ನಟ ವಸಿಷ್ಠ ಸಿಂಹ ಈಗ ನಿರೀಕ್ಷೆಯೊಂದಿಗೆ ಎದುರು ನೋಡುತ್ತಿದ್ದಾರೆ. ಆ ನಿರೀಕ್ಷೆಯೇ “ಲವ್ ಲೀ’. ಇದು ವಸಿಷ್ಠ ಸಿಂಹ ನಟನೆಯ ಸಿನಿಮಾ. ಇಂದು ತೆರೆಕಾಣುತ್ತಿದೆ. ಈಗಾಗಲೇ ಟ್ರೇಲರ್, ಹಾಡುಗಳ ಮೂಲಕ ಸದ್ದು ಮಾಡಿರುವ ಈ ಚಿತ್ರವಿದು.
ತಮ್ಮ ಚಿತ್ರದ ಬಗ್ಗೆ ಮಾತನಾಡುವ ವಸಿಷ್ಠ, ಹೊಸಥರದ ಸಿನಿಮಾ ಮಾಡಬೇಕು ಎಂಬ ಕನಸನ್ನು ಇಟ್ಟುಕೊಂಡು ಬಹುತೇಕ ಹೊಸಬರೇ ಸೇರಿಕೊಂಡು ಮಾಡಿರುವ ಸಿನಿಮಾವಿದು. ರೌಡಿಸಂ, ಲವ್, ಆ್ಯಕ್ಷನ್, ಸೆಂಟಿಮೆಂಟ್ ಎಲ್ಲವೂ ಈ ಸಿನಿಮಾದ ಕಥೆಯಲ್ಲಿದೆ. ತುಂಬ ಚೆನ್ನಾಗಿ ಸಿನಿಮಾ ಮೂಡಿಬರುತ್ತಿದ್ದು, ಕನ್ನಡ ಪ್ರೇಕ್ಷಕರಿಗೆ ಇಷ್ಟವಾಗಲಿದೆ. ಸಿನಿಮಾದ ಟೈಟಲ್ಲೇ ಹೇಳುವಂತೆ, ಸಿನಿಮಾ ಕೂಡ “ಲವ್ ಲೀ’ ಆಗಿಯೇ ಬಂದಿದೆ. ಹಲವು ಭಾವನೆಗಳನ್ನು ತೋರಿಸುವಂತಹ ಅವಕಾಶ ಈ ಪಾತ್ರದಲ್ಲಿದೆ’ ಎನ್ನುವುದು ನಾಯಕ ವಸಿಷ್ಠ ಮಾತು.
“ಅಭುವನಸ ಕ್ರಿಯೇಶನ್ಸ್’ ಬ್ಯಾನರಿನಲ್ಲಿ ರವೀಂದ್ರ ಕುಮಾರ್ ಬಂಡವಾಳ ಹೂಡಿ ನಿರ್ಮಿಸುತ್ತಿರುವ “ಲವ್ ಲಿ’ ಸಿನಿಮಾಕ್ಕೆ ಯುವ ಪ್ರತಿಭೆ ಚೇತನ್ ಕೇಶವ್ ನಿರ್ದೇಶನ ಮಾಡುತ್ತಿದ್ದಾರೆ. ನಿರ್ದೇಶಕ ಚೇತನ್ ಕೇಶವ್ ಹೇಳುವಂತೆ, “ಲವ್ ಲೀ ಐದಾರು ಜಾನರ್‌ಗಳು ಸೇರಿಕೊಂಡಿರುವ ಸಿನಿಮಾ. ವಸಿಷ್ಠ ಅವರ ಕೆರಿಯರ್‌ನಲ್ಲೇ ವಿಭಿನ್ನ ಸಿನಿಮಾವಾಗಲಿದೆ ಎಂಬ ವಿಶ್ವಾಸ ಅವರದು.
ನಾಯಕಿ ಸ್ಟೆಫಿ ಪಟೇಲ್ ಕೂಡಾ ತಮ್ಮ ಚೊಚ್ಚಲ ಸಿನಿಮಾ ಮೇಲೆ ನಿರೀಕ್ಷೆ ಇಟ್ಟಿದ್ದಾರೆ. “ಇದು ಕನ್ನಡದಲ್ಲಿ ನನಗೆ ಮೊದಲ ಸಿನಿಮಾ. ತುಂಬಾ ವೃತ್ತಿಪರ ತಂಡದ ಜೊತೆ ಕೆಲಸ ಮಾಡಿದ ಅನುಭವ ಈ ಸಿನಿಮಾದಲ್ಲಿ ಸಿಕ್ಕಿದೆ. ಸಾಮಾನ್ಯವಾಗಿ ಹುಡುಗರು ಪ್ರೀತಿಸುವಂತೆ ಹುಡುಗಿಯರ ಹಿಂದೆ ಬೀಳುತ್ತಾರೆ. ಆದರೆ ಈ ಸಿನಿಮಾದಲ್ಲಿ ನನ್ನನ್ನು ಪ್ರೀತಿಸುವಂತೆ ಹುಡುಗನ ಹಿಂದೆ ಬೀಳುತ್ತೇನೆ. ಅದು ಹೇಗೆ ಎನ್ನುವುದನ್ನು ಸಿನಿಮಾದಲ್ಲೇ ನೋಡಬೇಕು. ಮೊದಲ ಕನ್ನಡ ಸಿನಿಮಾದ ಮೇಲೆ ಸಾಕಷ್ಟು ನಿರೀಕ್ಷೆ ಇದೆ’ ಎನ್ನುತ್ತಾರೆ.
ಈ ಚಿತ್ರಕ್ಕಾಗಿ ಮಲ್ಪೆಯ ಪಡುಕೆರೆ ಬೀಚ್‌ನಲ್ಲಿ ಸೆಟ್‌ವೊಂದನ್ನು ಹಾಕಿದ್ದು, ಇದು ಸಿನಿಮಾದ ಹೈಲೈಟ್ ಎನ್ನುವುದು ತಂಡದ ಮಾತು. ಚಿತ್ರದಲ್ಲಿ ಅಚ್ಯುತ್ ಕುಮಾರ್, ದತ್ತಣ್ಣ, ಸಮೀಕ್ಷಾ, ಮಾಳವಿಕಾ ಮೊದಲಾದವರು “ಲವ್ ಲಿ’ ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ಅಶ್ವಿನ್ ಕೆನಡಿ ಛಾಯಾಗ್ರಹಣ, ಹರೀಶ್ ಕೊಮ್ಮೆ ಸಂಕಲನವಿದೆ. ಚಿತ್ರದ ಹಾಡುಗಳಿಗೆ ಅನೂಪ್ ಸೀಳಿನ್ ಸಂಗೀತ ಸಂಯೋಜಿಸಿದ್ದು, ಕೆ. ಕಲ್ಯಾಣ್ ಸಾಹಿತ್ಯವಿದೆ.