Advertisement

ಪ್ರೀತಿಯೇ ಅಲಾರಾಮ್

10:15 AM Dec 28, 2019 | mahesh |

ಮಕ್ಕಳ ಪರೀಕ್ಷೆ ಯಾವಾಗ, ಮುಂದಿನ ಹಬ್ಬ ಎಂದು ಬರುವುದು, ನೆಂಟರ ಮದುವೆ ತಯಾರಿ ಏನೇನು ಇದೆ ಎಂಬೆಲ್ಲ ವಿಚಾರಗಳನ್ನು ನೆನಪಿಸುವ ಅಮ್ಮನೂ ಕೂಡ ಅಲಾರಮ್‌ನಂತೆಯೇ. ಕೆಲಸ ಮುಗಿಯುವವರೆಗೂ ನೆನಪಿಸುವ ಆಕೆಯದ್ದು ಪ್ರೀತಿಯ ಅಲಾರಮ್‌.

Advertisement

ಪ್ರತಿಯೊಂದು ಮನೆಯಲ್ಲೂ ಅಲಾರಮ್‌ ಇದ್ದೇ ಇರುತ್ತದೆ, ನಮಗೆ ಬೇಕಾದ ಸಮಯಕ್ಕೆ ಸರಿಯಾಗಿ ನಮ್ಮನ್ನು ಎಚ್ಚರಗೊಳಿಸಲು ಅದನ್ನು ಅಣಿಗೊಳಿಸಿರುತ್ತೇವೆ. ಆದರೆ, ಹೀಗೆ ಎಚ್ಚರಿಸುವ ಕೆಲಸವನ್ನು ಮನೆಯಲ್ಲಿ ಅಮ್ಮನೂ ಮಾಡುತ್ತಾಳೆ ಅಲ್ಲವೇ. ಆಕೆ ಮಾತ್ರ ತನ್ನ ಕೆಲಸಗಳಿಗಾಗಿ ಅಲಾರಮ್‌ ಇಟ್ಟುಕೊಳ್ಳುವುದಕ್ಕೂ ಹೆಚ್ಚಾಗಿ ಮನೆಯಲ್ಲಿ ಇತರರ ಅಗತ್ಯಗಳಿಗೆ ತಕ್ಕಂತೆ ಅಲಾರಮ್‌ ಅನ್ನು ಅಣಿಗೊಳಿಸಿರುತ್ತಾಳೆ.

ಅಮ್ಮ, ಪತ್ನಿ, ಸೊಸೆ ಹೀಗೆ ಹಲವಾರು ಪಾತ್ರಗಳನ್ನು ನಿಭಾಯಿಸುತ್ತ ಇರುವ ಅಮ್ಮ ಹತ್ತಾರು ಅಲಾರಮ್‌ಗಳನ್ನು ಅಣಿಗೊಳಿಸಬೇಕಾಗುತ್ತದೆ. ಅದು ಆಕೆಯ ಮನಸ್ಸಿನಲ್ಲಿಯೇ ಸಿದ್ಧಗೊಳ್ಳುವ ಅಲಾರಮ್‌. ಮಕ್ಕಳ ಶಾಲಾ, ಕಾಲೇಜುಗಳ ಸಮಯ, ಪತಿಯ ಕೆಲಸಕ್ಕೆ ಹೋಗುವ ಸಮಯ, ಅತ್ತೆ ಮಾವಂದಿರ ಔಷಧಿ ಸಮಯ ಎಲ್ಲವನ್ನೂ ತನ್ನಲ್ಲಿ ತಾನೇ ಸೆಟ್‌ ಮಾಡಿಕೊಂಡು, ನಿಗದಿತ ಸಮಯಕ್ಕೆ ಸರಿಯಾಗಿ ಪ್ರತಿಯೊಬ್ಬರನ್ನು ಎಬ್ಬಿಸುವ, ಎಚ್ಚರಿಸುವ ಕಾರ್ಯ ನಿರ್ವಹಿಸುತ್ತಾಳೆ.

