Advertisement

ಸಂಬಂಧದಲ್ಲಿ ಪ್ರೀತಿ, ವಿಶ್ವಾಸವೇ ಜೀವಾಳ 

02:54 PM Aug 06, 2018 | |

ನಿನ್ನ ಸಂಬಂಧಿಕರನ್ನು ನಾನೇ ಕೊಟ್ಟಿದ್ದೇನೆ, ಆದರೆ ನಿನ್ನ ಸ್ನೇಹಿತರನ್ನು ಮಾತ್ರ ನೀನೇ ಹುಡುಕಿಕೊಳ್ಳಬೇಕಪ್ಪಾ ಎಂದು ದೇವರು ನಮ್ಮನ್ನು ಸೃಷ್ಟಿಯಲ್ಲೇ ಹೇಳಿ ಕಳಿಸಿರುತ್ತಾನಂತೆ!

Advertisement

ಹೌದು, ಸಂಬಂಧಗಳು ನಿಜವಾಗಿಯೂ ದೇವರಿಂದಲೇ ನೀಡಲ್ಪಟ್ಟ ಒಂದು ಸುಂದರ ವರ. ಮಾನವ ಸಂಘ ಜೀವಿಯಾಗಿದ್ದು, ಒಂಟಿಯಾಗಿ ಬಾಳಲು ಸಾಧ್ಯವೇ ಇಲ್ಲ. ಒಂದು ಸಮಾಜದಲ್ಲಿದ್ದು ಪರಸ್ಪರ ಸಹಕರಿಸುತ್ತಾ ಜೀವನ ನಡೆಸುವುದರಿಂದ ಸುಖವಾದ ಬಾಳು ಸಾಧ್ಯ. ಆದರೆ ಸಮಾಜದ ಎಲ್ಲರೂ ಅತ್ಯಂತ ಆಪ್ತರಾಗಿರಲು ಸಾಧ್ಯವಿಲ್ಲ. ಆದ್ದರಿಂದಲೇ ದೇವರು ನಮಗೆ ತಾಯಿಯನ್ನು ಅತ್ಯಂತ ಅಪ್ತಳಾದ ಸಂಬಂಧಿಕಳನ್ನಾಗಿಸಿದ್ದಾನೆ. ಅನಂತರದ ಸ್ಥಾನದಲ್ಲಿ ಇತರರನ್ನು ಆಪ್ತರನ್ನಾಗಿಸಿದ್ದಾನೆ.

ಬಂಧುಗಳೊಂದಿಗೆ ಹಾಗೂ ಸುತ್ತಮುತ್ತಲ ಜನರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಮೂಲಕ ಜೀವನ ಸೊಗಸಾಗಲು ಸಾಧ್ಯ. ಅದೇ ರೀತಿ ಒಂಟಿತನ ಜೀವನವನ್ನು ರಸಹೀನವನ್ನಾಗಿಸಿ ಬದುಕನ್ನು ನೀರಸವಾಗಿರಿಸುತ್ತದೆ. ಒಂದು ಸಂಶೋಧನೆಯೊಂದರ ಪ್ರಕಾರ ಒಂಟಿಯಾಗಿರುವವರು ತಮ್ಮ ಒಂಟಿತನವನ್ನು ತಾಳಲಾರದೇ ಸಾಕುಪ್ರಾಣಿಗಳಲ್ಲಿ ತಮ್ಮ ಆತ್ಮೀಯರನ್ನು ಕಾಣುವ ಪ್ರಯತ್ನ
ಮಾಡುತ್ತಾರೆ. ನಾವು ಜೀವನದಲ್ಲಿ ಯಾಕೆ ಉತ್ತಮ ಸಂಬಂಧ, ಬಾಂಧವ್ಯವನ್ನು ಹೊಂದಬೇಕು ಎಂಬ ಪ್ರಶ್ನೆಗಳಿಗೆ ಜೀವನಾನುಭವದಲ್ಲೇ ಉತ್ತರಗಳು ಲಭಿಸುತ್ತವೆ.

