Advertisement

ಪ್ರೀತಿಸಿ, ಆದರೆ ತಿದ್ದಲು ಮರೆಯದಿರಿ

03:50 AM Feb 28, 2017 | |

ಬಡತನ, ಕಷ್ಟ, ದುಃಖ, ಸಮಸ್ಯೆಗಳ ಅರಿವೇ ಇಲ್ಲದಂತೆ ಮಕ್ಕಳನ್ನು ಬೆಳೆಸುವ ಇಂದಿನ ಪೋಷಕರಿಗೆ, ಮುಂದೆ ಬದುಕಿನಲ್ಲಿ ಕಷ್ಟಗಳು ಬಂದಾಗ ತಮ್ಮ ಮಕ್ಕಳು ಅತಂತ್ರರಾಗುತ್ತಾರೆ ಎಂಬ ಅರಿವಿರುವುದಿಲ್ಲ.

Advertisement

“ಮಕ್ಕಳಲ್ಲಿ ಮೌಲ್ಯಗಳನ್ನು ಬೆಳೆಸುವಲ್ಲಿ ಶಿಕ್ಷಕರು ಎಡವುತ್ತಿದ್ದಾರೆ’ -ಮಿತ್ರರೊಬ್ಬರು ಹೇಳಿದ ಈ ಮಾತು ನೋವುಂಟು ಮಾಡುವುದರ ಜತೆಗೆ ಚಿಂತನೆಗೂ ಹಚ್ಚಿತು. ಅವರು ಮೌಲ್ಯಗಳ ಬಗ್ಗೆ ತಮಗಿರುವ ಕಳಕಳಿಯನ್ನು ವ್ಯಕ್ತಪಡಿಸಲು ಹಾಗೆ ಹೇಳಿದರೂ, ಅದರಲ್ಲಿ ಶಿಕ್ಷಕರನ್ನು ಹೊಣೆಗಾರರನ್ನಾಗಿಸುವ ಧ್ವನಿ ಇದ್ದುದು ಚಿಂತನೆಗೆ ಕಾರಣ. ತಮ್ಮ ವ್ಯಾಪ್ತಿಯನ್ನು ಮಿತಿಮೀರಿ ಹೆಚ್ಚಿಸಿಕೊಂಡಿರುವ ಮೌಲ್ಯಗಳನ್ನು ಶಿಕ್ಷಣ ಅಥವಾ ಶಾಲೆಯೆಂಬ ಸಣ್ಣ ಚೌಕಟ್ಟಿನಲ್ಲಿ ಹಿಡಿದಿಡಲು ಸಾಧ್ಯವಿಲ್ಲ ಎಂಬುದನ್ನು ಅವರಿಗೆ ಅರ್ಥ ಮಾಡಿಸುವುದು ಹೇಗೆಂದು ಪೇಚಾಡಿದೆ. ಈ ವಿಷಯದ ಬಗ್ಗೆ ನನ್ನನ್ನೇ ಪ್ರಶ್ನಿಸಿಕೊಂಡೆ. ಇತ್ತೀಚೆಗೆ ಮೌಲ್ಯಗಳು ಶಾಲೆಯ ಆವರಣದೊಳಗೆ ಪ್ರವೇಶಿಸುತ್ತಿಲ್ಲ ಎಂಬ ಸತ್ಯದ ದರ್ಶನವಾಯ್ತು. ಅಡಿಪಾಯ ಹಾಕದೇ ಕಟ್ಟಲಾರಂಭಿಸಿದ ಕಟ್ಟಡವನ್ನು ಪೂರ್ತಿಗೊಳಿಸಿ ಎಂದು ಶಿಕ್ಷಕರಿಗೆ ಹೇಳಿದರೆ ನಮ್ಮಂತಹ ಶಿಕ್ಷಕರು ಏನು ತಾನೇ ಮಾಡಲು ಸಾಧ್ಯ? ಈಗತಾನೇ ಕಟ್ಟಿದ್ದನ್ನು ಕೆಡವಿ ಬಲವಾದ ಅಡಿಪಾಯ ಹಾಕಿ ಪ್ರಾರಂಭಿಸಬೇಕೇ? ಕುಸಿದು ಬೀಳುತ್ತದೆಂದು ಖಚಿತವಿದ್ದರೂ ಇರುವುದರ ಮೇಲೆಯೇ ಕಟ್ಟುವ ವ್ಯರ್ಥ ಕೆಲಸ ಮಾಡಬೇಕೇ? ಈಗಾಗಲೇ ಕಟ್ಟಿದ್ದನ್ನು ಒಡೆಯಲು ನಮಗೆ ಅನುಮತಿ ನೀಡುವವರೂ ಇಲ್ಲ. ಇರುವುದನ್ನು ಪುಡಿಗಟ್ಟದೇ ಕಟ್ಟುವ ಮ್ಯಾಜಿಕ್‌ ನಮಗೆ ತಿಳಿದಿಲ್ಲ. ಶಿಕ್ಷಕರೆಂದರೆ ಶಿಕ್ಷೆ ನೀಡುವವರಲ್ಲ ನಿಜ. ಆದರೆ ಮಾತಿನ ರೂಪದ ಶಿಕ್ಷೆ, ಮಾರಕವಲ್ಲದ ರೀತಿಯ ಪೆಟ್ಟು -ಇದು ಯಾವುದೂ ಇಲ್ಲದೇ ತಪ್ಪುಗಳನ್ನು ತಿದ್ದುವುದು ಸಾಧ್ಯವೇ? ಸ್ವಯಂಶಿಸ್ತು ಎಲ್ಲರಿಗೂ ಕಷ್ಟ ಸಾಧ್ಯ. ಸಣ್ಣ ಮಟ್ಟಿನ ಭಯದಿಂದ ಶಿಸ್ತು, ಮೌಲ್ಯಗಳು ಅಭ್ಯಾಸವಾಗುತ್ತವೆ. ಮುಂದೆ ಅದು ಸ್ವತಂತ್ರವಾಗಿ, ರೂಢಿಗತವಾಗುತ್ತದೆ. ಬದುಕಿನಲ್ಲಿ ಮಳೆ, ಬಿಸಿಲು, ಬಿರುಗಾಳಿ, ಪ್ರವಾಹ ಏನೇ ಬಂದರೂ ವಿಚಲಿತರಾಗದ, ಕೆಡುಕನ್ನು ಬಯಸದ, ಮಾಡದ ವ್ಯಕ್ತಿತ್ವಗಳನ್ನು ನಿರ್ಮಿಸಲು ನಮಗೆ ಮನಸ್ಸಿದೆ. ಆದರೆ ಕೈಗಳನ್ನು ಹಿಂದಕ್ಕೆ ಕಟ್ಟಿದ ಸ್ಥಿತಿಯಲ್ಲಿರುವ ನಾವು ಅಸಹಾಯಕರು.

