ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ನಡುವೆ ಲವ್ ಅಂಡ್ ಹೇಟ್ ಸಂಬಂಧ ಎಂದು ಹೇಳುವ ಮೂಲಕ ಪರೋಕ್ಷವಾಗಿ ಟೀಕಿಸಿದ್ದು ಬಿಜೆಪಿ ಶಾಸಕ, ಮಾಜಿ ಸಚಿವ ಬಸವರಾಜ್ ಬೊಮ್ಮಾಯಿ.
ಶುಕ್ರವಾರ ವಿಧಾನಸಭೆ ಕಲಾಪದಲ್ಲಿ ರಾಜ್ಯಪಾಲ ವಜೂಭಾಯ್ ವಾಲಾ ಅವರ ಭಾಷಣದ ಮೇಲಿನ ಚರ್ಚೆ ವೇಳೆ ಬೊಮ್ಮಾಯಿ ಈ ವಿಷಯ ಪ್ರಸ್ತಾಪಿಸಿದ್ದರು.
ನಾನು ಸಾಂದರ್ಭಿಕ ಶಿಶು, ಕಾಂಗ್ರೆಸ್ ನವರ ಹಂಗಿನಲ್ಲಿ ನಾನಿದ್ದೇನೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದರು. 1984ರಲ್ಲಿ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದಾಗ ನಡೆದ ಲೋಕಸಭಾ ಚುನಾವಣೆಯಲ್ಲಿ ಜನತಾ ಪಕ್ಷ ಕೇವಲ 4 ಸ್ಥಾನಗಳಲ್ಲಷ್ಟೇ ಗೆಲುವು ಸಾಧಿಸಿತ್ತು. ಆಗ ರಾಮಕೃಷ್ಣ ಹೆಗಡೆ ಅವರು ರಾಜೀನಾಮೆ ಕೊಟ್ಟು ಜನರ ಮುಂದೆ ಹೋಗಿದ್ದರು. ಇಲ್ಲಿಯೂ ಕುಮಾರಸ್ವಾಮಿ ಇಂತಹ ಗಟ್ಟಿ ನಿಲುವು ತೆಗೆದುಕೊಳ್ಳುತ್ತಾರಾ ಎಂದು ಬೊಮ್ಮಾಯಿ ಪ್ರಶ್ನಿಸಿದ್ದರು.
ಜಾತಕ ಹೊಂದಾಣಿಕೆ ಆಗಿದೆ:
ದೇವೇಗೌಡರ ರಾಜಕಾರಣದಲ್ಲಿ ಪ್ರಮುಖರಾಗಿ ಪಾತ್ರವಹಿಸಿದವರಲ್ಲಿ ಸಿದ್ದರಾಮಯ್ಯನವರು ಒಬ್ಬರು. ಇಂದು ದೇವೇಗೌಡರು, ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯನವರ ಜಾತಕ ಹೊಂದಾಣಿಕೆಯಾಗಿದೆ. ರೇವಣ್ಣನವರದ್ದು ಎಂದು ಮಧ್ಯೆ ಪ್ರಶ್ನೆಯೊಂದು ತೇಲಿಬಂದಾಗ ಅವರದ್ದು ಬಿಡಿ ಇಂಟರ್ ನ್ಯಾಶನಲ್ ಎಂದರು. ಡಿಕೆಶಿ ಎಚ್ ಡಿಕೆ ಜಾತಕ ಹೇಗೆ ಹೊಂದಾಣಿಕೆ ಆಯ್ತು ಅಂತ ಗೊತ್ತಾಯ್ತು ಎಂದರು.
ಆದರೆ ಈಗ ದೇವೇಗೌಡರಿಂದ ಸಿದ್ದರಾಮಯ್ಯಗೆ ಅಧಿಕಾರ ಸಿಕ್ತೋ ಅಥವಾ ಸಿದ್ದರಾಮಯ್ಯನವರಿಂದ ದೇವೇಗೌಡರಿಗೆ ಅಧಿಕಾರ ಸಿಕ್ತೋ ಎಂಬುದು (ರಾಜಕೀಯವಾಗಿ ಅಲ್ಲ, ಜಾತಕದ ಪ್ರಕಾರ) ತಜ್ಞರು ವಿಶ್ಲೇಷಿಸಬೇಕು ಎಂದು ಹೇಳಿದರು.