Advertisement

ಲವ್‌ ಜೆಹಾದ್‌ ಸತ್ಯ ಹೊರ ಬರಲಿ

07:39 AM Aug 18, 2017 | |

ಲವ್‌ ಜೆಹಾದ್‌ಗೆ ಧಾರ್ಮಿಕ, ರಾಜಕೀಯ ಆಯಾಮದ ಜತೆಗೆ ಇದೀಗ ಭಯೋತ್ಪಾದನೆಯ ಆಯಾಮವೂ ಸೇರಿಕೊಂಡಿದೆ. 

Advertisement

ಕಳೆದೆರಡು ದಶಕಗಳಲ್ಲಿ ಆಗಾಗ ಧಾರ್ಮಿಕ ಸಂಘರ್ಷಗಳಿಗೆ ಎಡೆಮಾಡಿಕೊಡುತ್ತಿದ್ದ ಲವ್‌ ಜೆಹಾದ್‌ ವಿವಾದವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೊಪ್ಪಿಸುವ ಮೂಲಕ ಸುಪ್ರೀಂ ಕೋರ್ಟ್‌ ಕಡೆಗೂ ಜಟಿಲ ಮತ್ತು ಸೂಕ್ಷ್ಮ ವಿವಾದವೊಂದರ ಹಿಂದಿರುವ ಸತ್ಯ ಏನೆಂದು ತಿಳಿಯುವ ಪ್ರಯತ್ನ ಮಾಡಿದೆ. ಕೇರಳದ ನಿವೃತ್ತ ಸೇನಾಧಿಕಾರಿಯೊಬ್ಬರ ಪುತ್ರಿಯನ್ನು ಹಿಂದಿನ ವರ್ಷ ಶಫಿನ್‌ ಜಹಾನ್‌ ಎಂಬ ಯುವಕ ಮತಾಂತರಿಸಿ ಮದುವೆಯಾಗಿರುವ ಪ್ರಕರಣವನ್ನು ಎನ್‌ಐಎ ತನಿಖೆಗೊಪ್ಪಿಸಲು ಸುಪ್ರೀಂ ಕೋರ್ಟ್‌ ಆದೇಶಿಸಿದೆ. ತನ್ನ ಮಗಳನ್ನು ಅಪಹರಿಸಿ ಬಲವಂತವಾಗಿ ಮತಾಂತರಿಸಿ ಮದುವೆ ಮಾಡಿಕೊಳ್ಳಲಾಗಿದೆ, ಮಗಳನ್ನು ಐಸಿಸ್‌ ಉಗ್ರ ಸಂಘಟನೆಗೆ ಸೇರಿಸುವ ಸಂಚು ಇದರ ಹಿಂದೆ ಇದೆ ಎಂದು ಸೇನಾಧಿಕಾರಿ ದೂರು ನೀಡಿದ್ದರು. ಕೇರಳ ಹೈಕೋರ್ಟ್‌ ಈ ದೂರನ್ನು ಗಂಭೀರವಾಗಿ ಪರಿಗಣಿಸಿ ಮದುವೆಯನ್ನೇ ಅಸಿಂಧುಗೊಳಿಸಿದೆ. ಶಫಿನ್‌ ಜಹಾನ್‌ ಈ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟಿನ ಮೆಟ್ಟಿಲೇರಿದ್ದು, ಇದೀಗ ಸರ್ವೋಚ್ಚ ನ್ಯಾಯಾಲಯ ಸಮಗ್ರ ತನಿಖೆಗೆ ಆದೇಶಿಸುವುದರೊಂದಿಗೆ ಲವ್‌ ಜೆಹಾದ್‌ ಹಿಂದಿರುವ ರಹಸ್ಯ ಬಯಲಾಗಬಹುದೆಂಬ ನಿರೀಕ್ಷೆಯಿದೆ. ಅನ್ಯ ಧರ್ಮಗಳ ಯುವತಿಯರನ್ನು ಪ್ರೀತಿಸುವ ನಾಟಕವಾಡಿ ಮತಾಂತರಿಸಿ ಮದುವೆಯಾಗುವುದು ಎನ್ನಲಾದ ಲವ್‌ ಜೆಹಾದ್‌ ಎಂಬ ಪಿಡುಗು ಪ್ರಾರಂಭವಾಗಿರುವುದೇ ಕೇರಳದಲ್ಲಿ. ಅನಂತರ ಇದು ಕರ್ನಾಟಕ, ಉತ್ತರ ಪ್ರದೇಶ, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಿಗೆ ವ್ಯಾಪಿಸಿದೆ ಎನ್ನಲಾಗುತ್ತಿದೆ. 