ಈ ಮಾತುಗಳು ಜವಾಬ್ದಾರಿಯಿಂದ ನುಣುಚಿಕೊಳ್ಳುವಿಕೆ ಯೆಂದು ನಿಮಗನಿಸಿರಬಹುದು. ದಿನನಿತ್ಯ ನಮಗೆ ಎದುರಾಗುವ ಶಿಕ್ಷಣೇತರ ಸಮಸ್ಯೆಗಳು ಹಲವು. ಅವೆಲ್ಲ ವಿದ್ಯಾರ್ಥಿಗಳ ವರ್ತನೆಗೆ ಸಂಬಂಧಿಸಿದ್ದು. ಹಾವು ಸಾಯದೆ, ಕೋಲು ಮುರಿಯದೆ ಇಂತಹ ಹಲವು ಸಮಸ್ಯೆಗಳನ್ನು ಬಗೆಹರಿಸಿದ್ದೇವೆ. ಓದುಗರು ತಾಳ್ಮೆಯಿಂದ ಯೋಚಿಸಿದರೆ ಮೌಲ್ಯಗಳ ಬಗ್ಗೆ ಈಗಿನ ವಸ್ತುಸ್ಥಿತಿ ಅರಿವಾಗುತ್ತದೆ. “ನಮ್ಮ ಮಕ್ಕಳಿಗೆ ನಾವೇ ಇದುವರೆಗೂ ಬೈದಿಲ್ಲ. ಹೊಡೆದಿಲ್ಲ. ನೀವ್ಯಾರು ಅದನ್ನೆಲ್ಲ ಮಾಡಲಿಕ್ಕೆ’ ಎಂಬ ಧೋರಣೆಯ ಹೆತ್ತವರಿರುವಾಗ ಹಲವು ಸಲ ನಾವು ಸುಮ್ಮನಿರಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. 