ಮುಂದೆ ಬರಲಿರುವ ಹಬ್ಬ ಹರಿದಿನಗಳು, ಅದಕ್ಕೆ ಬೇಕಾದ ತಯಾರಿ, ಖರೀದಿಯ ವಿಚಾರ, ನೆಂಟರಿಷ್ಟರ ಮದುವೆ ಸಮಾರಂಭ ಗಳಿಗೆ ಭೇಟಿ ನೀಡಲು ತಯಾರಿ, ಉಡುಗೊರೆ ಸಿದ್ಧಪಡಿಸುವುದು, ಮಕ್ಕಳು, ಅತ್ತೆ, ಗಂಡ ಯಾವ ಉಡುಗೆ ತೊಡಬೇಕಾಗಿದೆ, ಅದೆಲ್ಲ ಸರಿಯಾಗಿದೆಯೇ ಎಂದು ಗಮನಿಸುವ ಈ ನಿರಂತರ ಕೆಲಸಕ್ಕೆ ಆಕೆಗೆ ಅಂಗಡಿಯಲ್ಲಿ ಸಿಗುವ ಮುಷ್ಟಿ ಗಾತ್ರದ ಅಲಾರಮ್‌ ಸಾಕಾದೀತೇ.

ಹಾಗಿದ್ದರೆ ಇವೆಲ್ಲವನ್ನೂ ಆಕೆ ಹೇಗೆ ನಿಭಾಯಿಸುತ್ತಾಳೆ. ಈ ನಿರಂತರ ಅಲಾರಮ್‌ಗೆ ಬ್ಯಾಟರಿಯ ಮಾದರಿಯಲ್ಲಿ ಸಹಾಯ ಮಾಡುವುದು ಪ್ರೀತಿ. ಮನೆಯವರ ಮೇಲಿನ ಪ್ರೀತಿ-ಕಾಳಜಿಯೇ ಆಕೆಯ ಈ ಜೈವಿಕ ಅಲಾರಮ್‌ನ್ನು ಅಣಿಗೊಳಿಸುತ್ತದೆ.

Advertisement

ನಿರ್ಜೀವ ಅಲಾರಮ್‌ನ್ನು ಕುಟ್ಟಿ ಸುಮ್ಮನಾಗಿಸಿ, ಎರಡೇ ನಿಮಿಷ ಎಂದು ಕಣ್ಣುಮುಚ್ಚುವ ನಾವು ಮತ್ತೆ ಗಾಢನಿದ್ದೆಗೆ ಜಾರುವ ಸಂಭವವಿರುತ್ತದೆ. ಈ ಅಮ್ಮ ಹಾಗಲ್ಲ, ನಾವು ಎದ್ದು ನಮ್ಮ ದೈನಂದಿನ ಕೆಲಸಗಳಲ್ಲಿ ತೊಡಗಿಕೊಂಡ ಮೇಲೆಯೇ ಸುಮ್ಮನಾಗುವುದು. ಇಲ್ಲಿಗೆ ಎಬ್ಬಿಸುವ ಕೆಲಸ ಮುಗಿಯಿತಾ? ಖಂಡಿತ ಇಲ್ಲ, ಪ್ರತಿ ಐದು ನಿಮಿಷಗಳಿಗೊಮ್ಮೆ, “ಬೇಗ ಬೇಗ ಮಾಡು ಸಮಯ ಇಷ್ಟಾಯಿತು’ ಎನ್ನುತ್ತ ಎಚ್ಚರಿಸುತ್ತ ಇರುತ್ತಾಳೆ. ನಾವು ಪ್ರತಿಯಾಗಿ ಬೈದೆವೆಂದು ಮರುದಿನ ಎಚ್ಚರಿಸುವ ಕೆಲಸ ಮಾಡದೇ ಇರುವುದಿಲ್ಲ.

ಹಾಗೆ ಆಕೆ ಎಚ್ಚರಿಸುವ ರೀತಿಯಲ್ಲಿ ಎಂದೂ ಏಕತಾನತೆ ಇಲ್ಲ. ಮೊದಲಿಗೆ ಪ್ರೇಮಪೂರಿತವಾದ ನಯವಾದ ಮಾತುಗಳಿಂದ ಎಬ್ಬಿಸಲಾರಂಭಿಸುವ ಅಮ್ಮ, ಮುಂದಿನ ಕೆಲವು ಕ್ಷಣಗಳ ನಂತರ ತುಸು ಗಡುಸಾಗುತ್ತಾಳೆ.

