2020ರಂದು ನನ್ನ ಜನನವಾಯಿತು. ನನ್ನ ತಾಯಿ ನನ್ನನ್ನು ತನ್ನ ಕೈಗಳಿಂದ ಆಲಂಗಿಸಿ, ಮೈ ಎಲ್ಲ ನೆಕ್ಕಿ ಪ್ರೀತಿ ತೋರಿದ್ದಳು. ಅವಳ ಎದೆ ಹಾಲನ್ನು ನಾನು ಚಪ್ಪರಿಸಿ ಕುಡಿದೆ. ಅಮೃತದಂತೆ ಇತ್ತು. ನನ್ನ ಬಿಳಿಯ ಮೈ ಬಣ್ಣ ನೋಡಿ ನನ್ನ ತಾಯಿಯ ಒಡತಿ ನನ್ನನ್ನು ಮುದ್ದಿಸಿದಳು. ನನ್ನ ತಾಯಿಗೂ ಏನೋ ಒಂದು ತರ ಖುಷಿ ಆಯ್ತು. ಹೀಗೆ ದಿನಗಳು ಕಳೆದವು. ನಾನು ಓಡಾಡಲು ಪ್ರಾರಂಭಿಸಿದೆ. ಆಗಾಗ್ಗೆ ಸ್ವಲ್ಪ ಹೊರಗೆ ಬಿಡುತ್ತಾ¤ ಇದ್ದರು. ಸ್ವಲ್ಪ ದಿನ ಕಳೆಯುವುದರೊಳಗೆ ನನ್ನ ಮೈ ಮೇಲೆ ಬಿಳಿಯ ಕೂದಲು ಬೆಳೆಯಲು ಆರಂಭವಾಗಿತ್ತು. ನಾನು ಜನಿಸಿದ್ದು bichon ಜಾತಿಯಲ್ಲಿ ಎಂದು ಹೇಳಿದ್ದು ತಿಳಿಯಿತು. ನನ್ನ ಜಾತಿಯಲ್ಲಿ ಮೈ ಕೂದಲು ಉದುರುವುದಿಲ್ಲ ಎಂದು ಅಮ್ಮನ ಒಡತಿ ಹೇಳುತ್ತಾ ಇದ್ದಳು. ಆಗೆಲ್ಲ ಅನ್ನಿಸುತ್ತಾ ಇತ್ತು ನನಗೆ ಏಕೆ ಮಾತಾಡಲು ಬರುವುದಿಲ್ಲ, ಬಂದಿದ್ದರೆ ಎಷ್ಟು ಚೆನ್ನಾಗಿ ಇರುತ್ತದೆ ಎಂದು. ನನ್ನ ಮುಂದಿನ ಎರಡು ಕಾಲುಗಳನ್ನು ಕೈ ಎಂದೇ ಆಕೆ ಕರೆಯುತ್ತಾ ಇದ್ದಳು. ನಿಜ ಕೈ ಕೆಲಸ ಮಾಡುತ್ತಿದ್ದ ಹಾಗೆ ನನ್ನ ಮುಂದಿನ ಕಾಲುಗಳು ಮಾಡುತ್ತಾ ಇದ್ದವು. ಅಮ್ಮನ ಆರೈಕೆಯಲ್ಲಿ ಅವಳ ಹಾಲು ಕುಡಿಯುತ್ತಾ ಅವಳಿಗೆ ಒತ್ತಿ ಮಲಗುತ್ತಿದ್ದೆ. ಆ ಪ್ರೀತಿ ಹೇಳಲು ಸಾಧ್ಯವೇ?
