Advertisement

ಕಡಿಮೆ ಖರ್ಚಿನ ಸುಲಭ ಬೆಳೆ ಸೋರೆ

12:15 AM Jul 07, 2019 | mahesh |

ಅವಿಭಜಿತ ದಕ್ಷಿಣ ಕನ್ನಡದಲ್ಲಿ ಹೆಚ್ಚಾಗಿ ಬೆಳೆಯುವ ಸೋರೆ ಕಾಯಿ ಕಡಿಮೆ ಖರ್ಚಿನ ಸುಲಭ ಕೃಷಿ.

Advertisement

ಸೋರೆ ‘ಕುಕುರ್ಬಿಟೇಸೀ’ ಎಂಬ ಸಸ್ಯ ಕುಟುಂಬಕ್ಕೆ ಸೇರಿದೆ. ಸೋರೆ ಬಳ್ಳಿಯು ತಿಳಿ ಹಸುರು ಬಣ್ಣದಿಂದ ಕೂಡಿದ್ದು, ಮೇಲ್ಮೈ ನಯವಾದ ಹೊಳಪಿನ ಹೊದಿಕೆ ಹೊಂದಿರುತ್ತದೆ.

ಹೇರಳ ಪೌಷ್ಟಿಕಾಂಶ ಹೊಂದಿರುವ ತರಕಾರಿ ಕೂಡ ಹೌದು. ಆಯುರ್ವೇದ ಔಷಧಗಳ ತಯಾರಿಯಲ್ಲಿ ಸೋರೆಕಾಯಿಯನ್ನು ಬಳಸಲಾಗುತ್ತದೆ. ಕೊಬ್ಬು, ಪೊಟ್ಯಾಶಿಯಂ, ಕಬ್ಬಿಣ, ಶರ್ಕರಪಿಷ್ಟ, ಪ್ರೊಟೀನ್‌, ಖನಿಜಾಂಶ, ಕ್ಯಾಲ್ಸಿಯಂ, ರೈಬೋಫ್ಲೆವಿನ್‌, ರಂಜಕ, ‘ಸಿ’ ಜೀವಸತ್ವ ಇತ್ಯಾದಿ ಪೌಷ್ಟಿಕಾಂಶಗಳು ಹೇರಳವಾಗಿವೆ.

ಸೋರೆಕಾಯಿಯಲ್ಲಿ ಎರಡು ವಿಧಗಳನ್ನು ಕಾಣಬಹುದು. ಒಂದು ದುಂಡಗಿನದ್ದು, ಇನ್ನೊಂದು ದುಂಡಗಾಗಿದ್ದು ಉದ್ದವಿರುತ್ತದೆ. ಕೃಷಿ ವಿಜ್ಞಾನಿಗಳು ಸೋರೆಕಾಯಿಯಲ್ಲೂ ಹಲವಾರು ತಳಿಗಳನ್ನು ಸಂಶೋಧಿಸಿದ್ದಾರೆ. ಮುಖ್ಯವಾಗಿ ಪೂಸಾಸಮ್ಮರ್‌ ಪ್ರಾಲಿಫಿಕ್‌ ಲಾಂಗ್‌, ಪೂಸಾಪ್ರಾಲಿಫಿಕ್‌ ರೌಂಡ್‌, ಅರ್ಕಾಬಹಾರ್‌, ಪೊಸಾಮೇಘದೂತ್‌, ಪೂಸಮಂಜರಿ ಇತ್ಯಾದಿ.

ಮಣ್ಣು, ಹವಾಗುಣ
ಸೋರೆ ಕೃಷಿಗೆ ಮರಳು ಮಿಶ್ರಿತ ಕೆಂಪು ಅಥವಾ ಕಪ್ಪು ಗೋಡು ಮಣ್ಣು ಉತ್ತಮ. ಇದು ಸಾಮಾನ್ಯವಾಗಿ ಉಷ್ಣ, ಸಮಶೀತೋಷ್ಣ ಪ್ರದೇಶಗಳಲ್ಲಿ ಬೆಳೆಯುತ್ತದೆ. ಶೀತ ಹವಾಗುಣ ಈ ಬೆಳೆಗೆ ಅಷ್ಟು ಸಹಕಾರಿಯಲ್ಲ. ದೀರ್ಘ‌ ಬೆಳಕು, ಹೆಚ್ಚಿನ ಉಷ್ಣತೆ ಇದ್ದಾಗ ಸೋರೆಯಲ್ಲಿ ಹೂಗಳು ಅಧಿಕ ಸಂಖ್ಯೆಯಲ್ಲಿ ಮೂಡುತ್ತವೆ.

