Advertisement
ಗುರುವ ಬಾಲ್ಯದಿಂದಲೇ ಅಂಧ. ಆದರೂ ಆತನ ಕೈ ಹಿಡಿದು ಮುನ್ನಡೆಸುತ್ತಿದ್ದಾಳೆ ಮನದನ್ನೆ ಐತೆ. ಆತನಿಗಾಗಿ ಸಂಪೂರ್ಣ ಜೀವನವನ್ನೇ ಮೀಸಲಿಟ್ಟಿದ್ದಾಳೆ ಈ ವೃದ್ಧೆ. ಗುರುವನಿಗೆ ಇನ್ನೊಬ್ಬರ ಸಹಾಯವಿಲ್ಲದೆ ನಡೆದಾಡಲೂ ಸಾಧ್ಯವಿಲ್ಲ. ಇಂತಹ ಸ್ಥಿತಿಯಲ್ಲಿ ಈಕೆ ಆತನ ಬಾಳಿಗೆ ಬೆಳಕಾಗಿದ್ದಾಳೆ. ಮನೆ ಇರಲಿ, ಹೊರಗೆ ಎಲ್ಲಿಗೇ ಹೊರಡಲಿ, ಒಬ್ಬರನ್ನೊಬ್ಬರು ಬಿಟ್ಟು ಹೋದ ಉದಾಹರಣೆಯೇ ಇಲ್ಲ! ಗುರುವನ ಕೈ ಹಿಡಿದುಕೊಂಡೇ ಆಕೆ ಸುದೀರ್ಘ ಅವಧಿಯ ಸಂಸಾರ ನಡೆಸಿದ್ದಾಳೆ.
ಕಣ್ಣು ಕಾಣದ ಗಂಡನಿಗೆ ಬೆಳಕು ನೀಡಿದ ದಿಟ್ಟ ಮಹಿಳೆ. ಸಂಸಾರ ನಡೆಸಲು ಹಣ, ಸಿರಿವಂತಿಕೆ ಅಲ್ಲ. ಪ್ರೀತಿಯೊಂದೇ ಸಾಕು ಎಂದು ತೋರಿಸಿಕೊಟ್ಟ ಈಕೆ ಅಂಧ ಗಂಡನಿಗೆ ಊರುಗೋಲಾಗಿ ಬದುಕುತ್ತಿರುವ ಆದರ್ಶ ಮಹಿಳೆ. ಕಡು ಬಡತನವಿದ್ದು, ಕೂಲಿ ಮಾಡಿ ಹೊಟ್ಟೆ ಹೊರೆಯುವ ಸ್ಥಿತಿ ಇದೆ. ಅಡಿಕೆ ಸುಲಿಯುವುದಕ್ಕೂ ಇಬ್ಬರೂ ಜತೆಯಾಗಿಯೇ ತೆರಳುತ್ತಾರೆ. ಕಣ್ಣು ಕಾಣದಿದ್ದರೂ ಗ್ರಹಿಸುವ ಶಕ್ತಿಯಿಂದ ಪತ್ನಿ ಸಹಾಯದಿಂದ ಲೀಲಾ ಜಾಲವಾಗಿ ಅಡಿಕೆ ಸುಲಿಯುತ್ತಾರೆ ಗುರುವ. ಪ್ರತಿದಿನ ಜತೆಯಲ್ಲೇ ಕಾಡಿಗೆ ತೆರಳಿ ಕಟ್ಟಿಗೆ ಸಂಗ್ರಹಿಸಿ 2 ಕಟ್ಟು ಮಾಡಿ ಇಬ್ಬರೂ ಭಾರವಾದ ಹೊರೆಯನ್ನು ಹೊತ್ತುಕೊಳ್ಳುತ್ತಾರೆ. ಐತೆ ತಲೆಯಲ್ಲಿರುವ ಹೊರೆಯನ್ನು ಒಂದು ಕೈಯಲ್ಲಿ ಹಿಡಿದುಕೊಂಡು ಇನ್ನೊಂದು ಕೈಯಲ್ಲಿ ಗಂಡ ಗುರುವನ ಕೈ ಹಿಡಿದು 4 ಕಿ.ಮೀ. ಕ್ರಮಿಸಿ ಗುತ್ತಿಗಾರಿನ ಪೇಟೆಗೆ ಬಂದು ಕಟ್ಟಿಗೆ ಮಾರುತ್ತಾರೆ. ಈಗ ಮುಪ್ಪು ಆವರಿಸಿದೆ. ದೇಹದಲ್ಲಿ ಶಕ್ತಿ ಇಲ್ಲ. ಹೀಗಾಗಿ, ಕಟ್ಟಿಗೆ ಸಂಗ್ರಹಿಸಿ ತಂದು ಮಾರಾಟ ಮಾಡಲೂ ಸಾಧ್ಯವಾಗುತ್ತಿಲ್ಲ. ಅನಿವಾರ್ಯವಾಗಿ ಸಣ್ಣಪುಟ್ಟ ಕೂಲಿ ಮಾಡಿ ಸ್ವಾವಲಂಬಿಯಾಗಿ ಬದುಕುತ್ತಿದ್ದಾರೆ ಗುರುವ – ಐತೆ ದಂಪತಿ.
Related Articles
Advertisement
ಮನೆ ದುರಸ್ತಿ ಮಾಡಿಸಿದ್ದೇವೆಗುರುವ-ಐತೆ ದಂಪತಿ ಮಗ ಮತ್ತು ಸೊಸೆ ಜತೆ ಜೀವನ ಸಾಗಿಸುತ್ತಿದ್ದಾರೆ. ಅವರ ವಾಸದ ಮನೆ ಶಿಥಿಲಾವಸ್ಥೆಗೆ ತಲುಪಿತ್ತು. ಅದನ್ನು ಗ್ರಾಮ ಪಂಚಾಯತ್ ಕಡೆಯಿಂದ ಒಂದು ಬಾರಿ ದುರಸ್ತಿಗೊಳಿಸಿ ನೀಡಿದ್ದೇವೆ. ದಂಪತಿಯ ಅನುಸರಿಸಿ ಬದುಕುವ ಜೀವನ ಶೈಲಿಯೇ ಮಾದರಿ ಎನ್ನುವುದರಲ್ಲಿ ಸಂಶಯವಿಲ್ಲ.
– ಅಚ್ಯುತ ಗುತ್ತಿಗಾರು, ಗ್ರಾ.ಪಂ. ಅಧ್ಯಕ್ಷ, ಗುತ್ತಿಗಾರು ಬಾಲಕೃಷ್ಣ ಭೀಮಗುಳಿ