Advertisement

ಪ್ರೇಮ ಭಕ್ತಿಯಾಗಿ ಬದಲಾದ ಪರಿ

06:59 PM Oct 28, 2019 | mahesh |

ಪರಮಹಂಸ ಶ್ರೀರಾಮಕೃಷ್ಣರ ಮಹಾಶಿಷ್ಯ ಸ್ವಾಮಿ ವಿವೇಕಾನಂದರು. ಈ ವ್ಯಕ್ತಿಯ ಬಗ್ಗೆ ಎಷ್ಟು ಹೇಳಿದರೂ ಮುಗಿಯುವುದಿಲ್ಲ. ಇಡೀ ಭಾರತದ ದಿಕ್ಕುದಿಶೆಗಳನ್ನು ಬದಲಿಸಿದ ಮಹಾಸಂತ. 1863, ಜ.12ರಂದು ಜನಿಸಿ, 1902 ಜು.4ರಂದು ದೇಹತ್ಯಾಗ ಮಾಡಿದರು. ಇವರು ಜನಿಸಿ ಕೇವಲ 6 ವರ್ಷಗಳ ನಂತರ ಮಹಾತ್ಮ ಗಾಂಧೀಜಿ ಗುಜರಾತ್‌ನಲ್ಲಿ ಜನಿಸಿದರು. ಸ್ವತಃ ಗಾಂಧೀಜಿಯೇ ತನಗೆ ವಿವೇಕಾನಂದರಿಂದ ಪ್ರೇರಣೆ ಲಭಿಸಿದೆ ಎಂದು ಹೇಳಿಕೊಂಡಿದ್ದಾರೆ. ಶ್ರೀರಾಮಕೃಷ್ಣರು ಯಾವಾಗಲೂ ವಿವೇಕಾನಂದರ ಬಗ್ಗೆ ಅದ್ಭುತಗಳನ್ನು ಹೇಳುತ್ತಿದ್ದರು. ರಾಮಕೃಷ್ಣರಿಗೆ ಆಗಾಗ ದರ್ಶನವೊಂದು ಆಗುತ್ತಿತ್ತು. ಒಮ್ಮೆ ತಾನೊಂದು ದೃಶ್ಯ ಕಂಡೆ. ಸಪ್ತರ್ಷಿ ಮಂಡಲದಲ್ಲಿ ಅಂಬೆಗಾಲಿಟ್ಟುಕೊಂಡು ಮುದ್ದಾದ ಮಗು ನಡೆಯುತ್ತಿತ್ತು. ತನ್ನನ್ನು ಹಿಂಬಾಲಿಸಿ ಬರುವಂತೆ ನಾನು ಅದಕ್ಕೆ ಸೂಚಿಸಿದೆ. ಆ ಮಗು ನನ್ನನ್ನೇ ಹಿಂಬಾಲಿಸಿ ಭೂಮಿಗೆ ಬಂದಿದ್ದನ್ನು ನೋಡಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಹಲವರು ವಿವೇಕಾನಂದರನ್ನು ಹಲವು ರೀತಿಯಲ್ಲಿ ಬಣ್ಣಿಸಿದ್ದಾರೆ. ಆದರೆ ಅವರು ಸಪ್ತರ್ಷಿ ಮಂಡಲದಿಂದ ಭೂಮಿಗೆ ಬಂದ ಶಕ್ತಿ ಎನ್ನುವ ರಾಮಕೃಷ್ಣರ ಮಾತನ್ನು ಶಿಷ್ಯಬಳಗ ಒಪ್ಪಿ ಸ್ವೀಕರಿಸಿದೆ. ಪರಮಹಂಸರು ಮೊದಲ ಬಾರಿಗೆ ವಿವೇಕಾನಂದರನ್ನು ನೋಡಿದಾಗ ಗಳಗಳನೆ ಅತ್ತುಬಿಟ್ಟಿದ್ದರು. ಇಷ್ಟು ದಿನ ಎಲ್ಲಿ ಹೋಗಿದ್ದೆ? ಈ ಪ್ರಾಪಂಚಿಕರನ್ನು ನೋಡಿನೋಡಿ ಸಾಕಾಗಿತ್ತು ಎಂದು ಗದ್ಗದಿಸಿದ್ದರು. ಈ ಇಬ್ಬರು ಗುರು-ಶಿಷ್ಯರ ನಡುವಿನ ಬಾಂಧವ್ಯ ಅತ್ಯಂತ ತೀವ್ರಸ್ವರೂಪದ್ದು. ಇದು ಪ್ರೇಮದ, ಭಕ್ತಿಯ, ಶಕ್ತಿಯ, ಅಧ್ಯಾತ್ಮದ ಪರಾಕಾಷ್ಠೆಯನ್ನು ಮುಟ್ಟಿತ್ತು. ರಾಮಕೃಷ್ಣರು ದೇಹತ್ಯಾಗ ಮಾಡಿದ ನಂತರ ಅವರನ್ನು ಎಲ್ಲಿ ಪ್ರತಿಷ್ಠಾಪಿಸುವುದು ಎನ್ನುವುದು ಶಿಷ್ಯಂದಿರ ಪ್ರಶ್ನೆಯಾಗಿತ್ತು. ಆಗ ರಾಮಕೃಷ್ಣರೇ ಉತ್ತರ ನೀಡಿ, ನನ್ನನ್ನು ಭುಜದ ಮೇಲೆ ಹೊತ್ತು ನೀನು ಎಲ್ಲಿ ಇಡುತ್ತೀಯೋ, ಅಲ್ಲಿ ನಾನು ನೆಲೆ ನಿಲ್ಲುತ್ತೇನೆಂದು ಭರವಸೆ ನೀಡಿದ್ದರಂತೆ.

