Advertisement

ಜಿಂಕೆಯ ಮೇಲೆ ಆಸೆ ರಾವಣನಿಗಿತ್ತು ದುರಾಸೆ!

09:23 AM Jul 31, 2019 | Lakshmi GovindaRaj |

ರಾಮಾಯಣ ಕಾಲಕ್ಕೆ ಹೋದರೆ, ಅಲ್ಲಿ ಜನರನ್ನು ಬೇರೆ ಬೇರೆ ರೀತಿ ವಿಂಗಡಿಸಬಹುದು.ಸನ್ಮಾರ್ಗಿಗಳು- ದುರ್ಮಾರ್ಗಿಗಳು, ನಯವಂಚಕರು- ಸತ್ಯಸಂಧರು, ರಾಕ್ಷಸರು- ಮನುಷ್ಯರು…ಹೀಗೆ. ಈ ರಾಕ್ಷಸ ವರ್ಗದಲ್ಲಿ ಒಂದು ವಿಶೇಷ ಶಕ್ತಿ ಕಾಣುತ್ತದೆ. ಅದನ್ನು ಶಕ್ತಿ ಎನ್ನುವುದಕ್ಕಿಂತ ವಂಚಕ ವಿದ್ಯೆ ಎಂದರೆ ಸರಿಯಾಗುತ್ತದೆ. ಒಬ್ಬೊಬ್ಬ ರಾಕ್ಷಸನಲ್ಲೂ ಒಂದೊಂದು ರೀತಿ ಮೋಸ ಮಾಡುವ ಶಕ್ತಿ. ಈ ಮೋಸಗಾರರ ಪೈಕಿ ಮಹಾ ಮೋಸಗಾರ ರಾವಣ! ಈ ರಾಕ್ಷಸ ರಾಜ ಎದುರಾಳಿಯನ್ನು ಹಣಿಯುವುದಕ್ಕೆ ನೂರಾ ಎಂಟು ವಂಚಕ ತಂತ್ರಗಳನ್ನು ಬಳಸುತ್ತಾನೆ.

Advertisement

ಸೀತೆಯನ್ನು ಅಪಹರಿಸಿದ್ದೂ ಈ ವಂಚನೆಯ ಮೂಲಕವೇ. ಇಲ್ಲಿ ಪ್ರೇಮದ ಅದ್ಭುತ ಮುಖವೊಂದು ಅನಾವರಣಗೊಳ್ಳುತ್ತದೆ. ಪ್ರೇಮವೆಂದರೆ ಭ್ರಮೆಯಲ್ಲ, ಅದು ಭ್ರಮೆಯಾದರೆ ಏನು ಸಂಭವಿಸುತ್ತದೆ ಎಂಬುದಕ್ಕೆ ಈ ಘಟನೆ ಸಾಕ್ಷಿ. ದಂಡಕಾರಣ್ಯದಲ್ಲಿರುವ ಶ್ರೀರಾಮ-ಲಕ್ಷ್ಮಣರನ್ನು ಮೋಹಿಸಿದ ರಾವಣ ಸೋದರಿ ಶೂರ್ಪನಖೀ, ಲಕ್ಷ್ಮಣನ ಖಡ್ಗದ ಹೊಡೆತಕ್ಕೆ ತನ್ನ ಕಿವಿ-ಮೂಗನ್ನು ಕಳೆದುಕೊಂಡು ವಿಕಾರಗೊಳ್ಳುತ್ತಾಳೆ. ತಂಗಿಗಾದ ದುರ್ಗತಿ ನೋಡಿ ರಾವಣ ಸೀತೆಯನ್ನು ಅಪಹರಿಸಲು ತೀರ್ಮಾನಿಸುತ್ತಾನೆ. ಆದರೆ, ನೇರಾನೇರವಾಗಿ ಇದು ಸಂಭವಿಸುವುದು ಸಾಧ್ಯವೇ ಇಲ್ಲವೆಂದು ಅವನಿಗೆ ಗೊತ್ತಿರುತ್ತದೆ.