*****
ಹೀಗಿರುವಾಗ ಒಂದು ದಿನ ಯಾರೋ ಬಂದು ನನ್ನನ್ನು ಎತ್ತಿ ಕೊಂಡರು. ಕ್ಷಣ ಭಯವಾಯಿತು. ಬಿಟ್ಟುಬಿಡಿ ಎಂದು ಕನಲಿದೆ. ಆದರೆ ಅವರಿಗೆ ಅರ್ಥವೇ ಆಗಲಿಲ್ಲ. ನನ್ನನ್ನು ಎಲ್ಲೋ ಕರೆದುಕೊಂಡು ಹೋಗಬಹುದು ಎಂದು ಅರಿವಾಗಿ, ತುಂಬಾ ಬೇಸರವಾಯಿತು. ನನ್ನ ಅಮ್ಮ ಕಿರುಚುತ್ತಾ ಅಳುತ್ತಾ ಇದ್ದಳು. ಅವಳ ಕಣ್ಣಲ್ಲಿ ನೀರು ಹರಿಯುತ್ತ ಇತ್ತು. ಅಮ್ಮ, ಅಮ್ಮ ಎಂದು ಬಾ ಮಗು ಎನ್ನುತ್ತಾ ಇದ್ದಳು. ಆದರೇನು ಮಾಡಲಿ ಆ ಮನುಷ್ಯರು ನನ್ನನ್ನ ಕರೆದುಕೊಂಡು ಹೊರಟೇ ಬಿಟ್ಟರು. ಎಂದೂ ಕಾಣದಿದ್ದ ಜಾಗದಲ್ಲಿ ನನ್ನನ್ನು ಕೂರಿಸಿದರು. ಅದೇನು ಎಂದು ತಿಳಿಯಲು ಇಲ್ಲ. ವೇಗವಾಗಿ ಎಲ್ಲಿಯೋ ಓಡಿದಂತೆ ಆಗುತ್ತಾ ಇತ್ತು.
ಇವರು ಯಾರು ನನಗೆ ಬೇಡ ಎನ್ನಿಸಿತು. ಅಮ್ಮನನ್ನೇ ನೆನೆಸುತ್ತಾ ಹಾಗೇ ಮಲಗಿ ಬಿಟ್ಟೆ. ಅಂದು ಫೆಬ್ರವರಿ 8, 2021 ಎಂದು ಯಾರೋ ಹೇಳಿದಂತೆ ಆಗಿ, ಹಾಗೇ ಎಚ್ಚರವಾಯಿತು. ಯಾರೋ ಸ್ನೋಯಿ ಎಂದು ಕರೆಯುತ್ತಾ ಇದ್ದರು. ನನಗೆ ಅದು ನನ್ನ ಹೆಸರೇ ಎಂದು ತಿಳಿಸಿದರು. ಕರೆದ ಆ ಹೆಣ್ಣು ಮಕ್ಕಳು ನನಗೆ ಇಷ್ಟವಾದರು. ನನ್ನನ್ನು ಎತ್ತಿಕೊಂಡು ಒಂದು ಜಾಗಕ್ಕೆ ಕರೆದುತಂದರು. ಹೊಸ ಜಾಗ, ಹೊಸ ಜನ. ಹೆದರಿಕೆಯಿಂದ ಅÇÉೆ ಮಲ ಮಾಡಿಕೊಂಡು ಬಿಟ್ಟೆ. ವಾಂತಿಯು ಬರುವಂತೆ ಆಗುತ್ತಾ ಇತ್ತು. ಅವರ ಮಧ್ಯೆ ಒಬ್ಬ ದೊಡ್ಡ ಹುಡುಗ ಇದ್ದ. ನನ್ನನ್ನು ಕರೆದುಕೊಂಡು ಬಂದವರು ನೋಡು ಸ್ನೋಯಿ ಇದು ಅಪ್ಪ, ಇದು ಅಮ್ಮ, ಇದು ಅಣ್ಣ, ಇವರಿಬ್ಬರೂ ನಿನ್ನ ಅಕ್ಕಂದಿರು. ನೀನು ಪುಟ್ಟ ತಮ್ಮ ಎಂದೆಲ್ಲ ಪರಿಚಯಿಸಿದರು. ನನಗೋ ಇನ್ನೂ ನನ್ನ ಅಮ್ಮ, ಅಮ್ಮನ ಒಡತಿಯೆ ಕಣ್ಣ ಮುಂದೆ ಬರುತ್ತಾ ಇದ್ದರು.