ಅತಿ ಮುದ್ದು ಮೂಲಕಾರಣ
ಮೌಲ್ಯಗಳ ಬೇರು ಕ್ಷೀಣವಾಗಲು ಮೂಲಕಾರಣಗಳನ್ನು ಹುಡುಕಿದರೆ ಕೆಲವು ವಿಷಯಗಳು ಸ್ಪಷ್ಟವಾಗುತ್ತವೆ. ಹಿಂದೆ ಮಕ್ಕಳು ತುಂಬಿದ ಮನೆಯಲ್ಲಿ ಬೆಳೆಯುತ್ತಿದ್ದರು. ಮೌಲ್ಯಗಳನ್ನು ನೋಡಿ, ಕೇಳಿ, ಅನುಭವಿಸಿ ಕಲಿಯುತ್ತಿದ್ದರು. ಹೊಂದಾಣಿಕೆ, ಸಹಕಾರ, ಹಂಚಿಕೊಳ್ಳುವಿಕೆ, ಗುರುಹಿರಿಯರಲ್ಲಿ ಗೌರವ ಇತ್ಯಾದಿಗಳನ್ನು ಸ್ವಾಭಾವಿಕವಾಗಿ ಕಲಿಯುತ್ತಿದ್ದರು. ಬಡತನ, ಕಷ್ಟ, ದುಃಖ, ಸಮಸ್ಯೆಗಳನ್ನು ಅರಿತು, ಅದರಲ್ಲಿ ಭಾಗಿಗಳಾಗಿ ಬೆಳೆಯುತ್ತಿದ್ದರು. ಕಠಿನ ಪರಿಸ್ಥಿತಿಯನ್ನು ಎದುರಿಸಲು ಬೇಕಾದ ಗಟ್ಟಿತನವನ್ನು ಬಾಲ್ಯದಲ್ಲೇ ಪಡೆಯುತ್ತಿದ್ದರು. ಸಂಸ್ಕೃತಿ, ಆಚಾರ-ವಿಚಾರ, ದೇವರ ಮೇಲಿನ ಭಕ್ತಿ, ಸ್ತ್ರೀಯರು, ಮುದುಕರು, ಅಶಕ್ತರ ಮೇಲೆ ಗೌರವ, ಅನುಕಂಪಗಳನ್ನು ಹೊಂದಿದ್ದರು. ಆದರೆ ಈಗ ಕುಟುಂಬ ಪದ್ಧತಿ ಬದಲಾಗಿದೆ. ಅಪ್ಪ, ಅಮ್ಮ, ಒಂದು ಅಥವಾ ಎರಡು ಮಕ್ಕಳಿರುವ ಮನೆಗಳಲ್ಲಿ ಹಂಚಿಕೊಳ್ಳುವ ಮಾತೇ ಇಲ್ಲ. ಸಾಲ ಮಾಡಿಯಾದರೂ ಮಕ್ಕಳಿಗೆ ಕಷ್ಟದ ಅರಿವು ನೀಡದೇ ಬೆಳೆಸಬೇಕೆನ್ನುವ ಪೋಷಕರ ಭಾವನೆಯಿಂದಾಗಿ ಕಷ್ಟ, ನೋವು, ದುಃಖ, ಕೊರತೆಗಳು ಎಂದರೇನು ಎಂಬುದೇ ಮಕ್ಕಳಿಗೆ ತಿಳಿಯುತ್ತಿಲ್ಲ. ಈಗಿನವರು ಸ್ಮಾರ್ಟ್‌ ಫೋನ್‌ ಕೈಗಿತ್ತು ಊಟ ಮಾಡಿಸುತ್ತಾರೆ. ನೀತಿಕತೆಗಳ ಪುಸ್ತಕವನ್ನು ಈಗಿನ ಮಕ್ಕಳು ನೋಡಿಯೇ ಇಲ್ಲ. ಪೋಷಕರಿಗೂ ಓದುವ ಹವ್ಯಾಸವಿಲ್ಲ. ನಾಲ್ಕು ಮಕ್ಕಳೊಂದಿಗೆ ಬೆರೆತು ಆಟವಾಡಿ, ಜಗಳವಾಡಿ, ಮತ್ತೆ ಒಂದಾಗಿ ಆಡುವ ಮಜಾ ಅವರಿಗೆ ಗೊತ್ತಿಲ್ಲ. ಅಲ್ಲಿ ನಡೆಯುವ ಸಾಮಾಜೀಕರಣ ಪ್ರಕ್ರಿಯೆಯ ಲಾಭಗಳು ಹೆತ್ತವರಿಗೂ ತಿಳಿದಿಲ್ಲ. ಟಿವಿ ನೋಡಿ ಮಕ್ಕಳು ನೆನಪು ಶಕ್ತಿ, ಆಲೋಚನಾಶಕ್ತಿಗಳನ್ನು ಕಳೆದುಕೊಳ್ಳುತ್ತಿ¨ªಾರೆ. ಸ್ಮಾರ್ಟ್‌ ಫೋನ್‌ ಅಂತೂ ಮಕ್ಕಳ ಆಟಿಕೆಯಾಗಿಬಿಟ್ಟಿದೆ. ಇಂಟರ್ನೆಟ್‌ ಬಳಕೆ ಈಗ ಸಣ್ಣ ಮಗುವಿಗೂ ಗೊತ್ತು. ಏನೇನೋ ನೋಡಿ ಕಲುಷಿತವಾದ, ವಿಕೇಂದ್ರೀಕರಣಗೊಂಡ ಮನಸ್ಸಿನೊಂದಿಗೆ ಇರುವ ಮಕ್ಕಳಿಗೆ ನಮ್ಮ ಪಾಠಗಳೇ ಬೇಡವೆನಿಸಿವೆ. ಹಾಗಿರುವಾಗ ನೀತಿಬೋಧನೆ ಎಷ್ಟರಮಟ್ಟಿಗೆ ಹಿಡಿಸೀತು? 