ಲವ್‌ ಜೆಹಾದ್‌ಗೆ ಧಾರ್ಮಿಕ, ರಾಜಕೀಯ ಆಯಾಮದ ಜತೆಗೆ ಇದೀಗ ಭಯೋತ್ಪಾದನೆಯ ಆಯಾಮವೂ ಸೇರಿಕೊಂಡಿದೆ. ಹಿಂದಿನ ವರ್ಷ ಕೇರಳದ ಕಾಸರಗೋಡು ಮತ್ತು ಪಾಲಕ್ಕಾಡ್‌ ಜಿಲ್ಲೆಯಿಂದ ಐಸಿಸ್‌ ಉಗ್ರ ಸಂಘಟನೆ ಸೇರಲು ಹೋದ 21 ಮಂದಿಯಲ್ಲಿ ಹಲವು ಯುವಕ ಮತ್ತು ಯುವತಿಯರು ಮತಾಂತರಗೊಂಡವರಾಗಿದ್ದರು. ಐಸಿಸ್‌ ಉಗ್ರರನ್ನಾಗಿ ಪರಿವರ್ತಿಸುವ ಸಲುವಾಗಿಯೇ ಅವರನ್ನು ಪ್ರೀತಿಸುವ ನಾಟಕವಾಡಿ, ಮತಾಂತರಿಸಿ ಬ್ರೈನ್‌ವಾಶ್‌ ಮಾಡಲಾಗಿದೆ ಎನ್ನುವ ಆರೋಪವಿದೆ. ನ್ಯಾಯಾಲಯ ಲವ್‌ ಜೆಹಾದ್‌ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲು ಇದೂ ಒಂದು ಪ್ರಮುಖ ಕಾರಣ. ಲವ್‌ ಜೆಹಾದ್‌ ಎಂಬುದು ಕಪೋಲಕಲ್ಪಿತ, ಸಂಘ ಪರಿವಾರ ಮತ್ತು ಬಿಜೆಪಿಯ ಅಪಪ್ರಚಾರ. ಎನ್ನುವುದು ಇದಕ್ಕೆ ವಿರುದ್ಧವಾಗಿ ಮಂಡನೆಯಾಗುತ್ತಿರುವ ವಾದ. ಇದೇ ವೇಳೆ, ಲವ್‌ ಜೆಹಾದ್‌ಗಾಗಿ ಹಲವು ಸಂಘಟನೆಗಳು ಹಣದ ನೆರವು ನೀಡುತ್ತಿವೆ. ಒಂದು ಧರ್ಮದ ಜನಸಂಖ್ಯೆ ಹೆಚ್ಚಿಸಿಕೊಳ್ಳುವುದರ ಜತೆಗೆ ಉಳಿದ ಧರ್ಮಗಳ ಧಾರ್ಮಿಕ ಮತ್ತು ನೈತಿಕ ನೆಲೆಗಟ್ಟು ಕುಸಿಯುವಂತೆ ಮಾಡುವ ದುರುದ್ದೇಶ ಇದರಲ್ಲಿದೆ ಎನ್ನುವುದು ವಿರೋಧಿಸುವವರ ವಾದ.  

ರಾಜ್ಯದ ಹಿರಿಯ ಕಮ್ಯುನಿಸ್ಟ್‌ ನಾಯಕ ವಿ. ಎಸ್‌. ಅಚ್ಯುತಾನಂದನ್‌ ಒಂದು ಸಂದರ್ಭದಲ್ಲಿ, ಅನ್ಯ ಧರ್ಮದ ಯುವತಿಯರನ್ನು ಮತಾಂತರಿಸಿ ಮದುವೆಯಾಗುವುದು ಕೇರಳವನ್ನು ಮುಸ್ಲಿಂ ಬಾಹುಳ್ಯದ ರಾಜ್ಯವಾಗಿ ಮಾಡುವ ಪ್ರಯತ್ನ ಎಂದು ಹೇಳಿದ್ದರು. ಕರ್ನಾಟಕದಲ್ಲಿ ಅದರಲ್ಲೂ ಕರಾವಳಿ ಭಾಗದಲ್ಲಿ ಲವ್‌ ಜೆಹಾದ್‌ ವಿವಾದ ಜೋರಾದಾಗ 2009ರಲ್ಲಿ ಸರಕಾರವೂ ಸಿಐಡಿ ತನಿಖೆಗೆ ಆದೇಶಿಸಿತ್ತು. ಈ ತನಿಖೆಯಲ್ಲಿ ಲವ್‌ ಜೆಹಾದ್‌ ದೃಢಪಟ್ಟಿಲ್ಲ.  ಎನ್‌ಐಎ ಕೇರಳದ ಈ ಒಂದು ನಿರ್ದಿಷ್ಟ ಪ್ರಕರಣವಲ್ಲದೆ ಹಿಂದಿನ ಹಲವು ಪ್ರಕರಣಗಳನ್ನೂ ತನಿಖೆಗೊಳಪಡಿಸಲಿದೆ. ತನಿಖೆ ನಿಷ್ಪಕ್ಷಪಾತವಾಗಿ ಮತ್ತು ಪಾರದರ್ಶಕವಾಗಿ ನಡೆಯಬೇಕೆಂಬ ಕಾರಣಕ್ಕೆ ಬೆಂಗಳೂರನ್ನು ತನಿಖಾ ಕೇಂದ್ರವನ್ನಾಗಿ ಮಾಡಲಾಗಿದೆ ಮಾತ್ರವಲ್ಲದೆ ನಿವೃತ್ತ ನ್ಯಾಯಮೂರ್ತಿಯೊಬ್ಬರಿಗೆ ತನಿಖೆಯ ಮೇಲುಸ್ತುವಾರಿಯನ್ನು ವಹಿಸಲಾಗಿದೆ. ಈ ಎಲ್ಲ ಕ್ರಮಗಳಿಂದ ಲವ್‌ ಜೆಹಾದ್‌ ಸತ್ಯ ಹೊರಬಂದರೆ ಸ್ವಾತಂತ್ರೊéàತ್ಸವ ಭಾಷಣದಲ್ಲಿ ಪ್ರಧಾನಿ ಮೋದಿ ಹೇಳಿದ 2022ಕ್ಕಾಗುವಾಗ ಕೋಮುಗಲಭೆ ಮುಕ್ತ ನವಭಾರತವನ್ನು ನಿರ್ಮಿಸುವ ಆಶಯಕ್ಕೆ ನ್ಯಾಯಾಲಯ ಪುಟ್ಟ ಕೊಡುಗೆ ನೀಡಿದಂತಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next