Advertisement

ಕೇರಳದಲ್ಲಿನ ಲವ್‌ಜೆಹಾದ್‌; ಎನ್‌ಐಎ ತನಿಖೆ: ಸು. ಕೋ.

06:10 AM Aug 17, 2017 | Team Udayavani |

ಹೊಸದಿಲ್ಲಿ: ಕೇರಳದಲ್ಲಿ ನಡೆಯುತ್ತಿದೆ ಎನ್ನಲಾದ “ಲವ್‌ ಜೆಹಾದ್‌’ ಮೇಲೆ ಈಗ ರಾಷ್ಟ್ರೀಯ ತನಿಖಾ ಸಂಸ್ಥೆಯ ಕಣ್ಗಾವಲು ಬಿದ್ದಿದೆ. ಬೆಂಗಳೂರಿನಲ್ಲಿರುವ ಎನ್‌ಐಎ ಕಚೇರಿಯಲ್ಲೇ ಈ ಪ್ರಕರಣದ ಸಂಪೂರ್ಣ ತನಿಖೆ ನಡೆಯಲಿದೆ. ಎನ್‌ಐಎ ತನಿಖಾ ವರದಿ, ಕೇರಳ ಪೊಲೀಸರ ಹೇಳಿಕೆ ಮತ್ತು ಯುವತಿಯ ಅಭಿಪ್ರಾಯ ಆಲಿಸಿ ತೀರ್ಪು ನೀಡಲಿದ್ದೇವೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

Advertisement

ಬಹು ಚರ್ಚಿತ ಲವ್‌ ಜೆಹಾದ್‌ ಪ್ರಕರಣ ವೊಂದರ ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್‌ ನಿವೃತ್ತ ನ್ಯಾ| ಆರ್‌.ವಿ. ರವೀಂದ್ರನ್‌ ಉಸ್ತುವಾರಿಯಲ್ಲಿ ಎನ್‌ಐಎ ತನಿಖೆ ನಡೆಸ ಬೇಕು ಎಂದು ಆದೇಶ ನೀಡಿದೆ. ಯಾವುದೇ ಒತ್ತಡವಿಲ್ಲದೇ ಪಾರದರ್ಶಕ ಮತ್ತು ನ್ಯಾಯ ಸಮ್ಮತವಾಗಿ ತನಿಖೆ ನಡೆಸುವ ಸಲುವಾಗಿ ಕೇರಳದಿಂದ ಹೊರಗೆ, ಅಂದರೆ ಬೆಂಗಳೂರಿನಲ್ಲಿ ಈ ತನಿಖೆ ನಡೆಯಲಿದೆ.

ಈ ಪ್ರಕರಣವನ್ನು ಅವಲೋಕಿಸಿದಲ್ಲಿ ಮೊದಲು ಹಿಂದೂ ಯುವತಿಯನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿ, ಬಳಿಕ ಆಕೆಯನ್ನು ಅದೇ ಧರ್ಮದ ಯುವಕನ ಜತೆ ಮದುವೆ ಮಾಡಲಾಗುತ್ತದೆ. ಇದೊಂದೇ ಪ್ರಕರಣವಲ್ಲ, ಬಿಡಬಹುದು ಎಂದು ಭಾವಿಸಿಕೊಳ್ಳಬೇಕಾಗಿಲ್ಲ. ಇದೇ ಮಾದರಿಯಲ್ಲೇ ಕೇರಳದಲ್ಲಿ ಇನ್ನೂ ಹಲವು ಲವ್‌ ಜೆಹಾದ್‌ ಮದುವೆಗಳು ನಡೆಯುತ್ತಿವೆ ಎಂದು ಎನ್‌ಐಎ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಮನಿಂದರ್‌ ಸಿಂಗ್‌ ಹೇಳಿದ್ದಾರೆ.

