ಹಾವೇರಿ: ಪ್ರೀತಿ, ಬಾಲ್ಯ ಮತ್ತು ಶಿಕ್ಷಣ ಪ್ರತಿಯೊಂದು ಮಗುವಿನ ಮೂಲಭೂತ ಹಕ್ಕುಗಳಾಗಿವೆ. ಮಕ್ಕಳು ಸಮುದಾಯದಲ್ಲಿ ಬೆಳೆದು ದೇಶ ಮುನ್ನಡೆಸುವವರಾಗಬೇಕು. ಇಂತಹ ಸಮಸ್ಯೆ ಪೀಡಿತ ಮಕ್ಕಳನ್ನು ಸಮಸ್ಯೆಯಿಂದ ಹೊರತರುವಲ್ಲಿ ಮತ್ತು ಮಕ್ಕಳ ಹಕ್ಕುಗಳ ರಕ್ಷಣೆ ಮಾಡುವಲ್ಲಿ ಮಕ್ಕಳ ಸಹಾಯವಾಣಿ ಸದಾ ಸಿದ್ಧ ಎಂದು ಮಕ್ಕಳ ಸಹಾಯವಾಣಿ ಕೇಂದ್ರದ ಜಿಲ್ಲಾ ಸಂಯೋಜಕ ಶಿವರಾಜ ವಿ. ಹೇಳಿದರು.
ಮಕ್ಕಳ ಸಹಾಯವಾಣಿ ಕೇಂದ್ರ ಮತ್ತು ಚೈತನ್ಯ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ತಾಲೂಕಿನ ಹೊಸರಿತ್ತಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಕ್ಕಳ ಸಹಾಯವಾಣಿ (1098) ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿ ವರ್ಷ ಮೇ 17ರಂದು ಅಂತಾರಾಷ್ಟ್ರೀಯ ಮಕ್ಕಳ ಸಹಾಯವಾಣಿ ದಿನವನ್ನಾಗಿ ಆಚರಿಸುವಂತೆ ಈ ವರ್ಷವೂ ಸಹ ‘ಕನೆಕ್ಟಿಂಗ್ ವಿತ್ ಚಿಲ್ಡ್ರನ್’ ಎಂಬ ಧ್ಯೇಯದೊಂದಿಗೆ ಸಾರ್ವಜನಿಕರಲ್ಲಿ ಜಾಗೃತಿಯನ್ನು ಮೂಡಿಸುವ ಸಲುವಾಗಿ ಮಕ್ಕಳ ಸಹಾಯವಾಣಿ ದಿನ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನ್ಯಾಯವಾದಿ ಜಿ.ಎ. ಹೀರೆಮಠ ಮಾತನಾಡಿ, ನಮ್ಮ ಜಿಲ್ಲೆಯಲ್ಲಿ ಮಕ್ಕಳ ಮೇಲೆ ನಡೆಯುವ ದೌರ್ಜನ್ಯಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಇಂಥ ದೌರ್ಜನ್ಯಗಳಿಂದ ಮಕ್ಕಳನ್ನು ರಕ್ಷಿಸಬೇಕಾದರೆ ಪ್ರತಿಯೊಬ್ಬ ನಾಗರಿಕನು ಎಲ್ಲ ಮಕ್ಕಳನ್ನು ತನ್ನ ಮಕ್ಕಳಂತೆ ಭಾವಿಸಬೇಕು. ದೌರ್ಜನ್ಯಗಳಿಗೆ ಒಳಗಾದಂತಹ ಮಕ್ಕಳ ರಕ್ಷಣೆ ಮಾಡುವಲ್ಲಿ ಚೈಲ್ಡ್ ಲೈನ್-1098 ಹಾವೇರಿ ತಂಡವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.
ಗ್ರಾಪಂ ಸದಸ್ಯ ಗುಡದಯ್ಯ ಬಿ. ಬರಡಿ, ಗಂಗವ್ವ ಎಸ್. ಸಾಂಗ್ಲಿ, ರೇಣುಕಾ, ಸ್ವಸಹಾಯ ಸಂಘದ ಅಧ್ಯಕ್ಷೆ ಗಂಗಮ್ಮ ಹಾಗೂ ಮಕ್ಕಳ ಸಹಾಯವಾಣಿ ಕವಿತಾ ಕೋರಿ, ಶಾಂತಾ ಚಿಟ್ಟಿ ಮತ್ತು ಮಾರುತಿ ಇದ್ದರು.