Advertisement

ಕ್ರಾಂತಿಯ ಬಲೆಯಲ್ಲಿ ಪ್ರೀತಿಯ ಸೆಲೆ

10:55 AM Feb 11, 2018 | Team Udayavani |

ಪೊಲೀಸ್‌ ಹಾಗೂ ನಕ್ಸಲರ ನಡುವಿನ ಕಾಳಗದಲ್ಲಿ ಆ ಪುಟ್ಟ ಬಾಲಕಿಯ ತಂದೆ-ತಾಯಿ ಇಬ್ಬರು ಸಾವನ್ನಪ್ಪುತ್ತಾರೆ. ಅನಾಥ ಹುಡುಗಿಯನ್ನು ನಕ್ಸಲ್‌ ಮುಖಂಡ ತನ್ನ ಜೊತೆ ಕರೆದುಕೊಂಡು ಹೋಗುತ್ತಾನೆ. ಅವಳಿಗೆ ಕಾಡೇ ಜೀವನ. ನಕ್ಸಲ್‌ ಮುಖಂಡನ ಜೊತೆ ಸೇರಿ “ಕ್ರಾಂತಿಕಾರಿ’ ವಿದ್ಯೆಗಳನ್ನು ಕಲಿಯುತ್ತಾಳೆ. ಹೀಗೆ ಕ್ರಾಂತಿಕಾರಿ ಚಿಂತನೆಯೊಂದಿಗೆ ಬೆಳೆದ ಆ ಹುಡುಗಿ ಒಂದು ಹಂತದಲ್ಲಿ ದೊಡ್ಡ ರಿಸ್ಕ್ ತೆಗೆದುಕೊಳ್ಳುತ್ತಾಳೆ.

Advertisement

ಸಿಡಿದು ಸುತ್ತಮುತ್ತಲ ಪರಿಸರವನ್ನು ಸುಡುವಂತಹ ನ್ಯೂಕ್ಲಿಯರ್‌ ಇಂಜೆಕ್ಷನ್‌ನನ್ನು ತನ್ನ ದೇಹಕ್ಕೆ ಚುಚ್ಚಿಕೊಳ್ಳುತ್ತಾಳೆ. ಸರಿಯಾಗಿ 50ನೇ ದಿನಕ್ಕೆ ಇಂಜೆಕ್ಷನ್‌ ಬ್ಲಾಸ್ಟ್‌ ಆಗುವಂತಹ ಇಂಜೆಕ್ಷನ್‌ ಅದು. ಹೀಗೆ ದೇಹದಲ್ಲಿ ನ್ಯೂಕ್ಲಿಯರ್‌ ಇಂಜೆಕ್ಷನ್‌ ಹಾಗೂ ಕ್ರಾಂತಿಯ ಮನಸ್ಥಿತಿಯೊಂದಿಗೆ ಸಿಟಿಗೆ ಬರುತ್ತಾಳೆ ಆಕೆ. ಅಲ್ಲಿಂದ ಕ್ರಾಂತಿ ವರ್ಸಸ್‌ ಪ್ರೀತಿ ಶುರುವಾಗುತ್ತದೆ. ಇದು “ನಾನು ಲವರ್‌ ಆಫ್ ಜಾನು’ ಚಿತ್ರದ ಒನ್‌ಲೈನ್‌.

ಈ ಲೈನ್‌ ಕೇಳಿದಾಗ ನಿಮಗೆ ಕಥೆಯಲ್ಲಿ ಹೊಸತನವಿದೆ ಎನಿಸಬಹುದು. ಆ ಮಟ್ಟಿಗೆ ನಿರ್ದೇಶಕ ಸುರೇಶ್‌ ಅವರು ಹೊಸ ಬಗೆಯ ಕಥೆ ಮಾಡಿಕೊಂಡಿದ್ದಾರೆ. ಇಲ್ಲಿ ಅವರು ಕ್ರಾಂತಿಯ ಹಿನ್ನೆಲೆಯಲ್ಲಿ ಪ್ರೀತಿಯನ್ನು ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ. ಅತ್ತ ಕಡೆ ನಕ್ಸಲರ ಚಿಂತನೆ, ಸರ್ಕಾರದ ವಿರುದ್ಧ ಹೋರಾಡ, ಸ್ಥಳೀಯ ಜನರು ತಮ್ಮೊಂದಿಗೆ ಕೈ ಜೋಡಿಸಬೇಕು ಎಂಬ ಅವರ ನಿಲುವು ಹಾಗೂ ಅವರ ಆ ನಿಲುವಿಗೆ ಸಿಲುಕುವ ಮುಗ್ಧ ಬಾಲಕಿ.

ಹೀಗೆ ಸಾಗುವ ಕಥೆಯಲ್ಲಿ ಅಸಹಾಯಕತೆ, ಹೋರಾಟ ಎಲ್ಲವನ್ನು ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ ಸುರೇಶ್‌. ಹಾಗೆ ನೋಡಿದರೆ ಇಡೀ ಸಿನಿಮಾದ ಜೀವಾಳ ಇದೇ ಎನ್ನಬಹುದು. ಆದರೆ, ನಿರ್ದೇಶಕರು ಮಾತ್ರ ಈ ಕಥೆಯನ್ನು ಹೇಳಲು ಮೊದಲಾರ್ಧವನ್ನು ಸುಖಾಸುಮ್ಮನೆ ಬಳಸಿಕೊಂಡಿದ್ದಾರೆ. ಇಲ್ಲಿ ಏನಿದೆ ಎಂದರೆ ಉತ್ತರಿಸೋದು ಕಷ್ಟ.

