Advertisement

ನನ್ನ ಮೇಲೆ ಪ್ರೇಮದ ವಾಮಾಚಾರ ನಡೆದಿದೆ!

07:58 PM Apr 15, 2019 | mahesh |

ನಿನ್ನನ್ನು ನೋಡಿದ ಆ ಕ್ಷಣದಿಂದ ಇಲ್ಲಿಯವರೆಗೆ, ನಂಗೆ ಏನೇನಾಗ್ತಿದೆಯೋ ನನಗೇ ಗೊತ್ತಾಗ್ತಿಲ್ಲ. ಒಮ್ಮೊಮ್ಮೆ ಹುಚ್ಚನಂತೆ ಒಬ್ಬೊಬ್ಬನೇ ನಕ್ಕರೆ, ಮಗದೊಮ್ಮೆ ಮಹಾಮೌನಿಯಾಗಿ ಬಿಡುತ್ತೇನೆ. ಇಷ್ಟೆಲ್ಲಾ ಆದ್ಮೇಲೂ ಸುಮ್ಮನಿರೋಕೆ ನನ್ನ ಕೈಯಲ್ಲಿ ಆಗಲ್ಲ.

Advertisement

ಹಾಯ್‌ ಹುಡ್ಗಿ….
ಹೇಗಿದ್ದೀಯ? ಎಲ್ಲಿದ್ದೀಯ? ನಿನ್ನ ನೋಡಿ ಎಷ್ಟು ದಿನ ಆಆಯಿತೇ ಡುಮ್ಮಿ…
ಶನಿವಾರ ಬಂತೆಂದರೆ ಸಾಕು ಅದೇನೇ ಕೆಲ್ಸ ಇದ್ದರೂ, ಎಲ್ಲವನ್ನೂ ಬೇಗನೆ ಮುಗ್ಸಿ, ಸಂಜೆ ಆರು ಗಂಟೆಯಷ್ಟೊತ್ತಿಗೆ ಮುಖ ತೊಳ್ಕೊಂಡು, ತಲೆ ಬಾಚ್ಕೊಂಡು, ಸೆಂಟು-ಗಿಂಟು ಎಲ್ಲಾ ಹಾಕ್ಕೊಂಡು, ಒಂದು ತೋಳು ಮಡಿಸಿಕೊಂಡು, ಇನ್ನೊಂದು ತೋಳು ಬಿಟ್ಕೊಂಡು ರಂಗನಾಥಸ್ವಾಮಿ ದೇವಸ್ಥಾನಕ್ಕೆ ಹೋಗಿ ನಮ್‌ ಗ್ಯಾಂಗ್‌ ಜೊತೆ ಕುತ್ಕೊಳ್ಳೋದು ನನ್ನ ಖಾಯಂ ಕ್ಯಾಮೆಯಾಗಿತ್ತು.

ಪ್ರತಿ ಶನಿವಾರದಂತೆ ಆ ಶನಿವಾರವೂ ಆರು ಗಂಟೆಗೆ ದೇವಸ್ಥಾನಕ್ಕೆ ಹೋಗಿ ರಂಗಪ್ಪಸ್ವಾಮಿಗೆ ಕೈ ಮುಗಿದು, “ಅಪ್ಪಾ, ತಂದೆ.. ನನ್‌ ಒಬ್ಬನಿಗೆ ಒಳ್ಳೇದು ಮಾಡಪ್ಪಾ’ ಅಂತ ಕೇಳ್ಕೊಂಡು, ಪ್ರಸಾದ ತಿನ್ನುತ್ತಾ, ಗ್ಯಾಂಗ್‌ನ ಹುಡುಗರನ್ನು ರೇಗಿಸುತ್ತಾ, ಜೋರಾಗಿ ಗಲಾಟೆ ಮಾಡ್ತಾ ಇದ್ವಿ. ನಮ್ಮ ಗಲಾಟೆ ತಾಳಲಾರದೆ, ಪೂಜಾರಪ್ಪ ಕೂಡ ಒಂದೆರಡು ಬಾರಿ ನಮ್ಮ ಕಡೆಗೆ ಉರಿ ಉರಿಗಣ್ಣು ಬಿಡ್ತಾ ಇದ್ದರು. ಅದೇ ಸಮಯಕ್ಕೆ ಸರಿಯಾಗಿ ನೀನು ತಂಗಾಳಿಯಂತೆ ಕೈ ಮುಕ್ಕೊಂಡು, ದೇವಸ್ಥಾನಕ್ಕೆ ಎಂಟ್ರಿಕೊಟ್ಟೆ ನೋಡು, ನಿನ್ನ ಆ ಚಂದಕ್ಕೆ ನಮ್ಮ ಗ್ಯಾಂಗ್‌ ಗಲಾಟೆ ಹಠಾತ್‌ ನಿಂತು ಹೋಯ್ತು.

