ಹೊಸದಿಲ್ಲಿ: ಪ್ರೀತಿ ಮಾಯೆ, ಪ್ರೀತಿ ಬದನೇಕಾಯಿ ಅಂತ ಏನೇನೋ ಹೇಳಿದ್ದಾಗಿದೆ. ಅದನ್ನು ಎಷ್ಟು ಜನ ನಂಬಿದ್ದಾರೋ ಇಲ್ಲವೋ ಗೊತ್ತಿಲ್ಲ. ಆದರೆ ಈಗ ಪ್ರೀತಿ ಭಯೋತ್ಪಾದನೆಗಿಂತಲೂ ಭಯಾನಕ ಎಂಬ ಅಂಶ ಬೆಳಕಿಗೆ ಬಂದಿದೆ. ಅದನ್ನು ಅಂಕಿ-ಅಂಶಗಳೂ ದೃಢಪಡಿಸಿವೆ. ಹೀಗಾಗಿ ಪ್ರೀತಿ ಬಗೆಗಿನ ಈ ‘ಉಗ್ರವಾದ’ವನ್ನು ನಂಬಲೇಬೇಕು. ಈ ಬಗ್ಗೆ ಆಂಗ್ಲ ದೈನಿಕವೊಂದು ವರದಿ ಮಾಡಿದೆ.
ಭಾರತದಲ್ಲಿ ಭಯೋತ್ಪಾದಕ ದಾಳಿಗಳಲ್ಲಿ ಅಸುನೀಗುವವರಿಗಿಂತಲೂ ಪ್ರೀತಿಯ ಕಾರಣಕ್ಕೆ ಪ್ರಾಣ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚು ಎಂದು ಸರಕಾರಿ ದಾಖಲೆಗಳೇ ದೃಢಪಡಿಸಿವೆ. 2001ರಿಂದ 2015ರ ನಡುವೆ ಭಾರತದಲ್ಲಿ ನಡೆದ ಭಯೋ ತ್ಪಾದಕ ದಾಳಿ ವೇಳೆ ಸಾರ್ವಜನಿಕರು, ರಕ್ಷಣಾ ಸಿಬಂದಿ ಸೇರಿ 20,000 ಮಂದಿ ಬಲಿಯಾಗಿದ್ದಾರೆ. ಇದೇ ವೇಳೆ ಪ್ರೀತಿ, ಪ್ರೇಮದ ವಿಚಾರದಲ್ಲಿ ಸುಮಾರು 38,585 ಮಂದಿಯನ್ನು ಹತ್ಯೆಗೈಯಲಾಗಿದೆ. ಅಷ್ಟೇ ಅಲ್ಲ, 15 ವರ್ಷಗಳ ಅವಧಿಯಲ್ಲಿ 79,189 ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿದ್ದು, ಸುಮಾರು 2.6 ಲಕ್ಷ ಅಪಹರಣ ಪ್ರಕರಣಗಳು ದಾಖಲಾಗಿವೆ.