Advertisement

ಹೀಗೆ ಬೆಳೆಸಿ
ಸೋರೆಗೆ ಜೂನ್‌- ಜುಲೈ, ಅಕ್ಟೋಬರ್‌- ನವೆಂಬರ್‌ ಅಥವಾ ಫೆಬ್ರವರಿ- ಮಾರ್ಚ್‌ ಸೂಕ್ತ. ಸುಮಾರು 2 ಫೀಟ್ ಅಗಲದ ಮಡಿ ತಯಾರಿಸಿ. ಮಡಿ ತಯಾರಿ ವೇಳೆ ಸ್ವಲ್ಪ ಸುಡುಮಣ್ಣು ಅಥವಾ ಬೂದಿ ಮಿಶ್ರ ಮಾಡಿ. ಅದರಲ್ಲಿ ಒಂದೂವರೆಯಿಂದ 2 ಫೀಟ್ ದೂರದಲ್ಲಿ ಸಣ್ಣ ಗುಳಿಗಳನ್ನು ಮಾಡಿ ಬೀಜ ಬಿತ್ತಬೇಕು. ಆ ಗುಳಿಗಳಲ್ಲಿ 3-4 ಬೀಜ ಹಾಕಿ. ಮೊಳಕೆ ಬಂದಾಗ ಹೆಚ್ಚುವರಿ ಗಿಡಗಳನ್ನು ಕೀಳಬೇಕು. ಬಿತ್ತನೆಯ ಒಂದು ವಾರದಲ್ಲಿ ಗಿಡ ಮೊಳಕೆ ಬರುತ್ತವೆ. ಮೊಳಕೆ ಬಂದು ವಾರದಲ್ಲಿ ಸೊಪ್ಪು ಹಾಗೂ ಸ್ವಲ್ಪ ಹಟ್ಟಿಗೊಬ್ಬರ ಹಾಕಬೇಕು. ಮತ್ತೂಂದು ವಾರ ಬಳ್ಳಿ ಹಬ್ಬಲು ಸಹಕಾರಿಯಾಗುವಂತೆ ಗಿಡದ ಬುಡದಲ್ಲಿ ಕೋಲುಗಳನ್ನು ಆಸರೆಯಾಗಿ ಇಡಬೇಕು. ಬಳ್ಳಿ ಬೆಳೆಯಲು ಚಪ್ಪರ ಹಾಕಿದರೆ ಉತ್ತಮ ಅಥವಾ ಸ್ಥಳಾವಕಾಶವಿದ್ದರೆ ನೆಲದಲ್ಲಿಯೇ ಹಬ್ಬಲು ಬಿಡಬಹುದು. ನೀರುಣಿಸುವುದು ಅಗತ್ಯ. ಕಾಯಿ ಎಳತಾಗಿರುವಾಗಲೇ ಕೊಯ್ಲು ಮಾಡಬೇಕು. ಕಾಯಿಗಳ ಮೇಲೆ ಉಗುರಿನ ತುದಿಯಿಂದ ಚುಚ್ಚಿದರೆ ಬಹಳ ಬೇಗನೆ ಗಾಯಗಳಾದರೆ ಅದು ಎಳತಾಗಿದೆ ಎಂದರ್ಥ. ಎಳತು ಕಾಯಿಗೆ ಬೇಡಿಕೆ ಹೆಚ್ಚು.

ಔಷಧ ಬಳಕೆ
ಕೀಟಭಾದೆ ತಡೆಗೆ ಬೋರ್ಡೋ ಮಿಶ್ರಣವನ್ನು ತಿಂಗಳಿಗೊಮ್ಮೆ ಸಿಂಪಡಣೆ ಅಥವಾ ಕಾಸರಕ್ಕಾನ ಮರದ ಎಲೆ, ಕಹಿಬೇವಿನ ಹಿಂಡಿ, ಆಡುಸೋಗೆ ಜಜ್ಜಿ, 5 ಲೀ. ನೀರು ಸೇರಿಸಿ ಹಿಂಡಿ ರಸ ತೆಗೆದು 100 ಲೀ. ನೀರು ಸೇರಿಸಿ 10 ದಿನಕ್ಕೊಮ್ಮೆ ಸಿಂಪಡಿಸಬಹುದು. ಇದರಿಂದ ಬಳ್ಳಿ ರೋಗ ಮುಕ್ತವಾಗುತ್ತದೆ.•

•ಗಣೇಶ ಕುಳಮರ್ವ

Advertisement

Udayavani is now on Telegram. Click here to join our channel and stay updated with the latest news.

Next