ಮಂಡ್ಯ: ಅಪ್ರಾಪ್ತ ವಯಸ್ಸಿನ ಪ್ರೇಮಿಗಳಿಬ್ಬರು ನೇಣು ಬಿಗಿದ ಸ್ಥಿತಿಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಕೆರಗೋಡು ಹೊಬಳಿ ಹಂಪಾಪುರ ಗ್ರಾಮದ ಬಳಿಯ ನಿರ್ಜನ ಅರಣ್ಯ ಪ್ರದೇಶದಲ್ಲಿ ಗುರುವಾರ (ಆ.05) ರಾತ್ರಿ ನಡೆದಿದೆ.
ಗ್ರಾಮದ ಬೋಜಯ್ಯ ಪುತ್ರಿ ಧನಲಕ್ಷ್ಮಿ(15) ಹಾಗೂ ಅದೇ ಗ್ರಾಮದ ನಾಗೇಶ್ ಎಂಬುವರ ಪುತ್ರ ಶ್ರೀನಿವಾಸ್ (20) ಮೃತ ಅಪ್ರಾಪ್ತ ಪ್ರೇಮಿಗಳು.
ಮೃತರಿಬ್ಬರು ಒಂದೇ ಗ್ರಾಮದವರಾಗಿದ್ದು, ಅನ್ಯಧರ್ಮದವರಾಗಿದ್ದ ಇವರಿಬ್ಬರು ಪರಸ್ಪರ ಪ್ರೀತಿಸುತ್ತಿದ್ದರು ಎಂದು ತಿಳಿದು ಬಂದಿದೆ.
ಶ್ರೀನಿವಾಸ್ ವಿದ್ಯಾಭ್ಯಾಸ ಮೊಟಕುಗೊಳಿಸಿದ್ದ. ಆದರೆ, ಧನಲಕ್ಷ್ಮಿ 9ನೇ ತರಗತಿ ಮುಗಿಸಿ ಎಸ್ಸೆಸ್ಸೆಲ್ಸಿಗೆ ಹೋಗಬೇಕಿತ್ತು. ಈ ಇಬ್ಬರು ಪ್ರೀತಿಸುತ್ತಿರುವ ವಿಚಾರ ಮನೆಯವರಿಗೆ ತಿಳಿದಿರಲಿಲ್ಲ. ಇಬ್ಬರು ಮನೆಯವರ ಪೋಷಕರನ್ನು ವಿಚಾರಿಸಿದಾಗ ಪ್ರೀತಿ ವಿಚಾರ ತಿಳಿಸಿರಲಿಲ್ಲ. ಯಾಕೆ ಹೀಗೆ ಮಾಡಿಕೊಂಡಿದ್ದಾರೆ ಎಂಬುದಕ್ಕೆ ಕಾರಣ ತಿಳಿದು ಬಂದಿಲ್ಲ ಎಂದು ಪೊಲೀಸರು ತಿಳಿಸಿದರು.
ಕೆರಗೋಡು ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.