ಈಗ ಮಕ್ಕಳೇ ದೇವರು!
ಹಿಂದಿನವರು ಮುಗ್ಧ, ನಿಷ್ಕಲ್ಮಷ ಮನಸ್ಸಿನ ಮಕ್ಕಳ ದೈವತ್ವವನ್ನು ಬೆಳೆಸಲು, ಉತ್ತಮ ವ್ಯಕ್ತಿತ್ವ ರೂಪಿಸಲು ಪ್ರಯತ್ನಿಸಿದರೆ, ಈಗಿನವರು ಮಕ್ಕಳನ್ನೇ ದೇವರೆಂದು ಪೂಜಿಸುತ್ತಿ¨ªಾರೆ. ಬಡತನ, ಕಷ್ಟ, ದುಃಖ, ಸಮಸ್ಯೆಗಳ ಅರಿವೇ ಇಲ್ಲದಂತೆ ಮಕ್ಕಳನ್ನು ಬೆಳೆಸುವ ಇಂದಿನ ಪೋಷಕರಿಗೆ, ಮುಂದೆ ಬದುಕಿನಲ್ಲಿ ಕಷ್ಟಗಳು ಬಂದಾಗ ತಮ್ಮ ಮಕ್ಕಳು ಅತಂತ್ರರಾಗುತ್ತಾರೆ ಎಂಬ ಅರಿವಿರುವುದಿಲ್ಲ. ದೊಡ್ಡವರಾದಾಗ ಮಕ್ಕಳು ಸಮಸ್ಯೆಗಳನ್ನು ಎದುರಿಸಲಾರದೇ ಮಾನಸಿಕವಾಗಿ ಕುಗ್ಗುವುದಕ್ಕೆ, ಆತ್ಮಹತ್ಯೆಗೆ ಮನಸ್ಸು ಮಾಡುವುದಕ್ಕೆ, ಸಮಾಜ ಘಾತುಕ ಚಟುವಟಿಕೆಗಳಲ್ಲಿ ಏರ್ಪಡುವುದಕ್ಕೆ, ಸ್ತ್ರೀಯರನ್ನು ಅಪಮಾನ ಮಾಡುವುದಕ್ಕೆ ಅವರು ಬೆಳೆದುಬಂದ ರೀತಿಯೇ ಕಾರಣ. ಹಿಂದಿನ ಕಾಲದಲ್ಲಿ ಮಕ್ಕಳು ಅಪ್ಪ ಅಥವಾ ಮನೆಯ ಹಿರಿಯರೆಂದರೆ ಹೆದರುತ್ತಿದ್ದರು. ಆದರೆ ಈಗಿನ ಮಕ್ಕಳು ಮನೆಬಿಟ್ಟು ಹೋಗುವ, ಆತ್ಮಹತ್ಯೆ ಮಾಡಿಕೊಳ್ಳುವ, ಉಪವಾಸವಿರುವ ಬೆದರಿಕೆಯೊಡ್ಡಿ ತಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳುತ್ತಾರೆ. 

