Advertisement

ಅಲೆಯಲ್ಲಿ ಕೊಚ್ಚಿ ಹೋದ ಪ್ರೀತಿ

11:33 AM Sep 29, 2018 | Team Udayavani |

ಆ ಹಳ್ಳಿ ತುಂಬಾ ಬುದ್ಧಿಮಾಂದ್ಯ ಮಕ್ಕಳು. ಅದಕ್ಕೆ ಕಾರಣ ಹಲವು ವರ್ಷಗಳ ಹಿಂದೆ ನಡೆದ ಘಟನೆ. ಆದರೆ, ಅದನ್ನು ದುರುಪಯೋಗಪಡಿಸಿಕೊಳ್ಳುವ ಪುರೋಹಿತರು ಒಂದು ಕಡೆಯಾದರೆ, ಆಡಳಿತಶಾಹಿ ವರ್ಗ ಇನ್ನೊಂದು ಕಡೆ. ಈ ನಡುವೆಯೇ ಅರಳುವ ಮುಗ್ಧ ಪ್ರೀತಿ ಮತ್ತು ಅದರ ಸುತ್ತ ನಡೆಯುವ ಸನ್ನಿವೇಶ. “ಕಿನಾರೆ’ಯಲ್ಲಿ ಹೆಜ್ಜೆ ಹಾಕುವಾಗ ಈ ತರಹದ ನಿಮಗೆ ಸಾಕಷ್ಟು ಅಂಶಗಳು ಬಂದು ಹೋಗುತ್ತವೆ. ಅದೊಂಥರ ಸಮುದ್ರದ ಸಣ್ಣ ಅಲೆಯಂತೆ.

Advertisement

ಕಾಲಿಗೆ ಬಂದು ಕಚಗುಳಿ ಇಡುತ್ತವೆಯೇ ಹೊರತು, ನಿಮ್ಮನ್ನು ಹೆಚ್ಚು ಕಾಡುವುದಿಲ್ಲ. ನಿರ್ದೇಶಕ ದೇವರಾಜ್‌ ಪೂಜಾರಿ “ಕಿನಾರೆ’ಯಲ್ಲಿ ತುಂಬಾ ಗಂಭೀರವಾದ ವಿಚಾರವನ್ನು ಹೇಳಲು ಪ್ರಯತ್ನಿಸಿದ್ದಾರೆ. ಈ ನಡುವೆಯೇ ಅದಕ್ಕೊಂದು ಲವ್‌ಸ್ಟೋರಿಯನ್ನು ಸೇರಿಸಿದ್ದಾರೆ. ಈ ಎರಡೂ ಅಂಶಗಳನ್ನು ಸರಿದೂಗಿಸಿ ದಡ ತಲುಪಿಸುವಷ್ಟರಲ್ಲಿ ನಿರ್ದೇಶಕರ ಸಾಕಷ್ಟು ಗೊಂದಲಕ್ಕೆ ಬಿದ್ದಿರೋದು ಎದ್ದು ಕಾಣುತ್ತದೆ. ಅದೇ ಕಾರಣದಿಂದ ನಿಮಗೆ ಈ ಸಿನಿಮಾದ ಮುಖ್ಯ ಆಶಯ ಏನೆಂಬುದು ಸ್ಪಷ್ಟವಾಗುವುದಿಲ್ಲ. 

ಹಳ್ಳಿಯಲ್ಲಿರುವ ಬುದ್ಧಿಮಾಂದ್ಯರನ್ನು ಸರಿಪಡಿಸೋದು ನಿರ್ದೇಶಕರ ಉದ್ದೇಶನಾ ಅಥವಾ ಲವ್‌ಸ್ಟೋರಿಯನ್ನು ಕಟ್ಟಿಕೊಡೋದಾ ಎಂಬ ಸಣ್ಣ ಗೊಂದಲ ಕಾಡುತ್ತದೆ. ಇದರಲ್ಲಿ ಯಾವುದಾದರೂ ಒಂದು ಟ್ರ್ಯಾಕ್‌ ಅನ್ನು ಪಕ್ಕಾ ಮಾಡಿಕೊಂಡು ಸಿನಿಮಾ ಕಟ್ಟಿಕೊಟ್ಟಿದ್ದರೂ “ಕಿನಾರೆ’ ಒಂದು ಒಳ್ಳೆಯ ಸಿನಿಮಾವಾಗುತ್ತಿತ್ತು. ಆದರೆ, ನಿರ್ದೇಶಕರು ಎರಡನ್ನು ಒಟ್ಟೊಟ್ಟಿಗೆ ಸೇರಿಸುವ ಮನಸ್ಸು ಮಾಡಿದ್ದಾರೆ.

ಯಾವುದೇ ಕಥೆಯಾಗಲೀ, ಒಂದೇ ತೆರನಾಗಿ ಸಾಗಿದರೆ ಸಹಜವಾಗಿಯೇ ಪ್ರೇಕ್ಷಕರಿಗೆ ಬೋರ್‌ ಅನಿಸುತ್ತದೆ. ಆಗಾಗ ಮಗ್ಗುಲು ಬದಲಿಸುತ್ತಾ, ಪ್ರೇಕ್ಷಕರ ಕುತೂಹಲ ಹೆಚ್ಚಿಸುತ್ತಾ ಸಾಗಿದರೆ, ಸಿನಿಮಾಕ್ಕೊಂದು ವೇಗ ಸಿಗುತ್ತದೆ. ಆದರೆ, “ಕಿನಾರೆ’ ಮಾತ್ರ ಇದರಿಂದ ಮುಕ್ತ. ಹಾಗಂತ ಇಲ್ಲಿ ನಾವು ನಿರ್ದೇಶಕರ ಶ್ರಮವನ್ನು ತೆಗೆದುಹಾಕುವಂತಿಲ್ಲ. ಗಂಭೀರ ವಿಚಾರವನ್ನು ಗಂಭೀರವಾಗಿಯೇ ಹೇಳಬೇಕು ಎಂಬುದು ಅವರ ಆಶಯ.

