ಮಡಿಕೇರಿ: ಸಂಸ್ಕೃತಿ, ಸಂಸ್ಕಾರ ದೇಶದ ಉಳಿವಿಗೆ ನಾಂದಿಯಾಗಿದೆ, ಪ್ರತಿಯೊಬ್ಬರಿಗೂ ತಮ್ಮ ಭಾಷೆಯ ಬಗ್ಗೆ ಅಭಿಮಾನ ಇರಬೇಕು ಎಂದು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪಿ.ಸಿ. ಜಯರಾಂ ತಿಳಿಸಿದ್ದಾರೆ.
ಮಡಿಕೇರಿಯ ಗೌಡ ಸಮಾಜದಲ್ಲಿ ‘ನೆಂಟತಿ ಗೂಡೆ” ಅರೆಭಾಷೆ ಕಿರುಚಿತ್ರ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ದೇಶದ ಎಲ್ಲಾ ಭಾಷೆಗಳಿಗೂ ಸಂಸ್ಕೃತಿ ಇದೆ, ಇವುಗಳನ್ನು ಉಳಿಸುವ ಅನಿವಾರ್ಯತೆ ಯುವ ಜನಾಂಗದ ಮೇಲಿದೆ. ಭಾಷೆ ನಶಿಸಿ ಹೋಗದಂತೆ ಯುವ ಪೀಳಿಗೆ ಎಚ್ಚರಿಕೆ ವಹಿಸಬೇಕು. ಯುವಕರ ತಂಡಗಳು ತಾವೇ ನಿರ್ದೇಶಿಸಿ, ನಿರ್ಮಿಸಿದ ಚಿತ್ರವೊಂದು ಅರೆಭಾಷೆ ಜನಾಂಗದ ಸಂಸ್ಕೃತಿ ಮತ್ತು ಕೃಷಿ ಪದ್ಧತಿಯನ್ನು ಉಳಿಸಿಕೊಂಡು ಹೋಗುವ ಸಂದೇಶ ಕೂಡ ಚಿತ್ರಗಳ ಮೂಲಕ ಪರಿಚಯಿಸಿರುವುದು ಉತ್ತಮ ಬೆಳವಣಿಗೆ ಎಂದು ಶ್ಲಾಘಿಸಿದರು.
ಮಡಿಕೇರಿ ನಗರಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಮಾತನಾಡಿ, ವಿದ್ಯಾರ್ಥಿಗಳೇ ಸೇರಿಕೊಂಡು ಹೊಸ ಚಿತ್ರಗಳನ್ನು ನಿರ್ಮಿಸಲು ಪ್ರಯತ್ನಿಸಿದ್ದಾರೆ ಎಂದರು. ಚಿತ್ರ ನಿರ್ದೇಶಕ ವಿಷ್ಣು ಕಳಂಜನ ಮಾತನಾಡಿ ನೆಂಟತಿ ಗೂಡೆಯಲ್ಲಿ ಕೊಡಗಿನ ಗೌಡ ಜನಾಂಗದವರಾದ 35ಕ್ಕೂ ಹೆಚ್ಚು ಕಲಾವಿದರು ಕಾಣಿಸಿಕೊಂಡಿದ್ದಾರೆ. ಮುಖ್ಯ ತಾರೆಯಾಗಿ ಕಡ್ಯದ ಜಾಗೃತಿ ಅಭಿನಯಿಸಿದ್ದಾರೆ. ಚಿತ್ರದ ಸಹ ನಿರ್ದೇಶಕನಾಗಿ ತೋರೇರ ಹೇಮಂತ್, ಚಿತ್ರಕಥೆ ತೋರೇರ ಸಚಿನ್, ದಿವಾಕರ್ ಕೆಮೆರಾ ನಿರ್ವಹಿಸಿದ್ದಾರೆ. ಚಿತ್ರದ ತಾರಾಗಣದಲ್ಲಿ ಕುಡೆಕಲ್ ಸಂತೋಷ್, ಸವಿತಾ ಸಂತೋಷ್, ಚೊಕ್ಕಾಡಿ ಪ್ರೇಮಾ, ಕಡ್ಯದ ಜಾಗೃತಿ, ಕಳಂಜನ ವಿಷ್ಣು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕುಡೆಕಲ್ ನಿಹಾಲ್, ಸಾಗರಕ ಕುಡೆಕಲ್, ಕುಸುಮಾ ಕುಯ್ಯಮುಡಿ, ಹರ್ಷ ಕೇಟೋಳಿ, ಪವನ್ ಗೊದ್ದೆಟ್ಟಿ, ಕಾನೆಹಿತ್ಲು ಹರ್ಷಿತ್, ಬೈತಡ್ಕ ತುಷಿತ್, ಮರದಾಳು ಚೇತನ್ ಪಾತ್ರಧಾರಿಗಳಾಗಿದ್ದಾರೆ ಎಂದು ವಿಷ್ಣು ವಿವರಿಸಿದರು.
ಕೊಡಗು ಗೌಡ ಮಹಿಳಾ ಒಕ್ಕೂಟದ ಅಧ್ಯಕ್ಷೆ ಕುಂಜಿಲನ ಮುತ್ತಮ್ಮ, ಕೊಡಗು ಗೌಡ ವಿದ್ಯಾಭಿವೃದ್ಧಿ ನಿಧಿಯ ಅಧ್ಯಕ್ಷ ಹೊಸೂರ್ ರಮೇಶ್ ಜೋಯಪ್ಪ, ಪತ್ರಕರ್ತ ಕುಡೆಕಲ್ ಸಂತೋಷ್, ಪ್ರಮುಖರಾದ ಕೋಡಿ ಚಂದ್ರಶೇಖರ್, ದಯಾನಂದ, ಪೇರಿಯನ ಜಯಾನಂದ, ಸೂರ್ತಲೆ ಸೋಮಣ್ಣ ಮೊದಲಾದವರು ಉಪಸ್ಥಿತರಿದ್ದರು.