Advertisement

ಪ್ರೀತಿ, ವಿಶ್ವಾಸವೇ ಯೇಸು ಕ್ರಿಸ್ತರ ಆಶಯ

12:11 AM Apr 21, 2019 | mahesh |

ನಗರ: ಮನುಕುಲದ ಉದ್ಧಾರ ಮತ್ತು ರಕ್ಷಣೆ ಯೇಸು ಕ್ರಿಸ್ತರ ಬದುಕಿನ ಉದ್ದೇಶವಾಗಿತ್ತು. ಶಾಂತಿ, ಪ್ರೀತಿ, ತ್ಯಾಗ, ಸೇವೆ, ವಿಶ್ವಾಸ ಮತ್ತು ಭರವಸೆಗಳಿಂದ ಕೂಡಿದ ದೇವರ ರಾಜ್ಯ ನಡೆಸುವುದು ಯೇಸು ಕ್ರಿಸ್ತರ ಆಶಯವಾಗಿತ್ತು ಎಂದು ಮಾದೆ ದೇವುಸ್‌ ಚರ್ಚ್‌ನ ಪ್ರಧಾನ ಧರ್ಮಗುರು ವಂ| ಆಲ್ಫೆಡ್‌ ಜೆ. ಪಿಂಟೋ ಹೇಳಿದರು.

Advertisement

“ಗುಡ್‌ ಫ್ತೈಡೇ’ (ಶುಭ ಶುಕ್ರವಾರ) ದಿನದಂದು ಅವರು ಬೈಬಲ್‌ ಸಂದೇಶ ನೀಡಿದರು. ಶಿಲುಬೆಯ ಮೇಲೆ ಪ್ರಾಣ ಬಿಟ್ಟ ಯೇಸು ಕ್ರಿಸ್ತರು ಇಡೀ ವಿಶ್ವಕ್ಕೆ ಬೇಸರದ ದಿನ (ಕಪ್ಪು ದಿನ)ವಾಗಿ ಪರಿಣಮಿಸಿದರೂ ಯೇಸುಕ್ರಿಸ್ತರು ಮನು ಜನ ಪಾಪ ಪರಿಹಾರಕ್ಕಾಗಿ ತನ್ನನ್ನು ತಾನು ಸಮರ್ಪಿಸಿಕೊಂಡು ಪರಸ್ಪರ ಸೌಹಾರ್ದ, ಮಾನವೀಯತೆ, ಪ್ರೀತಿ, ಕ್ಷಮಾ ಗುಣವನ್ನು ಬೋಧಿಸಿದ್ದು ಕ್ರೈಸ್ತ ಬಾಂಧವರಿಗೆ ಶುಭ ಶುಕ್ರವಾರವಾಗಿ ಪರಿಣಮಿಸಿದೆ ಎಂದರು. ಚರ್ಚ್‌ನ ಸಹಾಯಕ ಧರ್ಮಗುರು ವಂ| ಪ್ರವೀಣ್‌ ಡಿ’ಸೋಜಾ ಧಾರ್ಮಿಕ ವಿಧಿವಿಧಾನದ ನೇತೃತ್ವ ವಹಿಸಿದ್ದರು. ಹಿರಿಯರಾದ ವಂ| ವಲೇರಿಯನ್‌ ಮಸ್ಕರೇನಸ್‌ ಮಿತ್ತೂರು ಧಾರ್ಮಿಕ ವಿಧಿ-ವಿಧಾನದಲ್ಲಿ ಪಾಲ್ಗೊಂಡರು.