ಆಗ ಅವನು ಮೋಸ ಮಾಡಲು ತೀರ್ಮಾನಿಸುತ್ತಾನೆ. ಇದಕ್ಕೆ ಸೂಕ್ತ ವ್ಯಕ್ತಿ ಮಾಯಾವಿದ್ಯೆ ಬಲ್ಲ ಮಾರೀಚ. ಮಾರೀಚನಿಗಾದರೋ, ರಾಮನ ಬಾಣದ ಪರಿಚಯ ಚೆನ್ನಾಗಿರುತ್ತದೆ. ಅವನು ಪರಿಪರಿಯಾಗಿ ರಾವಣನಿಗೆ ತಿಳಿ ಹೇಳುತ್ತಾನೆ. ರಾವಣನ ಬಾಣದ ಏಟನ್ನು ನೆನೆದರೆ ನನಗೆ ಗಾಬರಿಯಾಗುತ್ತದೆ, ಅವನನ್ನು ಎದುರು ಹಾಕಿಕೊಳ್ಳುವುದೂ ಒಂದೇ, ಸಾವನ್ನು ಎದುರು ಹಾಕಿಕೊಳ್ಳುವುದೂ ಒಂದೇ ಎಂದು ವಿವರಿಸುತ್ತಾನೆ. ತಂಗಿಯ ಮೇಲಿನ “ಪ್ರೇಮದಿಂದ’ ಉನ್ಮತ್ತನಾಗಿದ್ದ ರಾವಣನಿಗೆ ಇದು ಒಪ್ಪಿಗೆಯಾಗುವುದಿಲ್ಲ. ರಾಮನನ್ನು ಎದುರು ಹಾಕಿಕೊಂಡರೂ ಸಾವು, ರಾವಣನ ಮಾತು ಕೇಳಿದಿದ್ದರೂ ಸಾವು. ಅನಿವಾರ್ಯವಾಗಿ ಮಾರೀಚ ಸಮ್ಮತಿಸುತ್ತಾನೆ.

ದಂಡಕಾರಣ್ಯದಲ್ಲಿದ್ದ ಪಂಚವಟಿಯಲ್ಲಿನ ರಾಮಾಶ್ರಮದ ಮುಂದೆ ಮಾರೀಚ ಅತ್ಯಂತ ಸುಂದರ ಜಿಂಕೆಯಂತೆ ಸುಳಿದಾಡುತ್ತಾನೆ. ಅದನ್ನು ನೋಡಿ ತನಗೆ ಆ ಜಿಂಕೆ ಬೇಕೆಂದು ಸೀತೆ ಹಠ ಹಿಡಿಯುತ್ತಾಳೆ. ಇದು ಪಕ್ಕಾ ಮೋಸ ಎಂದು ರಾಮ-ಲಕ್ಷ್ಮಣರಿಬ್ಬರಿಗೂ ಗೊತ್ತಿರುತ್ತದೆ. ಸೀತೆಯ ದುಃಖವನ್ನು ನೋಡಲಾಗದೆ ರಾಮ ಜಿಂಕೆಯ ಹಿಂದೆ ಬೀಳುತ್ತಾನೆ. ಬಹಳ ಆಟವಾಡಿಸಿದ ಮಾರೀಚ, ಕಡೆಗೂ ರಾಮನ ಬಾಣದ ಏಟಿಗೆ ಬಲಿಯಾಗುತ್ತಾನೆ. ಸಾಯುವ ವೇಳೆ ಮಾರೀಚ, ರಾಮನ ಧ್ವನಿಯಲ್ಲಿ ಸೀತಾ-ಲಕ್ಷ್ಮಣ ಎಂದು ಎದೆ ಕರಗುವಂತೆ ಕೂಗುತ್ತಾನೆ.

