ಹೊಸದಿಲ್ಲಿ: ಹೊಸತಾಗಿ ಎಲ್‌ಪಿಜಿ ಸಿಲಿಂಡರ್‌ಗಳ ಸಂಪರ್ಕ ಪಡೆಯಬೇಕೆಂದು ಬಯಸಿದ್ದೀರಾ? ಇನ್ನು ನೀವು 750 ರೂ. ಹೆಚ್ಚುವರಿ ಹಣ ಪಾವತಿಸ ಬೇಕಾಗುತ್ತದೆ. ಗುರುವಾರದಿಂದಲೇ ಇದು ಜಾರಿಯಾಗಲಿದೆ.
ಇಂಧನ ಮಾರುಕಟ್ಟೆ ಕಂಪೆನಿಗಳು (ಒಎಂಸಿಗಳು) ಹೊಸ ಸಿಲಿಂಡರ್‌ಗಳ ಭದ್ರತಾ ಶುಲ್ಕ ಹೆಚ್ಚಿಸಿರುವುದರಿಂದ ಈ ಮೊತ್ತ ಪಾವತಿ ಅನಿವಾರ್ಯವಾಗಿದೆ.
ಸಿಂಗಲ್, ಡಬಲ್ ಎರಡೂ ದುಬಾರಿ: ಹೊಸ ಸಿಂಗಲ್ ಸಿಲಿಂಡರ್ ಸಂಪರ್ಕಕ್ಕೆ 1,450 ರೂ. ನೀಡಬೇಕಾಗಿತ್ತು. ಇನ್ನು ಹೆಚ್ಚುವರಿ 750 ರೂ. ಪಾವತಿಸಬೇಕಾಗಿರುವುದರಿಂದ ಇದು 2,200 ರೂ.ಗಳಿಗೇರುತ್ತದೆ. ಇನ್ನು, 14.2 ಕೆಜಿ ತೂಕದ ಎರಡು ಸಿಲಿಂಡರ್‌ಗಳ ಸಂಪರ್ಕ ಪಡೆದುಕೊಳ್ಳಲು ಬಯಸುವುದಾದರೆ ಹೆಚ್ಚುವರಿಯಾಗಿ 1,500 ರೂ. ನೀಡಬೇಕಾಗುತ್ತದೆ. ಅಲ್ಲಿಗೆ ಒಟ್ಟಾರೆ ಹೊಸ ಸಂಪರ್ಕದ ಮೊತ್ತ 4,400 ರೂ.ಗೆ ಮುಟ್ಟುತ್ತದೆ.
ರೆಗ್ಯುಲೇಟರ್ ಶುಲ್ಕವೂ ಏರಿಕೆ: ಹೊಸ ಅನಿಲ ಸಂಪರ್ಕ ಪಡೆಯುವಾಗ ನೀಡಲಾಗುವ ರೆಗ್ಯು ಲೇಟರ್‌ಗೂ ಹೆಚ್ಚಿನ ಮೊತ್ತ ಪಾವತಿಸಬೇಕಾಗುತ್ತದೆ. ಇದುವರೆಗೆ 150 ರೂ. ರಷ್ಟಿದ್ದ ಇದು, 250 ರೂ.ಗೆ ಮುಟ್ಟಲಿದೆ. ಇದರ ಮಧ್ಯೆ 5 ಕೆಜಿ ಸಿಲಿಂಡರ್ ಬೇಕೆಂದರೆ ಅದಕ್ಕೆ ಭದ್ರತಾ ಮೊತ್ತವಾಗಿ ಒಂದಕ್ಕೆ 1,150 ರೂ. ನೀಡಬೇಕಾಗುತ್ತದೆ.
ಹಿಂದೆ ಅದರ ಮೊತ್ತ 800 ರೂ. ಇತ್ತು. ಸಿಲಿಂಡರ್‌ನಿಂದ ಸ್ಟವ್‌ಗೆ ಸಂಪರ್ಕ ಒದಗಿಸುವ ಪೈಪ್‌ಗೆ 150 ರೂ. ಹಾಗೂ ಅನಿಲ ಸಂಪರ್ಕದ ಪಾಸ್‌ಬುಕ್‌ಗೆ 25 ರೂ. ನೀಡಬೇಕಾಗುತ್ತದೆ.