ಮರೀಲ್‌ ಚರ್ಚ್‌
ಮರೀಲ್‌ ಸೇಕ್ರೆಡ್‌ ಹಾರ್ಟ್‌ ಚರ್ಚ್‌ ನಲ್ಲಿ ಬೈಬಲ್‌ ಸಂದೇಶ ವಾಚಿಸಿದ ಚರ್ಚ್‌ ನ ಧರ್ಮಗುರು ವಂ| ವಲೇರಿಯನ್‌ ಫ್ರಾಕ್‌, ಯೇಸುಕ್ರಿಸ್ತನ ಹಿಂಬಾಲಕರಾದ ನಾವು ನಿಲ್ಲಬೇಕಾದ್ದು ಅವರ ಮೌಲ್ಯಗಳಿಗಾಗಿ, ಸಾಗಬೇಕಾದ್ದು ಅವರದೇ ಗುರಿಯತ್ತ ಎಂದು ಹೇಳಿದರು. ಬೆಂದೂರ್‌ ಸೆಮಿನರಿಯ ಪ್ರಾಧ್ಯಾಪಕ ವಂ| ರಾಜೇಶ್‌ ರುಜಾರಿಯೋ, ಸ್ಥಳೀಯ (ಕೂಡಮರ) ಧರ್ಮಗುರು ಹಾಗೂ ಪ್ರಸ್ತುತ ಕಲಬುರಗಿ ಡಯೋಸಿಸ್‌ನ ಬಿಷಪ್‌ ಹೌಸ್‌ನಲ್ಲಿ ಸೇವೆ ಸಲ್ಲಿಸುತ್ತಿರುವ ವಂ| ವಿನ್ಸೆಂಟ್‌ ತೋರಸ್‌ ಧಾರ್ಮಿಕ ವಿಧಿವಿಧಾನದಲ್ಲಿ ಪಾಲ್ಗೊಂಡರು.

ಬನ್ನೂರು ಚರ್ಚ್‌
ಬನ್ನೂರು ಸಂತ ಅಂತೋನಿ ಚರ್ಚ್‌ನಲ್ಲಿ ಸಂತ ಫಿಲೋಮಿನಾ ಕಾಲೇಜಿನ ಕ್ಯಾಂಪಸ್‌ ನಿರ್ದೇಶಕ ವಂ| ಆ್ಯಂಟನಿ ಪ್ರಕಾಶ್‌ ಮೊಂತೇರೊ ಸಂದೇಶ ನೀಡಿ, ಪ್ರಭುಕ್ರಿಸ್ತರ ತ್ಯಾಗದ ಆಳ ಅಗಲಗಳನ್ನು ಅರಿಯಲು ಆಗದೆ ತೊಳಲಾಡುತ್ತಿದ್ದೇವೆ. ಕ್ರಿಸ್ತ ಶಿಲುಬೆಯ ಮೇಲೆ ನರಳುತ್ತಿಲ್ಲ ನಿಜ. ಆದರೆ ಜಗತ್ತಿನಾದ್ಯಂತ ಹಿಂಸೆ, ಶೋಷಣೆ, ಯುದ್ದ, ಲೂಟಿಗಳಲ್ಲಿ ಸಿಕ್ಕಿ ನರಳುತ್ತಿರುವ ಅಮಾಯಕ ಮುಗ್ಧ ಜನರ ನಡುವೆ ಕ್ರಿಸ್ತ ನರಳುತ್ತಿದ್ದಾರೆ. ಆ ಕ್ರಿಸ್ತನನ್ನು ಪೂಜಾ ವಿಧಿಗಳಿಗೆ ಸೀಮಿತವಾಗಿ ಎದುರುಗೊಳ್ಳುವುದು ನಾಟಕೀಯವಾದೀತು ಎಂದು ಹೇಳಿದರು.