ಸಣ್ಣ ಮಕ್ಕಳಾದರೆ ಮೊದಲಿಗೆ ಅವರನ್ನು ಪ್ರೀತಿಯಿಂದ ಮು¨ªಾಡುತ್ತ ಎಬ್ಬಿಸುವ ತಾಯಿ, ಎರಡನೇ ಸಲ ಆ ಮಗುವಿಗೆ ಇಷ್ಟವಾದ ತಿಂಡಿಯನ್ನೋ, ಕೇಕ್‌, ಬಿಸ್ಕಿಟನ್ನೋ ಡಬ್ಬಿಗೆ ಹಾಕುವ ಭರವಸೆ ನೀಡುತ್ತಾಳೆ. ಆಗಲೂ ಆ ಮಗು ಏಳದಿದ್ದರೆ ನೇರವಾಗಿ ಎತ್ತಿಕೊಂಡು ಹೋಗಿ ಸ್ನಾನಗೃಹದಲ್ಲಿ ನಿಲ್ಲಿಸಿಬಿಡುತ್ತಾಳೆ.

ಹೈಸ್ಕೂಲ್‌-ಕಾಲೇಜುಗಳಿಗೆ ಹೋಗುವ ಮಕ್ಕಳಿಗಾದರೆ ಮೊದಲು ನಯವಾದ ಮಾತುಗಳಿಂದ ಕೂಡಿದ ಅಲಾರಮ್‌ ಗಂಟೆ, ಶಾಲಾ ವ್ಯಾನ್‌ ಅಥವಾ ಬಸ್‌ ತಪ್ಪಿ ಹೋಗುವ, ಮೊದಲ ಕ್ಲಾಸ್‌ ತಪ್ಪಿ ಹೋಗುವ, ಅಟೆಂಡನ್ಸ್‌ ಶಾರ್ಟೆಜ್‌ ಆಗುವ ಗದರುವಿಕೆ ದನಿಯಲ್ಲಿರುತ್ತದೆ.

ಪತಿಗಾದರೆ ನಯವಾದ ಮಾತುಗಳ ಎಚ್ಚರಿಕೆ, ಆಕ್ಷೇಪಣೆಗೆ ಬದಲಾಗುತ್ತದೆ, ನಡು ರಾತ್ರಿವರೆಗೆ ಟಿವಿ, ಮೊಬೈಲ್‌ ಬಳಕೆ ಒಳ್ಳೆಯದಲ್ಲ ಎಂದರೆ ಕೇಳುವುದಿಲ್ಲ, ಈಗ ನಿ¨ªೆ ಸಾಕಾಗುವುದಿಲ್ಲ, ಎಬ್ಬಿಸಿದರೆ ಕಣ್ಣು ಬಿಡಲಿಕ್ಕಾಗುವುದಿಲ್ಲ ಎಂಬ ಗೊಣಗಾಟದ ಅಲಾರಮ್‌.

ರಾತ್ರಿ ನಿದ್ದೆ ಬಾರದೇ ಹೊರಳಾಡುವ ವಯಸ್ಸಾದ ಅತ್ತೆಮಾವಂದಿರಿಗೆ, ಸೊಸೆ ಅಡುಗೆ ಮನೆಯಲ್ಲಿ ಕೆಲಸ ಆರಂಭಿಸಿದ ಸಪ್ಪಳವೇ ಒಂದು ಅಲಾರಾಮ್‌. ತಾವು ಹಾಸಿಗೆಯಿಂದ ಎದ್ದು ತಮ್ಮ ದೈನಂದಿನ ಕೆಲಸಗಳಲ್ಲಿ ತೊಡಗಬಹುದು ಎಂಬುದಕ್ಕೆ ಸೂಚನೆ. ದೋಸೆ ಕಾವಲಿ “ಚುಂಯ್‌’ ಅಂದ ಶಬ್ದ ಕೇಳಿಸಿತೋ, ಹೊರಹೋಗುವ ಧಾವಂತ ಇರುವವರ ಟಿಫಿನ್‌ ಮುಗಿದಾಕ್ಷಣ ತಮ್ಮ ಸರದಿ ಬಂತೆಂದು ಗೊತ್ತಾಗುತ್ತದೆ. ಈಗ ಇನ್ಸುಲಿನ್‌ (ಮಧುಮೇಹಿಗಳಿಗೆ) ತೆಗೆದುಕೊಂಡರೆ ಸರಿಯಾಗುತ್ತದೆ ಎಂಬ ಮುನ್ಸೂಚನೆ.

