ಬೆಂಗಳೂರು: ಪ್ರೀತಿಯ ವಿಚಾರಕ್ಕೆ ಸಹೋದರನೇ ತಂಗಿಯನ್ನು ಹತ್ಯೆಗೈದು ಮೃತದೇಹವನ್ನು ರೈಲ್ವೆ ಹಳಿ ಮೇಲೆ ಎಸೆದು ಆತ್ಮಹತ್ಯೆ ಎಂದು ಬಿಂಬಿಸಲು ಯತ್ನಿಸಿರುವ ಘಟನೆ ಬೈಯಪ್ಪನಹಳ್ಳಿ ರೈಲ್ವೆ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ರಾತ್ರಿ ನಡೆದಿದೆ.
ಹೆಣ್ಣೂರು ನಿವಾಸಿ ಮಂಗಳ ರವಿ (19) ಕೊಲೆಯಾದ ಯುವತಿ. ಈ ಸಂಬಂಧ ಆಕೆಯ ಸಹೋದರ ಕಿರಣ್ (25)ನನ್ನು ಬಂಧಿಸಲಾಗಿದೆ. ಹತ್ಯೆ ಮಾಡಿದ ಬಳಿಕ ಆರೋಪಿ ಮೃತ ದೇಹವನ್ನು ರೈಲ್ವೆ ಹಳಿ ಮೇಲೆ ಹಾಕಿ ಆತ್ಮಹತ್ಯೆ ಎಂದು ಬಿಂಬಿಸಲು ಯತ್ನಿಸಿದ್ದಾನೆ. ಪ್ರಾಥಮಿಕ ತನಿಖೆಯಲ್ಲಿ ಪ್ರೀತಿಯ ವಿಚಾರಕ್ಕೆ ಹತ್ಯೆ ನಡೆದಿದೆ ಎಂದು ಹೇಳಲಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.
ಮೃತ ಮಂಗಳ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ತಾಯಿ ಹಾಗೂ ಆರೋಪಿ ಸಹೋದರನ ಜತೆ ಹೆಣ್ಣೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಆರೋಪಿ ಕಿರಣ್ ಆಟೋ ಚಾಲಕನಾಗಿದ್ದಾನೆ. ಮಂಗಳ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದಳು. ಈ ವಿಚಾರ ತಿಳಿದು ಕಿರಣ್ ಹಾಗೂ ಆಕೆಯ ತಾಯಿ ಮಂಗಳಗೆ ಬುದ್ಧಿ ಹೇಳಿ ಎಚ್ಚರಿಕೆ ನೀಡಿದ್ದರು.
ಭಾನುವಾರವೂ ಮನೆಯಿಂದ ಹೊರಗಡೆ ಹೋಗಿದ್ದ ಮಂಗಳ ಪ್ರಿಯಕರ ಜತೆ ಸುತ್ತಾಡಿ ರಾತ್ರಿ ಮನೆಗೆ ಬಂದಿದ್ದಾರೆ. ಕಿರಣ್, ಮನೆಗೆ ಬಂದು ಸಹೋದರಿಯನ್ನು ಪ್ರಶ್ನಿಸಿದ್ದಾನೆ. ಈ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಆಕ್ರೋಶಗೊಂಡ ಆರೋಪಿ, ಚಾಕುವಿನಿಂದ ಆಕೆಯ ಹೊಟ್ಟೆಗೆ ಇರಿದಿದ್ದಾನೆ. ಬಳಿಕ ಮೃತದೇಹವನ್ನು ಆಟೋದಲ್ಲಿ ಕೊಂಡೊಯ್ದು ಬೈಯಪ್ಪನಹಳ್ಳಿ ರೈಲ್ವೆ ಹಳಿ ಮೇಲೆ ಎಸೆದಿದ್ದಾನೆ.
ಸೋಮವಾರ ಬೆಳಗ್ಗೆ ರೈಲ್ವೆ ಹಳಿ ಪಕ್ಕದಲ್ಲಿರುವಅಪಾರ್ಟ್‌ಮೆಂಟ್ ಹಾಗೂ ಸ್ಥಳೀಯ ನಿವಾಸಿಗಳು ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಬಂದ ರೈಲ್ವೆ ಪೊಲೀಸರು ಮೃತದೇಹದ ಮೇಲೆ ಆಗಿರುವ ಗಾಯದ ಗುರುತುಗಳು ಗಮನಿಸಿದಾಗ ಹಲವು ಅನುಮಾನಮೂಡಿದೆ. ಬಳಿಕ ಸಮೀಪದ ಎಲ್ಲ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಯುವತಿ ಓಡಾಡಿರುವ ದೃಶ್ಯ ಸೆರೆಯಾಗಿರಲಿಲ್ಲ. ಆದರೆ, ಆಟೋ ಹೋಗಿರುವುದು ಪತ್ತೆಯಾಗಿತ್ತು.
ಬಳಿಕ ಆಟೋ ನಂಬರ್ ಆಧರಿಸಿ ಆರೋಪಿಯನ್ನು ವಶಕ್ಕೆ ಪಡೆದು ತೀವ್ರ ರೀತಿಯಲ್ಲಿ ವಿಚಾರಣೆ ನಡೆಸಿ ದಾಗ ಸತ್ಯಾಂಶ ಬಾಯಿಬಿಟ್ಟಿದ್ದಾನೆ ಎಂದು ಪೊಲೀಸರು ಹೇಳಿದರು.