Advertisement

ಒಂದು ದಿನ ಶಾಲೆಯಲ್ಲಿ ಕಿರುಪರೀಕ್ಷೆ ನಡೆಯುತ್ತಿತ್ತು. ಪರಸ್ಪರ ಮಾತನಾಡಿದ್ದಕ್ಕೆ ಶಿಕ್ಷಕರೋರ್ವರು ಇಬ್ಬರು ಹುಡುಗಿಯರನ್ನು ಕರೆಸಿದರು. ಅವರು ಒಳ್ಳೆಯ ವಿದ್ಯಾರ್ಥಿನಿಯರೇ. ಆದರೆ ಪರೀಕ್ಷಾ ಕೊಠಡಿಯ ಶಿಸ್ತು ಮೀರಿದ್ದರು. ಶಿಕ್ಷಕರು ಬಾಯಿಮಾತಲ್ಲಿ ವಿಚಾರಿಸುತ್ತಿದ್ದರಷ್ಟೇ. ಒಬ್ಬಳು ಹುಡುಗಿ ತಾನು ತಪ್ಪು ಮಾಡಿಲ್ಲ ಎಂದು ಏಕಾಏಕಿ ಅಳಲಾರಂಭಿಸಿದಳು. ಅವಳಿಗೆ ಅಳು ನಿಯಂತ್ರಿಸಲು ಆಗಲಿಲ್ಲ ಮಾತ್ರವಲ್ಲ, ಉಸಿರು ಕಟ್ಟಿದಂತೆ, ವಾಕರಿಕೆ ಬಂದಂತೆ ವರ್ತಿಸಲು ಶುರು ಮಾಡಿದಳು. ನಿಶ್ಶಕ್ತಳಾದಂತೆ ನೆಲಕ್ಕೆ ಕುಸಿದಳು. ಅವಳು ಹುಟ್ಟಿದ ಅನಂತರ ಕೇಳಿದ ಮೊದಲ ಬಿರುನುಡಿಗಳಾಗಿದ್ದವು ಅವು. ತಡೆದುಕೊಳ್ಳುವಷ್ಟು ಮಾನಸಿಕ ಶಕ್ತಿ ಅವಳಲ್ಲಿರಲಿಲ್ಲ. ಮತ್ತೂಂದು ದಿನ ಆ ಹುಡುಗಿಯ ಅಪ್ಪ ಶಾಲೆಗೆ ಬಂದರು. ಅವರಿಂದ ನಾವು ತಿಳಿದ ಸಂಗತಿ ವಿಚಿತ್ರವಾಗಿತ್ತು. ಅವಳನ್ನು ಮನೆಯಲ್ಲಿ ಮುದ್ದಿನಿಂದ ಬೇರೆ ಹೆಸರಲ್ಲಿ ಕರೆಯುತ್ತಾರಂತೆ. ಅಪ್ಪಿತಪ್ಪಿ ಅವಳ ನಿಜ ಹೆಸರು ಹಿಡಿದು ಕರೆದರೆ ಅತ್ತುಕರೆದು ರಂಪ ಮಾಡುತ್ತಾಳಂತೆ. ಹೆತ್ತವರ ಅತಿಮುದ್ದಿನಿಂದ ಅವಳು ಅತ್ಯಂತ ಸೂಕ್ಷ್ಮ ಸ್ವಭಾವವನ್ನು ರೂಢಿಸಿಕೊಂಡಿ¨ªಾಳೆಂದು ನಮಗೆ ತಿಳಿಯಿತು. ಗಟ್ಟಿತನ ರೂಢಿಸುವ ಅಗತ್ಯದ ಬಗ್ಗೆ ಪ್ರೀತಿಯಿಂದಲೇ ಅವಳಿಗೆ ತಿಳಿಸಿಕೊಟ್ಟೆವು.

