ಅದೊಂದು ಭಯ ಇದ್ದೇ ಇತ್ತಂತೆ ಅರ್ಜುನ್ ಸರ್ಜಾ ಅವರಿಗೆ. ಮಗಳನ್ನು ಚಿತ್ರರಂಗಕ್ಕೆ ಪರಿಚಯಿಸುವುದೇನೋ ಸುಲಭ. ಆದರೆ, ಡೆಡಿಕೇಶನ್ ಇಲ್ಲದಿದ್ದರೆ ತಪ್ಪಾಗುತ್ತದಲ್ಲ ಎಂಬ ಭಯ ಅವರನ್ನು ಕಾಡಿದೆ. “ಪ್ರೇಮ ಬರಹ’ ಚಿತ್ರದ ಚಿತ್ರೀಕರಣ ಸಂಪೂರ್ಣವಾಗುತ್ತಿದ್ದಂತೆ ಅರ್ಜುನ್ ಅವರಿಗೆ ತಮ್ಮ ಮಗಳ ಮೇಲೆ ಹೆಮ್ಮೆಯಾಗಿದೆ. “ಆಕೆ ಒಬ್ಬ ಡೆಡಿಕೇಟೆಡ್ ನಟಿ ಎಂಬುದು ನನಗೆ ಅರ್ಥವಾಯಿತು. ಅದು ಎಲ್ಲರಿಗೂ ಅರ್ಥವಾಗಬೇಕೆಂದರೆ, “ಪ್ರೇಮ ಬರಹ’ ನೋಡಬೇಕು’ ಎಂದರು ಅರ್ಜುನ್ ಸರ್ಜಾ.
“ಪ್ರೇಮ ಬರಹ’ ಚಿತ್ರ ಪ್ರಾರಂಭವಾಗಿ ಒಂದು ವರ್ಷವಾಗಿದ್ದರೂ, ಅರ್ಜುನ್ ಸರ್ಜಾ ಅವರು ಆ ಚಿತ್ರದ ಬಗ್ಗೆ ಹೆಚ್ಚು ಮಾತಾಡಿರಲಿಲ್ಲ. ಈಗ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಈ ಸಂದರ್ಭದಲ್ಲಿ ಆಡಿಯೋ ಬಿಡುಗಡೆಯ ನೆಪದಲ್ಲಿ ತಮ್ಮ ಚಿತ್ರತಂಡದವರ ಜೊತೆಗೆ ಮಾತಾಡುವುದಕ್ಕೆ ಬಂದಿದ್ದರು ಅರ್ಜುನ್ ಸರ್ಜಾ. ಹಿರಿಯ ನಟ ರಾಜೇಶ್ ಅವರು ಮುಖ್ಯ ಅತಿಥಿಯಾಗಿ ಬಂದಿದ್ದರು. ಅವರು ಹಾಡುಗಳನ್ನು ಬಿಡುಗಡೆ ಮಾಡಬಹುದು ಅಂದುಕೊಂಡರೆ, “ಇದು ಅಮ್ಮಂದಿರ ಸ್ಪೆಷಲ್’ ಎಂದ ಅರ್ಜುನ್ ಸರ್ಜಾ, ಹಾಡುಗಳನ್ನು ತಮ್ಮ ತಾಯಿ, ನಾಯಕ ಚಂದನ್ ಅವರ ತಾಯಿ ಮತ್ತು ನಾಯಕಿ ಐಶ್ವರ್ಯ ಅವರ ತಾಯಿಯಿಂದ ಬಿಡುಗಡೆ ಮಾಡಿಸಿದರು. ಅವರ ಜೊತೆಗೆ ರಾಜೇಶ್ ಅವರೂ ಸಿಡಿಗಳನ್ನು ಹೊರತಂದರು.
ಇದುವರೆಗೂ ಕೆಲವು ಸಿನಿಮಾಗಳನ್ನು ನಿರ್ದೇಶಿಸಿರುವ ಅರ್ಜುನ್ ಸರ್ಜಾ ಅವರಿಗೆ ಈ ಚಿತ್ರ ನಿರ್ದೇಶನ ಮಾಡುವಾಗ ಬಹಳ ನರ್ವಸ್ ಆಯಿತಂತೆ. ಅದಕ್ಕೆ ಕಾರಣ ಈ ಚಿತ್ರದ ಮೂಲಕ ತಮ್ಮ ಮಗಳು ಐಶ್ವರ್ಯರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸುತ್ತಿರುವುದು. “ಚಿತ್ರ ಚೆನ್ನಾಗಿ ಮಾಡಬೇಕು ಎಂಬ ಹಪಾಹಪಿ ಇತ್ತು. ಅದೇ ಕಾರಣಕ್ಕೆ ಸ್ವಲ್ಪ ಲೇಟ್ ಆಯಿತು. ಚಿತ್ರವನ್ನು ಕನ್ನಡ ಮತ್ತು ತಮಿಳಿನಲ್ಲಿ ಏಕಕಾಲಕ್ಕೆ ಮಾಡಲಾಗಿದೆ. ಈ ಚಿತ್ರ ಚೆನ್ನಾಗಿ ಬರುವುದಕ್ಕೆ ಇಡೀ ತಂಡ ಕಾರಣ’ ಎಂದು ಹೇಳಿಕೊಂಡರು ಅವರು.
ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿರುವುದು ಜೆಸ್ಸಿ ಗಿಫ್ಟ್ ಆದರೆ, ಹಿನ್ನೆಲೆ ಸಂಗೀತ ಸಂಯೋಜಿಸಿರುವುದು ಸಾಧು ಕೋಕಿಲ. “ಇದೊಂದು ಮಾಮೂಲಿ ಸಿನಿಮಾ ಅಲ್ಲ ಅಂತ ರೀ-ರೆಕಾರ್ಡಿಂಗ್ ಮಾಡುವಾಗ ಗೊತ್ತಾಯಿತು. ಹಿನ್ನೆಲೆ ಸಂಗೀತ ಸಂಯೋಜಿಸುವಾಗ ಪ್ರತಿ ಶಾಟ್‌ನ ಪ್ರೀತಿಸಿ ಮಾಡಿದ್ದೀನಿ. ಈ ವರ್ಷ ನಾನು ಹಿನ್ನೆಲೆ ಸಂಗೀತ ಸಂಯೋಜಿಸಿದ ಚಿತ್ರಗಳ ಪೈಕಿ ಬೆಸ್ಟ್ ಇದು ಎಂದರೆ ತಪ್ಪಿಲ್ಲ. ಈ ಚಿತ್ರಕ್ಕೆ ಕೆಲಸ ಮಾಡುವಾಗ ಗೊತ್ತಾಗಿದ್ದೇನೆಂದರೆ, ಈಗಾಗಲೇ ಮೂರು ಜನ ಟ್ರೈ ಮಾಡಿ ಹೋಗಿದ್ದಾರೆ ಮತ್ತು ನಾನು ನಾಲ್ಕನೆಯವನೆಂದು. ಅದೇ ತರಹ ಒಂದು ಹಾಡನ್ನು ಎಂಟು ಜನ ಹಾಡಿದ್ದಾರೆ. ಅರ್ಜುನ್ ಅವರಿಗೆ ಸರಿ ಎನಿಸುವವರೆಗೂ ಬಿಡುವುದೇ ಇಲ್ಲ’ ಎಂದು ಹೇಳಿದರು.
ಸಾಧು ಅವರ ಮಾತಿಗೆ ಚಂದನ್ ಸಹ ಅನುಮೋದಿಸಿದರು. “ಸಾಧು ಅವರು ಹೇಳಿದ್ದು ಸರಿ. ಈ ಚಿತ್ರಕ್ಕೆ ನನಗೂ ಮುಂಚೆ ಮೂರ್‍ನಾಲ್ಕು ಹೀರೋಗಳಿದ್ದರಂತೆ. ಕೊನೆಗೆ ನನಗೆ à ಚಿತ್ರ ಸಿಕ್ಕಿತು. ಸಣ್ಣ ದಾರಿಗಳನ್ನು ಹುಡುಕುತ್ತಾ ಇದ್ದವನಿಗೆ, ಈ ಚಿತ್ರದಿಂದ ದೊಡ್ಡ ಹೈವೇ ಸಿಕ್ಕಿದಂತಾಯಿತು. ಈ ಒಂದೂವರೆ ವರ್ಷಗಳಿಂದ ನಾನು ಏನು ಮಾಡುತ್ತಿದ್ದೆ ಎಂಬುದು ಈ ಚಿತ್ರ ನೋಡಿದರೆ ಗೊತ್ತಾಗತ್ತೆ. ಇದು ನನ್ನ ಮಟ್ಟಿಗೆ ಬಹಳ ಹೆಮ್ಮೆಯ ಚಿತ್ರ’ ಎಂದು ಚಂದನ್ ಖುಷಿಯಾದರು.
ಅಂದು ಸಮಾರಂಭದಲ್ಲಿ ರಾಜೇಶ್ ಅವರೊಂದಿಗೆ ಧ್ರುವ ಸರ್ಜಾ, ರಂಗಾಯಣ ರಘು, ಲಹರಿ ವೇಲು, ಜೆಸ್ಸಿ ಗಿಫ್ಟ್ ಸೇರಿದಂತೆ ಹಲವರು ಭಾಗವಹಿಸಿದ್ದರು.
– ಚೇತನ್ ನಾಡಿಗೇರ್