Advertisement

ವಿವೇಕಾನಂದರನ್ನು ರಾಮಕೃಷ್ಣ ಪರಮಹಂಸರು ಎಷ್ಟು ಒಪ್ಪಿ-ಅಪ್ಪಿಕೊಂಡಿದ್ದರೋ, ಅಷ್ಟೇ ಪ್ರಮಾಣದಲ್ಲಿ ಇತರೆ ಶಿಷ್ಯಂದಿರೂ ಸ್ವೀಕರಿಸಿದ್ದರು. ತಮ್ಮ ಶಿಷ್ಯಬಳಗದ ನಾಯಕತ್ವವನ್ನು ಪರಮಹಂಸರು ವಿವೇಕಾನಂದರಿಗೆ ಒಪ್ಪಿಸಿದ್ದರು. ಆ ಶಿಷ್ಯರ ನಡುವೆ ಅದೆಷ್ಟು ಪ್ರೀತಿ, ವಿಶ್ವಾಸವಿತ್ತೆಂದರೆ ಸ್ವಾಮಿ ವಿವೇಕಾನಂದರನ್ನು ನಾಯಕನಾಗಿ ಒಪ್ಪಿಕೊಳ್ಳಲು ಅವರು ಯಾರಿಗೂ ಅಹಂಕಾರ ಅಡ್ಡಿ ಬರಲಿಲ್ಲ. ವಿವೇಕಾನಂದರ ಸೂಚನೆಯಂತೆ ರಾಮಕೃಷ್ಣಾಶ್ರಮದ ಅಧ್ಯಕ್ಷರಾದ ಸ್ವಾಮಿ ಬ್ರಹ್ಮಾನಂದರನ್ನು, ಪರಮಹಂಸರ ಆಪ್ತವಲಯ ಯಾವಾಗಲೂ ರಾಜಾ ಮಹಾರಾಜ್‌ ಎಂದೇ ಕರೆಯುತ್ತಿತ್ತು. ಮಹಾನ್‌ ಸಾಧಕರಾಗಿದ್ದ ಇವರು ಸಾಧನೆಯ ಆತ್ಯಂತಿಕ ಮಟ್ಟ ಮುಟ್ಟಿದ್ದರು. ಅಂತಹ ಬ್ರಹ್ಮಾನಂದರು, ವಿವೇಕಾನಂದರು ಭಾರತಕ್ಕೆ ಬಂದಕೂಡಲೇ ಅವರ ಪಾದಮುಟ್ಟಿ ನಮಸ್ಕರಿಸಿ, ಹಿರಿಯಣ್ಣ ತಂದೆಗೆ ಸಮಾನ ಎಂದು ಸಂಬೋಧಿಸಿದರು. ಕೂಡಲೇ ವಿವೇಕಾನಂದರು ಬ್ರಹ್ಮಾನಂದರ ಪಾದಮುಟ್ಟಿ ನಮಸ್ಕರಿಸಿ, ಗುರುಪುತ್ರ ಗುರುವಿಗೆ ಸಮಾನ ಎಂದರು. ವಾಸ್ತವವಾಗಿ ಬ್ರಹ್ಮಾನಂದರು ಪರಮಹಂಸರ ಪುತ್ರರಲ್ಲವೇ ಅಲ್ಲ. ಆದರೆ ಬ್ರಹ್ಮಾನಂದರನ್ನು ತನ್ನ ಪುತ್ರನೆಂದೇ ಪರಮಹಂಸರು ಭಾವಿಸಿದ್ದರು. ಬ್ರಹ್ಮಾನಂದರು