ಬೆಂಗಳೂರು: ಕೈನಲ್ಲಿ ಗ್ರಿಟಿಂಗ್ ಕಾರ್ಡ್, ಕೆಂಪುಗುಲಾಬಿ, ಕಣ್ಣಲ್ಲಿ ಪ್ರೇಮದ ಅಲೆ, ಸ್ವತ್ಛಂದ ವಿಹಾರ, ಪರಸ್ಪರ ಅಪ್ಪುಗೆಯ ಚುಂಬನ.. ಇದು ಸೋಮವಾರ ರಾಜಧಾನಿ ಬೆಂಗಳೂರಿನಲ್ಲಿ ಪ್ರೇಮಿಗಳು ತಮ್ಮ ಪ್ರೇಮ ನಿವೇದನೆ ಮಾಡಿಕೊಂಡ ಪರಿ.
ನಗರದ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಕಮರ್ಷಿಯಲ್ ಸ್ಟ್ರೀಟ್, ಮಲ್ಲೇಶ್ವರಂ, ರಿಚ್‌ಮಂಡ್ ವೃತ್ತದ ರಸ್ತೆಯಲ್ಲಿನ ಮಾಲ್, ಚಿತ್ರಮಂದಿರ ಹಾಗೂ ಪ್ರಮುಖ ಪಾರ್ಕ್, ಹೋಟೆಲ್‌ಗಳಲ್ಲಿ ತಮ್ಮ ಪ್ರೇಮಿಗಳನ್ನು ಭೇಟಿ ಮಾಡಿದ ಯುವಕ ಯುವತಿಯರು, ಕೆಂಪು ಗುಲಾಬಿ, ಗಿಫ್ಟ್ ನೀಡುವ ಮೂಲಕ ಪ್ರೇಮಿಗಳ ದಿನಾಚರಣೆ ಆಚರಿಸಿದರು.
ಇನ್ನೂ ಅಂತರ್ ಧರ್ಮಿಯ ವಿವಾಹಿತರು, ಅಂತರ್ಜಾತಿ ವಿವಾಹಿತರು ಚಿತ್ರಕಲಾ ಪರಿಷತ್‌ನಲ್ಲಿ ಸಂತೋಷ ಕೂಟ ಏರ್ಪಡಿಸಿ ಪ್ರೇಮಿಗಳ ದಿನಾಚರಣೆ ಆಚರಿಸಿದರೆ, ಜಯಮಹಲ್ ರಸ್ತೆಯಲ್ಲಿನ ಮರಗಳ ಮೇಲೆ ಮರಗಳನ್ನು ಉಳಿಸಿ ಎಂಬ ಘೋಷಣೆ ಬರೆದು ಕೆಲ ಪ್ರೇಮಿಗಳು ಪರಿಸರ ಕಾಳಜಿ ವ್ಯಕ್ತಪಡಿಸಿದ್ದು ಕಂಡು ಬಂತು.
ನಗರ ಮಾಲ್, ಚಿತ್ರಮಂದಿರ, ಹೋಟೆಲ್‌ಗಳು ಮಂಗಳವಾರ ಬೆಳಗ್ಗೆಯಿಂದಲೇ ತುಂಬಿ ತುಳುಕುತ್ತಿದ್ದವು. ಲಾಲಾಬಾಗ್, ಕಬ್ಬನ್‌ಪಾರ್ಕ್ ನಗರದ ಪ್ರಮುಖ ಪಾರ್ಕ್‌ಗಳಲ್ಲಿ ಪ್ರೇಮಿಗಳು ಗುಲಾಬಿ ಬಣ್ಣದ ಉಡುಪು ತೊಟ್ಟು ಸ್ವತ್ಛಂದದಿಂದ ವಿಹಾರದಲ್ಲಿ ತೊಡಗಿದ್ದರು.
ಗುಲಾಬಿಗೆ 50 ರೂ: ಪ್ರೇಮಿಗಳ ದಿನಾಚರಣೆ ಹಿನ್ನೆಲೆ ಗುಲಾಬಿಯೊಂದರ ಬೆಲೆ 50 ರೂ.ಗೆ ಏರಿಕೆ ಕಂಡಿತ್ತು. ಲಾಲಾಬಾಗ್‌ನ ಮುಖ್ಯದ್ವಾರದಲ್ಲಿ 50 ರೂ.ಗೆ ಒಂದು ಗುಲಾಬಿಯನ್ನು ಮಾರಾಟ ಮಾಡಲಾಗುತ್ತಿತ್ತು. ಇನ್ನೂ ಗಿಫ್ಟ್ ಸೆಂಟರ್, ಶಾಪಿಂಗ್ ಮಾಲ್, ಐಸ್‌ಕ್ರೀಂ ಪಾರ್ಲರ್, ಚಿತ್ರಮಂದಿರಗಳಲ್ಲಿ ಯುವ ಜೋಡಿಗಳು ತುಂಬಿ ತುಳುಕುತ್ತಿದ್ದರು.
ಕೆಂಪಾ ಕೆಂಪಿಗೆ ಮದುವೆ ಮಾಡಿದ ವಾಟಾಳ್ : ವಿಶ್ವಪ್ರೇಮಿಗಳ ದಿನಾಚರಣೆ ಅಂಗವಾಗಿ ಕಬ್ಬನ್ ಉದ್ಯಾನವನದಲ್ಲಿ ಕನ್ನಡ ಚಳವಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ವಧು-ವರರಂತೆ ಅಲಂಕೃತಗೊಂಡಿದ್ದ 2 ಕತ್ತೆಗಳಿಗೆ ವಿವಾಹಮಾಡಿಸುವ ಮೂಲಕ ವಿನೂತನವಾಗಿ ಪ್ರೇಮಿಗಳ ದಿನ ಆಚರಿಸಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ವಾಟಾಳ್, ಯುವ ಪ್ರೇಮಿಗಳಿಗೆ ರಕ್ಷಣೆ ದೊರಕಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಂತಹ ಒಂದು ಕಾನೂನು ರಚಿಸಬೇಕೆಂದು ಆಗ್ರಹಿಸಿದರು.