Advertisement

ಕೊಡಬೇಕಿದ್ದ ಪ್ರೇಮ ಪತ್ರ ಅಲ್ಲೆಲ್ಲೋ ಬಿದ್ದುಹೋಗಿತ್ತು…

09:10 PM Sep 22, 2020 | Suhan S |

ಆ ಘಟನೆಯನ್ನು ನೆನಪು ಮಾಡಿಕೊಂಡರೆ, ಚಳಿಯಲ್ಲೂ ಮೈ ಬೆವರುತ್ತದೆ. ಅದೇ ಸಂದರ್ಭದಲ್ಲಿ ಒಂದಷ್ಟು ಖುಷಿಯೂ ಆಗುತ್ತದೆ. ಕಾರಣ, ನಮ್ಮ ನಮ್ಮ ಮಿತಿಗಳ ಅರಿವಿದ್ದೂ ಅವಳನ್ನು ಕುರಿತುಕನಸು ಕಂಡಿದ್ದು! ಅವಳು ಮಾತಾಡುವುದಿಲ್ಲ ಎಂದು ಗೊತ್ತಿದ್ದರೂ, ಹೇಗಾದರೂ ಮಾಡಿ ಮಾತಾಡಿಸಬೇಕು ಎಂದು ಆಸೆಪಟ್ಟಿದ್ದು ನೆನಪಾಗುತ್ತದೆ.

Advertisement

ಎಲ್ಲಿಯ ಅವಳು, ಎಲ್ಲಿಯ ನಾನು? ಶ್ರೀಮಂತರ ಮನೆಯ  ಒಬ್ಬಳೇ ಮಗಳು ಅವಳು. ರೂಪುವಂತೆ ಬೇರೆ. ನನ್ನ ವಾರಿಗೆಯ ಹಲವರು, ನಮ್ಮ ಸೀನಿಯರ್‌ಗಳಾಗಿದ್ದ ಕೆಲವರು ಅವಳ ಹಿಂದೆ ಬಿದ್ದಿದ್ದರು. ಆದರೆ, ಅವಳಿಗೆ ಪ್ರೀತಿಯ ವಿಷಯವನ್ನು ಹೇಳಲು ಯಾರೂ ಮನಸ್ಸು ಮಾಡಿರಲಿಲ್ಲ. ನನಗೋ ಎಂಥದೋ ಹುಚ್ಚು ಧೈರ್ಯ. ಸಾಲದ್ದಕ್ಕೆ ಕವನಗಳನ್ನು ಬರೆಯುತ್ತಿದ್ದೆ. ಅದನ್ನವಳು ಮೆಚ್ಚಿಕೊಂಡಿದ್ದಳು. ಅದೇ ನನಗೆ ಪ್ಲಸ್‌ ಪಾಯಿಂಟ್‌ ಆಗಿತ್ತು. ನನ್ನ ಅವಸರದ ಮಾತುಕೇಳಿ, ಅವಳೇನಾದರೂ ಮಾತು ಬಿಟ್ಟರೆ ಎಂಬ ಅನುಮಾನವೊಂದು ಹೀಗೆ ಬಂದು ಹಾಗೆ ಮಾಯವಾಯಿತು. ಅಂಥದೇನೂ ಆಗುವುದಿಲ್ಲ ಎಂದು ನನಗೆ ನಾನೇ ಹೇಳಿಕೊಂಡು, ನನ್ನ ಪ್ರೇಮದ ಪರಿಯನ್ನು ಅವಳಿಗೆ ದಾಟಿಸಲು ನಿರ್ಧರಿಸಿಯೇಬಿಟ್ಟೆ.

