ಕಾರಿಡಾರ್ ಎಂದರೆ ಅದು ಕಾಲೇಜಿನ ಅದ್ಭುತ ಜಾಗಗಳಲ್ಲಿ ಒಂದು. ಅದೆಷ್ಟೋ ಸ್ನೇಹ-ಸಂಬಂಧಗಳು, ಹೊಸ ಪರಿಚಯಗಳು, ಕೆಲವೊಂದು ವೈರತ್ವಗಳು ಮತ್ತು ಹಲವಾರು ಪ್ರೇಮ ಸಲ್ಲಾಪಗಳು… ಹೀಗೆ ಕಾರಿಡಾರ್ ಎಂಬುದೇ ಒಂದು ಸುಂದರ ಜಗತ್ತು.
ಕಾಲೇಜಿಗೆ ಸೇರಿದ ಹೊಸದರಲ್ಲಿ ಎಲ್ಲಾ ಅಂತಸ್ತುಗಳು ಒಂದೇ ರೀತಿ ಇರುವಂತೆ ಕಾಣುತ್ತದೆ. ಯಾವ ದಾರಿಯಲ್ಲಿ ಹೋದರೆ ಎಲ್ಲಿಗೆ ತಲುಪುತ್ತದೆ ಎಂಬುದೇ ದೊಡ್ಡ ಗೊಂದಲ. ಒಬ್ಬೊಬ್ಬರೇ ಹೋದರಂತೂ ಬಹಳ ಯೋಚಿಸಿ ಹೋಗಬೇಕಾಗುತ್ತದೆ. ದಿನಗಳು ಉರುಳಿದಂತೆ ಕಾಲೇಜಿನ ಎಲ್ಲ ಮೂಲೆಗಳೂ ಪರಿಚಯವಾಗುತ್ತವೆ.
ಕ್ಯಾಂಟೀನ್‌ನಲ್ಲಿ ಯಾರು ಪಟ್ಟಾಂಗ ಹೊಡೆಯುತ್ತಾರೆ, ಕಾರಿಡಾರ್‌ನಲ್ಲಿ ಯಾರು ಮಸ್ತಿ ಮಾಡುತ್ತಾರೆ, ಯಾವ ಡೆಸ್ಕ್ನಲ್ಲಿ ಯಾರು ಸದಾ ನೋಟ್ಸ್ ಬರೆಯುತ್ತಲೇ ಇರುತ್ತಾರೆ ಎಂಬುದೆಲ್ಲ ಅರಿವಾಗುತ್ತ ಹೋಗುತ್ತದೆ. ಪ್ರೇಮಿ ಗಳಿಬ್ಬರು ಮಾತಾಡಿಕೊಳ್ಳುವ ಮಾಮೂಲಿ ಜಾಗವನ್ನು ಇತರ ವಿದ್ಯಾರ್ಥಿಗಳು ಅವರಿಗೆಂದೇ ಬಿಟ್ಟು ಕೊಡುವುದುಂಟು.
ಅಧ್ಯಾಪಕರು ಯಾವ ಹೊತ್ತಿಗೆ ಯಾವ ದಾರಿಯಾಗಿ ಬರುತ್ತಾರೆ, ಯಾವ ತರಗತಿಗೆ ಹೋಗುತ್ತಾರೆ ಎಲ್ಲವೂ ತಿಳಿದುಬಿಡುತ್ತದೆ.
ಕೊನೆಯ ವರ್ಷ ತಲುಪಿದ ಮೇಲೆ ಹೊಸದಾಗಿ ಸೇರಿಕೊಂಡ ವಿದ್ಯಾರ್ಥಿ ಗಳನ್ನು ಮತ್ತು ಅವರು ಕಾರಿಡಾರ್‌ನಲ್ಲಿ ನಡೆಯುವಾಗ ಗೊಂದಲದಲ್ಲಿ ಹೆಜ್ಜೆ ಇಡುವುದನ್ನು ನೋಡಿ ಸೀನಿಯರ್ ನಗುವುದುಂಟು. ಕೆಲವೊಂದು ಬಾರಿ ಸೀನಿಯರ್ಗಳನ್ನು ಮೀರಿ ಜೂನಿಯರ್ ಕಾರಿಡಾರ್ ಹೀರೋಗಳಾಗಿ ಬಿಡುತ್ತಾರೆ.
ಬೇರೆ ತರಗತಿಯಲ್ಲಿರುವ ನಮ್ಮ ಸ್ನೇಹಿತರಿಗೆ ಕ್ಲಾಸ್‌ಗಳು ನಡೆಯುತ್ತಿರುವಾಗ ನಮಗೆ ಫ್ರೀ ಇದ್ದರೆ ಅವರು ನಮ್ಮನ್ನು ನೋಡಲಿ ಎಂದು ಅವರ ತರಗತಿಯ ಎದುರು ಕಾರಿಡಾರ್‌ನಲ್ಲಿ ಅದೆಷ್ಟು ಸಲ “ಹೋಗುವುದು ಬರುವುದು’ ಮಾಡುತ್ತೇವೆ. ಅದರಲ್ಲೂ ಏನೋ ಒಂದು ಖುಷಿ. ಕಾಲೇಜು ಕಾರಿಡಾರ್‌ಗೆ ಒಂದು ಸುತ್ತು ಬಂದರೆ ಎಷ್ಟೋ ಟೆನ್ಶನ್ ಕಡಿಮೆಯಾಗುತ್ತದೆ. ಪರೀಕ್ಷೆಯ ಸಮಯದಲ್ಲಂತೂ ಕಾರಿಡಾರ್ ಒಂದು ರೀತಿಯ ಸ್ಟಡಿ ಸೆಂಟರ್ ಇದ್ದ ಹಾಗೆ. ಎಲ್ಲ ಸಂದಿಗಳಲ್ಲಿಯೂ, ಪ್ರತೀ ಮೆಟ್ಟಿಲಲ್ಲೂ ಓದುಗರು. ಎಲ್ಲರೂ ತಮ್ಮ ಪಾಡಿಗೆ ತಾವು ತಮಗೆ ಇಷ್ಟ ಬಂದಂತೆ ಓದುತ್ತಿರುತ್ತಾರೆ. ಯಾರೊಬ್ಬರೂ ಯಾರ ತಂಟೆಗೂ ಹೋಗುವುದಿಲ್ಲ. ಪ್ರತೀ ಬ್ರೇಕ್‌ನಲ್ಲಿಯೂ ಕಾರಿಡಾರ್‌ನಲ್ಲಿ ಬಂದು ನಿಲ್ಲದಿದ್ದರೆ ಹೆಚ್ಚಿನ ವಿದ್ಯಾರ್ಥಿಗಳಿಗೆ ಸಮಾಧಾನವೇ ಇಲ್ಲ. ಕಾರಿಡಾರ್ ಎಂದರೆ ಹಾಗೆ, ಅದೊಂದು ರೀತಿಯ ರೀಫ್ರೆಶಿಂಗ್ ಇದ್ದ ಹಾಗೆ.
ಸ್ವಾತಿ ಬಿ. ಶೆಟ್ಟಿ
ತೃತೀಯ ಬಿ.ಎಸ್‌ಸಿ, ವಿವೇಕಾನಂದ ಪದವಿ ಕಾಲೇಜು, ಪುತ್ತೂರು