ಬೆಂಗಳೂರು: ರಾಜ್ಯದಲ್ಲಿ ಲವ್ ಜೆಹಾದ್ ಕಾಯ್ದೆ ಜಾರಿ ನಿಶ್ಚಿತ ಎಂದು ಅಲ್ಪಸಂಖ್ಯಾಕ ಕಲ್ಯಾಣ ಖಾತೆ ಸಚಿವ ಶ್ರೀಮಂತ ಪಾಟೀಲ್ ಹೇಳಿದ್ದಾರೆ. ಆದರೆ, ಇದು ಹೆಚ್ಚು ಸೂಕ್ಷ್ಮ ವಿಷಯವಾದ ಕಾರಣ ಕಾನೂನು ಇಲಾಖೆಯ ಪರಿಶೀಲನೆಯಲ್ಲಿದೆ. ಕಾನೂನು ಇಲಾಖೆ ಅಧ್ಯಯನ ಮಾಡಿದ ಬಳಿಕ ಸಮಾಜದ ಮುಖಂಡರ ಜತೆಗೂ ಮಾತುಕತೆ ನಡೆಸುತ್ತೇವೆ. ಬಹುತೇಕ ಮುಂದಿನ ಅಧಿವೇಶನದೊಳಗೆ ಕಾಯ್ದೆ ಜಾರಿಯಾಗಬಹುದು ಎಂದರು.
ಮದ್ರಸ ಶಿಕ್ಷಣ ಎಸೆಸೆಲ್ಸಿಗೆ ಸಮಾನ
ಮದ್ರಸಗಳಲ್ಲಿ ಧಾರ್ಮಿಕ ಶಿಕ್ಷಣದ ಜತೆಗೆ ಶಿಕ್ಷಣ ಇಲಾಖೆಯ ಪಠ್ಯಕ್ರಮವನ್ನೂ ಬೋಧಿಸಲು ಉದ್ದೇಶಿಸಲಾಗಿದೆ. ಮದ್ರಸ ಶಿಕ್ಷಣವನ್ನು ಎಸೆಸೆಲ್ಸಿಗೆ ಸಮಾನ ಎಂದು ಪರಿಗಣಿಸಿ, ಅಲ್ಲಿ ಕಲಿತವರಿಗೆ ಐಟಿಐಯಂತಹ ಕೌಶಲಾಧಾರಿತ ಶಿಕ್ಷಣಕ್ಕೆ ಪ್ರವೇಶ ಪಡೆಯಲು ಅವಕಾಶ ನೀಡಲಾಗುವುದು. ಇದನ್ನು ಮುಂದಿನ ಶೈಕ್ಷಣಿಕ ವರ್ಷದಿಂದಲೇ ಆರಂಭಿಸಲು ಪ್ರಯತ್ನ ನಡೆಯುತ್ತಿದೆ ಎಂದರು.
ಮದ್ರಸಗಳಲ್ಲಿ ಶಿಕ್ಷಣ ಇಲಾಖೆ ಪಠ್ಯಕ್ರಮ, ಕೌಶಲಾಧಾರಿತ ಶಿಕ್ಷಣ ನೀಡುವ ಸಂಬಂಧ ಪ್ರತ್ಯೇಕ ಮಂಡಳಿ ರಚನೆ ಬಗ್ಗೆಯೂ ಚಿಂತನೆಯಿದೆ. ಇದಕ್ಕಾಗಿ ಮಹಾರಾಷ್ಟ್ರ, ಕೇರಳ, ಪಶ್ಚಿಮ ಬಂಗಾಲ ಮುಂತಾದ ರಾಜ್ಯಗಳಿಗೆ ತೆರಳಿ ಅಧ್ಯಯನ ನಡೆಸಲಾಗುವುದು ಎಂದು ಸಚಿವರು ಹೇಳಿದರು.