ಆದರೆ, ಅದನ್ನು ತೆರೆಮೇಲೆ ಸಮರ್ಥವಾಗಿ ಕಟ್ಟಿಕೊಡುವಲ್ಲಿ ಎಡವಿದ್ದಾರೆ. ಮುಖ್ಯವಾಗಿ ಸಿನಿಮಾದ ಅವಧಿ ಕೂಡಾ ನಿಮ್ಮ ತಾಳ್ಮೆ ಪರೀಕ್ಷಿಸುತ್ತವೆ. ಚಿತ್ರದ ಅನೇಕ ದೃಶ್ಯಗಳಿಗೆ ಮುಲಾಜಿಯಿಲ್ಲದೇ ಕತ್ತರಿಹಾಕಬಹುದಿತ್ತು. ಎರಡು ವರ್ಷಗಳ ಕಾಲ ಮಕ್ಕಳಿಗೆ ಚಿಕಿತ್ಸೆ ನೀಡುವ ಸನ್ನಿವೇಶಗಳು, ಸುಖಾಸುಮ್ಮನೆ ಬರುವ ಬೀಚ್‌ ಸಾಂಗ್‌ ಎಲ್ಲವೂ ಸಿನಿಮಾದ ಅವಧಿಯನ್ನು ಹೆಚ್ಚುಗೊಳಿಸಿವೆಯೇ ಹೊರತು ಅದರಿಂದ ಸಿನಿಮಾಕ್ಕೇನೂ ಲಾಭವಾಗಿಲ್ಲ.

Advertisement

ಚಿತ್ರದಲ್ಲೊಂದು ಮುಗ್ಧವಾದ ಪ್ರೀತಿ ಇದೆ. ಆದರೆ, ಚಿತ್ರದಲ್ಲಿ ಬರುವ ಹಲವು ಸನ್ನಿವೇಶಗಳ ಮಧ್ಯೆ ಅದು ಕಳೆದು ಹೋಗಿದೆ. ಕಥೆ, ನಿರೂಪಣೆಯ ವಿಚಾರ ಬಿಟ್ಟು ಮಾತನಾಡುವುದಾದರೆ, ಚಿತ್ರವನ್ನು ಕಟ್ಟಿಕೊಟ್ಟ ಪರಿಸರ ಸೊಗಸಾಗಿದೆ. ಹಚ್ಚ ಹಸಿರಿನ ನಡುವೆ ಇಡೀ ಕಥೆ ನಡೆಯುತ್ತದೆ. ಆ ಹಸಿರು ಕಥೆಯಲ್ಲೂ ಇದ್ದಿದ್ದರೆ ನಿಜಕ್ಕೂ “ಹಸಿರು ಕ್ರಾಂತಿ’ಯಾಗುತ್ತಿತ್ತು. ಇನ್ನು, ಚಿತ್ರದ ಹಿನ್ನೆಲೆ ಸಂಗೀತ ಸಂಭಾಷಣೆಯನ್ನು ನುಂಗಿ ಹಾಕಿದೆ. 

ಚಿತ್ರದಲ್ಲಿ ನಟಿಸಿರುವ ಸತೀಶ್‌ ರಾಜ್‌ ಹಾಗೂ ಗೌತಮ್‌ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಲು ಪ್ರಯತ್ನಿಸಿದರೂ, ಕಲಾವಿದರಾಗಿ ತಮ್ಮ ಸಾಮರ್ಥ್ಯ ತೋರಿಸುವ ಅವಕಾಶ ಅವರಿಗಿಲ್ಲಿ ಸಿಕ್ಕಿಲ್ಲ. ಉಳಿದಂತೆ ವೀಣಾ ಸುಂದರ್‌, ಸಿಹಿಕಹಿ ಚಂದ್ರು, ಅಪೇಕ್ಷಾ, ಪ್ರಮೋದ್‌ ಶೆಟ್ಟಿ ಸೇರಿದಂತೆ ಇತರರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಚಿತ್ರದ ಎರಡು ಹಾಡು ಇಷ್ಟವಾಗುತ್ತದೆ. ಅಭಿಷೇಕ್‌ ಕಾಸರಗೋಡು, ಅಭಿರಾಮ್‌ ಅವರ ಛಾಯಾಗ್ರಹಣದಲ್ಲಿ ಕಿನಾರೆ ಸುಂದರ. ಕರಾವಳಿಯ ಸುಂದರ ತಾಣಗಳನ್ನು ಅಷ್ಟೇ ಸುಂದರವಾಗಿ ಅವರು ಕಟ್ಟಿಕೊಟ್ಟಿದ್ದಾರೆ.

ಚಿತ್ರ: ಕಿನಾರೆ
ನಿರ್ಮಾಣ: ರೆಡ್‌ ಆ್ಯಪಲ್‌ ಮೂವೀಸ್‌
ನಿರ್ದೇಶನ: ದೇವರಾಜ್‌ ಪೂಜಾರಿ
ತಾರಾಗಣ: ಸತೀಶ್‌ರಾಜ್‌, ಗೌತಮಿ, ವೀಣಾ ಸುಂದರ್‌, ಪ್ರಮೋದ್‌ ಶೆಟ್ಟಿ, ಅಪೇಕ್ಷಾ, ಸಿಹಿಕಹಿ ಚಂದ್ರು ಮತ್ತಿತರರು. 

 
* ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next