ಅಲ್ಲದೆ ಇನ್ನೂ ಕೆಲವು ಪ್ರಕರಣಗಳಲ್ಲಿ ಹೆತ್ತವರ ಜತೆ ಕೆಲವು ಭಿನ್ನಾಭಿಪ್ರಾಯ ಇಟ್ಟುಕೊಂಡ ಹಿಂದೂ ಯುವತಿಯರನ್ನೇ ಟಾರ್ಗೆಟ್‌ ಮಾಡಿ, ಅವರನ್ನು ಹೆತ್ತವರಿಂದ ಬೇರ್ಪಡಿಸಿ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿಕೊಂಡ ಪ್ರಕರಣಗಳು ಕಂಡು ಬಂದಿವೆ ಎಂದು ಅವರು ವಾದಿಸಿದ್ದಾರೆ. ಎನ್‌ಐಎ ತನಿಖೆ ವೇಳೆ ಕೆಲವೇ ಕೆಲವು ಮಂದಿ ಮತಾಂತರದಲ್ಲಿ ಪಾಲ್ಗೊಂಡಿ ರುವುದೂ ಕಂಡು ಬಂದಿದೆ ಎಂದು ಹೇಳಿದ್ದಾರೆ. ತನಿಖೆ ವೇಳೆ ಒಬ್ಬ ಮಹಿಳೆಯ ಪಾತ್ರದ ಬಗ್ಗೆ ಪರಿಶೀಲನೆ ನಡೆಸಲಾಗಿದೆ. ಮೇಲ್ನೋಟಕ್ಕೆ ಬಹುತೇಕ ಪ್ರಕರಣಗಳಲ್ಲಿ ಮತಾಂತರ ಮಾದರಿ ಮತ್ತು ಮದುವೆ ಒಂದೇ ರೀತಿಯಲ್ಲಿ ಇವೆ. ಮೊದಲು ಯುವತಿಯನ್ನು ಮತಾಂತರ ಮಾಡಿ, ಬಳಿಕ ಆಕೆಯನ್ನು ಕುಟುಂಬದ ಜತೆ ವಾಸಿಸಲು ಅನುಮತಿ ನಿರಾಕರಿಸುತ್ತಾರೆ. ಕಡೆಗೆ ಅನಿವಾರ್ಯವಾಗಿ ಆಕೆಗೆ ಮದುವೆ ಮಾಡು ತ್ತಾರೆ ಎಂದು ಸಿಂಗ್‌ ಕೋರ್ಟ್‌ ಮುಂದೆ ಹೇಳಿದ್ದಾರೆ. ಹೆಚ್ಚಿನ ತನಿಖೆಗೆ ಎನ್‌ಐಎಗೆ ಅನುವು ಮಾಡಿಕೊಟ್ಟಲ್ಲಿ ಮತ್ತಷ್ಟು ಸಂಗತಿಗಳು ಬಯಲಿಗೆ ಬರುತ್ತವೆ ಎಂದಿದ್ದಾರೆ.

ಈ ಹಿನ್ನೆಲೆಯಲ್ಲಿ ಮುಖ್ಯ ನ್ಯಾ| ಜೆ.ಎಸ್‌. ಖೇಹರ್‌ ಮತ್ತು ನ್ಯಾ| ಡಿ.ವೈ. ಚಂದ್ರಚೂಡ್‌ ಅವರಿದ್ದ ಪೀಠ ಎನ್‌ಐಎ ತನಿಖೆಗೆ ಆದೇಶಿಸಿತು. ಎನ್‌ಐಎಗೆ ಕೇರಳ ಪೊಲೀಸರು ಎಲ್ಲ ರೀತಿಯ ಸಹಕಾರ ನೀಡಬೇಕು ಎಂದು ಸೂಚಿಸಿತು. ಈ ಪ್ರಕರಣ ಸಂಬಂಧ ಅಂತಿಮ ನಿರ್ಧಾರಕ್ಕೆ ಬರುವ ಮುನ್ನ ಕೋರ್ಟ್‌ ಎನ್‌ಐಎ ತನಿಖಾ ವರದಿ, ಕೇರಳ ಪೊಲೀಸರ ಹೇಳಿಕೆ ಮತ್ತು ಯುವತಿಯ ಮಾತು ಆಲಿಸಿಯೇ ತೀರ್ಪು ನೀಡಲಿದ್ದೇವೆ ಎಂದು ಹೇಳಿತು.

