ಗ್ರೂಪ್: ‘ಸ್ನೇಹದ ಕಡಲು’
ಅಡ್ಮಿನ್: ಶ್ವೇತಾ ಜಂಗಳಿ.
ಸದ್ಯಸರು: ಪ್ರಿಯಾ, ಶೆಟ್ಟಿ, ಶಿಲ್ಪಾ, ಮುತ್ತು, ಬಸು
ನಾನು ನಮ್ಮ ಹಳೆಯ ಪ್ರಾಥಮಿಕ ಮತ್ತು ಕಾಲೇಜಿನ ಎಲ್ಲಾ ಸ್ನೇಹಿತರನ್ನು ಒಟ್ಟಿಗೆ ಸೇರಿಸಲು “ಸ್ನೇಹದ ಕಡಲು’ ಅನ್ನೋ ಹೆಸರಿನ ವ್ಯಾಟ್ಸಾಪ್ ಗ್ರೂಪ್ ಮಾಡಿದ್ದೆ. ಬೇರೆ ಬೇರೆ ಜಿಲ್ಲೆ, ರಾಜ್ಯಗಳಲ್ಲಿರುವ ನನ್ನ ಎಲ್ಲಾ ಸ್ನೇಹಿತರು ಈ ಗ್ರೂಪ್‌ನ ಮೂಲಕ ಸಂವಹನ ನಡೆಸಲು ಅವಕಾಶವಾಯಿತು. ನಾವು ಮಾಡಿದ ಕಿತಾಪತಿ, ಕಿಟಲೆ, ಗಲಾಟೆ, ಲವ್, ಹೀಗೆ, ಹಲವಾರು ಘಟನೆಗಳನ್ನು ಹಂಚಿಕೊಂಡು, ಕೆಲವರಿಂದ ಬೈಯಿಸಿಕೊಂಡು, ಹೊಗಳಿಸಿಕೊಂಡದ್ದು ಈಗ ಕೇವಲ ನೆನಪು ಮಾತ್ರ.
ನಾವು ನಮ್ಮ ಮುಂದಿನ ವಿದ್ಯಾಭ್ಯಾಸಕ್ಕಾಗಿ ಬೇರೆ ಬೇರೆ ಕಡೆ ಹೋಗಿದ್ದರಿಂದಾಗಿ, ಅಲ್ಲಿಯೇ ನಮ್ಮ ಸಂವಹನ ತುಂಡಾಗಿತ್ತು. ಹೇಗಾದರೂ ಮಾಡಿ ನಮ್ಮ ಎಲ್ಲಾ ಸ್ನೇಹದ ಬಳಗ ಒಟ್ಟಾಗಿ ಸೇರುವುದು ಯಾವಾಗ? ಎಲ್ಲಿ? ಹೇಗೆ? ಎಂಬತ್ಯಾದಿ ಪ್ರಶ್ನೆಗಳು ದಿನೇ ದಿನೇ ಕಾಡತೊಡಗಿದ್ದವು. ಆಗ ನನಗೆ ತಟ್ಟನೇ ನೆನಪಾಗಿದ್ದೇ ಈ ವ್ಯಾಟ್ಸಾಪ್ ಗ್ರೂಪ್. ಈ ಗ್ರೂಪ್, ನಮ್ಮ ಸ್ನೇಹಕ್ಕೆ ಇಂದೂ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಸುತ್ತಿದೆ.
ಒಂದು ದಿನ ನಾನು ಗ್ರೂಪ್‌ನಲ್ಲಿ ಹಾಯ್ ಎಂದು ಮೆಸೇಜ್ ಹಾಕಿದ್ದೆ ತಡ, ಎಲ್ಲರೂ ಪ್ರತಿಕ್ರಿಯೆ ನೀಡಲು ಶುರುಮಾಡಿದರು. ಆಗ ನನಗೆ ಎಲ್ಲಿಲ್ಲದ ಸಂತೋಷ. ನಾನು ಕಳೆದುಕೊಂಡಿದ್ದ ನನ್ನ ಸ್ನೇಹ ಬಳಗದ ಮಾತುಗಳನ್ನು ಕೇಳಿ ಏನೋ ಒಂಥರಾ ಸಂಭ್ರಮದ ಅನುಭವ ನನ್ನಲ್ಲಿ ಉಂಟಾಯಿತು. ಏಕೆಂದರೆ ನಾನು ಪ್ರೀತಿಸುತ್ತಿದ್ದ ಹುಡುಗನೂ ಆ ಗ್ರೂಪ್‌ನಲ್ಲಿ ಇದ್ದ. ಅವನು ಕೂಡ ನಮ್ಮೆಲ್ಲಾ ಮೆಸೇಜ್‌ಗಳಿಗೆ ಪ್ರತಿಕ್ರಿಯಿಸುತ್ತಿದ್ದ. ಹೇಗಾದರೂ ಮಾಡಿ ನಾವೆಲ್ಲರೂ ಒಂದು ಸಲ ಭೇಟಿಯಾಗಬೇಕೆಂದು ನಿರ್ಧಾರ ಮಾಡಿದ್ದೆವು. ಎಲ್ಲರಿಗೂ ಅನುಕೂಲವಾಗುವಂಥ ಸ್ಥಳವನ್ನು ಆಯ್ಕೆಮಾಡಿ ಎಲ್ಲಿ? ಯಾವಾಗ ಬರಬೇಕೆಂದುನ್ನು ಮಾತನಾಡಿಕೊಂಡೆವು. ಅದುವರೆಗೆ, ನಾವು ಮತ್ತೆ ಎಲ್ಲರೂ ಒಟ್ಟಿಗೆ ಸೇರುತ್ತೇವೆಂಬ ಕಲ್ಪನೆಯಂತೂ ಯಾರಲ್ಲಿಯೂ ಇರಲಿಲ್ಲ. ಅದು ಈ ಗ್ರೂಪ್‌ನ ಮೂಲಕ ಸಾಧ್ಯವಾಯಿತು. ಎಲ್ಲರೂ ಭೇಟಿಯಾಗಿ ತಮ್ಮ ಹೊಸ ಜೀವನದ ಎಲ್ಲ ಸಂಗತಿಗಳನ್ನು ಪರಸ್ಪರ ಹಂಚಿಕೊಂಡೆವು. ಎಲ್ಲಾ ಸ್ನೇಹಿತರೂ ತಮ್ಮ ಕಣ್ಣಂಚಿನಲ್ಲಿಯೇ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದರು. ಎಲ್ಲರ ಮಾತುಗಳನ್ನೂ ಕೇಳಿ ನನಗೆ ಒಂದು ಕಡೆ ಆನಂದವಾಯಿತು. ನನ್ನಲ್ಲಿ ಗುಪ್ತವಾಗಿಯೇ ಉಳಿದಿದ್ದ ಪ್ರೀತಿ, ಈ ಭೇಟಿಯ ಮೂಲಕ ಮತ್ತೆ ಚಿಗುರೊಡೆಯಿತು.
ಶ್ವೇತಾ ಜಂಗಳಿ
ಶ್ವೇತಾ ಜಂಗಳಿ