ತಮ್ಮ ಶಿಷ್ಯತ್ವದ ಆರಂಭಿಕ ಹಂತದಲ್ಲಿ ಪರಮಹಂಸರ ತೊಡೆಯಮೇಲೆ ಕುಳಿತು ಮಗುವಿನ ಭಾವದಲ್ಲಿ ಸ್ತನವನ್ನು ಚೀಪುತ್ತಿದ್ದರು! ಅವರನ್ನು ಪರಮಹಂಸರ ಮಾನಸಪುತ್ರ ಎಂದು ಹೇಳಲಾಗುತ್ತಿತ್ತು. ಅದೇ ಕಾರಣಕ್ಕೆ ರಾಜಾ ಸಾಹೇಬರಿಗೆ ಗುರುಪುತ್ರ ಗುರುವಿಗೆ ಸಮಾನ ಎಂದು ವಿವೇಕಾನಂದರು ಹೇಳಿದ್ದು. ಗುರುವಿನ ಮೇಲೆ ವಿವೇಕಾನಂದರಿಗೆ ಎಷ್ಟು ಪ್ರೇಮವಿತ್ತೋ, ಅಷ್ಟೇ ಪ್ರೀತಿ ರಾಜಾ ಸಾಹೇಬರ ಮೇಲೆಯೂ ಇತ್ತು. ಇಲ್ಲಿ ಪ್ರೇಮ-ಶ್ರದ್ಧೆ ಘನೀಭವಿಸಿದಂತಿತ್ತು. ಪ್ರೇಮದಭಾವ ಶಿಖರಕ್ಕೇರಿದ್ದರಿಂದ ಅದನ್ನು ಭಕ್ತಿ ಎನ್ನಬಹುದು. ವಿವೇಕಾನಂದರಲ್ಲಿ ಪ್ರೇಮ, ಭಕ್ತಿಯಾಗಿ ಪರಿವರ್ತನೆಯಾಗಿತ್ತು. ಅಧ್ಯಾತ್ಮದಲ್ಲಿ ಬಳಸುವ ಭಕ್ತಿ ಎನ್ನುವ ಪದಕ್ಕೆ ಪದಾರ್ಥ ಏನೇ ಇರಬಹುದು. ಅದರ ಭಾವಾರ್ಥದ ಬಗ್ಗೆ ಹಲವರಿಗೆ ಗೊತ್ತೇ ಇಲ್ಲ. ಭಕ್ತಿ ಎಂದರೆ ಶರಣಾಗತಿ, ಪ್ರೇಮ, ಶ್ರದ್ಧೆ ಒಗ್ಗೂಡಿಕೊಂಡು ಸೃಷ್ಟಿಯಾದ ಒಂದು ಭಾವ ಅಥವಾ ಒಂದು ಅವಸ್ಥೆ. ಅದಕ್ಕೆ ಮತ್ತೂಂದು ಹೆಸರು ವಿವೇಕಾನಂದರು.

-ನಿರೂಪ

Advertisement

Udayavani is now on Telegram. Click here to join our channel and stay updated with the latest news.

Next