ಒಂಟಿಬಾಳು ನರಕಕ್ಕೆ ಸಮಾನ ಎನ್ನುತ್ತದೆ ಸುಭಾಷಿತ. ಒಂಟಿಬಾಳು ಎಂದರೆ ಮದುವೆಯಾಗದೇ ಇರುವ ಬ್ರಹ್ಮಚಾರಿಗಳು ಎಂದು ಅರ್ಥೈಸಿಕೊಳ್ಳಬೇಕಾಗಿಲ್ಲ, ಸುತ್ತಮುತ್ತಲ ಎಲ್ಲರೊಂದಿಗೂ ತಮ್ಮ ನಂಟನ್ನು ಕಳೆದುಕೊಂಡು, ಯಾರೊಂದಿಗೂ ಬೆರೆಯದೇ, ಯಾರ ಸಹಾಯವನ್ನೂ ಪಡೆಯದೇ, ಯಾರಿಗೂ ಸಹಾಯ ಮಾಡದೇ ದೇವರಿಗೆ ಬಿಟ್ಟ ಹರಕೆಯ ಕುರಿಯ ತರಹ ತನ್ನ ಮನಸ್ಸಿಗೆ ತೋಚಿದ್ದನ್ನೇ ಮಾಡುತ್ತಾ ಕಾಲಕಳೆಯುವುದೇ ಒಂಟಿ ಜೀವನ. ಮನೆಯವರಿಂದ ದೂರಾಗಿದ್ದರೂ ತನ್ನ ಅಕ್ಕಪಕ್ಕದವರೊಂದಿಗೆ ಉತ್ತಮ ಬಾಂಧವ್ಯ ಮತ್ತು ಸಾಮರಸ್ಯ ಹೊಂದಿರುವವರನ್ನು ಒಂಟಿ ಎನ್ನಲಾಗುವುದಿಲ್ಲ. ಒಟ್ಟಾರೆ ನಾಲ್ಕು ಜನರ ಮಧ್ಯೆ ಇದ್ದು ಒಬ್ಬರಿಗೊಬ್ಬರು ಸಹಕರಿಸಿಕೊಳ್ಳುವ ಪ್ರವೃತ್ತಿಯಿದ್ದರೆ ಜೀವನ ಸುಂದರವಾಗಿಲಿದೆ.

ಅವಲಂಬನೆಯೇ ಜೀವನದ ಜೀವಾಳ
ಈ ಜಗತ್ತಿನಲ್ಲಿ ಪ್ರತಿಯೊಂದೂ ಅವಲಂಬಿತವಾಗಿದೆ. ಇದನ್ನು ಚೈನ್‌ ರಿಲೇಶನ್‌ ಎನ್ನುತ್ತಾರೆ. ಇಂತಹ ಅವಲಂಬನೆಗಳೇ ನಿಸರ್ಗವನ್ನು ಜೋಡಿಗಳಾಗಿಸಿದೆ. ಪ್ರತಿ ಜೀವಿಯಲ್ಲಿಯೂ ಗಂಡು ಹೆಣ್ಣು ಜಾತಿಗಳನ್ನು ಸೃಷ್ಟಿಸಿ, ಒಂದು ಇನ್ನೊಂದಕ್ಕೆ ಪರಸ್ಪರ ಅವಲಂಬಿಸುವಂತೆ ಮಾಡಿದೆ. ಇದಕ್ಕೆ ಮನುಕುಲವೂ ಹೊರತಾಗಿಲ್ಲ. ಪ್ರತಿ ಗಂಡಿಗೂ ಒಂದು ಹೆಣ್ಣು ಎಂಬುದು ನಿಸರ್ಗ ಸೃಷ್ಟಿಸಿ. ಜೋಡಿಯಾಗಿರುವ ಭಾವನೆ ಪರಸ್ಪರರಿಗೆ ಅವಲಂಬಿತರಾಗುವ ಮೂಲಕ ನಿಸರ್ಗದ ನಿಯಮದ ಪಾಲನೆಯಾಗುತ್ತದೆ. ಅಂತೆಯೇ ನಮ್ಮ ಬಂಧು ಮಿತ್ರರ ನಡುವೆಯೂ ಪರಸ್ಪರ ಅವಲಂಬನೆಯೇ ಜೀವನ ಸುಖದ ತಳಪಾಯವಾಗಿದೆ. ಕೆಲವು ಸಂದರ್ಭದಲ್ಲಿ ಒಂಟಿಯಾಗಿಯೇ ಇರಬೇಕು ಎಂದು ಇಚ್ಚೆ ವ್ಯಕ್ತಗೊಂಡರೂ, ಒಂದಲ್ಲ ಒಂದು ದಿನ ತನಗೊಬ್ಬ ಸಂಗಾತಿ ಇದ್ದರೆ ಒಳ್ಳೆಯದಿತ್ತು ಎಂದು ಭಾವಿಸುವ ಸಮಯ ಬಂದೇ ಬರುತ್ತದೆ.