Advertisement

ವಿರೋಧಿಸದ ಕೇರಳ: ಕೇರಳ ಸರಕಾರ ಪರ ಹಾಜರಾದ ಹಿರಿಯ ವಕೀಲ ವಿ. ಗಿರಿ ಅವರು, ಎನ್‌ಐಎ ತನಿಖೆಗೆ ಯಾವುದೇ ವಿರೋಧವಿಲ್ಲ ಎಂದು ಕೋರ್ಟ್‌ಗೆ ಅರಿಕೆ ಮಾಡಿಕೊಂಡರು. ಈಗಾಗಲೇ ಎಸ್‌ಐಟಿ ರಚಿಸಲಾಗಿದ್ದು, ಇದೇ ಪ್ರಕರಣದ ತನಿಖೆ ನಡೆಸುತ್ತಿದೆ. ಈಗ ಕೋರ್ಟ್‌ನ ಅಪೇಕ್ಷೆಯಂತೆ ಎನ್‌ಐಎ ತನಿಖೆಗೆ ಆದೇಶಿಸಿದರೂ ನಮ್ಮ ಕಡೆಯಿಂದ ವಿರೋಧವಿಲ್ಲ. ಇದಕ್ಕೆ ಕೇರಳ ಪೊಲೀಸರು ಸಂಪೂರ್ಣವಾದ ಸಹಕಾರ ನೀಡಲಿದ್ದಾರೆ ಎಂದು ಹೇಳಿದರು.
ಅರ್ಜಿದಾರರ ವಿರೋಧ: ಅರ್ಜಿದಾರ ಶಫಿನ್‌ ಜಹಾನ್‌(ಹಿಂದೂ ಯುವತಿ ವಿವಾಹವಾಗಿರುವ ಯುವಕ) ಪರ ವಕಾಲತ್ತು ಮಾಡಿದ ಹಿರಿಯ ವಕೀಲ ಕಪಿಲ್‌ ಸಿಬಲ್‌, ಎನ್‌ಐಎ ತನಿಖೆಗೆ ವಿರೋಧ ವ್ಯಕ್ತಪಡಿಸಿದರು. ಈ ಹಿಂದೆ ಎನ್‌ಐಎ 
ತನಿಖೆ ಮಾಡಿ ಬಳಿಕ ಯು-ಟರ್ನ್ ತೆಗೆದು ಕೊಂಡಿರುವ ಬಗ್ಗೆ ಕೋರ್ಟ್‌ ಮುಂದೆ ಹೇಳಲು ಅರ್ಜಿದಾರರಿಗೆ ಅಫಿದವಿತ್‌ ಸಲ್ಲಿಸಲು ಅವಕಾಶ ನೀಡುವಂತೆ ಮನವಿ ಸಲ್ಲಿಸಿದರು.

ಎನ್‌ಐಎ ತನಿಖೆಗೂ ಮುನ್ನ ಕೋರ್ಟ್‌ ಯುವತಿಯ ಹೇಳಿಕೆ ಆಲಿಸಬೇಕು. ಈಗಾಗಲೇ ಕೇರಳದ ಅಪರಾಧ ವಿಭಾಗ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿದೆ. ಈ ಅವಧಿಯಲ್ಲಿ ಎನ್‌ಐಎ ತನಿಖೆ ಬೇಡ ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಕೋರ್ಟ್‌, ನಾವು ಯುವತಿಯ ಮಾತು ಆಲಿಸಲಿದ್ದೇವೆ. ಆದರೆ ಈ ಸಂದರ್ಭದಲ್ಲಿ ಮಾತ್ರ ಬೇಡ. ಇದಕ್ಕೂ ಮುನ್ನ ಎನ್‌ಐಎ ತನಿಖೆ, ಕೇರಳ ಪೊಲೀಸರ ವರದಿ ಮತ್ತು ಇತರ ಸಂಬಂಧಿತರ ಹೇಳಿಕೆ ಪಡೆದ ಅನಂತರವಷ್ಟೇ ಯುವತಿ ಮಾತು ಆಲಿಸುತ್ತೇವೆ ಎಂದಿತು.

ಈಗ ನಾವು ಮಾತನಾಡಿಸಿದರೆ, ಆಕೆ ತನ್ನನ್ನು ಬಲವಂತವಾಗಿಯೇ ಮತಾಂತರ ಮಾಡಲಾಯಿತು ಎಂದು ಬಿಡಬಹುದು. ಆಗ ಇಡೀ ಕೇಸು ಬಿದ್ದು ಹೋಗುತ್ತದೆ. ಇದು ನಿಮಗೆ ಇಷ್ಟವಾಗದೇ ಇರಬಹುದು. ಹೀಗಾಗಿ ಕಡೇ ಹಂತದಲ್ಲಿ ಆಕೆಯ ಮಾತು ಕೇಳುತ್ತೇವೆ ಎಂದು ಹೇಳಿತು.