ಆದರೆ, ಅಲ್ಲಿಯವರೆಗೆ ನಾರ್ಮಲ್‌ ಆಗಿದ್ದ ನನ್ನ ಎದೆಯೊಳಗೆ ಜೋರಾಗಿ ಘಂಟೆ ಬಾರಿಸಿದ ಅನುಭವ. ನಿನ್ನ ಕಾಲ್ಗೆಜ್ಜೆಯ ನಾದಕ್ಕೆ ನನ್ನ ಹೃದಯ, ಗಾಳಿಯಲ್ಲಿ ಹರಿಬಿಟ್ಟ ಗಾಳಿಪಟದಂತೆ ಅಗಿತ್ತು. ನಿನ್ನ ಆ ಮೋಹಕ ನೋಟದ ಬಾಣಕ್ಕೆ ನನ್ನ ಮನಸ್ಸು ದೀರ್ಘ‌ದಂಡ ನಮಸ್ಕಾರ ಹಾಕಿತ್ತು. ನಿನ್ನ ಅಂದ ಚಂದಕ್ಕೆ ಸಂಪೂರ್ಣವಾಗಿ ಸೆರೆಯಾಗಿ ಹೋದೆ.

ಇಷ್ಟೆಲ್ಲಾ ಅದ್ಮೇಲೆ, ಆ ರಂಗನಾಥ ಸ್ವಾಮಿಗೆ ಉರುಳು ಸೇವೆ ಮಾಡೋದಾದ್ರೂ ಸರಿ, ಉಪವಾಸ ವ್ರತ ಮಾಡೋದಾದ್ರೂ ಸೈ, ಲವ್‌ ಅಂತ ಮಾಡಿದ್ರೆ ಅದು ನಿನ್ನನ್ನೇ ಅಂತ ಅಲ್ಲೇ ಫಿಕ್ಸ್‌ ಆಗಿಬಿಟ್ಟೆ. ಅವತ್ತೇ ನಿಂಗೆ ಇದನೆಲ್ಲಾ ಹೇಳ್ಬಿಟ್ಟು, ಡೀಲ್‌ ಕುದುರಿಸೋಣ ಅಂದ್ಕೊಂಡೆ. ಆದ್ರೆ, ಧೈರ್ಯ ಸಾಲಲಿಲ್ಲ. ಈಗ ಹೇಳ್ತಿದ್ದೀನಿ ಕೇಳು: ನಿನ್ನನ್ನು ನೋಡಿದ ಆ ಕ್ಷಣದಿಂದ ಇಲ್ಲಿಯವರೆಗೆ, ನಂಗೆ ಏನೇನಾಗ್ತಿದೆಯೋ ನನಗೇ ಗೊತ್ತಾಗ್ತಿಲ್ಲ. ಒಮ್ಮೊಮ್ಮೆ ಹುಚ್ಚನಂತೆ ಒಬ್ಬೊಬ್ಬನೇ ನಕ್ಕರೆ, ಮಗದೊಮ್ಮೆ ಮಹಾಮೌನಿಯಾಗಿ ಬಿಡುತ್ತೇನೆ. ಬಹುಶಃ ನನ್ನ ಮೇಲೆ ನಿನ್ನ ಪ್ರೇಮದ ವಾಮಾಚಾರವೇ ನಡೆದಿರಬೇಕು! ಇಷ್ಟೆಲ್ಲಾ ಆದ್ಮೇಲೂ ಸುಮ್ಮನಿರೋಕೆ ನನ್ನ ಕೈಯಲ್ಲಿ ಆಗಲ್ಲ. ಮುಂದಿನ ಶನಿವಾರ ಅದೇನೇ ಕಷ್ಟವಾದರೂ ಸರಿ, ನಾನು ನಿನ್ನ ಬಳಿ ಪ್ರೇಮನಿವೇದನೆ ಮಾಡಿಯೇ ಮಾಡುತ್ತೇನೆ.

Advertisement

ಮುಂದಿನ ಶನಿವಾರ ಮಿಸ್‌ ಮಾಡದೇ ದೇವಸ್ಥಾನಕ್ಕೆ ಬರ್ತೀಯಾ ತಾನೇ?
ನಿನ್ನನ್ನೇ ಎದುರು ನೋಡುತ್ತಿರೋ
ನಿನ್ನಯ ಒಲವೊಪ್ಪುಗೆಯ ಆಕಾಂಕ್ಷಿ

ರವಿತೇಜ ಚಿಗಳಿಕಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next