ಅದು ಚಿಕ್ಕ ವೇದಿಕೆ. ಅದನ್ನು ಆವರಿಸಿದ್ದ ಜನ. ವೇದಿಕೆ ಮುಂಭಾಗ, ಅಕ್ಕ-ಪಕ್ಕವೂ ಜನಜಂಗಳಿ. ಅಲ್ಲಲ್ಲಿ ಮಾತುಕತೆ, ಹಾಡುಗಳ ಚಿತ್ತಾರ, ಆಗಾಗ ಚಪ್ಪಾಳೆ, ಶಿಳ್ಳೆಗಳ ಝೇಂಕಾರ… ಇದು ಕಂಡು ಬಂದದ್ದು “ಪ್ರೀತಿಯ ರಾಯಭಾರಿ’ ಚಿತ್ರದ ಪ್ರೋಮೋ ಹಾಗೂ ವೀಡಿಯೋ ಹಾಡು ಬಿಡುಗಡೆ ಸಂದರ್ಭ. ಅಂದು ನಾಯಕ ನಕುಲ್ ಬರ್ತ್‌ಡೇ. ಆ ಹಿನ್ನೆಲೆಯಲ್ಲಿ ನಿರ್ದೇಶಕ ಮುತ್ತು ಚಿತ್ರದ ಪ್ರೋಮೋ ರಿಲೀಸ್ ಮಾಡುವ ಕಾರ್ಯಕ್ರಮ ಇಟ್ಟುಕೊಂಡಿದ್ದರು.
ಒಂದು ಕಡೆ ಚಿತ್ರತಂಡ, ಇನ್ನೊಂದು ಕಡೆ ಸಾಲು ಸಾಲು ರಾಜಕಾರಣಿಗಳು, ಮತ್ತೂಂದು ಕಡೆ ಕುಟುಂಬದ ಸದಸ್ಯರು, ಗೆಳೆಯರು ಹೀಗೆ ಎಲ್ಲರೂ ತುಂಬಿಕೊಂಡಿದ್ದರಿಂದ ಅಲ್ಲಿ ಸಿನಿಮಾ ಮಾತುಗಳಿಗಿಂತ, ಥ್ಯಾಂಕ್ಸ್ ಮತ್ತು ಶುಭಾಶಯಕ್ಕಷ್ಟೇ ಆ ಕಾರ್ಯಕ್ರಮ ಮೀಸಲಾಗಿತ್ತು. ಮೊದಲಿಗೆ ಮೂರು ಹಾಡುಗಳನ್ನು ತೋರಿಸಲಾಯಿತು. ಆ ಬಳಿಕ ಒಂದು ಪ್ರೋಮೋ ಬಿಡುಗಡೆ ಮಾಡಲಾಯಿತು. ಅಷ್ಟೊತ್ತಿಗೆ ವೇದಿಕೆ ಮೇಲೊಂದು ದೊಡ್ಡ ಕೇಕ್ ಇಡಲಾಯಿತು.
ನಕುಲ್ ಕಟ್ ಮಾಡುತ್ತಿದ್ದಂತೆಯೇ, ನಿರೂಪಣೆ ವಹಿಸಿಕೊಂಡಿದ್ದ ಪಿಆರ್‌ಓ ನಾಗೇಂದ್ರ “ಹ್ಯಾಪಿ ಬರ್ತ್‌ಡೇ ಟು ಯು …’ ಅಂತ ಹಾಡಿ ಆ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರುಗು ನೀಡಿದರು. ನಿರ್ದೇಶಕ ಮುತ್ತು ಮೈಕ್ ಹಿಡಿದು ಮಾತಿಗಿಳಿದರು. ” ಒಂದು ಪ್ರೀತಿ ಕುರಿತ ಸಿನಿಮಾ ಮಾಡುವ ಯೋಚನೆ ಇತ್ತು. “ದೃಶ್ಯ’ ಸಿನಿಮಾದಲ್ಲಿ ಕೆಲಸ ಮಾಡಿದಾಗ, ಕ್ರೈಮ್ ಇಟ್ಟುಕೊಂಡು ಮಾಡುವ ಯೋಚನೆ ಬಂತು.