ನ್ಯಾಯಮೂರ್ತಿಗಳ ಖರ್ಚು ವೆಚ್ಚಕ್ಕೆ ಕೇಂದ್ರವೇ ಹೊಣೆ
ನಿವೃತ್ತ ನ್ಯಾ| ರವೀಂದ್ರನ್‌ ಅವರು ಬೆಂಗಳೂರಿ ನಲ್ಲಿರುವ ಎನ್‌ಐಎ ಕಚೇರಿಯಿಂದಲೇ ಕಾರ್ಯ ನಿರ್ವಹಿಸಲಿದ್ದಾರೆ. ಇವರು ಕಚೇರಿಯಲ್ಲಿ ಇರುವ ವೇಳೆ ದಿನಕ್ಕೆ ಒಂದು ಲಕ್ಷ ರೂ. ಮತ್ತು ಬೆಂಗಳೂರಿನಿಂದ ಹೊರಗೆ ಹೋದಾಗ ದಿನಕ್ಕೆ ಎರಡು ಲಕ್ಷ ರೂ. ಪಾವತಿಸಬೇಕು ಎಂದು ಕೋರ್ಟ್‌ ಹೇಳಿದೆ. ಈ ಎಲ್ಲ ಖರ್ಚುವೆಚ್ಚಗಳನ್ನು ಕೇಂದ್ರ ಸರಕಾರವೇ ನೋಡಿಕೊಳ್ಳಬೇಕು ಎಂದಿದೆ. ನಿವೃತ್ತ ನ್ಯಾಯಮೂರ್ತಿಗಳು ಬಿಲ್‌ ನೀಡಿದ ಎರಡು ವಾರಗಳೊಳಗೆ ಅವರು ವೆಚ್ಚ ಮಾಡಿದ ಹಣವನ್ನು ಪಾವತಿಸಬೇಕು ಎಂದೂ ನಿಗದಿ ಪಡಿಸಿದೆ.

ಲವ್‌ ಜೆಹಾದ್‌ ಮತ್ತು ಬ್ಲೂವೇಲ್‌ ಗೇಮ್‌
ಇಂದಿನ ದಿನಗಳಲ್ಲಿ ಜನ ಯಾರನ್ನು ಬೇಕಾದರೂ ತಮ್ಮ ಮಾತು ಕೇಳುವಂತೆ ಮನವೊಲಿಕೆ ಮಾಡಿಕೊಳ್ಳಬಹುದು. ಅದೂ ಥೇಟ್‌ ಬ್ಲೂವೇಲ್‌ ಗೇಮ್‌ನಂತೆ! ಹೀಗೆಂದು ಹೇಳಿದ್ದು ಸುಪ್ರೀಂ ಕೋರ್ಟ್‌. ಲವ್‌ ಜೆಹಾದ್‌ ಬಗ್ಗೆ ವಿಚಾರಣೆ ನಡೆಸುವ ವೇಳೆ ಈ ಅಭಿಪ್ರಾಯಪಟ್ಟಿತು. ಇಂಟರ್ನೆಟ್‌ ಗೇಮ್‌ ಆಗಿರುವ ಬ್ಲೂವೇಲ್‌ನಂತೆಯೇ ಜನ ಮತ್ತೂಬ್ಬ ರನ್ನು ಏನು ಬೇಕಾದರೂ ಮಾಡುವಂತೆ ಪ್ರೇರೇಪಿಸಬಹುದು. ಹೀಗಾಗಿ ನಾವು ಯಾವುದೇ ಸಾಧ್ಯತೆಗಳನ್ನೂ ಅಲ್ಲಗಳೆಯುವಂತಿಲ್ಲ ಎಂದಿತು. ಕೇರಳ ಹೈಕೋರ್ಟ್‌ ಲವ್‌ ಜೆಹಾದ್‌ ಹಿನ್ನೆಲೆ ಯಲ್ಲಿ ವಿವಾಹ ರದ್ದುಗೊಳಿಸಿದ ಪ್ರಕರಣವನ್ನು ಉಲ್ಲೇಖೀಸಿ ಹೇಳಿತು.

Advertisement

Udayavani is now on Telegram. Click here to join our channel and stay updated with the latest news.

Next