“ಏನೂ ಮಾಡಿರಲ್ಲ ಎಂದುಕೊಂಡು ಜನ “ಲವ್ ಮಾಕ್ಟೇಲ್’ ನೋಡೋಕೆ ಬಂದ್ರು. ಆ ಸಿನಿಮಾ ಹಿಟ್ ಆಯಿತು. ಆದರೆ, ಈಗ ಏನೋ ಮಾಡಿರ್ತಾರೆ ಎಂಬ ನಿರೀಕ್ಷೆಯೊಂದಿಗೆ ಬರುತ್ತಾರೆ. ಸಹಜವಾಗಿಯೇ ಎಕ್ಸೆ„ಟ್ ಆಗಿದ್ದೇನೆ…’ – ನಟ, ನಿರ್ದೇಶಕ ಕೃಷ್ಣ ಹೀಗೆ ಹೇಳಿ ಪಕ್ಕದಲ್ಲಿದ್ದ ಮಿಲನಾ ಅವರ ಮುಖ ನೋಡಿದರು. ಅವರ ಮುಖದಲ್ಲೂ ಅದೇ ಎಕ್ಸೆ„ಟ್‌ಮೆಂಟ್ ಎದ್ದು ಕಾಣುತ್ತಿತ್ತು. ಕೃಷ್ಣ ಹೀಗೆ ಹೇಳಲು ಕಾರಣ “ಲವ್ ಮಾಕ್ಟೇಲ್-2′.
“ಲವ್ ಮಾಕ್ಟೇಲ್’ ಹಿಟ್ ಆದ ಬಳಿಕ ಅದೇ ತಂಡದೊಂದಿಗೆ ಮಿಲನಾ ಹಾಗೂ ಕೃಷ್ಣ “ಲವ್ ಮಾಕ್ಟೇಲ್-2 ಮಾಡಿದ್ದಾರೆ. ಈಗ ಆ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಮೊದಲ ಹಂತವಾಗಿ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ.
ಈ ಹಿನ್ನೆಲೆಯಲ್ಲಿ ಮಾತನಾಡಿದ ಕೃಷ್ಣ, “ಈ ಸಿನಿಮಾಕ್ಕೂ ನಾವು ತುಂಬಾ ಶ್ರಮ ಹಾಕಿದ್ದೇವೆ. ಹಾಗೆ ನೋಡಿದರೆ ಮೊದಲ ಭಾಗದ ಬಗ್ಗೆ ಜನರಿಗೆ ನಿರೀಕ್ಷೆ ಇರಲಿಲ್ಲ. ಆದರೆ, ಈಗ “ಲವ್ ಮಾಕ್ಟೇಲ್-2′ ಬಗ್ಗೆ ನಿರೀಕ್ಷೆ ಹೆಚ್ಚಿದೆ. ಈ ಸಿನಿಮಾದಲ್ಲೂ ಫನ್ ಅಂಶಗಳಿವೆ. ನಿಧಿಮಾ ನಿಧನದ ನಂತರ ಆದಿ ಲೈಫ್, ಮದುವೆಯಾಗುತ್ತಾನಾ ಎಂಬ ಕುತೂಹಲ, ಫ್ರೆಂಡ್ಸ್… ಹೀಗೆ ಹಲವು ಅಂಶಗಳೊಂದಿಗೆ ಸಾಗುತ್ತದೆ. ಲಡಾಕ್ ಹಾಗೂ ಕರ್ನಾಟಕದ ಸುಂದರ ತಾಣಗಳಲ್ಲಿ ಚಿತ್ರೀಕರಣ ಮಾಡಿದ್ದೇವೆ’ ಎಂದರು.
ಚಿತ್ರದ ನಿರ್ಮಾಪಕರ ಸ್ಥಾನದಲ್ಲಿರುವ ಮಿಲನಾ, ಸಿನಿಮಾದ ಜೊತೆಗೆ ನಿರ್ದೇಶಕರಾಗಿ ಕೃಷ್ಣ ಸಿಕ್ಕಾಪಟ್ಟೆ ಸ್ಟ್ರಿಕ್ಟ್ ಎಂಬುದನ್ನು ಹಲವು ಉದಾಹರಣೆಗಳನ್ನು ನೀಡುವ ಮೂಲಕ ಸಾಬೀತು ಮಾಡಿದರು.
“ಲವ್ ಮಾಕ್ಟೇಲ್-2′ ಚಿತ್ರದಲ್ಲಿ ಮಲಯಾಳಿ ಬೆಡಗಿ ರಚೆಲ್ ನಾಯಕಿಯಾಗಿ ನಟಿಸಿದ್ದಾರೆ. ಇದು ಅವರ ಚೊಚ್ಚಲ ಕನ್ನಡ ಸಿನಿಮಾ. ಮೊದಲ ಚಿತ್ರದ ಅನುಭವ ಹಂಚಿಕೊಂಡರು. ಉಳಿದಂತೆ ಅಮೃತಾ ಅಯ್ಯಂಗಾರ್, ರಚನಾ, ಸುಶ್ಮಿತಾ ನಟಿಸಿದ್ದು, ತಮ್ಮ ಅನುಭವ ಹಂಚಿಕೊಂಡರು.
ಇದನ್ನೂ ಓದಿ:‘ಓಲ್ಡ್ ಮಾಂಕ್’ ನ್ಯೂ ಕಮಾಲ್: ಪ್ರಮೋಶನ್ ನಲ್ಲಿ ಚಿತ್ರ ತಂಡ ಬಿಝಿ
ಚಿತ್ರಕ್ಕೆ ನಕುಲ್ ಅಭಯಂಕರ್ ಸಂಗೀತ ನೀಡಿದ್ದು, ರಾಘವೇಂದ್ರ ಕಾಮತ್ ಅವರ ಸಾಹಿತ್ಯವಿದೆ. ಕ್ರೇಜಿಮೈಂಡ್ ಶ್ರೀ ಸಂಕಲನ ಹಾಗೂ ಛಾಯಾಗ್ರಹಣ ಚಿತ್ರಕ್ಕಿದೆ. ಚಿತ್ರ ಫೆ.11 ರಂದು ತೆರೆಕಾಣಲಿದೆ.