Advertisement

ಪ್ರೀತಿಯ ಪೋಸ್ಟ್‌ ಮಾರ್ಟಮ್‌! “3 ಘಂಟೆ 30 ದಿನ 30 ಸೆಕೆಂಡ್‌’

03:50 AM Jul 07, 2017 | Harsha Rao |

– ಹೀಗೊಂದು ಶೀರ್ಷಿಕೆ ಇಟ್ಟು ಮಾಡಿದ ಸಿನಿಮಾ ಈಗ ಬಿಡುಗಡೆ ಹಂತಕ್ಕೆ ಬಂದಿದೆ. ಪ್ರೀತಿ ಮುಖ್ಯನಾ, ಕೀರ್ತಿ ಮುಖ್ಯನಾ ಎಂಬ ವಿಷಯ ಇಟ್ಟುಕೊಂಡು ಮೊದಲ ಸಲ ನಿರ್ದೇಶನಕ್ಕಿಳಿದಿದ್ದಾರೆ ಮಧುಸೂದನ್‌. 
“3 ಘಂಟೆ ಆಟ ಆಡೋಕೆ ಬಂದು, 30 ದಿನ ಸಿಕ್ಕಿ ಹಾಕಿಕೊಂಡು 30 ಸೆಕೆಂಡ್‌ನ‌ಲ್ಲಿ ತಲೆ ಹೋಗುವಂತಹ ಸಂದರ್ಭ ಬಂದೊದಗಿದಾಗ ಏನೆಲ್ಲಾ ನಡೆದುಹೋಗುತ್ತೆ ಅನ್ನುವ ಕುತೂಹಲದ ಕಥೆ ಇಲ್ಲಿದೆ’ ಎನ್ನುವ ನಿರ್ದೇಶಕರು, “ಇಲ್ಲಿ ನವಿರಾದ ಪ್ರಮಕಾವ್ಯವಿದೆ. ಇದರೊಂದಿಗೆ ಚಿಂತನ, ಮಂಥನ, ಹಾಸ್ಯ, ಭಾವೋದ್ರೇಕ, ಆ್ಯಕ್ಷನ್‌ ಹಾಗೂ ಒಂದಷ್ಟು ಅನಿರೀಕ್ಷಿತ ತಿರುವುಗಳು ಸಿನಿಮಾದ ಹೈಲೈಟ್‌. ಒಬ್ಬ ಹುಡುಗಾಟದ ಹುಡುಗ, ಇನ್ನೊಬ್ಬ ಬುದ್ಧಿವಂತೆ ಹುಡುಗಿ ನಡುವೆ ನಡೆಯೋ ಒಂದು ಚಾಲೆಂಜ್‌, ಅವರಿಬ್ಬರ ಬದುಕಿನ ದಿಕ್ಕನ್ನೇ ಬದಲಿಸುತ್ತದೆ. ಅದೇ ಚಿತ್ರದ ಪ್ರಮುಖ ಭಾಗ ಎನ್ನುತ್ತಾರೆ ಮಧುಸೂದನ್‌.

Advertisement

ನಾಯಕ ಅರುಗೌಡ ಇಲ್ಲಿ ಒಬ್ಬ ಲಾಯರ್‌ ಆಗಿ ಕಾಣಿಸಿಕೊಂಡಿದ್ದಾರೆ. ಹಾಗಂತ ಪಕ್ಕಾ ವಾದ ಮಾಡೋ ಲಾಯರ್‌ ಅಲ್ಲ, ಒಂದಷ್ಟು ತಮಾಷೆ ಮಾಡಿಕೊಂಡು, ಹುಡುಗಾಟವಾಡುತ್ತಲೇ ಕಥೆಗೊಂದು ಟ್ವಿಸ್ಟ್‌ ಕೊಟ್ಟು, ತಾನೇ ಒಂದು ಸಮಸ್ಯೆಗೆ ಸಿಲುಕಿಕೊಳ್ಳುವ ಹುಡುಗನಂತೆ ಅವರು. ಅವರಿಗಿಲ್ಲಿ ನಿರ್ದೇಶಕರ ಅಚ್ಚುಕಟ್ಟುತನ, ಹೆಣೆದಿರುವ ಕಥೆ, ಪಾತ್ರ ಬಗ್ಗೆ ಖುಷಿ ಇದೆಯಂತೆ. ಇದು ಈಗಿನ ವಾಸ್ತವ ಅಂಶಗಳ ಸುತ್ತ ಸಾಗುವ ಸಿನಿಮಾ ಆಗಿರುವುದರಿಂದ ಎಲ್ಲಾ ವರ್ಗದವರೂ ನೋಡಬೇಕಾದ ಚಿತ್ರ ಅನ್ನುತ್ತಾರೆ ಅರುಗೌಡ.

