Advertisement

ಕ್ರೀಡಾಗ್ರಾಮಕ್ಕೆ ಮರಳಲಾಗದೆ ಲವ್ಲಿನಾ ಬೊರ್ಗೊಹೇನ್‌ ಅತಂತ್ರ

11:11 PM Jul 29, 2022 | Team Udayavani |

ಬರ್ಮಿಂಗ್‌ಹ್ಯಾಮ್‌: ತನಗೆ ಭಾರತ ಒಲಿಂಪಿಕ್‌ ಸಂಸ್ಥೆಯ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಕೆಲವು ದಿನಗಳ ಹಿಂದೆ ಆರೋಪಿಸಿದ್ದ ಬಾಕ್ಸರ್‌ ಲವ್ಲಿನಾ ಬೊರ್ಗೊಹೇನ್‌ ಈಗ ಇನ್ನೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

Advertisement

ಗುರುವಾರ ರಾತ್ರಿ ಕಾಮನ್ವೆಲ್ತ್‌ ಗೇಮ್ಸ್‌ ಉದ್ಘಾಟನ ಸಮಾರಂಭ ನಡೆಯುತ್ತಿದ್ದಾಗ, ಅರ್ಧದಿಂದಲೇ ಕ್ರೀಡಾಗ್ರಾಮಕ್ಕೆ ಮರಳಲು ತೀರ್ಮಾನಿಸಿದ್ದಾರೆ. ಆದರೆ ಮರಳಲು ಸೂಕ್ತ ವ್ಯವಸ್ಥೆಯಿಲ್ಲದೇ ಪರದಾಡಿದ್ದಾರೆ. ಲವ್ಲಿನಾ ಅವರ ಈ ನಡೆ ತಂಡದ ವ್ಯವಸ್ಥಾಪಕ ರಾಜೇಶ್‌ ಭಂಡಾರಿಯವರ ಸಿಟ್ಟಿಗೆ ಕಾರಣವಾಗಿದೆ.

ಮರುದಿನ ಬೆಳಗ್ಗೆ ಬೇಗ ಎದ್ದು ಅಭ್ಯಾಸ ನಡೆಸುವ ದೃಷ್ಟಿಯಿಂದ ಲವ್ಲಿನಾ ಮತ್ತು ಇನ್ನೊಬ್ಬ ಬಾಕ್ಸರ್‌ ಹುಸಮುದ್ದೀನ್‌ ಬೇಗ ಹಿಂದಿರುಗಲು ತೀರ್ಮಾನಿಸಿದ್ದರು. ಆದರೆ ಅವರಿಗೆ ಸಂಘಟಕರಿಂದ ಯಾವುದೇ ವಾಹನ ಸಿಗಲಿಲ್ಲ. ಉದ್ಘಾಟನೆ ಮುಗಿದ ಮೇಲಷ್ಟೇ ವಾಹನಗಳು ಲಭ್ಯವಿದ್ದವು. ಕೆಲ ಹೊತ್ತು ಅತಂತ್ರರಾಗಿ ಪರದಾಡಿದ ಅವರು “ಅಲೆಕ್ಸಾಂಡರ್‌ ಸ್ಟೇಡಿಯಂ’ನಿಂದ ಕ್ರೀಡಾಗ್ರಾಮಕ್ಕೆ ಬಸ್‌ನಲ್ಲಿ ಮರಳಿದ್ದಾರೆ.

ಪ್ರಶ್ನಾರ್ಹ ನಡೆ
ಇದು ಗೊಂದಲ ಸೃಷ್ಟಿಸಿದೆ. ತಮಗೆ ಬೇಕನಿಸಿದಾಗ ವಾಪಸ್‌ ಮರಳಲು ಒಂದೂ ವಾಹನ ಲಭ್ಯವಾಗದಿದ್ದದ್ದು ವಿವಾದಕ್ಕೆ ಕಾರಣವಾಗಿದೆ. ಹಾಗೆಯೇ ಆಟಗಾರ್ತಿಯರ ಈ ನಡೆಯೂ ಪ್ರಶ್ನಾರ್ಹವಾಗಿದೆ. ಇದನ್ನು ವ್ಯವಸ್ಥಾಪಕ ರಾಜೇಶ್‌ ಅವರು ನೇರವಾಗಿ ಪ್ರಶ್ನಿಸಿದ್ದಾರೆ. “ಒಂದು ವೇಳೆ ಬೆಳಗ್ಗೆ ಅಭ್ಯಾಸ ನಡೆಸಬೇಕು ಎಂದಿದ್ದರೆ ಅವರು ಉದ್ಘಾಟನೆಗೆ ಬರುವ ಅಗತ್ಯವಿರಲಿಲ್ಲ. ಬಹಳ ಮಂದಿ ಹೀಗೆಯೇ ಮಾಡಿದ್ದಾರೆ. ಬಂದ ಮೇಲೆ ಅರ್ಧಕ್ಕೆ ಮರಳಲು ವಾಹನದ ವ್ಯವಸ್ಥೆ ಇರಲಿಲ್ಲ’ ಎಂದು ರಾಜೇಶ್‌ ವಿವರಿಸಿದ್ದಾರೆ.

ಕೆಲವೇ ದಿನಗಳ ಹಿಂದೆ ತನ್ನ ಕೋಚ್‌ಗಳಿಗೆ ಕ್ರೀಡಾಗ್ರಾಮಕ್ಕೆ ಪ್ರವೇಶ ನೀಡದೇ ತೊಂದರೆ ನೀಡಲಾಗುತ್ತಿದೆ ಎಂದು ಒಲಿಂಪಿಕ್ಸ್‌ ಕಂಚು ವಿಜೇತೆ ಲವ್ಲಿನಾ ಆರೋಪಿಸಿದ್ದರು. ಕೂಡಲೇ ಅವರ ಕೋಚ್‌ಗೆ ಪ್ರವೇಶ ನೀಡಲಾಗಿತ್ತು. ಇದೀಗ ಇನ್ನೊಂದು ಸಣ್ಣ ವಿಷಯ ದೊಡ್ಡದಾಗಿದೆ!

Advertisement
Advertisement

Udayavani is now on Telegram. Click here to join our channel and stay updated with the latest news.

Next