ಪ್ರೀತಿಯೆಂಬುದು ಮಾಯೆ, ಕಾಲಹರಣಕ್ಕಾಗಿ ಪ್ರೀತಿ ಮಾಡುತ್ತಾರೆ ಎಂಬ ಮಾತುಗಳ ಮೇಲೆ ನಾನು ನಂಬಿಕೆ ಇಟ್ಟಿದ್ದಾಗಲೇ ನಿನ್ನ ಪರಿಚಯವಾಯಿತು. ಆ ಮಾತುಗಳನ್ನೆಲ್ಲ ಸುಳ್ಳು ಮಾಡಿ, ನನ್ನ ಪ್ರತಿಯೊಂದು ಕನಸಿಗೂ ಹೆಗಲಾಗಿ ನಿಂತು, ಪ್ರತಿ ನೋವು ನಲಿವಿನಲ್ಲೂ ಜೊತೆಗಿದ್ದವನು ನೀನು. ನಮ್ಮದು ಆಕಸ್ಮಿಕವಾಗಿ ಹುಟ್ಟಿದ ಪ್ರೇಮ. ಪರಿಚಯ ಮೊದಲೆ ಇದ್ದರೂ ಸಂಪರ್ಕಿಸಲು ಸಹಾಯವಾದದ್ದು ಇನ್‌ಸ್ಟಾಗ್ರಾಮ್. ನಿನ್ನ ಕಾಳಜಿ ತುಂಬಿದ ಮಾತುಗಳು, ಕೋಪದಲ್ಲೂ ಮುಗªತೆ ತುಂಬಿರುವ ನಿನ್ನ ಮುಖ, ಸಾವಿರ ಭಾವನೆಗಳನ್ನು ತುಂಬಿರುವ ನಿನ್ನ ಕಣ್ಣುಗಳು, ದುಡಿದು ತಿನ್ನಬೇಕು ಎಂಬ ನಿಷ್ಠುರ ಮಾತು ಕಷ್ಟಕ್ಕೆ ಆಗುವ ಒಳ್ಳೆಯ ಮನಸ್ಸು… ಇವೆಲ್ಲಾ ಸೇರಿ, ಸ್ನೇಹವನ್ನು ಪ್ರೀತಿಯ ಕಡೆ ತಿರುಗಿಸಿತು.
ಜೀವನದ ಎಲ್ಲ ನೋವಿಗೂ ಆಪ್ತಸ್ನೇಹಿತನಂತೆ ಸಾಂತ್ವನ ನೀಡಿ ಸಮಾಧಾನಿಸುವವನು ನೀನು. ತಪ್ಪು ಮಾಡಿದಾಗ ತಿದ್ದಿ ಬುದ್ಧಿ ಹೇಳುವವನೂ ನೀನು. ಪ್ರೀತಿ ಅಂದ ಮೇಲೆ ಇದೆಲ್ಲ ಸಹಜ ಅಲ್ವಾ? ಮೊದ ಮೊದಲು ನನಗೆ ನಿನ್ನ ಮೇಲೆ ಕಾಳಚಿ ಇತ್ತೇ ಹೊರತು ಯಾವುದೇ ಭಾವನೆಗಳು ಇರಲಿಲ್ಲ. ದಿನ ಕಳೆದಂತೆ ಪ್ರೀತಿಯ ಬೀಜ ಮೊಳಕೆಯೊಡೆದು ನಿನ್ನ ಸಂದೇಶಕ್ಕಾಗಿ ಕಾಯುವಷ್ಟರ ಮಟ್ಟಿಗೆ ನನ್ನ ಮನಸ್ಸು ಬದಲಾಗಿತ್ತು ಕಣೋ.
ಪ್ರತಿಯೊಂದು ಹೆಣ್ಣು ಮಕ್ಕಳಿಗೂ ನನ್ನಂತೆ ನನ್ನ ತಂದೆ-ತಾಯಿಯನ್ನು ಗೌರವಿಸುವ ಹುಡುಗ ಸಿಗಬೇಕೆಂಬುದು ಕನಸಾಗಿರುತ್ತದೆ. ಯಾವ ಜನ್ಮದ ಪುಣ್ಯವೋ ನಾ ಕಾಣೆ. ನನ್ನ ಜೀವನದಲ್ಲಿ ನನಗಿಂತ ಹೆಚ್ಚಾಗಿ ತಂದೆ ತಾಯಿಯನ್ನು ಪ್ರೀತಿಸುವ ನೀನು ಸಿಕ್ಕೆ. ಜೀವನದ ಕೊನೆಯವರೆಗೂ ನಿನ್ನ ಜೊತೆಯಾಗಿರಬೇಕು. ಎಂಬುದೇ ನನ್ನ ಆಸೆ.
ಶೈಲ ಶ್ರೀ ಬಾಯಾರ್