ಇವರೆಲ್ಲ ಬೇಡ ಅನ್ನಿಸುತ್ತಾ ಇತ್ತು. ತಿನ್ನಲು ಏನೋ ಕೊಟ್ಟರು. ಇನ್ನೇನು ಮಾಡಲಾಗುತ್ತೆ ಸದ್ಯ ತಿನ್ನುವುದಕ್ಕೆ ಕೊಟ್ಟರಲ್ಲ ಎಂದು ಸಮಾಧಾನ ವಾಯ್ತು. ನನ್ನ ಸುತ್ತ ಎಲ್ಲರೂ ತುಂಬಿಕೊಂಡು ಮಾತಾಡುತ್ತಾ, ನೋಡುತ್ತಾ ಇದ್ದು ನೋಡಿ ಸ್ವಲ್ಪ ಧೈರ್ಯ ಬಂತು. ಆಗಾಗ್ಗೆ ಸ್ನೋಯಿ ಸ್ನೋಯಿ ಎಂದು ಕರೆದಾಗ ಓಹೋ ನನ್ನ ಹೆಸರು ಸ್ನೋಯಿ ಎಂದು ಅರ್ಥ ಮಾಡಿಕೊಂಡೆ. ಎಷ್ಟು ದೊಡ್ಡ ಮನೆ. ನನಗೆ ಒಂದು ಚಿಕ್ಕ ರೂಮಿನ ತರಹ ಮಾಡಿ ಹಾಸಿಗೆ ಹಾಕಿ ಹೊದಿಕೆ ಹೊದಿಸಿ ಮಲಗಿಸಿ ಮುದ್ದು ಮಾಡಿದರು. ಏನೋ ಸಮಾಧಾನವಾಯಿತು. ಎರಡು ರಾತ್ರಿ ಕಳೆಯುವುದರಲ್ಲಿ ನಾನು ಇಲ್ಲಿಯೇ ಇರಬೇಕು ಎಂದು ತಿಳಿದುಕೊಂಡೆ.
ಆದರೂ ನನ್ನ ಅಮ್ಮನ ನೆನಪು ಆಗುತ್ತಲೇ ಇತ್ತು. ಪಾಪ ಅಮ್ಮ ನನಗಾಗಿ ಎಷ್ಟು ಕರೆದಿದ್ದಾಳೆ ಎಷ್ಟು ಅತ್ತಿದ್ದಾಳೆ ಎಂದು ಎಣಿಸಿ ನೋವಾಯ್ತು. ಯಾರ ಹತ್ತಿರ ಹೇಳಲಿ. ಮತ್ತೂಮ್ಮೆ ನನಗೆ ಮಾತು ಬಂದಿದ್ದರೆ ಎನ್ನಿಸಿತು. ನನ್ನ ಜತೆಯಲ್ಲೇ ಜನಿಸಿದ ಅಣ್ಣನ ನೆನಪು ಆಯಿತು. ನಾವೆಲ್ಲ ಒಟ್ಟಾಗಿ ಎಷ್ಟು ಚೆನ್ನಾಗಿ ಇದ್ದೆವು. ಅಯ್ಯೋ ನಾನು ಇಲ್ಲಿ ಒಬ್ಬನೇ ಏನು ಮಾಡಲಿ ಎಂದು ಅತ್ತೆ. ನಾವೆಲ್ಲ ಒಂದೇ ತರಹ ಇದ್ದೇವೆ ಈ ಮನುಷ್ಯರು ಏಕಿಲ್ಲ ಅನ್ನಿಸಿತು.