ಮಳೆಗಾಲದ ಅದೊಂದು ಬೆಳಗು, ಹಳೆಯಕೊಡೆ ಹಿಡಿದುಕೊಂಡು ಶಾಲೆಗೆ ಹೋಗುತ್ತಿದ್ದೆ. ಮಳೆ ಒಂದೇ ಸಮನೆ ಸುರಿಯುತಲಿತ್ತು.ಕೊಡೆ ಹಿಡಿದಿದ್ದರೂ, ಅರ್ಧ ಮೈ ಒದ್ದೆಯಾಗಿತ್ತು. ನನಗದರ ಪರಿವೆ ಇರಲಿಲ್ಲ. ರಾತ್ರಿ ಇಡೀ ನಿದ್ದೆಗೆಟ್ಟು ಅವಳಿಗೊಂದು ಪತ್ರ ಬರೆದಿದ್ದೆ. ಅದನ್ನು ಅವಳಿಗೆ ಓದಿ ಹೇಳುವ ಆತುರ ನನಗಿತ್ತು. ಎದುರು ಸಿಕ್ಕಾಗ, ಅವತ್ತು ಅವಳೇನು ಮಾತಾಡಿದಳು, ನಾನೇನು ಮಾತಾಡಿದೆ ಒಂದೂ ನೆನಪಿಲ್ಲ. ಅವಳಿಗೆ ಪತ್ರ ದಾಟಿಸುವ ತಂತ್ರದ ಭಾಗವಾಗಿ ನನ್ನೊಳಗೆ ನೂರಾರು ಯೋಜನೆಗಳಿದ್ದವು. ಆದರೆ ಅವನ್ನು ಕಾರ್ಯರೂಪಕ್ಕೆ ತರಲು ಮನಸ್ಸು ಹೆದರುತ್ತಿತ್ತು. ಶಾಲೆ ಮುಗಿದರೂ ಮಳೆನಿಲ್ಲಲಿಲ್ಲ.ಕೊಡೆ ಬಿಚ್ಚಿ ಇಬ್ಬರೂ ಮನೆಯ ಹಾದಿ ಹಿಡಿದೆವು. ನಾನವತ್ತು ಮಳೆಗೆ ಒದ್ದೆಯಾಗಿದ್ದೆನೊ ಅಥವಾ ಭಯದಿಂದ ಒದ್ದೆಯಾಗಿದ್ದೆನೊ ಗೊತ್ತಾಗಲಿಲ್ಲ. ಹೇಗಿದ್ದರೂ ಈಗ ಜೊತೆಯಾಗಿ ನಡೆಯುತ್ತಿದ್ದೇವೆ.

ಈ ಸಂದರ್ಭದಲ್ಲಿಯೇ ಧೈರ್ಯ ಮಾಡಿ ಅವಳಿಗೆ ಪತ್ರವನ್ನುಕೊಡುವುದು ಒಳ್ಳೆಯದು ಎಂದು ಒಳಮನಸ್ಸು ಪಿಸುಗುಟ್ಟಿತು. ಹತ್ತು ಬಾರಿ ಯೋಚಿಸಿ, ಆಗಿದ್ದಾಗಲಿ ಎಂಬ ನಿರ್ಧಾರಕ್ಕೆ ಬಂದು, ಉದ್ವೇಗದಿಂದ ಹೊಡೆದುಕೊಳ್ಳುತ್ತಿದ್ದ ಎದೆಬಡಿತವನ್ನುಕಂಟ್ರೋಲ್‌ಗೆ ತಂದುಕೊಂಡು, ಅವಳಿಗೆ ಆ ಪತ್ರವನ್ನುಕೊಟ್ಟುಬಿಡುವುದೇ ಸರಿಯೆಂದು ಬ್ಯಾಗಿಗೆ ಕೈ ಹಾಕಿದರೆ, ಪತ್ರಕೈಗೆ ಸಿಗಲಿಲ್ಲ. ತೂತಾಗಿದ್ದ ಬ್ಯಾಗ್‌ನಿಂದ ಅದು ದಾರಿ ಮಧ್ಯದಲ್ಲೆಲ್ಲೋ ಬಿದ್ದು ಬಹಳ ಸಮಯವಾಗಿತ್ತು…

 

Advertisement

ಕುಮಾರ ಸೀಟಿ

Advertisement

Udayavani is now on Telegram. Click here to join our channel and stay updated with the latest news.

Next