 ನಮ್ಮ ಶಾಲೆಯ ಸಮೀಪ ಹೊನಲು ಬೆಳಕಿನ ವಾಲಿಬಾಲ್‌ ಪಂದ್ಯಾಟ ಏರ್ಪಡಿಸಲಾಗಿತ್ತು. ಮರುದಿನ ಹತ್ತನೇ ತರಗತಿಗೆ ಪೂರ್ವ ಸಿದ್ಧತಾ ಪರೀಕ್ಷೆ ಇತ್ತು. ನಮ್ಮ ಹತ್ತನೇ ತರಗತಿಯ ಒಬ್ಬ ಹುಡುಗ ಕತ್ತಲು ಕವಿದಾಗ ಸ್ಕೂಟರ್‌ ಚಲಾಯಿಸಿ ಅಲ್ಲಿಗೆ ಹೊರಟ, ಅಪಘಾತ ಮಾಡಿಕೊಂಡ. ಅವನ ಹಟಕ್ಕೆ ಬಗ್ಗಿ ಅಪ್ರಾಪ್ತ ವಯಸ್ಸಿನ ಅವನಿಗೆ ಸ್ಕೂಟರ್‌ ಕೊಟ್ಟ ಪೋಷಕರ ಪ್ರೀತಿ ಅಥವಾ ಮುದ್ದಿಗೆ ಏನು ಹೇಳಬೇಕು? ಮಕ್ಕಳು ಹೆತ್ತವರ ಪಾಲಿಗೆ ದೇವರು ಎಂಬುದಕ್ಕೆ ಇವು ಕೆಲವು ಉದಾಹರಣೆಗಳಷ್ಟೇ. 

ಗಿಡವಾಗಿದ್ದಾಗಲೇ ಬಗ್ಗಿಸಬೇಕು
ಈಗಿನ ಮಕ್ಕಳು ದಾರಿ ತಪ್ಪಲು, ಪ್ರಾಣ ಕಳೆದುಕೊಳ್ಳಲು ಶಿಕ್ಷಣ ವ್ಯವಸ್ಥೆ ಅಥವಾ ಶಿಕ್ಷಕರು ಹೊಣೆಯೇ? ಹೆತ್ತವರ ಅತಿಪ್ರೀತಿ, ಅತಿ ಮುದ್ದು ಮಕ್ಕಳನ್ನು ಕೈಲಾಗದವರಾಗಿ ಪರಿವರ್ತಿಸುತ್ತಿದೆ. ಪರಾವಲಂಬಿಗಳು, ಹಟಮಾರಿಗಳು, ಏನನ್ನೂ ಸಹಿಸಲು ಶಕ್ತಿಯಿಲ್ಲದವರೂ ಆಗಿ ಮಕ್ಕಳು ಬೆಳೆಯುತ್ತಿ¨ªಾರೆ. ಹಿಂದಿನ ಕಾಲದಲ್ಲಿ ಮಕ್ಕಳ ಮೊಂಡು ಹಟ, ರಂಪಗಳನ್ನು ಹಿರಿಯರು ಮೊಳಕೆಯÇÉೇ ಚಿವುಟಿ ಬಿಡುತ್ತಿದ್ದರು. ತಮ್ಮ ಕೆಲಸಗಳನ್ನು ತಾವೇ ಮಾಡಲು ಕಲಿಸುತ್ತಿದ್ದರು. ಆದರೆ ಈಗ ಹೆತ್ತವರು ಅತಿ ಮುದ್ದಿನಿಂದ ಬೆಳೆಸಿರುವ ಬೆಣ್ಣೆ ಮು¨ªೆಗಳಂತಿರುವ ಮಕ್ಕಳನ್ನು, ಗದರುವಿಕೆಯನ್ನು ಕೇಳಿಯೇ ಇಲ್ಲದ, ಪೆಟ್ಟೆಂದರೆ ಏನೆಂದು ತಿಳಿದೇ ಇಲ್ಲದ ಮಕ್ಕಳನ್ನು ತಿದ್ದಲು ನಾವು ಶಿಕ್ಷಕರು ಅಶಕ್ತರು. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗಲಾರದು. 