ನನಗೆ ತುಂಬಾ ಭಯದ ಸ್ವಭಾವ. ಬೇಗ ಹೆದರಿಕೊಳ್ಳುತ್ತೇನೆ. ಒಂಟಿಯಾಗಿ ಇರಲು ಆಗುವುದೇ ಇಲ್ಲ. ನನ್ನ ಈ ಮನೆಯ ಹಾಲಿನಲ್ಲಿ ಮಲಗಿಸಿ ಎಲ್ಲರೂ ಮೆಟ್ಟಿಲು ಹತ್ತಿ ಮೇಲೆ ಹೋಗುತ್ತಾ ಇದ್ದರು. ನನಗೆ ಹತ್ತಲು ಬರುತ್ತಲೆ ಇರಲಿಲ್ಲ. ಎಲ್ಲರೂ ಎಲ್ಲ ಹೋದಾಗ ನನ್ನನು ಬೇರೆ ಎಲ್ಲೋ ಬಿಡುತ್ತಾ ಇದ್ದರು. ಅದು ನನಗೆ ಕೊಂಚವೂ ಇಷ್ಟವಾಗುತ್ತ ಇರಲಿಲ್ಲ. ನನ್ನ ಕಣ್ಣೀರು ಯಾರಿಗೂ ಕಾಣುತ್ತಾ ಇರಲಿಲ್ಲ. ನನ್ನ ಅಪ್ಪ ಅನ್ನುವವರು ಬಂದು ಕರೆದುಕೊಂಡು ಹೋದಾಗ ಸ್ವಲ್ಪ ಸಂತೋಷವಾಗುತ್ತಾ ಇತ್ತು. ಆಗ ಚೆನ್ನಾಗಿ ನಿದ್ದೆ ಮಾಡುತ್ತಾ ಇದ್ದೇ.
*****
ನನ್ನ ಮೈ ಮೇಲೆ ಕೂದಲು ಹೆಚ್ಚು ಬೆಳೆದಂತೆಲ್ಲ ನನ್ನನ್ನು ಪಾಲರ್ìಗೆ ಕರೆದಕೊಂಡು ಹೋಗಿ ಟ್ರಿಮ್ ಮಾಡಿಸಿ ನನ್ನ ನೈಲ್ಸ್ ಕತ್ತರಿಸಿ ಕರೆತರುತ್ತಾರೆ. ಆಗ ಮೈ ಎಲ್ಲ ಹಗುರ ವಾದಂತೆ ಆಗುತ್ತಾ ಇತ್ತು. ಈ ರೀತಿ ದಿನಚರಿಯಲ್ಲಿ ತಿಂಗಳುಗಳು ಉರುಳಿದ್ದೆ ತಿಳಿಯಲಿಲ್ಲ.
ನನಗೆ ಒಂದು ವರ್ಷವಾಯ್ತು ನನಗೂ happy Birthday ಎಂದು wish ಮಾಡಿದಾಗ ತಲೆ ಅಲ್ಲಾಡಿಸಿ ಜಂಭ ಪಟ್ಟೆ. ಹೊರಗೆ ಹೋಗುವಾಗಲೆಲ್ಲ ನನಗೆ ಈಗ ಚಿರಪರಿಚಿತ ವಾದ ಕಾರ್‌ನಲ್ಲಿ ಅಮ್ಮನ ತೊಡೆಯ ಮೇಲೆ ಕುಳಿತು ಊರೆಲ್ಲ ನೋಡುತ್ತಾ ಬೀಗುತ್ತಾ ಇದ್ದೇ. ಈ ಅಮ್ಮ ನನ್ನ ಹೆತ್ತಮ್ಮ ನನ್ನ ಮರೆಸಿಯೆ ಬಿಟ್ಟಳು. ಅಪ್ಪನ ನಂಟು, ನನ್ನ ಪಾಲರ್ರ್, ಊಟಾ, ಟ್ರೀಟ್ ಇತ್ಯಾದಿ ನೋಡಿಕೊಳ್ಳುತ್ತಾ ನನ್ನ ಅಪ್ಪನೇ ಆದ. ಪ್ರೀತಿಯ ಅಪ್ಪ ನನಗೆ ತುಂಬಾ ಇಷ್ಟ.