ಏಕೆಂದರೆ, ಎಲ್ಲಾ ಸಿನಿಮಾಗಳಲ್ಲಿರುವಂತೆ ಏರಿಯಾದಲ್ಲಿ ಹವಾ ಇಟ್ಟಿರುವ, ಕೆಲಸಕ್ಕೆ ಹೋಗದೇ ಸುತ್ತುತ್ತಿರುವ ಒಬ್ಬ ಹುಡುಗ, ಆತನ ಹಿಂದೆ ಸುತ್ತುತ್ತಿರುವ “ಬಿಟ್ಟಿ’ ಸ್ನೇಹಿತರು, ಟೀ ಅಂಗಡಿ, ಸಾಲ, ಆತನ ಬೈಗುಳ, ನಾಯಕಿಯ ಎಂಟ್ರಿ, ಆಕೆಯ ಹಿಂದೆ ನಾಯಕನ ಸುತ್ತಾಟ, ಡ್ರೀಮ್‌ ಸಾಂಗ್‌ … ಇಷ್ಟರಲ್ಲೇ ಮೊದಲಾರ್ಧ ಮುಗಿದು ಹೋಗುತ್ತದೆ. ಇದನ್ನು ನೋಡಿ ಬೇಸರಪಟ್ಟುಕೊಂಡು, ಮುಂದೆಯೂ ಇದೇ ಗೋಳ ಎಂದು ನೀವು ಭಾವಿಸಿದರೆ ತಪ್ಪಾದೀತು.

Advertisement

ಏಕೆಂದರೆ ನಿರ್ದೇಶಕರು ಸಿನಿಮಾದ ಮೂಲ ಅಂಶವನ್ನು ದ್ವಿತೀಯಾರ್ಧದಲ್ಲಿ ಬಿಚ್ಚಿಟ್ಟಿದ್ದಾರೆ. ನೀವು ಆರಂಭದಲ್ಲಿ ಏನು ನೋಡಿದಿರೋ ಅದಕ್ಕೆ ವಿರುದ್ಧವಾದ ಅಂಶ ಇಲ್ಲಿ ತೆರೆದುಕೊಳ್ಳುತ್ತದೆ. ಜೊತೆಗೆ ಪ್ರೀತಿನಾ, ಕ್ರಾಂತಿನಾ ಎಂಬ ಪ್ರಶ್ನೆಯೊಂದಿಗೆ ಕಥೆ ಸಾಗುತ್ತದೆ. ಆರಂಭದ ಕಿಚಡಿ ಕಾಮಿಡಿ, ಸುಖಾಸುಮ್ಮನೆ ಬಿಲ್ಡಪ್‌ಗ್ಳನ್ನು ಪಕ್ಕಕಿಟ್ಟು ಕಥೆಯನ್ನು ಮತ್ತಷ್ಟು ಬೆಳೆಸಿ, ಗಂಭೀರವಾಗಿ ಮಾಡಿದ್ದರೆ ಸಿನಿಮಾ ಇನ್ನಷ್ಟು ಪರಿಣಾಮಕಾರಿಯಾಗಿ ಮೂಡಿಬರುತ್ತಿತ್ತು.

ಆದರೆ, ಕಥೆ ಆರಂಭವಾದಷ್ಟೇ ಬೇಗ ಮುಗಿದು ಹೋಗುವ ಮೂಲಕ “ಕ್ರಾಂತಿ ಪ್ರೀತಿಯ’ ವಿಸ್ತಾರವಾಗಿ ಬೆಳೆಯುವುದೇ ಇಲ್ಲ. ಚಿತ್ರದಲ್ಲಿ ನಾಯಕರಾಗಿ ನಟಿಸಿರುವ ವಿಶಾಲ್‌ ಲವರ್‌ ಬಾಯ್‌ ಆಗಿ ಪಾತ್ರಕ್ಕೆ ನ್ಯಾಯ ಒದಗಿಸಲು ಪ್ರಯತ್ನಿಸಿದ್ದಾರೆ. ನಾಯಕಿ ಮಂಜುಳಾ ಗಂಗಪ್ಪ ಕೂಡಾ ಕೊಟ್ಟ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಹಿಸಿದ್ದಾರೆ. ಉಳಿದಂತೆ ಸುಚೇಂದ್ರ ಪ್ರಸಾದ್‌, ಚಂದ್ರು ಕೂಡಾ ಚಿತ್ರದಲ್ಲಿ ನಟಿಸಿದ್ದಾರೆ. 

ಚಿತ್ರ: ನಾನು ಲವರ್‌ ಆಫ್ ಜಾನು
ನಿರ್ಮಾಣ: ಶ್ರೀ ಕಲಾತಪಸ್ವಿ ಕ್ರಿಯೇಶನ್ಸ್‌
ನಿರ್ದೇಶನ: ಸುರೇಶ್‌ ಜಿ
ತಾರಾಗಣ: ವಿಶಾಲ್‌, ಮಂಜುಳಾ ಗಂಗಪ್ಪ, ಸುಚೇಂದ್ರ ಪ್ರಸಾದ್‌, ಸ್ವಯಂವರ ಚಂದ್ರು ಮತ್ತಿತರರು. 

* ರವಿ ರೈ

Advertisement

Udayavani is now on Telegram. Click here to join our channel and stay updated with the latest news.

Next