ಪಿರಿಯಾಪಟ್ಟಣ: ಪ್ರೇಮಿಗಳ ವಿವಾಹಕ್ಕೆ ಕೆಲವು ಸ್ನೇಹಿತರು ಕಾರಣ ಎಂದು ಯುವತಿಯ ತಂದೆ ಪೊಲೀಸರಿಗೆ ದೂರು ನೀಡಿದ್ದಕ್ಕೆ ಮನನೊಂದು ಸ್ನೇಹಿತನೊಬ್ಬನ ತಂದೆ ಕಳೆನಾಶಕ ಕುಡಿದು ಸಾವನ್ನಪ್ಪಿರುವ ಘಟನೆ ನಡೆದಿದೆ.
ತಾಲೂಕಿನ ಮಾಕೋಡು ಗ್ರಾಮದ ಕರಿಗೌಡ (50) ಸಾವನ್ನಪ್ಪಿರುವ ವ್ಯಕ್ತಿಯಾಗಿದ್ದು ಸಾವಿಗೂ ಮುನ್ನ ಮಗ ಎಂ.ಕೆ. ಕಾರ್ತಿಕ್ ಹೆಸರನ್ನು ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ಕೈಬಿಡುವಂತೆ ಕೋರಿದ್ದಾರೆ.
ಕಳೆದ ಐದು ದಿನಗಳ ಹಿಂದೆ ಇದೇ ಗ್ರಾಮದ ಪ್ರೇಮಿಗಳಾದ ಮಹೇಂದ್ರ ಮತ್ತು ಮಂಜುಳ ಅಂತರ್ಜಾತಿ ವಿವಾಹವಾಗಿ ನಾಪತ್ತೆಯಾದ ಪರಿಣಾಮ, ಮಂಜುಳಾ ತಂದೆ ರವಿ ನನ್ನ ಮಗಳು ನಾಪತ್ತೆಯಾಗಲು ಇದೇ ಗ್ರಾಮದ ರಮೇಶ್, ಗಣೇಶ್, ಮಹೇಶ್, ಸ್ವಾಮಿ ಮತ್ತು ಎಂ.ಕೆ. ಕಾರ್ತಿಕ್ ಸೇರಿ ಐವರು ಕಾರಣ, ಅವರುಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪಿರಿಯಾಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದರಿಂದ ಈ ಬಗ್ಗೆ ಗ್ರಾಮದಲ್ಲಿ ಸಭೆ ಸೇರಿ ದೂರನ್ನು ವಾಪಸ್ ಪಡೆಯುವಂತೆ ತಿಳಿಸಲಾಗಿತ್ತು.
ದೂರನ್ನು ವಾಪಸ್ ಪಡೆಯದ ಪರಿಣಾಮ ಕರೀಗೌಡರವರು ಸಭೆ ನಡೆಸಿದ ಮತ್ತು ಜವಾಬ್ದಾರಿ ಹೊಂದಿದ್ದ ಕುಂಟ ರವಿ ಮತ್ತು ಗ್ರಾಪಂ ಅಧ್ಯಕ್ಷ ರಮೇಶ್ ರವರ ಮನೆಯ ಮುಂದೆ ಡ ತೆರಳಿ ನನ್ನ ಮಗ ಕಾರ್ತಿಕ್ ವಿದ್ಯಾವಂತ, ಯುವಕರು ಈ ರೀತಿ ತಪ್ಪು ಮಾಡುವದಿಲ್ಲ ಮುಂದಿನ ದಿನಗಳಲ್ಲಿ ಸರ್ಕಾರಿ ನೌಕರಿಗೆ ಹೋಗಲು ತೊಂದರೆ ಆಗುವುದರಿಂದ ಪೊಲೀಸ್ ಠಾಣೆಗೆ ನೀಡಿರುವ ದೂರನ್ನು ವಾಪಸ್ ಪಡೆಯಬೇಕೆಂದು ಬೇಡಿಕೊಂಡರು ಸಹ ದೂರನ್ನು ವಾಪಸ್ ಪಡೆದಿರುವುದರಿಂದ ಕರಿಗೌಡ ಕಳೆನಾಶಕ ಕುಡಿದಿದ್ದಾರೆ ಎನ್ನಲಾಗಿದೆ.
ತಕ್ಷಣವೇ ಗ್ರಾಮಸ್ಥರು ಹುಣಸೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಕರಿಗೌಡ ಅವರನ್ನು ಮೈಸೂರು ಕೆಆರ್ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಿದರೂ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಈ ಬಗ್ಗೆ ಕರಿಗೌಡ ಅವರ ಮಗ ಎಂ.ಕೆ. ಕಾರ್ತಿಕ್ ಪಿರಿಯಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದು ದೂರು ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.