಕೆಯಾಗುತ್ತಲೇ ಇರುವುದರಿಂದ ತೈಲ ಕಂಪೆನಿಗಳ ಮೇಲೆ ಹೆಚ್ಚಿನ ಹೊರೆ ಬೀಳುತ್ತಿದ್ದು ಪದೇಪದೆ ಬೆಲೆ ಹೆಚ್ಚಳಕ್ಕೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸುತ್ತಲೇ ಇವೆ. ಇದೇ ವೇಳೆ ಎಲ್‌ಪಿಜಿ ಸಬ್ಸಿಡಿ ವಿಚಾರದಲ್ಲಿ ಕೇಂದ್ರ ಸರಕಾರ ಎರಡು ಸಾಧ್ಯತೆಗಳನ್ನು ಪರಿಶೀಲಿಸುತ್ತಿದೆ. ಮೊದಲ ಆಯ್ಕೆಯಾಗಿ ಹಾಲಿ ಚಾಲ್ತಿಯಲ್ಲಿರುವ ನೀತಿಯನ್ನೇ ಮುಂದುವರಿಸುವುದು ಹಾಗೂ ಎರಡನೇ ಆಯ್ಕೆಯಾಗಿ ಉಜ್ವಲ ಯೋಜನೆಯಡಿ ಎಲ್‌ಪಿಜಿ ಸಂಪರ್ಕ ನೀಡಲಾದ ಆರ್ಥಿಕವಾಗಿ ದುರ್ಬಲವಾಗಿರುವ ಕುಟುಂಬಗಳಿಗೆ ಮಾತ್ರವೇ ಸಬ್ಸಿಡಿ ಸಹಿತ ಎಲ್‌ಪಿಜಿ ಸಿಲಿಂಡರ್‌ಗಳನ್ನು ಒದಗಿಸುವುದು. ಈ ಎರಡು ಆಯ್ಕೆಗಳ ಕುರಿತಂತೆ ಸರಕಾರದ ಮಟ್ಟದಲ್ಲಿ ಗಂಭೀರ ಚಿಂತನೆ ನಡೆಯುತ್ತಿದ್ದು ಬಹುತೇಕ ಎರಡನೇ ಸಾಧ್ಯತೆಯನ್ನೇ ಸರಕಾರ ಜಾರಿಗೊಳಿಸುವ ಇರಾದೆಯಲ್ಲಿದೆ.
Advertisement
ಸರಕಾರಕ್ಕೆ ತಗ್ಗಿದ ಸಬ್ಸಿಡಿ ಹೊರೆ ಎಲ್‌ಪಿಜಿ ಸಿಲಿಂಡರ್‌ಗೆ ಸಂಬಂಧಿಸಿ ನೀಡಲಾಗುತ್ತಿರುವ ಸಬ್ಸಿಡಿಯ ಹೊರೆ ಕಳೆದೊಂದು ವರ್ಷದಲ್ಲಿ 6 ಪಟ್ಟು ಕಡಿಮೆಯಾಗಿದೆ. 2019- 20ರ ಆರ್ಥಿಕ ವರ್ಷದಲ್ಲಿ ಸರಕಾರವು ಗ್ರಾಹಕರಿಗೆ 24,468 ಕೋ.ರೂ. ಗಳನ್ನು ಸಬ್ಸಿಡಿಯಾಗಿ ನೀಡಿದೆ. ಆದರೆ 2020- 21ರ ಆರ್ಥಿಕ ವರ್ಷದಲ್ಲಿ 3,559 ಕೋ. ರೂ. ಸಬ್ಸಿಡಿಯಾಗಿ ನೀಡಿದೆ. ಈ ಮೂಲಕ ಎಲ್‌ಪಿಜಿ ಸಿಲಿಂಡರ್ ಮೇಲೆ ಸರಕಾರ ಗ್ರಾಹಕರಿಗೆ ನೀಡುತ್ತಿದ್ದ ಸಬ್ಸಿಡಿ ಪ್ರಮಾಣ ಒಂದು ವರ್ಷದ ಅವಧಿಯಲ್ಲಿ ಬರೋಬ್ಬರಿ 6 ಪಟ್ಟು ಕಡಿತವಾಗಿದೆ.
ಸಬ್ಸಿಡಿಗೆ ಸಂಬಂಧಿಸಿದ ನಿಯಮಗಳು: ಎಲ್‌ಪಿಜಿ ಗ್ರಾಹಕರ ವಾರ್ಷಿಕ ಆದಾಯ 10 ಲಕ್ಷ ರೂ. ಗಿಂತ ಅಧಿಕವಾಗಿದ್ದರೆ ಎಲ್‌ಪಿಜಿ ಸಿಲಿಂಡರ್ ಮೇಲೆ ಸಬ್ಸಿಡಿಯನ್ನು ನೀಡಲಾಗುವುದಿಲ್ಲ. ಇದರ ಹೊರತಾಗಿ 2020ರ ಮೇ ತಿಂಗಳಲ್ಲಿ ಎಲ್‌ಪಿಜಿ ಸಿಲಿಂಡರ್ ಬೆಲೆ ಮತ್ತು ಮಾರುಕಟ್ಟೆ ಬೆಲೆ ಸಮಾನವಾಗಿದ್ದರಿಂದ ದೇಶದ ಹಲವೆಡೆ ಎಲ್‌ಪಿಜಿಯ ಮೇಲಿನ ಸಬ್ಸಿಡಿಯನ್ನು ನಿಲ್ಲಿಸಲಾಗಿದೆ. ಆದರೆ ಆ ಬಳಿಕ ಮಾರುಕಟ್ಟೆಯಲ್ಲಿ ಸಿಲಿಂಡರ್ ಬೆಲೆಯಲ್ಲಿ ಹೆಚ್ಚಳವಾಗಿದ್ದರೂ ಸಬ್ಸಿಡಿಯನ್ನು ಸರಕಾರ ಪುನರಾರಂಭಿಸಿಲ್ಲ.
ರಾಜ್ಯದಲ್ಲಿ ಒಂದು ವರ್ಷದಲ್ಲಿ 305.50 ರೂ. ಹೆಚ್ಚಳ: ಕರ್ನಾಟಕದಲ್ಲಿ ಎಲ್‌ಪಿಜಿ ಸಿಲಿಂಡರ್ ಬೆಲೆ 2020ರ ಸೆಪ್ಟಂಬರ್ ನಲ್ಲಿ 14.2 ಕೆ.ಜಿ. ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆ 597 ರೂ. ಗಳಾಗಿದ್ದರೆ 2021ರ ಅಕ್ಟೋಬರ್‌ನಲ್ಲಿ 902.50 ರೂ. ಆಗಿದೆ. ಅಂದರೆ ಸುಮಾರು ಕಳೆದ ಒಂದು ವರ್ಷದಲ್ಲಿ ಸಿಲಿಂಡರ್ ಬೆಲೆ ಸುಮಾರು 305.50 ರೂ. ಹೆಚ್ಚಳವಾಗಿದೆ.
ದೇಶದಲ್ಲಿ ಸುಮಾರು 29 ಕೋಟಿ ಜನರು ಎಲ್‌ಪಿಜಿ ಸಂಪರ್ಕ ಹೊಂದಿದ್ದಾರೆ. ಇದರಲ್ಲಿ 8 ಕೋಟಿ ಎಲ್‌ಪಿಜಿ ಸಂಪರ್ಕಗಳನ್ನು ಉಜ್ವಲ ಯೋಜನೆಯಡಿಯಲ್ಲಿ ಕಲ್ಪಿಸಲಾಗಿದೆ.