ಹೀಗೆ ಮನೆಯ ಪ್ರತಿಯೊಬ್ಬ ಸದಸ್ಯರನ್ನು ಕ್ಲಪ್ತ ಸಮಯಕ್ಕೆ ಎಬ್ಬಿಸುವ ಈ ಅಮ್ಮನನ್ನು ಯಾರು ಎಬ್ಬಿಸುತ್ತಾರೆ? ಬೆಳಗಿನ ಸವಿ ನಿದ್ದೆಯಲ್ಲಿರುವ ಅವಳಿಗೂ ಒಂದೈದು ನಿಮಿಷ ಮಲಗೋಣ ಅನಿಸುವುದಿಲ್ಲವೇ? ಮನೆಯ ಸದಸ್ಯರೆಲ್ಲ ಮಲಗಿದ ನಂತರ ಮಲಗುವ, ಎಲ್ಲರಿಗಿಂತಲೂ ಮೊದಲು ಏಳುವ, ದಿನವಿಡೀ ಮನೆ ಕೆಲಸಗಳಲ್ಲಿ ವ್ಯಸ್ತಳಾಗಿರುವ ಅವಳಿಗೂ ಸುಸ್ತಾಗುವುದಿಲ್ಲವೇ?

ಖಂಡಿತ ಅಮ್ಮನಿಗೂ ದಣಿವಾಗುತ್ತದೆ, ಎಲ್ಲರಿಗೂ ಅನಿಸುವಂತೆ ಅವಳಿಗೂ ಅನಿಸುತ್ತದೆ ಒಂದೈದು ನಿಮಿಷ ಮಲಗುವ ಎಂದು. ಹಾಗೇನಾದರೂ ಅವಳು ಮಲಗಿ ಗಾಢನಿದ್ದೆಗೆ ಜಾರಿದರೆ, ಕೇವಲ ಅವಳೊಬ್ಬಳದಲ್ಲ ಮನೆಯ ಸದಸ್ಯರೆಲ್ಲರ ದಿನಚರಿಯಲ್ಲೂ ಏರುಪೇರು. ಮುಂದಿನ ಗಡಿಬಿಡಿ, ಧಾವಂತ ಊಹಿಸಲೂ ಸಾಧ್ಯವಿಲ್ಲ, ಈ ಎಲ್ಲ ಸಮಸ್ಯೆಗಳಿಂದ ಪಾರಾಗಲು ಅವಳು ತನ್ನ ಐದು ನಿಮಿಷ ಮಲಗುವ ಬಯಕೆಯನ್ನು ಅಲ್ಲಿಯೇ ಚಿವುಟಿ, ತಟ್ಟಂತ ಎದ್ದು ತನ್ನ ಕೆಲಸಕಾರ್ಯಗಳಲ್ಲಿ ತೊಡಗುತ್ತಾಳೆ.

ಈ ದಣಿವಿಲ್ಲದ ಅಲಾರಮ್‌ಗೆ ಪ್ರೀತಿಯೆಂಬ ರೀಚಾರ್ಜ್‌ ಬೇಕೇಬೇಕು. ನಮ್ಮ ಮನೆಯಲ್ಲಿ ಅಮ್ಮನಿಗೆ ಪ್ರೀತಿಯ ಮಾತುಗಳನ್ನು ಹೇಳುವ ಪರಿಪಾಠ ಇದೆಯೇ… ಎಂದು ಒಮ್ಮೆ ಯೋಚಿಸೋಣ ಅಲ್ಲವೇ.

ಅನಿತಾ ಪೈ

Advertisement

Udayavani is now on Telegram. Click here to join our channel and stay updated with the latest news.

Next