ದೇಶದಲ್ಲಿ ಪ್ರೀತಿಯ ಸಂಬಂಧ ದಿನವೊಂದಕ್ಕೆ ಏಳು ಕೊಲೆಗಳು, 14 ಆತ್ಮಹತ್ಯೆಗಳು ಹಾಗೂ 47 ಅಪಹರಣ ಪ್ರಕರಣಗಳು ದಾಖಲಾಗುತ್ತವೆ. ಆಂಧ್ರಪ್ರದೇಶ, ಉತ್ತರಪ್ರದೇಶ, ಮಹಾರಾಷ್ಟ್ರ, ತಮಿಳುನಾಡು ಮತ್ತು ಮಧ್ಯಪ್ರದೇಶ ರಾಜ್ಯಗಳು ಈ ರೀತಿಯ ‘ಭಯಾನಕ ಪ್ರೇಮ ಪ್ರಕರಣ’ಗಳಿಗೆ ಹೆಚ್ಚಾಗಿ ನೆಲೆ ಒದಗಿಸಿರುವ ಅಪಕೀರ್ತಿಗೆ ಗುರಿಯಾಗಿವೆ. ಈ ರಾಜ್ಯಗಳಲ್ಲಿ ಪ್ರೀತಿ, ಪ್ರೇಮದ ಹಿನ್ನೆಲೆಯಲ್ಲಿ ತಲಾ 3,000ಕ್ಕೂ ಹೆಚ್ಚು ಪ್ರೇಮಿಗಳ ಕೊಲೆ, ಆತ್ಮಹತ್ಯೆಗಳು ಸಂಭವಿಸಿದ್ದು, ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯಗಳಲ್ಲಿ ಈ ರೀತಿಯ ಪ್ರಕರಣಗಳ ಸಂಖ್ಯೆ ಹೆಚ್ಚಿರುವುದು ಕಂಡುಬಂದಿದೆ. ಮೋಸಹೋದ ಪ್ರೇಮಿ ವ್ಯಗ್ರನಾಗುವುದು, ಬೇಸರಗೊಂಡ ಪ್ರೇಮಿಗಳು ಪ್ರಾಣ ಕಳೆದುಕೊಳ್ಳುವುದು, ಜಾತಿ ಮತ್ತು ವರ್ಗದ ಅಲಿಖೀತ ನಿಯಮಗಳಿಗೆ ವಿರುದ್ಧವಾಗಿ ಪ್ರೇಮ ಸಂಬಂಧ ಹೊಂದಿದವರನ್ನು ಕೊಲೆ ಮಾಡುವ ಮೂಲಕ ‘ಶಿಕ್ಷಿಸುವುದು’ ಸಹಿತ ಹಲವು ವಿಧಗಳಲ್ಲಿ ಪ್ರೇಮಿಗಳ ಪ್ರಾಣ ಪಕ್ಷಿ ಹಾರಿಹೋಗುತ್ತಿದೆ.
ಪ್ರೇಮಿಗಳ ಆತ್ಮಹತ್ಯೆ ಪಟ್ಟಿಯಲ್ಲಿ ಪಶ್ಚಿಮ ಬಂಗಾಳ ಮುಂಚೂಣಿಯಲ್ಲಿದ್ದು 15 ಸಾವಿರ ಮಂದಿ ಸಾವಿಗೀಡಾಗಿದ್ದರೆ, ದ್ವಿತೀಯ ಸ್ಥಾನದಲ್ಲಿರುವ ತಮಿಳುನಾಡಿನಲ್ಲಿ 9,405 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಅಸ್ಸಾಂ, ಆಂಧ್ರಪ್ರದೇಶ, ಒಡಿಶಾ, ಮಧ್ಯಪ್ರದೇಶಗಳಲ್ಲಿ ತಲಾ 5 ಸಾವಿರಕ್ಕೂ ಹೆಚ್ಚು ಪ್ರೇಮಿಗಳು ಸಮಾಜಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡವರಲ್ಲಿ ಪುರುಷರಿಗಿಂತ ಮಹಿಳೆಯರ ಸಂಖ್ಯೆಯೇ ಹೆಚ್ಚು.
ಕಳೆದ 15 ವರ್ಷಗಳ ಅಂಕಿ – ಅಂಶ
20,000: ಭಯೋತ್ಪಾದಕ ದಾಳಿಗೆ ಮೃತಪಟ್ಟವರು
38,585: ಪ್ರೀತಿ ವಿಚಾರದಲ್ಲಿ ಹತ್ಯೆಯಾದವರ ಸಂಖ್ಯೆ
79,189: ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು
2.6 ಲಕ್ಷ: ದಾಖಲಾಗಿರುವ ಅಪಹರಣ ಪ್ರಕರಣಗಳು
15,000: ಪಶ್ಚಿಮ ಬಂಗಾಲದಲ್ಲಿನ ಸಾವು
9,405: ತಮಿಳುನಾಡಿನ ಸಾವಿನ ಸಂಖ್ಯೆ