ಕಡಬ: ವೃತ್ತಿ ಎನ್ನುವುದು ಕೇವಲ ಆದಾಯದ ಮೂಲವಾಗಿರದೆ ಸೇವೆಯ ರೀತಿಯಲ್ಲಿರಬೇಕು. ಯಾವುದೇ ವೃತ್ತಿಯಾಗಿರಲಿ ಅದನ್ನು ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಮಾಡುವುದೇ ಪರಮ ಧರ್ಮ ಎಂದು ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಹೇಳಿದರು.
ಅವರು ರಾಮಕುಂಜದ ಶ್ರೀ ರಾಮಕುಂಜೇಶ್ವರ ಸಂಸ್ಕೃತ ಹಿರಿಯ ಪ್ರಾಥಮಿಕ ಶಾಲೆಯ ವಿಶ್ವೇಶತೀರ್ಥ ಸಭಾಭವನದಲ್ಲಿ ಶಾಲಾ ನಿವೃತ್ತ ಮುಖ್ಯ ಶಿಕ್ಷಕ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಟಿ. ನಾರಾಯಣ ಭಟ್ ಅವರಿಗೆ ನಡೆದ ಸಾರ್ವಜನಿಕ ಸಮ್ಮಾನ ಸಮಾರಂಭದಲ್ಲಿ ಸಮ್ಮಾನಿಸಿ ಆಶೀರ್ವಚನ ನೀಡಿದರು.
ಸುಬ್ರಹ್ಮಣ್ಯ ಮಠಾಧೀಶ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು. ಬೆಳ್ತಂಗಡಿ ಶ್ರೀ ಗುರುದೇವ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎ. ಕೃಷ್ಣಪ್ಪ ಪೂಜಾರಿ ಅಭಿನಂದನ ಭಾಷಣ ಮಾಡಿದರು.
ಡಿಡಿಪಿಐ ವೈ. ಶಿವರಾಮಯ್ಯ, ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಎನ್. ಸುಕನ್ಯಾ, ಕಾರ್ಕಳ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್. ಶಶಿಧರ್, ಮಾಸ್ಟರ್ ಪ್ಲಾನರಿಯ ಎಸ್.ಕೆ. ಆನಂದ್, ಮಂಗಳೂರಿನ ವಿನೋದಾ ಅನಂತರಾಮ ರಾವ್, ವಿಶ್ರಾಂತ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಕಾಂಚನ ಸುಂದರ ಭಟ್, ಎಸ್.ಜಿ. ಕೃಷ್ಣ, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಕಾರ್ಯದರ್ಶಿ ರಾಮಕೃಷ್ಣ ಮಲ್ಲಾರ, ಸಹಾಯಕ ಯುವ ಸಬಲೀಕರಣ ಕ್ರೀಡಾಧಿಕಾರಿ ಎಂ. ಮಾಮಚ್ಚನ್, ಧಾರ್ಮಿಕ ವಿದ್ವಾಂಸ ಪಂಜ ಭಾಸ್ಕರ ಭಟ್ ಮಾತನಾಡಿದರು. ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ನೆಲ್ಯಾಡಿ ಸೈಂಟ್ ಜಾರ್ಜ್ ವಿದ್ಯಾಸಂಸ್ಥೆಯ ಸಂಚಾಲಕ ಅಬ್ರಹಾಂ ವರ್ಗೀಸ್, ನಿವೃತ್ತ ಉಪನ್ಯಾಸಕ ಇಜ್ಜಾವು ಮಾಧವ ಆಚಾರ್, ಶಿಕ್ಷಕಿ ಸಂಧ್ಯಾ ನಾರಾಯಣ ಭಟ್, ಡಾ| ಮೌಲಿಕಾ, ಶ್ರೀ ರಾಮಕುಂಜೇಶ್ವರ ಪದವಿ ಕಾಲೇಜಿನ ಪ್ರಾಂಶುಪಾಲ ಡಾ| ಸಂಕೀರ್ತ್ ಹೆಬ್ಟಾರ್, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಎಂ. ಸತೀಶ್ ಭಟ್, ಪ್ರೌಢಶಾಲಾ ವಿಭಾಗದ ಮುಖ್ಯಶಿಕ್ಷಕ ಸತೀಶ್ ಭಟ್, ಆಂಗ್ಲಮಾಧ್ಯಮ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಗಾಯತ್ರಿ ಉಪಸ್ಥಿತರಿದ್ದರು.
ಶಾಲಾ ಕಾರ್ಯದರ್ಶಿ ಕೆ. ಸೇಸಪ್ಪ ರೈ ಸ್ವಾಗತಿಸಿ, ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಅಧ್ಯಕ್ಷ ಇ. ಕೃಷ್ಣಮೂರ್ತಿ ಕಲ್ಲೇರಿ ಪ್ರಸ್ತಾವನೆಗೈದರು. ಕಾರ್ಯದರ್ಶಿ ರಾಧಾಕೃಷ್ಣ ಕೆ.ಎಸ್. ಸಮ್ಮಾನ ಪತ್ರ ವಾಚಿಸಿದರು. ಲೋಕನಾಥ ರೈ ಕೇಳ್ಕ ಅವರು ನಿರೂಪಿಸಿ, ಸಂಸ್ಕೃತ ಹಿ.ಪ್ರಾ. ಶಾಲಾ ನೂತನ ಮುಖ್ಯ ಶಿಕ್ಷಕಿ ಸುಶೀಲಾ ವಂದಿಸಿದರು.
ಪ್ರಾಮಾಣಿಕತೆ ಮುಖ್ಯ
ವೃತ್ತಿಗೆ ಘನತೆ ಮತ್ತು ಗೌರವ ಸಿಗಬೇಕಾದರೆ ಆ ವೃತ್ತಿಯನ್ನು ಶ್ರದ್ಧೆ, ನಿಷ್ಠೆ ಹಾಗೂ ಪ್ರಾಮಾಣಿಕವಾಗಿ ನಿರ್ವಹಿಸಬೇಕು. ಸೇವಾ ಮನೋಭಾವದಿಂದ ಮಾಡುವ ವೃತ್ತಿ ಸಮಾಜದ ಒಳಿತಿಗೂ ಪೂರಕವಾಗಿರಬೇಕು. ಹಾಗಾದಾಗ ಮಾತ್ರ ವೃತ್ತಿ ಧರ್ಮ ಪರಿಪೂರ್ಣಗೊಂಡು ಸಾರ್ಥಕವಾಗುತ್ತದೆ ಎಂದು ಪೇಜಾವರ ಶ್ರೀ ಹೇಳಿದರು.