ನಿಮ್ಮ ಮಕ್ಕಳು ಪರಿಪೂರ್ಣ ವ್ಯಕ್ತಿತ್ವ ಪಡೆಯಬೇಕೇ? ಅಡಿಪಾಯ ಹಾಕದಿದ್ದರೂ ಪರವಾಗಿಲ್ಲ, ದುರ್ಬಲ ಅಥವಾ ತಪ್ಪು ಪಾಯ ಹಾಕಬೇಡಿ. ಸಾಧ್ಯವಿದ್ದರೆ ಮೌಲ್ಯಶಿಕ್ಷಣದ ಮೂಲಾಕ್ಷರಗಳನ್ನು ಮನೆಯಲ್ಲೇ ಕಲಿಸಿ. ನಾವು, ಶಿಕ್ಷಕರು ಆ ಅಡಿಪಾಯವನ್ನು ಭದ್ರಪಡಿಸಿ, ಸುಭದ್ರ ಕಟ್ಟಡ ಕಟ್ಟುತ್ತೇವೆ. ಮಕ್ಕಳ ಬೇಕು-ಬೇಡಗಳಿಗೆ ಸ್ಪಂದಿಸಿ, ಆದರೆ ವಿವೇಕಶೂನ್ಯರಾಗಿ ವರ್ತಿಸಬೇಡಿ. ಮಕ್ಕಳನ್ನು ಪ್ರೀತಿಸಿ, ಮುದ್ದು ಮಾಡಿ. ಆದರೆ ಅಗತ್ಯವಿದ್ದಾಗ ತಿದ್ದಲು ಮರೆಯಬೇಡಿ. ಅವರ ಹಟಮಾರಿತನಗಳನ್ನು ಪೋಷಿಸಬೇಡಿ. ಸ್ಮಾರ್ಟ್‌ ಫೋನ್‌, ಟಿವಿಗಳಿಗೆ ದಾಸರನ್ನಾಗಿ ಮಾಡಬೇಡಿ. ಸಂಬಂಧಗಳ ಮಹತ್ವ, ಮಾನವೀಯತೆಗಳನ್ನು ಅವರಿಗೆ ಪರಿಚಯಿಸಿ. ಹೆತ್ತವರಾದ ನೀವು, ಶಿಕ್ಷಕರಾದ ನಾವು ಜತೆಯಾಗಿ ಪರಿಶ್ರಮಿಸಿದರೆ ನಿಮ್ಮ ಮಕ್ಕಳನ್ನು ಶೀಲವಂತರಾಗಿ, ಸಂಸ್ಕಾರವಂತರಾಗಿ ಬೆಳೆಸಲು ಸಾಧ್ಯ. ಮೌಲ್ಯಶಿಕ್ಷಣವೆಂಬುದು ಶಾಲೆಯ ಸ್ವತ್ತಲ್ಲ. ಅದು ಎಲ್ಲರ ಸಾಮೂಹಿಕ ಪ್ರಯತ್ನ ಬೇಡುವಂಥದ್ದು. ಮೌಲ್ಯಗಳನ್ನು ಬೆಳೆಸಿ, ಉತ್ತಮ ಸಮಾಜವನ್ನು ರೂಪಿಸಲು ಜತೆಯಾಗಿ ಪರಿಶ್ರಮಿಸೋಣ.

ಜೆಸ್ಸಿ  ಪಿ. ವಿ., ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next