ನನ್ನ ಅಕ್ಕ ಅವನಿ ನನಗೆ ನಿಧಾನವಾಗಿ ಮಹಡಿ ಮೆಟ್ಟಿಲು ಹತ್ತಲು ಕಳಿಸಿದಳು. ಅವಳನ್ನು ಕಂಡರೆ ನನಗೆ ಆಡುವ ಮನಸ್ಸಾಗುತ್ತದೆ. ಜಾನ್ ಅವಳ ಅಣ್ಣನ ಎಲ್ಲ ಮಾತುಗಳನ್ನು ಅರ್ಥ ಮಾಡಿಕೊಂಡು ಆಡಿಸುತ್ತಾಳೆ. ಇನ್ನೊಬ್ಬ ಅಕ್ಕ ಅನ್ವಿ ಕಂಡರೂ ನನಗೆ ಇಷ್ಟ, ಆದರೆ ಯಾಕೋ ಅವಳು ನನ್ನ ಹತ್ತಿರ ಬರುವುದೇ ಇಲ್ಲ. ಒಂದೆರಡು ಸಾರಿ ನನಗೆ ಮುದ್ದು ಮಾಡಲು ಹೋಗಿ ಜಿಗುಟಿ ಬಿಟ್ಟಿದ್ದಳು. ಅವಳೆಂದರೆ ನನಗೆ ಸ್ವಲ್ಪ ಹೆದರಿಕೆ.
ಈಗ ಮೆಟ್ಟಿಲು ಹತ್ತಲು ಬಂದ ಮೇಲೆ ನನ್ನ ಅಣ್ಣ ನನ್ನನು ಅವನ ಪಕ್ಕದಲ್ಲೇ ಮಲಗಿಸಿಕೊಳ್ಳಲು ಶುರು ಮಾಡಿದ. ಮುದ್ದು ಅಣ್ಣ ನನ್ನ ಗಲಿಜೆಲ್ಲ ಅವನೇ ಕ್ಲೀನ್ ಮಾಡುತ್ತಾನೆ. ನನ್ನನು ಎತ್ತಿಕೊಂಡು ರಾತ್ರಿ ಹೊತ್ತು ಪುಟ್ಟ ವಾಕಿಂಗ್ ಕರೆದುಕೊಂಡು ಹೋಗುತ್ತಾನೆ. ಅವನು ಸ್ಕೂಲ್‌ನಿಂದ ಬರುವುದನ್ನೇ ನಾನು ಕಾಯುತ್ತೇನೆ. ಬಾಗಿಲ ಗಂಟೆ ಹೊಡೆದೊಡನೇ ಓಡಿ ಹೋಗುತ್ತೇನೆ ಆಗ ನಾವಿಬ್ಬರೂ ಸಖತ್ತಾಗಿ ಆಡುತ್ತೇವೆ. ಇಬ್ಬರಿಗೂ ತೃಪ್ತಿ ಆದಮೇಲೆ ನಾನು ಸುಮ್ಮನಾಗುತ್ತೇನೆ.
*****
ಒಂದು ದಿನ ಇದ್ದಕ್ಕಿದ್ದಂತೆ ಮನೆಗೆ ಸೂಟ್ಕೇಸ್ ಸಮೇತ ಒಬ್ಬರು ಬಂದರು. ನನ್ನ ಅಕ್ಕಂದಿರು ಅವರನ್ನು ಅಮ್ಮಮ್ಮ ಎಂದು ನನಗೆ ಪರಿಚಯಿಸಿದರು. ಬಂದವರು ಸ್ನೋಯಿ ಪುಟ್ಟ ಮರಿ ಎಂದು ಮುದ್ದು ಮಾಡಲು ಬಂದರು. ನಾನು ಜೋರಾಗಿ ಬೊಗಳಿದೆ ಆಮೇಲೆ ಮೂಸಿ ನೋಡಿದೆ ಇರಲಿ ಮತ್ತೆ ನೋಡೋಣ ಎಂದು ಅಪ್ಪನ ಬಳಿ ಬಂದೆ. ಬಂದವರು ನಮ್ಮ ಮನೆಯಲಿ ಉಳಿದುಕೊಂಡರು.