Advertisement

ಸಂಬಂಧದಲ್ಲಿದ್ದಾಗ ಸಂತಸ ಹೆಚ್ಚು
ಯಾವುದೇ ಸಂಬಂಧದಲ್ಲಿ ಕೇವಲ ಸುಖ ಮಾತ್ರ ಇರುತ್ತದೆ ಎಂದು ಹೇಳಲಾಗದು. ಯುಗಾದಿಯಲ್ಲಿ ನೀಡುವ ಬೇವು ಬೆಲ್ಲವೂ ಜೀವನದ ಸುಖದುಃಖಗಳನ್ನು ಸಮಾನವಾಗಿ ಸ್ವೀಕರಿಸುವಂತೆ ತಿಳಿಸುವ ಚಿಹ್ನೆ. ಆದರೆ ಜೀವನದ ಮಧ್ಯೆ ಬರುವ ಕಷ್ಟಗಳನ್ನು ಎದುರಿಸಲು ನಮ್ಮ ಸಂಬಂಧಗಳೇ ಪ್ರೇರಣೆ ನೀಡುತ್ತವೆ. ಕಷ್ಟಗಳನ್ನು ಎದುರಿಸಿದ ನಡೆವ ಜೀವನ ಹೆಚ್ಚು ಸುಖ ನೀಡುತ್ತದೆ. ಸಂಬಂಧಗಳ ಮೂಲಕ ಸಿಗುವ ಸುಖಕ್ಕಾಗಿ ದುಃಖವನ್ನು ಎದುರಿಸಲೂ ಸಿದ್ಧರಿರುತ್ತಾರೆ. ಆದ್ದರಿಂದಲೇ ವಿಶ್ವದಾದ್ಯಂತ ವಿವಾಹ ವ್ಯವಸ್ಥೆ ಅತ್ಯಂತ ಯಶಸ್ವಿಯಾಗಿದೆ. ಮಾನುಷ್ಯನ ಖನ್ನತೆಗಳಿಗೆ ಕಾರಣಗಳನ್ನು ಹುಡುಕುತ್ತಾ ಹೋದರೆ, ಒಂಟಿತನಕ್ಕೆ ಪ್ರಮುಖವಾದ ಕಾರಣವಾಗಿರುವುದು ಕಂಡುಬರುತ್ತದೆ. ಮನಃಶಾಸ್ತ್ರಜ್ಞರ ಪ್ರಕಾರ ಒಂಟಿಯಾಗಿರುವುದು ಮಾತ್ರವಲ್ಲ, ಸುತ್ತ ಮುತ್ತಲ ಜನರೊಂದಿಗೆ ಹೊಂದಿಕೊಳ್ಳದೇ ಇರುವುದೂ ಖನ್ನತೆಗೆ ಇನ್ನೊಂದು ಕಾರಣ.

ಸುರಕ್ಷೆ ಭಾವನೆ
ಒಂಟಿಯಾಗಿರದೇ ನಿಮ್ಮ ಜತೆಗೆ ಮನೆಯವರಿದ್ದಾಗ ನಮ್ಮಲ್ಲಿ ಸುರಕ್ಷೆಯ ಭಾವನೆ ಮೂಡುತ್ತದೆ. ಮನೆಗೆ ಹಿರಿಯರಾಗಿದ್ದವರಿಗೆ ತಮ್ಮನ್ನು ಅವಲಂಬಿಸಿದವರಿಗೆ ಸುರಕ್ಷೆ ನೀಡಬೇಕಾದ ಜವಾಬ್ದಾರಿ ಜೀವನದ ಹುಮ್ಮಸ್ಸನ್ನು ಹೆಚ್ಚಿಸಿದರೆ ಅವರ ಮನೆಯವರು ಹಿರಿಯರಿರುವ ಸುರಕ್ಷೆ ಜತೆಗೆ ನೆಮ್ಮದಿಯಿಂದಿರುತ್ತಾರೆ. ನಮ್ಮ ಜೀವನದಲ್ಲಿ ಸುರಕ್ಷೆಯೂ ಊಟ, ಬಟ್ಟೆ ಮತ್ತು ವಸತಿಗಳಂತೆಯೇ ಜೀವನಾವಶ್ಯವಾಗಿದೆ.  

 ಕಾರ್ತಿಕ್‌ ಅಮೈ

Advertisement

Udayavani is now on Telegram. Click here to join our channel and stay updated with the latest news.

Next