ಇದು ಸೀತೆಗೆ ಕೇಳಿದ್ದೇ ತಡ, ಆಕೆ ತಳಮಳಗೊಳ್ಳುತ್ತಾಳೆ, ತಲ್ಲಣಗೊಳ್ಳುತ್ತಾಳೆ. ಲಕ್ಷ್ಮಣನನ್ನು ಕೂಡಲೇ ಹೋಗುವಂತೆ ಒತ್ತಾಯಿಸುತ್ತಾಳೆ. ಜಿಂಕೆ ನೋಡಿಯೇ ಅನುಮಾನದಲ್ಲಿದ್ದ ಲಕ್ಷ್ಮಣ, ಈ ಕೂಗಿನ ಹಿಂದಿರುವುದು ಮೋಸ, ನೀನು ಚಿಂತೆ ಮಾಡಬೇಡ ಎಂದು ಸಮಾಧಾನಿಸುತ್ತಾನೆ. ಇಲ್ಲಿ ಸೀತೆಯ ಮೋಹ, ಭ್ರಮೆ, ಪ್ರೀತಿ ಎಲ್ಲವೂ ಕೆಲಸ ಮಾಡುತ್ತದೆ. ಅದೇ ರಾವಣನ ಉದ್ದೇಶವೂ ಆಗಿರುತ್ತದೆ. ಹೇಳಿದ ಕೂಡಲೇ ತೆರಳಲು ನಿರಾಕರಿಸಿದ ಲಕ್ಷ್ಮಣನನ್ನು ಹ್ಯಾಗೆ ಬೈಯುತ್ತಾಳೆ ಎಂದರೆ, “ನಿನಗೆ ನನ್ನ ಮೇಲೆ ಮೊದಲಿಂದಲೂ ಒಂದು ಕಣ್ಣಿತ್ತು,

Advertisement

ಆದ್ದರಿಂದಲೇ ರಾಮ ಸಾಯುತ್ತಿದ್ದರೂ ನೀನು ಹೋಗುತ್ತಿಲ್ಲ, ಈಗ ಸದವಕಾಶವನ್ನು ಬಳಸಿಕೊಳ್ಳಲು ಹವಣಿಸುತ್ತಿದ್ದೀಯ’ ಎಂದು ಚುಚ್ಚುತ್ತಾಳೆ. ಸೀತೆಗೆ ಜಿಂಕೆಯ ಮೇಲಿನ ಪ್ರೀತಿ, ಭ್ರಮೆಯ ಪರಾಕಾಷ್ಠೆಗೆ ತಲುಪಿದೆ ಎಂದು ಲಕ್ಷ್ಮಣನಿಗೂ ಅರ್ಥವಾಗುತ್ತದೆ. ಇನ್ನು ಹೇಳಿ ಪ್ರಯೋಜನವಿಲ್ಲವೆಂದು ಎದ್ದು ಹೊರಡುತ್ತಾನೆ. ರಾವಣನ ಉದ್ದೇಶ ಈಡೇರುತ್ತದೆ. ಇಲ್ಲಿ ಮೂರು ಸಂಗತಿಗಳನ್ನು ಗುರ್ತಿಸಬಹುದು. ರಾಮನ ಮೇಲೆ ಶೂರ್ಪನಖೀಗೆ ಉಂಟಾದ ಕಾಮ, ಜಿಂಕೆಯ ಮೇಲೆ ಸೀತೆಗೆ ಉಂಟಾದ ಆಸೆ, ಸೀತೆಯ ಬಗ್ಗೆ ರಾವಣನಲ್ಲಿ ಹುಟ್ಟಿಕೊಂಡ ದುರಾಸೆ…ಇಡೀ ರಾಮಾಯಣದ ದಿಕ್ಕನ್ನೇ ಬದಲಿಸುತ್ತವೆ.

* ನಿರೂಪ

Advertisement

Udayavani is now on Telegram. Click here to join our channel and stay updated with the latest news.

Next