ಪ್ರಧಾನ ಧರ್ಮಗುರು ವಂ| ಪ್ರಶಾಂತ್‌ ಫೆರ್ನಾಂಡೀಸ್‌ ಧಾರ್ಮಿಕ ವಿಧಿವಿಧಾನದ ನೇತೃತ್ವ ವಹಿಸಿದ್ದರು. ಪಾಲೋಟಾಯ್ನ ಮೇಳದ ಧರ್ಮಗುರು ವಂ| ಅಶೋಕ್‌ ಬೆಂಗಳೂರು ಧಾರ್ಮಿಕ ವಿಧಿ-ವಿಧಾನದಲ್ಲಿ ಪಾಲ್ಗೊಂಡರು. ಆಯಾ ಚರ್ಚ್‌ನ ಪಾಲನ ಸಮಿತಿಯ ಉಪಾಧ್ಯಕ್ಷ, ಕಾರ್ಯದರ್ಶಿ, ಸ್ಯಾಕ್ರಿಸ್ಟಿಯನ್‌, ಗುರಿಕಾರರು, ವೇದಿ ಸೇವಕರು, ಗಾಯನ ಮಂಡಳಿ ಸದಸ್ಯರು ಸಹಕರಿಸಿದರು. ನೂರಾರು ಸಂಖ್ಯೆಯಲ್ಲಿ ಭಕ್ತರು ಧಾರ್ಮಿಕ ವಿಧಿವಿಧಾನಗಳಲ್ಲಿ ಪಾಲ್ಗೊಂಡರು.

Advertisement

ಮೆರವಣಿಗೆ
ಮಾದೆ ದೇವುಸ್‌ ಚರ್ಚ್‌, ಬನ್ನೂರು ಸಂತ ಆಂತೋನಿ ಚರ್ಚ್‌, ಮರೀಲ್‌ ಸೆಕ್ರೇಡ್‌ ಹಾರ್ಟ್‌ ಚರ್ಚ್‌ನಲ್ಲಿ ಕ್ರೈಸ್ತ ಬಾಂಧವರು ಯೇಸುಕ್ರಿಸ್ತನ ಶಿಲುಬೆಯ ಹಾದಿಯ 14 ಸ್ಥಳಗಳನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿದರು. ಮಾದೆ ದೇವುಸ್‌ ಚರ್ಚ್‌ನಲ್ಲಿ ಪ್ರಭು ಯೇಸುವಿನ ಪೂಜ್ಯ ಶರೀರದ ಸ್ಮರಣ ಮೆರವಣಿಗೆಯು ಚರ್ಚ್‌ನಿಂದ ಹೊರಟು ಎಂ.ಟಿ. ರಸ್ತೆಯಿಂದ ಸಾಗಿ ಕೋರ್ಟ್‌ ರಸ್ತೆಯ ಮೂಲಕ ಮರಳಿ ಚರ್ಚ್‌ಗೆ ಆಗಮಿಸಿತು. ಮರೀಲ್‌ ಚರ್ಚ್‌ನಲ್ಲಿ ಚರ್ಚ್‌ ವ್ಯಾಪ್ತಿಯ 11 ವಾಳೆಗಳಲ್ಲಿನ ಕ್ರೈಸ್ತ ಬಾಂಧವರು ಕಾಡುಮನೆ ಮತ್ತು ಬೆದ್ರಾಳದಿಂದ ಶಿಲುಬೆಯೊಂದಿಗೆ ಮೆರವಣಿಗೆ ಮೂಲಕ ಚರ್ಚ್‌ಗೆ ಆಗಮಿಸಿದರು. ಬಳಿಕ ಯೇಸುಕ್ರಿಸ್ತರ ಪೂಜ್ಯ ಶರೀರವನ್ನು ಮತ್ತು ಮರಿಯಮ್ಮನ ಪಾದವನ್ನು ಭಕ್ತರು ಮುಟ್ಟಿ ಆಶೀರ್ವಾದ ಪಡೆದರು. ಬನ್ನೂರು ಚರ್ಚ್‌ನಲ್ಲಿ ಈ ವರ್ಷ ವಂ| ಪ್ರಶಾಂತ್‌ ಅವರ ಮಾರ್ಗದರ್ಶನದಲ್ಲಿ ಐಸಿವೈಎಂ ಸದಸ್ಯರು ಯೇಸುಕ್ರಿಸ್ತನ ಶಿಲುಬೆಯ ಹಾದಿಯ 14 ಸ್ಥಳಗಳನ್ನು ನಾಟಕದ ಮೂಲಕ ಅಭಿನಯಿಸಿ ತೋರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next