ಮಾರನೇ ದಿನ ಬೆಳಗ್ಗೆ ಎದ್ದೊಡನೆ ನನ್ನ ಬಳಿ ಬಂದರು. ನನ್ನ ಕಂಡು ಹೆದರಿದಂತೆ ಇತ್ತು. ಯಾರಪ್ಪ ನಮ್ಮ ಮನೆಯಲ್ಲಿ ಇವರು ಎಂದು ನನಗೂ ಅನ್ನಿಸಿತು. ಎರಡು ದಿನ ಕಳೆಯಿತು .ಅವರ ಮಾತೆಲ್ಲ ಕೇಳಿಸಿಕೊಂಡೆ.ಅವರು ಇದ್ದ ಊರಲ್ಲಿ ಡೆಕ್ಸರ್ ಇರುವನಂತೆ ನಮ್ಮವನೆ ಅಂತೆ ಇವರು ಸಿಂಬಾ ಎಂದು ಕರೆಯುತ್ತಾ ಅವರಿಗೆ ಸಿಂಬ ತುಂಬಾ ಇಷ್ಟವಂತೆ… ಹೀಗೇ ಇವರ ಮಾತೆಲ್ಲ ಕೇಳಿಸಿಕೊಂಡ ನನಗೆ ಹೊಸ ಅಮ್ಮಮ್ಮ ಇಷ್ಟ ವಾಗುತ್ತ ಬಂದರು. ಮೆಲ್ಲಗೆ ಅವರು ನನಗೆ ದೋಸೆ, ಹಣ್ಣು, ತರಕಾರಿ, ಚಪಾತಿ ಕೊಡಲು ಆರಂಭ ಮಾಡಿದರೂ ತುಂಬಾ ಖುಷಿ ಆಯ್ತು. ಆರಾಮವಾಗಿ ಅವರ ಜತೆ ಬೆರೆತೆ.
ಬಿಸಿಲಿನ ಕಾಲ ಎಲ್ಲರೂ ಒಟ್ಟಿಗೆ ವಾಕಿಂಗ್ ಹೋಗಲು ಆರಂಭ ಮಾಡಿದರು. ಇಲ್ಲೇನೋ ಟ್ರಕ್ಕಿಂಗ್, ವಾಕಿಂಗ್ ಎಲ್ಲ ಹೇಳುತ್ತಾರೆ. ಒಟ್ಟಾರೆ ನನಗೆ ಹೊರಗೆ ಹೋಗಲು ಖುಷಿ. ಗಂಟೆ ಗಟ್ಟಲೆ ಸುತ್ತಾಡಿ ಬಂದ ಕೂಡಲೇ ಚೆನ್ನಾಗಿ ನಿದ್ದೆ ಮಾಡುತ್ತಾ ಇದ್ದೇ. ಹೊಸ ಅಮ್ಮಮ್ಮ ಹಳಬರಾಗಿ ನನ್ನನು ಮುದ್ದಿಸುತ್ತಾ ಏನಾದರೂ ತಿನ್ನಲು ಕೊಡುತ್ತಾ ಇದ್ದದ್ದು ನನಗೆ ಹೆಚ್ಚು ಖುಷಿ ಕೊಡುತ್ತಾ ಇತ್ತು. ಬರಬರುತ್ತಾ ಬಿಸಿಲು ಕಡಿಮೆ ಆಗುತ್ತಾ ಬರುತ್ತಿತ್ತು.
ಈ ನಡುವೆ ಒಂದು ದಿನ ನನ್ನನ್ನು ಪಾಲರ್‌ಗೆ ಬಿಟ್ಟರು. ಮನೆಗೆನೋ ಬಂದೆ ಆದರೆ ಕೆಟ್ಟ ಹೊಟ್ಟೆ ನೋವು, ಊಟಾ ಸೇರದು ಏನೋ ಹಿಂಸೆ, ಅಳುತ್ತಿದ್ದೆ. ಡಾಕ್ಟರ್ ಬಳಿ ಕರೆದುಕೊಂಡು ಹೋ ಡ್ರಿಪ್ಸ್ ಎಲ್ಲ ಹಾಕಿಸಿದರು ಸರಿ ಹೋಗಲೇ ಇಲ್ಲ. ನನ್ನ ಬಾಯಿ ರುಚಿಯೂ ಕೆಟ್ಟು ಹೋಗಿತ್ತು. ಅಮ್ಮಮ್ಮ ಕೊಡುವ ಚಪಾತಿ ದೋಸೆಯ ನೆನಪಾಯ್ತು. ಏನೇನೋ ಕೊಟ್ಟೆ ಎಂದು ಎಲ್ಲರೂ ಅವರನ್ನು ಬೈದರು ಪಾಪ.