“ಎಡಕಲ್ಲು ಗುಡ್ಡದ ಮೇಲೆ’ ಖ್ಯಾತಿಯ ಚಂದ್ರಶೇಖರ್‌ ಅವರಿಗೆ ಶೀರ್ಷಿಕೆ ಕೇಳಿದಾಗ, ವಿಭಿನ್ನ ಎನಿಸಿತಂತೆ. ಕಥೆ ಮತ್ತು ಪಾತ್ರ ಕೇಳಿದಾಗ ಇದರಲ್ಲಿ ಹೊಸದೇನೋ ಇದೆ ಅಂತೆನಿಸಿ, ಕೆಲಸ ಮಾಡಿದರಂತೆ. ಅವರಿಲ್ಲಿ ಒಂದು ಟಿವಿ ಚಾನೆಲ್‌ವೊಂದರ ಹೆಡ್‌ ಆಗಿ ಕಾಣಿಸಿಕೊಂಡಿದ್ದು, “ಒಂದು ಲವ್‌ಸ್ಟೋರಿಯನ್ನು ಹೊಸ ನಿರೂಪಣೆಯಲ್ಲಿ ಹೇಳಿರುವ ನಿರ್ದೇಶಕರ ಜಾಣ್ಮೆ ಮೆಚ್ಚಬೇಕು. ಉಳಿದಂತೆ, ಇಲ್ಲಿ ಎಲ್ಲವೂ ಫ್ರೆಶ್‌ ಆಗಿದೆ. ಹಾಡುಗಳು ಮನಮುಟ್ಟುವಂತಿವೆ.

ಅರುಗೌಡ ಒಳ್ಳೆಯ ಪ್ರತಿಭಾವಂತ ಹುಡುಗ. ಆತ ಒಳ್ಳೆಯ ನಟ ಆಗುವ ಸೂಚನೆಗಳಿವೆ. ಉಳಿದಂತೆ ಒಳ್ಳೇ ತಂಡದಲ್ಲಿ ಕೆಲಸ ಮಾಡಿದ್ದು ಖುಷಿಕೊಟ್ಟಿದೆ ಅಂತ ಹೇಳಿದ ಚಂದ್ರಶೇಖರ್‌, ಕನ್ನಡ ಚಿತ್ರರಂಗದಲ್ಲಿ ಒಳ್ಳೆಯ ಚಿತ್ರಗಳು ಬಂದರೂ, ಪ್ರೇಕ್ಷಕರನ್ನು ತಲುಪುತ್ತಿಲ್ಲ. ಅದಕ್ಕೆ ಸಿಗದ ಚಿತ್ರಮಂದಿರಗಳು. ಇಂದು ಚಿತ್ರಮಂದಿರಗಳ ಕೊರತೆಯಿಂದಾಗಿ, ಪ್ರತಿಭಾವಂತರ ಚಿತ್ರಗಳು ಪ್ರೇಕ್ಷಕನನ್ನು ತಲುಪಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಸಂಬಂಧಿಸಿದವರು ಚಿತ್ರಮಂದಿರದ ಕೊರತೆ ನೀಗಿಸಬೇಕು’ ಅಂದರು ಚಂದ್ರಶೇಖರ್‌.

ಸಂಗೀತ ನಿರ್ದೇಶಕ ಶ್ರೀಧರ್‌ ಸಂಭ್ರಮ್‌ ಇಲ್ಲಿ ಐದು ಹಾಡು ಕೊಟ್ಟಿದ್ದಾರಂತೆ. ಅವರು ಇದೇ ಮೊದಲ ಸಲ ಇಲ್ಲೊಂದು ಹಾಡಿಗೂ ದನಿಯಾಗಿದ್ದಾರೆ. ಜಯಂತ್‌ ಕಾಯ್ಕಿಣಿ ಹಾಗೂ ನಿರ್ದೇಶಕರು ಗೀತೆ ರಚಿಸಿದ್ದಾರೆ. ನಿರ್ದೇಶಕರು ನನಗೆ ಕಥೆ ಹೇಳಿದಂತೆಯೇ ಸಿನಿಮಾವನ್ನೂ ಮಾಡಿದ್ದಾರೆ. ಇಷ್ಟರಲ್ಲೇ ಆಡಿಯೋ ಸಿಡಿ ರಿಲೀಸ್‌ ಆಗಲಿದೆ ಅಂದರು ಶ್ರೀಧರ್‌.

Advertisement

ನಿರ್ಮಾಪಕ ಚಂದ್ರಶೇಖರ್‌ ಪದ್ಮಶಾಲಿ ಗೆಳೆಯರ ಜತೆಗೂಡಿ ಚಿತ್ರ ನಿರ್ಮಿಸಿದ್ದಾರೆ. ಅವರಿಗೂ ಈ ಚಿತ್ರ ಗೆಲುವು ಕೊಡುತ್ತೆ ಎಂಬ ವಿಶ್ವಾಸವಿದೆ. ಇಷ್ಟರಲ್ಲೇ ಒಂದು ರಿಯಾಲಿಟಿ ಶೋ ನಡೆಸಿ, ಆ ಮೂಲಕ ಚಿತ್ರದ ಪ್ರಚಾರಕ್ಕೆ ಚಾಲನೆ ಕೊಡುವ ಯೋಚನೆ ಇದೆ ಅಂದರು ಪದ್ಮಶಾಲಿ.

Advertisement

Udayavani is now on Telegram. Click here to join our channel and stay updated with the latest news.

Next