ಅದಕ್ಕೊಂದು ಲವ್‌ಸ್ಟೋರಿ ಬೆರೆಸಿ, ಕುಟುಂಬ ಹಿನ್ನೆಲೆಯ ಚಿತ್ರ ಮಾಡಲು ಯೋಚಿಸುತ್ತಿರುವಾಗ, ಆರು ವರ್ಷದ ಹಿಂದೆ ನಂದಿಬೆಟ್ಟದಲ್ಲಿ ಒಂದು ಕ್ರೈಮ್ ನಡೆದಿತ್ತು. ಟಿವಿ, ಪತ್ರಿಕೆಯಲ್ಲಿ ಆ ಸುದ್ದಿ ಬಂದಾಗ, ಅದನ್ನೇ ಇಟ್ಟು ಸಿನಿಮಾ ಮಾಡಬಹುದು ಅನಿಸಿತು. ಅದೇ ಕಥೆ ಈಗ ಸಿನಿಮಾ ಆಗಿದೆ. ಇಲ್ಲಿ ಕ್ರೈಮ್ ಇದ್ದರೂ, ಕಾಮಿಡಿ ಜತೆಯಲ್ಲೇ ಸಾಗುತ್ತೆ. ಹೊಸಬಗೆಯ ಮೇಕಿಂಗ್ ಸಿನಿಮಾದಲ್ಲಿರಲಿದೆ. ಜುಲೈನಲ್ಲಿ ಚಿತ್ರ ಬಿಡುಗಡೆ ಮಾಡಲು ತಯಾರಿ ನಡೆಯುತ್ತಿದೆ ಎಂದರು ಮುತ್ತು.
ನಾಯಕ ನಕುಲ್ ಗೌಡ ಬರ್ತ್‌ಡೇ ಕೇಕ್ ಕತ್ತರಿಸಿ, ಖುಷಿಯಲ್ಲಿ ದ್ದರು.”ಈಗಾಗಲೇ ಹಾಡುಗಳಿಗೆ ಮೆಚ್ಚುಗೆ ಸಿಕ್ಕಿದೆ. ಸಿನಿಮಾಗೂ ಸಿಗುವ ನಂಬಿಕೆ ಇದೆ’ ಎಂದರು ನಕುಲ್. ನಾಯಕಿ ಸುಕೃತಾ ದೇಶಪಾಂಡೆಗೆ ಕನ್ನಡದಲ್ಲಿ ಇದು ಮೊದಲ ಸೋಲೋ ನಾಯಕಿ ಸಿನಿಮಾವಂತೆ. ಅವರಿಲ್ಲಿ ಪಕ್ಕದ್ಮನೆ ಹುಡುಗಿಯಂತಹ ಪಾತ್ರ ಮಾಡಿದ್ದಾರಂತೆ. ಯಾವುದೇ ವಲ್ಗರಿಟಿ ಇರದಂತಹ ಸಿನಿಮಾ ಇದು. ಒಂದು ಎಮೋಷನಲ್ ಜತೆಗೊಂದು ಒಳ್ಳೆಯ ಸಂದೇಶ ಇಲ್ಲಿದೆ ಅನ್ನುತ್ತಾರೆ ಸುಕೃತಾ.
ನಿರ್ಮಾಪಕ ವೆಂಕಟೇಶ್, ಅಂದು 1965ರ ಫ್ಲ್ಯಾಶ್‌ಬ್ಯಾಕ್ ಸ್ಟೋರಿ ಹೇಳಿಕೊಂಡರು. “ನಮ್ಮನೆಯಲ್ಲಿ ಆಗ ಹುಲ್ಲು ಕೊಯ್ದು, ಎತ್ತುಗಳನ್ನು ಆಚೆ ಕಟ್ಟಿಹಾಕಿ, ಇಸ್ಕೂಲ್‌ಗೆ ಹೋಗಬೇಕಿತ್ತು. ಅಂತಹ ಪರಿಸರದಲ್ಲಿ ಬೆಳೆದವನು ನಾನು. ನನ್ನ ಮಗ ಎಂಜಿನಿಯರ್ ಆಗಬೇಕು, ಇಲ್ಲವೇ ನನ್ನಂತೆ ರಾಜಕೀಯಕ್ಕೆ ಬರಬೇಕು ಅಂದುಕೊಂಡೆ. ಆದರೆ, ಅವನಿಗೆ ಸಿನಿಮಾ ಆಸಕ್ತಿ ಇತ್ತು. ನನ್ನ ಪತ್ನಿ ವಜ್ರಮುನಿ ಅಣ್ಣನ ಮಗಳು. ಹಾಗಾಗಿ ಆ ಕಲೆ ಇವನಲ್ಲೂ ಬಂದುಬಿಟ್ಟಿದೆ. ಕಥೆ ಹಳ್ಳಿಯ ನೈಜತೆ ತೋರಿಸುವಂತಿದೆ. ಮಗನನ್ನು ಹರಸಿ ಬೆಳೆಸಿ’ ಅಂದರು ವೆಂಕಟೇಶ್.
ಅಂದು ಶುಭಕೋರಲು ಮಲ್ಲೇಶ್ವರಂ ಜೆಡಿಎಸ್ ಅಧ್ಯಕ್ಷ ಅಶೋಕ್‌ಕುಮಾರ್, ಜೆಡಿಎಸ್ ಮುಖಂಡರಾದ ಶಿವರಾಂ, ನವೀನ್ ಸೇರಿದಂತೆ ಹಲವರು ಇದ್ದರು.