ಇಲ್ಲ ಅದಕ್ಕೆಲ್ಲ ಅಲ್ಲ ನನಗೆ ಬೇರೆ ಏನೋ ಆಗಿದೆ ಎಂದು ಕೂಗಿ ಹೇಳುವ ಮನಸ್ಸು, ಕೂಗಿದೆ. ಆದರೆ ಆ ಕೊಗನ್ನು ನನ್ನ ನೋವಿಗೆ ಅಂದುಕೊಂಡು ಬಿಟ್ಟರು. ಇದ್ದಕಿದ್ದಂತೆ ನನಗೆ ಬ್ಲೀಡಿಂಗ್ ಆಯ್ತು ಹೆದರಿಕೆ ಇಂದ ಅಮ್ಮ, ಅಮ್ಮಮ್ಮ ಅತ್ತೆ ಬಿಟ್ಟರು,ನನಗೂ ಅವರ ಪ್ರೀತಿ, ಕಾಳಜಿ ನನ್ನ ನೋವು ಎಲ್ಲ ಸೇರಿ ಅಳು ಬಂತು. ಅಪ್ಪ ನನ್ನ ಹಾಗೆಯೇ ಎತ್ತಿಕೊಂಡು ಎಮರ್ಜೆನ್ಸಿ ಹಾಸ್ಪಿಟಲ್‌ಗೆ ಕರೆದೊಯ್ದರು. ಎಲ್ಲರ ಮುಖದಲ್ಲಿ ಗಾಬರಿ ಇತ್ತು. ನನ್ನ ಮುಖದಲ್ಲಿ ನೋವಿತ್ತು.
ಇಲ್ಲಿಯೇ ನನ್ನ ಬಿಟ್ಟರೆ ಎಂಬ ಅಳುಕಿತ್ತು. ದೇವರೇ ವಾಸಿ ಮಾಡು ನಾನು ಮನೆಗೆ ಹೋಗಬೇಕು ಎಂದು ಪ್ರಾರ್ಥಿಸಿದೆ. ಆ ಮೊರೆ ದೇವರಿಗೆ ಕೆಲಿಸಿತೇನೋ ಪರ್ವಾಗಿಲ್ಲ ಸರಿ ಹೋಗುತ್ತಾನೆ ಮೆಡಿಸಿನ್ ಕೊಡಿ ಎಂದು ಮನೆಗೆ ಕಳಿಸಿದರು. ಮನೆಗೆ ಬಂದೆ. ನನ್ನ ಅಣ್ಣ, ಅಕ್ಕಂದಿರು ತುಂಬಾ ದುಃಖದಿಂದ ನನ್ನ ಮೈ ದಡವಿದರು. ಮೂರು ದಿನದಲ್ಲಿ ನಾನು ಆರೋಗ್ಯವಾಗತ್ತಾ ಬಂದೆ.
ಆದರೆ ಅಮ್ಮಮ್ಮ ನನಗೆ ರೊಟ್ಟಿ ಬಿಸ್ಕಿಟ್ ಏನು ಕೊಡಲಿಲ್ಲ, ನನ್ನ ಆಹಾರವನ್ನು ಬದಲಿಸಿ ಬಿಟ್ಟಿದ್ದರು. ಹಸಿವಾದರು ಸೇರುತ್ತಿರಲಿಲ್ಲ. ಒಂದು ವಾರದ ಅನಂತರ ಬೇರೆದಾರಿ ಇಲ್ಲದೆ ಇದೆ ನನ್ನ ಊಟ ಎಂದು ತಿನ್ನಲು ಆರಂಭಿಸಿದೆ. ಸಂಜೆ ಟೀ ಮಾಡುವಾಗ ಅಮ್ಮಮ್ಮ ನನಗೆ ಬಿಸ್ಕಿಟ್ ಕೊಡುತ್ತಾ ಇದ್ದರು ಆಗ ಎಲ್ಲಿದ್ದರೂ ನಾನು ಅವರ ಬಳಿ ಹೋಗುತ್ತಾ ಇದ್ದೇ. ಹೊರಗೆ ಹೋಗಲು ಆಸೆ ಆಗುತ್ತಾ ಇತ್ತು. ಆದರೆ ಚಳಿ ಎಂದು ಯಾರೂ ಹೊರಗೆ ಕರೆದುಕೊಂಡು ಹೋಗುತ್ತಾ ಇರಲಿಲ್ಲ.
