ಬೀದರ: ಪ್ರಕೃತಿಯು ನಮಗೆ ಎಲ್ಲವನ್ನು ಮುಕ್ತವಾಗಿ ನೀಡುತ್ತಿದೆ. ನಾವು ಯಾವುದಕ್ಕೂ ತೆರಿಗೆ ಕಟ್ಟುತ್ತಿಲ್ಲ. ಹಾಗೆಂದ ಮಾತ್ರಕ್ಕೆ ಪ್ರಕೃತಿದತ್ತವಾಗಿ ದೊರೆಯುವ ಸಂಪತ್ತಿನ ಮೇಲೆ ಸಂಪೂರ್ಣ ಅಧಿಕಾರ ಚಲಾಯಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಇದು ಮುಂದೊಂದು ದಿನ ಕಂಟಕ ತರಲಿದೆ ಎಂದು ಬ್ರಹ್ಮಕುಮಾರಿ ಈಶ್ವರೀ ವಿದ್ಯಾಲಯದ ಸುನಂದಾ ಬೆಹನ್ ಎಚ್ಚರಿಸಿದರು.
ನಗರದ ಬರೀದಶಾಹಿ ಉದ್ಯಾನವನದಲ್ಲಿ ಗುರುವಾರ ಸೂರ್ಯ ಫೌಂಡೇಶನ್ ಮತ್ತು ಇಂಟರ್‌ನ್ಯಾಷನಲ್ ನ್ಯಾಚುರೋಪತಿ ಅರ್ಗನೈಜೇಶನ್ (ಐಎನ್‌ಒ), ಮಾತೃಭೂಮಿ ಸೇವಾ ಪ್ರತಿಷ್ಠಾನ, ಸಿಸಿಆರ್‌ವೈಎನ್ ಹಾಗೂ ಆಯುಷ್ ಇಲಾಖೆಯ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪ್ರಾಕೃತಿಕ ಚಿಕಿತ್ಸಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಕೃತಿಯನ್ನು ಪ್ರೀತಿಸಲು ಕಲಿಯಬೇಕು. ಪ್ರಕೃತಿ ಉಳಿಸಬೇಕು. ಮರಳಿ ಪ್ರಕೃತಿಗೆ ನಾವು ಏನಾದರು ಕೊಡಬೇಕು. ಆಗ ಮಾತ್ರ ಈ ಮನುಷ್ಯ ಜನ್ಮ ಸಾರ್ಥಕ ಎಂದರು.
ಈ ದೇಹ ಕಸದ ಬುಟ್ಟಿಯಲ್ಲ ಬೇಡದ್ದೆಲ್ಲ ಹೊಟ್ಟೆಯೊಳಗೆ ಹಾಕದೆ ಸಾತ್ವಿಕ ಭೋಜನ, ದಿನಾಲು ವ್ಯಾಯಾಮ ಮಾಡುತ್ತಾ ದೇಹವನ್ನು ಆರೋಗ್ಯವಾಗಿ ಇಟ್ಟುಕೊಳ್ಳಬೇಕು. ಆದಷ್ಟು ಪ್ರಕೃತಿಗೆ ಹತ್ತಿರವಾಗಿ ತನ್ನ ಬದುಕನ್ನು ಬದುಕಬೇಕಿದೆ. ಈ ನಿಟ್ಟಿನಲ್ಲಿ ಹಳ್ಳಿಯ ಜೀವನ ಬಹಳಷ್ಟು ಉತ್ತಮವಾದ್ದದು. ಸದಾಕಾಲ ಸಕಾರಾತ್ಮಕ ಚಿಂತನೆ, ಕೆಲಸಗಳನ್ನೇ ಮಾಡಬೇಕು. ಆಗ ತಾನು ಮತ್ತು ಇತರರು ನೆಮ್ಮದಿಯಾಗಿರಬಹುದು ಎಂದು ಹೇಳಿದರು.
ಸೂರ್ಯ ಫೌಂಡೇಶನ್ ಸಂಚಾಲಕ ಗುರುನಾಥ ರಾಜಗೀರಾ ಮಾತನಾಡಿ, ಪ್ರಕೃತಿದತ್ತವಾಗಿ ಸಿಗುವ ಸಂಪತ್ತನ್ನು ಮನುಷ್ಯನು ತನ್ನ ಸ್ವಾರ್ಥಕ್ಕಾಗಿ ಮನಬಂದಂತೆ ಬಳಸುತ್ತಿರುವುದು ಹಾಗೂ ಮುಂದಿನ ಪೀಳಿಗೆಯ ಬಳಕೆಗಾಗಿ ಯೋಚಿಸದೆ ಹಾಳು ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಪ್ರಾಕೃತಿಕ ಚಿಕಿತ್ಸೆಯ ಪ್ರಚಾರ ಮತ್ತು ಪ್ರಸಾರಕ್ಕಾಗಿ ದೇಶಾದ್ಯಂತ ದಿನಾಚರಣೆ ನಿಮಿತ್ತ ವಿವಿಧ ಕಾರ್ಯಕ್ರಮಗಳು ನಡೆಯುತ್ತಿವೆ ಎಂದರು.
ದೇಶಾದ್ಯಂತ ನ. 18ರಿಂದ 2022ರ ಆ. 15ರವರೆಗೆ ಎಲ್ಲ ರಾಜ್ಯಗಳ 500ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತಿದೆ. ಕಾಲೇಜು ವಿದ್ಯಾರ್ಥಿಗಳಿಗಾಗಿ ರಾಷ್ಟ್ರ ಮಟ್ಟದಲ್ಲಿ “ಯಾರಾಗುತ್ತೀರಿ ಆರೋಗ್ಯ ರಕ್ಷಕರು’ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದ್ದು, ಸುಮಾರು 7 ಲಕ್ಷ ಜನ ಭಾಗವಹಿಸುವ ನಿರೀಕ್ಷೆಯಿದೆ. ಇದರ ನೋಂದಣಿ ಈಗಾಗಲೇ ಪ್ರಾರಂಭವಾಗಿದೆ ಎಂದು ಹೇಳಿದರು.
ಸ್ವಾತಂತ್ರ್ಯ ಅಮೃತ ಮಹೋತ್ಸವ ನಿಮಿತ್ತ ದೇಶದ ವಿವಿಧೆಡೆ ಪ್ರಾಕೃತಿಕ ಚಿಕಿತ್ಸಾ ಶಿಬಿರ ಮತ್ತು ವಿಚಾರ ಸಂಕಿರಣ ಏರ್ಪಡಿಸಲಾಗುತ್ತಿದೆ. ನ. 21ರಿಂದ ಆ. 15ರವರೆಗೆ ಪ್ರತಿ ಭಾನುವಾರ ಬೆಳಗ್ಗೆ 10ಕ್ಕೆ ನ್ಯಾಚುರೋಪತಿ ಕುರಿತು ಆನ್‌ಲೈನ್ ವೆಬಿನಾರ್ ಜರುಗಲಿದ್ದು, ಅನುಭವಿಗಳು ಮಾರ್ಗದರ್ಶನ ನೀಡುವರು. ಆಸಕ್ತರು ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದು ಮನವಿ ಮಾಡಿದರು.
ಶ್ರೀಕಾಂತ ಮೋದಿ, ವಿನೋದ ಪಾಟೀಲ, ರೂಪಾ ಪಾಟೀಲ, ನಂದಕುಮಾರ ತಾಂದಳೆ, ವಿಜಯಾ ಡೊಯಿಜೊಡೆ, ಸಿಂದುಮತಿ, ರವೀಂದ್ರ ತೆಲಂಗೆ, ಗಂಗಪ್ಪಾ ಸಾವಳೆ, ಶಂಕರಾವ ಚಿದ್ರಿ, ಜಗನ್ನಾಥ ರಾವ್, ಮೋಹನರಾವ್ ಎಳನುರಕರ್ ಇನ್ನಿತರರಿದ್ದರು.