ಮನೆಯ ಬ್ಯಾಕ್ಯಾರ್ಡ್‌ನಲ್ಲೇ ಸ್ವಲ್ಪ ಕೂತು ಕಾಲ ಕಳೆಯುತ್ತಾ ಇದ್ದೇ. ಈಗಲೂ ಎಲ್ಲವನ್ನೂ ಹಾಗೆಯೇ ಮುಂದುವರಿಸುತ್ತಾ ಇದಿನಿ. ಇಲ್ಲಿಯ ವಾತಾವರಣದ ಜತೆ ಹೊಂದಿ ಕೊಳ್ಳಲೆ ಬೇಕು. ಮನೆಯಲ್ಲೇ ಎಲ್ಲರೂ ಸ್ವಲ್ಪ ಸ್ವಲ್ಪ ಹೊತ್ತು ಚೆಂಡು ಆಡಿಸುತ್ತಾರೆ. ಅಮ್ಮಮ್ಮ ಟಿವಿ ನೋಡುವಾಗೆಲ್ಲ ನನಗೆ ಚೆಂಡು ಹಾಕುತ್ತಾರೆ. ಎಲ್ಲರ ಪ್ರೀತಿ ಸಿಕ್ಕಿದೆ. ಈ ಮನೆಯ ಎಲ್ಲರೂ ನನಗೆ ಇಷ್ಟ.
ಈ ಮನೆ ನನ್ನದು ಇವರೆಲ್ಲ ನನ್ನವರು. ಯಾರೂ ಮನೆಗೆ ಬಂದರು ಈಗ ನನನ್ನು ಕಟ್ಟಿ ಹಾಕುವುದಿಲ್ಲ. ನಾನು ಜಾಣನಂತೆ ಇರುತ್ತೇನೆ. ಯಾರಿಗೂ ಕಚ್ಚುವುದು ಇರಲಿ ಬೊಗಳುವುದು ಇಲ್ಲ. ಒಮ್ಮೆ ಮೂಸಿ ನೋಡುತ್ತೇನೆ ಅಷ್ಟೇ. ಬಂದವರೆಲ್ಲ ಎಷ್ಟು ಕ್ಯೂಟ್ ಅನ್ನುತ್ತಾರೆ. ನನಗೆ ಹೆಮ್ಮೆ ಆಗುತ್ತದೆ.
ದೇವರೇ ಈ ಮನೆಯ ಎಲ್ಲರನ್ನೂ ಚೆನ್ನಾಗಿ ಇಟ್ಟಿರೆ ನನಗೂ ಖುಷಿಯಾಗುತ್ತೆ. ಮುಂದಿನ ಜನ್ಮ ಇದ್ದಲ್ಲಿ ಈ ಅಪ್ಪ ಅಮ್ಮನ ಮಗನಾಗಿ ಹುಟ್ಟಿಸಬೇಕು ನೀನು. ಈ ಜೀವನದಲ್ಲಿ ನನಗೆ ಒಳ್ಳೆ ಜಾಗ ಕೊಟ್ಟಿರುವ ನಿನಗೆ ಕೋಟಿ ಪ್ರಣಾಮ. ಆಡಲು ಬಾರದೆ ನನ್ನ ಮನದಲ್ಲಿ ಮಿಂಚಿದ್ದು ಎಲ್ಲ ಇಲ್ಲಿ ಬರೆದಿದ್ದೇನೆ. ಒಮ್ಮೆ ನಿಧಾನವಾಗಿ ಓದಿಕೊ…
-ಶ್ರೀರಂಗಮಣಿ ಬಿ.ಎಸ್.,
ಮಿಸ್ಸಿಸ್ಸಾಗ